Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 95

95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
    ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
    ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
    ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
    ಭೂಮಿಯೂ ಆತನ ಕೈಕೆಲಸವೇ.
ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
    ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
ನಮ್ಮ ದೇವರು ಆತನೇ, ನಾವು ಆತನವರೇ.
    ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.

ದೇವರು ಹೀಗೆನ್ನುತ್ತಾನೆ: “ನೀವು ಮೆರೀಬಾದಲ್ಲಿಯೂ
    ಮಸ್ಸಾ ಮರುಭೂಮಿಯಲ್ಲಿಯೂ ಮಾಡಿದಂತೆ ಮೊಂಡತನ ಮಾಡಬೇಡಿ.
ನಿಮ್ಮ ಪೂರ್ವಿಕರು ನನ್ನನ್ನು ಪರೀಕ್ಷಿಸಿದರು.
    ನನ್ನ ಮಹತ್ಕಾರ್ಯಗಳನ್ನು ನೋಡಿದ್ದರೂ ನನ್ನನ್ನು ಪರೀಕ್ಷಿಸಿದರು.
10 ನಲವತ್ತು ವರ್ಷಗಳ ಕಾಲ ನಾನು ಅವರೊಂದಿಗೆ ತಾಳ್ಮೆಯಿಂದಿದ್ದೆನು,
    ಅವರು ನಂಬಿಗಸ್ತರಲ್ಲವೆಂದು ನನಗೆ ತಿಳಿದಿತ್ತು.
    ಅವರು ನನ್ನ ಉಪದೇಶಗಳನ್ನು ಅನುಸರಿಸಲಿಲ್ಲ.
11 ಆದ್ದರಿಂದ ನಾನು ಕೋಪಗೊಂಡು ನನ್ನ ವಿಶ್ರಾಂತಿಯ ನಾಡನ್ನು
    ಅವರು ಪ್ರವೇಶಿಸಕೂಡದೆಂದು ನಾನು ಪ್ರಮಾಣ ಮಾಡಿದೆನು.”

1 ಪೂರ್ವಕಾಲವೃತ್ತಾಂತ 11:1-9

ದಾವೀದನು ಇಸ್ರೇಲರ ಅರಸನಾದನು

11 ಎಲ್ಲಾ ಇಸ್ರೇಲರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವು ನಿನ್ನ ಸಂತತಿಯವರು. ಹಿಂದೆ ನೀನು ನಮ್ಮನ್ನು ಯುದ್ಧದಲ್ಲಿ ನಡೆಸಿರುವೆ. ಆಗ ಸೌಲನು ಅರಸನಾಗಿದ್ದರೂ ನೀನು ನಮ್ಮ ಯುದ್ಧದಲ್ಲಿ ನಾಯಕನಾಗಿದ್ದೆ. ಯೆಹೋವನು ನಿನಗೆ, ‘ದಾವೀದನೇ, ನೀನು ನಿನ್ನ ಜನರಾದ ಇಸ್ರೇಲರ ಪಾಲಕನಾಗಿರಬೇಕು. ನನ್ನ ಜನರಿಗೆ ನೀನು ನಾಯಕನಾಗಿರಬೇಕು’” ಎಂದು ಹೇಳಿದ್ದಾನಲ್ಲವೆ ಅಂದರು.

ಹೆಬ್ರೋನಿಗೆ ಬಂದ ಇಸ್ರೇಲರೆಲ್ಲಾ ಅಲ್ಲಿ ಯೆಹೋವನ ಮುಂದೆ ದಾವೀದನೊಂದಿಗೆ ಒಪ್ಪಂದ ಮಾಡಿಕೊಂಡರು. ಆ ಅಧಿಪತಿಗಳೆಲ್ಲಾ ದಾವೀದನನ್ನು ಅಭಿಷೇಕಿಸಿ ಅವನನ್ನು ಇಸ್ರೇಲರ ಅರಸನನ್ನಾಗಿ ಮಾಡಿದರು. ಇದು ಯೆಹೋವನ ವಾಗ್ದಾನವಾಗಿತ್ತು. ಪ್ರವಾದಿಯಾದ ಸಮುವೇಲನ ಮೂಲಕ ಯೆಹೋವನು ಈ ವಾಗ್ದಾನವನ್ನು ಮಾಡಿದ್ದನು.

ದಾವೀದನು ಜೆರುಸಲೇಮನ್ನು ಆಕ್ರಮಿಸಿಕೊಂಡನು

ದಾವೀದನೂ ಎಲ್ಲಾ ಇಸ್ರೇಲರೂ ಜೆರುಸಲೇಮಿಗೆ ಹೊರಟರು. ಆ ಕಾಲದಲ್ಲಿ ಜೆರುಸಲೇಮನ್ನು ಯೆಬೂಸ್ ಎಂದು ಕರೆಯುತ್ತಿದ್ದರು. ಯಾಕೆಂದರೆ ಜೆರುಸಲೇಮ್ ಪಟ್ಟಣದಲ್ಲಿ ಯೆಬೂಸಿಯರು ವಾಸಿಸುತ್ತಿದ್ದರು. ಆ ಪಟ್ಟಣದಲ್ಲಿದ್ದ ಜನರು ದಾವೀದನಿಗೆ, “ನೀನು ನಮ್ಮ ಪಟ್ಟಣದೊಳಗೆ ಬರಲು ಸಾಧ್ಯವೇ ಇಲ್ಲ” ಎಂದು ಹೇಳಿದರು. ಆದರೆ ದಾವೀದನು ಅವರನ್ನು ಸೋಲಿಸಿ ಚೀಯೋನ್ ಕೋಟೆಯನ್ನು ಗೆದ್ದುಕೊಂಡನು. ಅಂದಿನಿಂದ ಆ ಸ್ಥಳವು ದಾವೀದನ ನಗರವೆಂದು ಕರೆಯಲ್ಪಟ್ಟಿತು.

