Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 80

ಸ್ತುತಿಗೀತೆ. ರಚನೆಗಾರ: ಆಸಾಫ.

80 ಇಸ್ರೇಲನ್ನು ಕಾಯುವ ಕುರುಬನೇ,
    ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
    ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
    ಬಂದು ನಮ್ಮನ್ನು ರಕ್ಷಿಸು.
ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
    ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
    ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
    ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
    ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
    ಶತ್ರುಗಳು ನಮ್ಮನ್ನು ನೋಡಿ ನಗುವರು.
ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಹಿಂದಿನ ಕಾಲದಲ್ಲಿ ನೀನು ನಮ್ಮನ್ನು
    ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ.
ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ.
    ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.
“ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ.
    ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ.
    ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು.
    ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.
11     ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು.
    ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.
12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ?
    ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ.
    ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.
14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ.
    ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.
15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು.
    ನೀನು ಬೆಳೆಸಿದ ಎಳೆ ಸಸಿಯನ್ನು[a] ನೋಡು.
16 ನಿನ್ನ “ದ್ರಾಕ್ಷಾಲತೆ”ಯು ಒಣಗಿದ ಗೊಬ್ಬರದಂತೆ ಬೆಂಕಿಯಿಂದ ಸುಟ್ಟುಹೋಗಿದೆ.
    ನೀನು ಅದರ ಮೇಲೆ ಕೋಪಗೊಂಡು ನಾಶಮಾಡಿದೆ.

17 ನೀನು ಆರಿಸಿಕೊಂಡಿರುವಾತನ[b] ಕಡೆಗೆ ಕೈಚಾಚಿ ಸಹಾಯ ಮಾಡು.
    ನೀನು ಬೆಳೆಸಿದ ಜನರ[c] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
    ನಮ್ಮನ್ನು ಬದುಕಿಸು.
    ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಯೆಶಾಯ 65:17-25

ಹೊಸ ಕಾಲ ಬರುತ್ತದೆ

17 “ನಾನು ಹೊಸ ಭೂಮ್ಯಾಕಾಶಗಳನ್ನು ಸೃಷ್ಟಿಸುವೆನು.
ಜನರು ಗತಿಸಿದ ದಿನಗಳನ್ನು ತಮ್ಮ ನೆನಪಿಗೆ ತರುವದಿಲ್ಲ.
    ಅವರು ಈ ಸಂಗತಿಗಳಲ್ಲಿ ಯಾವುದನ್ನೂ ಜ್ಞಾಪಿಸಿಕೊಳ್ಳುವದಿಲ್ಲ.
18 ನನ್ನ ಜನರು ಸಂತೋಷದಲ್ಲಿರುವರು.
    ಅವರು ನಿತ್ಯಕಾಲಕ್ಕೂ ಹರ್ಷಿಸುವರು.
ನಾನು ಜೆರುಸಲೇಮನ್ನು ಸಂತಸದಿಂದ ತುಂಬಿಸುವೆನು.
    ಅವರನ್ನು ಸಂತೋಷದ ಜನರನ್ನಾಗಿ ಮಾಡುವೆನು.

