Revised Common Lectionary (Semicontinuous)
95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
2 ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
3 ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
4 ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
5 ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
ಭೂಮಿಯೂ ಆತನ ಕೈಕೆಲಸವೇ.
6 ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
7 ನಮ್ಮ ದೇವರು ಆತನೇ, ನಾವು ಆತನವರೇ.
ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.
8 ದೇವರು ಹೀಗೆನ್ನುತ್ತಾನೆ: “ನೀವು ಮೆರೀಬಾದಲ್ಲಿಯೂ
ಮಸ್ಸಾ ಮರುಭೂಮಿಯಲ್ಲಿಯೂ ಮಾಡಿದಂತೆ ಮೊಂಡತನ ಮಾಡಬೇಡಿ.
9 ನಿಮ್ಮ ಪೂರ್ವಿಕರು ನನ್ನನ್ನು ಪರೀಕ್ಷಿಸಿದರು.
ನನ್ನ ಮಹತ್ಕಾರ್ಯಗಳನ್ನು ನೋಡಿದ್ದರೂ ನನ್ನನ್ನು ಪರೀಕ್ಷಿಸಿದರು.
10 ನಲವತ್ತು ವರ್ಷಗಳ ಕಾಲ ನಾನು ಅವರೊಂದಿಗೆ ತಾಳ್ಮೆಯಿಂದಿದ್ದೆನು,
ಅವರು ನಂಬಿಗಸ್ತರಲ್ಲವೆಂದು ನನಗೆ ತಿಳಿದಿತ್ತು.
ಅವರು ನನ್ನ ಉಪದೇಶಗಳನ್ನು ಅನುಸರಿಸಲಿಲ್ಲ.
11 ಆದ್ದರಿಂದ ನಾನು ಕೋಪಗೊಂಡು ನನ್ನ ವಿಶ್ರಾಂತಿಯ ನಾಡನ್ನು
ಅವರು ಪ್ರವೇಶಿಸಕೂಡದೆಂದು ನಾನು ಪ್ರಮಾಣ ಮಾಡಿದೆನು.”
8 ನಾನು ಬಿದ್ದಿದ್ದೇನೆ, ಆದರೆ ವೈರಿಯೇ, ನನ್ನನ್ನು ನೋಡಿ ನಗಾಡಬೇಡ!
ನಾನು ತಿರುಗಿ ಏಳುತ್ತೇನೆ;
ನಾನೀಗ ಅಂಧಕಾರದಲ್ಲಿ ಕುಳಿತುಕೊಳ್ಳುತ್ತೇನೆ.
ಆದರೆ ಯೆಹೋವನು ನನ್ನ ಬೆಳಕಾಗಿರುತ್ತಾನೆ.
ಯೆಹೋವನು ಕ್ಷಮಿಸುತ್ತಾನೆ
9 ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ.
ಆದ್ದರಿಂದ ಆತನು ನನ್ನ ಮೇಲೆ ಕೋಪಿಸಿಕೊಂಡಿದ್ದಾನೆ.
ಆದರೆ ನನ್ನ ಪರವಾಗಿ ಆತನು ವಾದಿಸುತ್ತಾನೆ.
ನನಗೆ ಒಳ್ಳೆಯದನ್ನೇ ಆತನು ಮಾಡುತ್ತಾನೆ.
ಆ ಬಳಿಕ ನನ್ನನ್ನು ಹೊರಗೆ ಬೆಳಕಿಗೆ ತರುವನು.
ಆತನು ನೀತಿವಂತನೆಂಬುದು ಆಗ ನನಗೆ ತಿಳಿಯುವುದು.
10 “ನಿನ್ನ ದೇವರಾದ ಯೆಹೋವನು ಎಲ್ಲಿ?”
ಎಂದು ಕೇಳಿದ ವೈರಿಗಳು ಇದನ್ನು ನೋಡಿ, ನಾಚಿಕೆಗೊಳ್ಳುವರು.
ಆಗ ನಾನು ಅವರ ವಿಷಯವಾಗಿ ನಗಾಡುವೆನು;
ರಸ್ತೆಯ ಮಣ್ಣಿನ ಮೇಲೆ ನಡೆಯುವಂತೆ ಜನರು ಅವರ ಮೇಲೆ ನಡೆಯುವರು.
ಯೆಹೂದ್ಯರು ಮರಳಿ ಬರುವರು
11 ನಿನ್ನ ನಗರದ ಗೋಡೆಗಳು ತಿರುಗಿ ಕಟ್ಟಲ್ಪಡುವ ದಿನಗಳು ಬರುತ್ತವೆ.