“ಯೆಬೂಸಿಯರ ವಿರುದ್ಧವಾಗಿ ದಾಳಿಮಾಡಿ ಅವರನ್ನು ಸೋಲಿಸುವವನೇ ನನ್ನ ಸೇನಾಧಿಪತಿಯಾಗುವನು” ಎಂದು ದಾವೀದನು ಹೇಳಿದಾಗ ಚೆರೂಯಳ ಮಗನಾದ ಯೋವಾಬನು ಯೆಬೂಸಿಯರ ಮೇಲೆ ಯುದ್ಧಮಾಡಿ ಜಯಗಳಿಸಿದನು ಮತ್ತು ಇಸ್ರೇಲರ ಸೈನ್ಯಕ್ಕೆ ಅಧಿಪತಿಯಾದನು.

ದಾವೀದನು ಕೋಟೆಯೊಳಗೆ ತನಗೆ ಮನೆ ಮಾಡಿಕೊಂಡನು. ಆದ್ದರಿಂದ ಅದಕ್ಕೆ ದಾವೀದನಗರ ಎಂಬ ಹೆಸರು ಬಂತು. ಪಟ್ಟಣದ ಸುತ್ತಲೂ ದಾವೀದನು ಕೋಟೆಯನ್ನು ಕಟ್ಟಿಸಿದನು. ಮಿಲ್ಲೋವಿನಿಂದ ಪ್ರಾರಂಭಿಸಿ ಕೋಟೆಯವರೆಗೆ ಪಟ್ಟಣವನ್ನು ಕಟ್ಟಿಸಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಸರಿಪಡಿಸಿದನು. ದಾವೀದನು ದಿನದಿಂದ ದಿನಕ್ಕೆ ಬಲಶಾಲಿಯಾದನು. ಸರ್ವಶಕ್ತನಾದ ದೇವರು ಅವನೊಂದಿಗಿದ್ದನು.

ಪ್ರಕಟನೆ 7:13-17

13 ಆಗ ಹಿರಿಯರಲ್ಲೊಬ್ಬನು, “ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡಿರುವ ಈ ಜನರು ಯಾರು! ಅವರು ಎಲ್ಲಿಂದ ಬಂದವರು?” ಎಂದು ನನ್ನನ್ನು ಕೇಳಿದನು.

14 “ಸ್ವಾಮೀ, ಅವರು ಯಾರೆಂಬುದು ನಿಮಗೆ ತಿಳಿದಿದೆ” ಎಂದು ನಾನು ಉತ್ತರಿಸಿದೆನು.

ಆಗ ಹಿರಿಯನು, “ಈ ಜನರು ಭೀಕರ ಸಂಕಟವನ್ನು ಅನುಭವಿಸಿ ಬಂದವರು. ಅವರು ಕುರಿಮರಿಯಾದಾತನ ರಕ್ತದಿಂದ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿದ್ದಾರೆ.[a] ಈಗ ಅವರು ಶುಭ್ರವಾಗಿದ್ದಾರೆ ಮತ್ತು ಬಿಳುಪಾಗಿದ್ದಾರೆ. 15 ಆದ್ದರಿಂದ ಈ ಜನರು ಈಗ ದೇವರ ಸಿಂಹಾಸನದ ಮುಂದೆ ಇದ್ದಾರೆ. ಅವರು ದೇವರನ್ನು ಆತನ ಆಲಯದಲ್ಲಿ ಹಗಲಿರುಳು ಆರಾಧಿಸುತ್ತಾರೆ. ಸಿಂಹಾಸನದ ಮೇಲೆ ಕುಳಿತಿರುವಾತನು ಅವರನ್ನು ಸಂರಕ್ಷಿಸುತ್ತಾನೆ. 16 ಆ ಜನರಿಗೆ ಮತ್ತೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಸೂರ್ಯನ ತಾಪವಾಗಲಿ ಇರುವುದಿಲ್ಲ. ಅವರನ್ನು ಯಾವ ತಾಪವೂ ಸುಡುವುದಿಲ್ಲ. 17 ಸಿಂಹಾಸನದ ಮಧ್ಯೆ ಇರುವ ಕುರಿಮರಿಯಾದಾತನು ಅವರ ಕುರುಬನಾಗಿರುತ್ತಾನೆ. ಆತನು ಅವರನ್ನು ಜೀವ ನೀಡುವ ನೀರಿನ ಬುಗ್ಗೆಗಳ ಬಳಿಗೆ ಕರೆದೊಯ್ಯುತ್ತಾನೆ. ಅವರ ಕಣ್ಣುಗಳಿಂದ ತೊಟ್ಟಿಕ್ಕುವ ಕಣ್ಣೀರನ್ನೆಲ್ಲ ದೇವರು ಒರಸಿಹಾಕುತ್ತಾನೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International