19 “ಆಗ ನಾನು ಜೆರುಸಲೇಮಿನ ವಿಷಯದಲ್ಲಿ ಸಂತೋಷದಿಂದಿರುವೆನು.
    ನನ್ನ ಜನರ ವಿಷಯದಲ್ಲಿಯೂ ಸಂತೋಷದಿಂದಿರುವೆನು.
ಆ ಪಟ್ಟಣದಲ್ಲಿ ಮತ್ತೆಂದಿಗೂ ರೋಧನವಿರದು, ದುಃಖವಿರದು.
20 ಆ ಪಟ್ಟಣದಲ್ಲಿ ಹುಟ್ಟಿದ ಶಿಶುಗಳೆಲ್ಲಾ ಜೀವಿಸುವವು.
ಯಾವ ಮಗುವೇ ಆಗಲಿ ಹುಟ್ಟಿದ ಕೂಡಲೇ ಸಾಯುವದಿಲ್ಲ.
    ಆ ಪಟ್ಟಣದ ನಿವಾಸಿಗಳಲ್ಲಿ ಯಾರೂ ಕಡಿಮೆ ಆಯುಷ್ಯದಿಂದ ಸಾಯುವದಿಲ್ಲ.
ಪ್ರತಿಯೊಂದು ಮಗುವೂ ದೀರ್ಘಾಯುಷ್ಯವನ್ನು ಹೊಂದುವದು.
    ಪ್ರತಿಯೊಬ್ಬ ಯುವಕನೂ ಬಹಳ ಕಾಲ ಜೀವಿಸುವನು.
ಆಗ ನೂರು ವರ್ಷ ಪ್ರಾಯದವನು ಸಹ ಯೌವನಸ್ಥನೆಂದು ಕರೆಯಲ್ಪಡುವನು.
    ಒಬ್ಬನು ನೂರು ವರ್ಷವಾದರೂ ಬಾಳದಿದ್ದರೆ, ಜನರು ಅವನನ್ನು ಶಾಪ ಹೊಂದಿದವನೆಂದು ಹೇಳುವರು.

21 “ಆ ಪಟ್ಟಣದೊಳಗೆ ಒಬ್ಬನು ಮನೆಯನ್ನು ಕಟ್ಟಿದ್ದರೆ ಅದರಲ್ಲಿ ಅವನು ವಾಸಿಸುವನು.
    ಒಬ್ಬನು ದ್ರಾಕ್ಷಿತೋಟವನ್ನು ನೆಟ್ಟರೆ ಅವನು ಅದರ ಫಲಗಳನ್ನು ತಿನ್ನುವನು.
22 ಇನ್ನು ಮುಂದೆ ಯಾರಾದರೂ ಮನೆಯನ್ನು ಕಟ್ಟಿದರೆ,
    ಬೇರೆಯವರು ಅದನ್ನು ವಶಮಾಡಿಕೊಂಡು ಅದರಲ್ಲಿ ವಾಸಿಸುವದಿಲ್ಲ.
ಇನ್ನು ಮುಂದೆ ಯಾರಾದರೂ ದ್ರಾಕ್ಷಿತೋಟವನ್ನು ಮಾಡಿದರೆ
    ಅದರ ಫಲವನ್ನು ಇತರರು ತಿನ್ನುವದಿಲ್ಲ.
ಮರಗಳು ಎಷ್ಟು ಕಾಲ ಬೆಳೆಯುತ್ತವೋ
    ಅಷ್ಟುಕಾಲ ನನ್ನ ಜನರು ಜೀವಿಸುವರು.
ನಾನು ಆರಿಸಿಕೊಂಡ ಜನರು
    ತಾವು ಮಾಡಿದ ಕಾರ್ಯಗಳಲ್ಲಿ ಆನಂದಿಸುವರು.
23 ಇನ್ನು ಮುಂದೆ ಜನರು ಬಿಟ್ಟೀಕೆಲಸ ಮಾಡುವದಿಲ್ಲ.
    ಇನ್ನು ಮುಂದೆ ಮಕ್ಕಳನ್ನು ಹೆರುವಾಗ ಕೇಡಾಗುತ್ತದೆಯೆಂಬ ಭಯವಿರುವುದಿಲ್ಲ.
ನನ್ನ ಎಲ್ಲಾ ಜನರು ಮತ್ತು ಅವರ ಮಕ್ಕಳು ಯೆಹೋವನಿಂದ ಆಶೀರ್ವದಿಸಲ್ಪಡುವರು.
24 ಅವರು ಕೇಳುವ ಮೊದಲೇ ಅವರಿಗೆ ಏನುಬೇಕು ಎಂಬುದನ್ನು ಅರಿತುಕೊಳ್ಳುವೆನು.
    ಅವರ ಪ್ರಾರ್ಥನೆ ಮುಗಿಯುವ ಮೊದಲೇ ಅವರಿಗೆ ಸಹಾಯ ಮಾಡುವೆನು.
25 ತೋಳಗಳೂ ಕುರಿಮರಿಗಳೂ ಒಟ್ಟಾಗಿ ಮೇಯುವವು.
    ಸಿಂಹಗಳು ದನಕುರಿಗಳಂತೆ ಹುಲ್ಲನ್ನು ಮೇಯುತ್ತವೆ.
    ವಿಷದ ಹಾವುಗಳು ಕೇವಲ ಮಣ್ಣನ್ನೇ ತಿನ್ನುತ್ತವೆ.
ನನ್ನ ಪವಿತ್ರಪರ್ವತದಲ್ಲಿ ಅವು ಯಾರಿಗೂ ಕೇಡುಮಾಡುವುದಿಲ್ಲ; ಯಾರಿಗೂ ಭಯ ಹುಟ್ಟಿಸುವುದಿಲ್ಲ.”
ಇವು ಯೆಹೋವನ ನುಡಿಗಳು.