ಆಗ ದೇಶವು ಬೆಳೆಯುವುದು.
12 ನಿನ್ನ ಜನರು ದೇಶಕ್ಕೆ ಹಿಂತಿರುಗುವರು.
ಅವರು ಅಶ್ಶೂರದಿಂದಲೂ ಈಜಿಪ್ಟ್ ನಗರಗಳಿಂದಲೂ ಹಿಂದೆ ಬರುವರು.
ನಿನ್ನ ಜನರು ಈಜಿಪ್ಟಿನಿಂದಲೂ
ಯೂಫ್ರೇಟೀಸ್ ನದಿಯ ಆಚೆಕಡೆಯಿಂದಲೂ ಬರುವರು.
ಪಶ್ಟಿಮದ ಸಮುದ್ರದ ಕಡೆಯಿಂದ ಬರುವರು.
ಪೂರ್ವದ ಪರ್ವತಗಳ ಕಡೆಯಿಂದ ಬರುವರು.
13 ದೇಶದಲ್ಲಿ ವಾಸಿಸಿದ್ದ ಜನರಿಂದಲೂ
ಅವರು ಮಾಡಿದ್ದ ಕೆಲಸಗಳಿಂದಲೂ ದೇಶವು ಹಾಳಾಗಿಹೋಗಿತ್ತು.
14 ಆದ್ದರಿಂದ ನಿನ್ನ ಜನರನ್ನು ಕಬ್ಬಿಣದ ಕೋಲಿನಿಂದ ಆಳು,
ನಿನಗೆ ಸೇರಿದ ಜನರ ಹಿಂಡುಗಳನ್ನು ಆಳು.
ಆ ಗುಂಪು ಅಡವಿಯಲ್ಲಿ ತಾನಾಗಿಯೇ ವಾಸಿಸುತ್ತದೆ;
ಕರ್ಮೆಲ್ ಬೆಟ್ಟದಲ್ಲಿಯೂ ವಾಸಿಸುತ್ತದೆ.
ಹಿಂದಿನ ಕಾಲದಲ್ಲಿ ಮಾಡಿದಂತೆ ಆ ಗುಂಪು ಬಾಷಾನ್
ಮತ್ತು ಗಿಲ್ಯಾದ್ ಪ್ರಾಂತ್ಯದಲ್ಲಿ ವಾಸಿಸುತ್ತದೆ.
ಇಸ್ರೇಲ್ ತನ್ನ ವೈರಿಗಳನ್ನು ಸೋಲಿಸುವುದು
15 ನಿನ್ನನ್ನು ಈಜಿಪ್ಟಿನಿಂದ ಬರಮಾಡಿದಾಗ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು.
ಇನ್ನೂ ಅನೇಕ ಅದ್ಭುತಗಳನ್ನು ನೀನು ನೋಡುವಂತೆ ಮಾಡುವೆನು.
16 ಜನಾಂಗಗಳು ಆ ಅದ್ಭುತವನ್ನು ನೋಡಿ ನಾಚಿಕೆಗೊಳ್ಳುವರು.
ನನ್ನ ಶಕ್ತಿಯ ಎದುರು ಅವರ ಬಲವು ಏನೂ ಅಲ್ಲವೆಂದು ತಿಳಿಯುವರು.
ಅವರು ಆಶ್ಚರ್ಯಚಕಿತರಾಗಿ ತಮ್ಮ ಬಾಯಿಗಳ ಮೇಲೆ ಕೈಗಳನ್ನಿಡುವರು.
ತಮ್ಮ ಕಿವಿಗಳನ್ನು ಮುಚ್ಚಿ ವಾರ್ತೆ ಕೇಳಲು ನಿರಾಕರಿಸುವರು.
17 ಅವರು ಹಾವಿನಂತೆ ಧೂಳಿನ ಮೇಲೆ ಹರಿದಾಡುವರು.
ಭಯದಿಂದ ನಡುಗುವರು.
ಅವರು ನೆಲದ ಮೇಲಿನ ಬಿಲಗಳಿಂದ
ಹರಿದುಕೊಂಡು ಬರುವ ಹುಳಗಳಂತಿರುವರು.
ಅವರು ನಮ್ಮ ದೇವರಾದ ಯೆಹೋವನ ಬಳಿಗೆ ಬಂದು
ನಿಮ್ಮನ್ನು ಭಯದಿಂದ ನೋಡುವರು.
ಯೆಹೋವನಿಗೆ ಸ್ತೋತ್ರ
18 ನಿನ್ನ ಹಾಗೆ ಬೇರೆ ಯಾವ ದೇವರೂ ಇಲ್ಲ.
ಪಾಪದಲ್ಲಿ ಬಿದ್ದವರನ್ನು ನೀನು ಕ್ಷಮಿಸುವೆ.
ನಿನ್ನ ಜನಶೇಷವನ್ನು ಮನ್ನಿಸುವೆ.
ನೀನು ನಿತ್ಯಕ್ಕೂ ಕೋಪಿಸುವದಿಲ್ಲ.
ಯಾಕೆಂದರೆ ದಯೆತೋರಿಸುವದರಲ್ಲಿ ನೀನು ಸಂತೋಷಿಸುವೆ.
19 ಯೆಹೋವನೇ, ನಮ್ಮನ್ನು ತಿರುಗಿ ಸಂತೈಸು.
ನಮ್ಮ ಪಾಪಗಳನ್ನು ನಮ್ಮಿಂದ ನಿವಾರಿಸು.
ನಮ್ಮೆಲ್ಲಾ ಪಾಪಗಳನ್ನು ಆಳವಾದ ಸಮುದ್ರದ ತಳದಲ್ಲಿ ಹಾಕು.
20 ನೀನು ಯಾಕೋಬನಿಗೆ ನಂಬಿಗಸ್ತನಾಗುವೆ.
ನೀನು ಅಬ್ರಹಾಮನ ಮೇಲೆ ದಯೆತೋರಿಸಿ ನಂಬಿಗಸ್ತನಾಗುವೆ.
ಇದನ್ನು ನೀನು ಬಹಳ ಕಾಲದ ಹಿಂದೆಯೇ ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿರುವೆ.
26 ಆಗ ಶಿಷ್ಯರೆಲ್ಲರೂ ಒಂದು ಹಾಡನ್ನು ಹಾಡಿದರು. ನಂತರ ಅವರು ಆಲಿವ್ ಮರದ ಗುಡ್ಡಕ್ಕೆ ಹೋದರು.
ಶಿಷ್ಯರ ವಿಶ್ವಾಸ ದ್ರೋಹದ ಮುನ್ಸೂಚನೆ
(ಮತ್ತಾಯ 26:31-35; ಲೂಕ 22:31-34; ಯೋಹಾನ 13:36-38)
27 ನಂತರ ಯೇಸು ಶಿಷ್ಯರಿಗೆ, “ನೀವೆಲ್ಲರೂ ಭಯಗೊಂಡು ಹಿಂಜರಿಯುವಿರಿ.
‘ನಾನು ಕುರುಬನನ್ನು ಹೊಡೆಯುವೆನು;
ಆಗ ಕುರಿಗಳು ಚದರಿಹೋಗುತ್ತವೆ’(A)
ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. 28 ಆದರೆ ನಾನು ಸತ್ತು ಪುನರುತ್ಥಾನ ಹೊಂದಿದ ಮೇಲೆ ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತೇನೆ” ಎಂದನು.
29 ಪೇತ್ರನು, “ಉಳಿದ ಶಿಷ್ಯರೆಲ್ಲರು ಭಯಗೊಂಡು ಹಿಂಜರಿದರೂ ನಾನು ಹಿಂಜರಿಯುವುದಿಲ್ಲ” ಎಂದು ಉತ್ತರಿಸಿದನು.
30 ಯೇಸು, “ನಾನು ಸತ್ಯವನ್ನು ಹೇಳುತ್ತೇನೆ. ಈ ರಾತ್ರಿ ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚೆ ನೀನು ಮೂರು ಸಾರಿ, ನನ್ನನ್ನು ನೀನು ತಿಳಿದೇ ಇಲ್ಲವೆಂದು ಹೇಳುವೆ” ಎಂದು ಉತ್ತರಿಸಿದನು.
31 ಆದರೆ ಪೇತ್ರನು ಖಚಿತವಾಗಿ, “ನಾನು ನಿನ್ನೊಂದಿಗೆ ಸಾಯಬೇಕಾದರೂ ಸರಿಯೇ, ನಿನ್ನನ್ನು ತಿಳಿದೇ ಇಲ್ಲವೆಂದು ನಾನೆಂದಿಗೂ ಹೇಳುವುದಿಲ್ಲ” ಎಂದು ಉತ್ತರಿಸಿದನು. ಉಳಿದ ಶಿಷ್ಯರು ಸಹ ಇದೇ ರೀತಿ ಹೇಳಿದರು.
Kannada Holy Bible: Easy-to-Read Version. All rights reserved. © 1997 Bible League International