ಯೋಹಾನ 14:18-31

18 “ನಾನು ನಿಮ್ಮನ್ನು ತಂದೆತಾಯಿಗಳಿಲ್ಲದ ಮಕ್ಕಳಂತೆ ಒಬ್ಬಂಟಿಗರನ್ನಾಗಿ ಬಿಟ್ಟುಹೋಗುವುದಿಲ್ಲ. ನಾನು ನಿಮ್ಮ ಬಳಿಗೆ ಬರುತ್ತೇನೆ. 19 ಇನ್ನು ಸ್ವಲ್ಪ ಕಾಲವಾದ ಮೇಲೆ ಈ ಲೋಕದ ಜನರು ನನ್ನನ್ನು ಇನ್ನೆಂದಿಗೂ ಕಾಣುವುದಿಲ್ಲ. ಆದರೆ ನೀವು ನನ್ನನ್ನು ನೋಡುವಿರಿ. ನಾನು ಜೀವಿಸುವುದರಿಂದ ನೀವೂ ಜೀವಿಸುವಿರಿ. 20 ನಾನು ನನ್ನ ತಂದೆಯಲ್ಲಿರುವುದನ್ನು ನೀವು ಆ ದಿನದಂದು ತಿಳಿದುಕೊಳ್ಳುವಿರಿ. ನೀವು ನನ್ನಲ್ಲಿರುವುದನ್ನೂ ನಾನು ನಿಮ್ಮಲ್ಲಿರುವುದನ್ನೂ ತಿಳಿದುಕೊಳ್ಳುವಿರಿ. 21 ಒಬ್ಬನು ನನ್ನ ಆಜ್ಞೆಗಳನ್ನು ಸ್ವೀಕರಿಸಿಕೊಂಡು ಅವುಗಳಿಗೆ ವಿಧೇಯನಾದರೆ ಅವನು ನನ್ನನ್ನು ನಿಜವಾಗಿಯೂ ಪ್ರೀತಿಸುವವನಾಗಿದ್ದಾನೆ. ಅಲ್ಲದೆ ನನ್ನನ್ನು ಪ್ರೀತಿಸುವವನನ್ನು ನನ್ನ ತಂದೆಯೂ ಪ್ರೀತಿಸುವನು ಮತ್ತು ನಾನೂ ಅವನನ್ನು ಪ್ರೀತಿಸುವೆನು. ನಾನು ಅವನಿಗೆ ನನ್ನನ್ನೇ ತೋರ್ಪಡಿಸಿಕೊಳ್ಳುವೆನು” ಎಂದು ಉತ್ತರಕೊಟ್ಟನು.

22 ಆಗ ಯೂದನು (ಇಸ್ಕರಿಯೋತ ಯೂದನಲ್ಲ), “ಪ್ರಭುವೇ, ನೀನು ನಿನ್ನನ್ನು ಈ ಲೋಕಕ್ಕೆ ತೋರ್ಪಡಿಸಿಕೊಳ್ಳದೆ ನಮಗೆ ಮಾತ್ರ ತೋರ್ಪಡಿಸಿಕೊಳ್ಳಬೇಕೆಂದಿರುವುದೇಕೆ?” ಎಂದು ಕೇಳಿದನು.

23 ಯೇಸು ಹೀಗೆ ಉತ್ತರಕೊಟ್ಟನು: “ನನ್ನನ್ನು ಪ್ರೀತಿಸುವವನು ನನ್ನ ಉಪದೇಶಕ್ಕೆ ವಿಧೇಯನಾಗುವನು. ನನ್ನ ತಂದೆಯು ಅವನನ್ನು ಪ್ರೀತಿಸುವನು. ನನ್ನ ತಂದೆ ಮತ್ತು ನಾನು ಅವನ ಬಳಿಗೆ ಬಂದು ಅವನೊಂದಿಗೆ ವಾಸಿಸುವೆವು. 24 ಆದರೆ ನನ್ನನ್ನು ಪ್ರೀತಿಸದವನು, ನನ್ನ ಉಪದೇಶಕ್ಕೆ ವಿಧೇಯನಾಗುವುದಿಲ್ಲ. ನೀವು ಕೇಳುತ್ತಿರುವ ಈ ಉಪದೇಶವು ನಿಜವಾಗಿಯೂ ನನ್ನದಲ್ಲ, ನನ್ನನ್ನು ಕಳುಹಿಸಿರುವ ನನ್ನ ತಂದೆಯದು.

25 “ನಾನು ನಿಮ್ಮೊಂದಿಗೆ ಇರುವಾಗಲೇ ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. 26 ಆದರೆ ಆ ಸಹಾಯಕನು ನಿಮಗೆ ಪ್ರತಿಯೊಂದನ್ನೂ ಉಪದೇಶಿಸುವನು. ನಾನು ನಿಮಗೆ ಹೇಳಿದ ಸಂಗತಿಗಳನ್ನೆಲ್ಲಾ ಆ ಸಹಾಯಕನು ನಿಮ್ಮ ನೆನಪಿಗೆ ತರುವನು. ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪವಿತ್ರಾತ್ಮನೇ ಆ ಸಹಾಯಕನು.

27 “ನಾನು ನಿಮಗೆ ಶಾಂತಿಯನ್ನು ನೀಡುತ್ತೇನೆ. ಈ ಲೋಕವು ಕೊಡುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ನಾನು ನಿಮಗೆ ಶಾಂತಿಯನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ಭಯಪಡಬೇಡಿರಿ. 28 ‘ನಾನು ಹೊರಟುಹೋಗುತ್ತೇನೆ. ಆದರೆ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇನೆ’ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ತಂದೆಯ ಬಳಿಗೆ ಮರಳಿಹೋಗುವುದರ ಬಗ್ಗೆ ಸಂತೋಷಪಡುತ್ತಿದ್ದಿರಿ. ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು. 29 ಇದು ಸಂಭವಿಸುವುದಕ್ಕಿಂತ ಮೊದಲೇ ನಾನು ನಿಮಗೆ ಇದನ್ನು ಈಗಲೇ ತಿಳಿಸಿದ್ದೇನೆ. ಹೀಗಿರಲು, ಇದು ಸಂಭವಿಸುವಾಗ ನೀವು ನಂಬುವಿರಿ.

30 “ನಾನು ನಿಮ್ಮೊಂದಿಗೆ ಇನ್ನು ಬಹಳ ಹೊತ್ತು ಮಾತಾಡುವುದಿಲ್ಲ. ಈ ಲೋಕದ ಅಧಿಪತಿಯು (ಸೈತಾನನು) ಬರುತ್ತಿದ್ದಾನೆ. ಅವನಿಗೆ ನನ್ನ ಮೇಲೆ ಯಾವ ಅಧಿಕಾರವೂ ಇಲ್ಲ. 31 ಆದರೆ ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದನ್ನು ಈ ಲೋಕವು ತಿಳಿದುಕೊಳ್ಳಬೇಕು. ಆದ್ದರಿಂದ ತಂದೆಯು ನನಗೆ ಹೇಳಿರುವುದನ್ನೇ ನಾನು ಮಾಡುತ್ತೇನೆ.

“ಬನ್ನಿ, ನಾವು ಇಲ್ಲಿಂದ ಹೋಗೋಣ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International