Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

ಆದಿಕಾಂಡ 48:8-19

ಆಮೇಲೆ ಇಸ್ರೇಲನು ಯೋಸೇಫನ ಗಂಡುಮಕ್ಕಳನ್ನು ನೋಡಿ, “ಈ ಹುಡುಗರು ಯಾರು?” ಎಂದು ಕೇಳಿದನು.

ಯೋಸೇಫನು ತನ್ನ ತಂದೆಗೆ, “ಇವರು ನನ್ನ ಮಕ್ಕಳು. ದೇವರು ನನಗೆ ಕೊಟ್ಟಿರುವ ಗಂಡುಮಕ್ಕಳೇ ಇವರು” ಎಂದು ಹೇಳಿದನು.

ಇಸ್ರೇಲನು, “ಅವರನ್ನು ನನ್ನ ಬಳಿಗೆ ಕರೆದುಕೊಂಡು ಬಾ, ನಾನು ಅವರನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿದನು.

10 ಇಸ್ರೇಲನಿಗೆ ತುಂಬ ವಯಸ್ಸಾಗಿತ್ತು. ಅವನಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಆದ್ದರಿಂದ ಯೋಸೇಫನು ಅವರನ್ನು ತಂದೆಯ ಬಳಿಗೆ ಕರೆದುಕೊಂಡು ಬಂದನು. ಇಸ್ರೇಲನು ಆ ಹುಡುಗರನ್ನು ಅಪ್ಪಿಕೊಂಡು ಮುದ್ದಿಟ್ಟನು. 11 ಬಳಿಕ ಇಸ್ರೇಲನು ಯೋಸೇಫನಿಗೆ, “ನಾನು ಮತ್ತೆ ನಿನ್ನ ಮುಖವನ್ನು ನೋಡುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ನಾನು ನಿನ್ನನ್ನೂ ನಿನ್ನ ಮಕ್ಕಳನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾನೆ” ಎಂದು ಹೇಳಿದನು.

12 ಆಗ ಯೋಸೇಫನು ಇಸ್ರೇಲನ ತೊಡೆಯ ಮೇಲೆ ಕುಳಿತಿದ್ದ ತನ್ನ ಗಂಡುಮಕ್ಕಳನ್ನು ಎತ್ತಿಕೊಂಡನು. ಬಳಿಕ ಅವರು ಇಸ್ರೇಲನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 13 ಯೋಸೇಫನು ಎಫ್ರಾಯೀಮನನ್ನು ತನ್ನ ಬಲಭಾಗದಲ್ಲಿಯೂ ಮನಸ್ಸೆಯನ್ನು ತನ್ನ ಎಡಭಾಗದಲ್ಲಿಯೂ ಕುಳ್ಳಿರಿಸಿದನು. (ಆದ್ದರಿಂದ ಎಫ್ರಾಯೀಮನು ಇಸ್ರೇಲನ ಎಡಭಾಗದಲ್ಲಿಯೂ ಮನಸ್ಸೆಯು ಬಲಭಾಗದಲ್ಲಿಯೂ ಇದ್ದರು.) 14 ಆದರೆ ಇಸ್ರೇಲನು ತನ್ನ ಕೈಗಳನ್ನು ವಾರೆ ಮಾಡಿ ತನ್ನ ಬಲಗೈಯನ್ನು ಚಿಕ್ಕ ಮಗನಾದ ಎಫ್ರಾಯೀಮನ ತಲೆಯ ಮೇಲಿಟ್ಟು ಎಡಗೈಯನ್ನು ದೊಡ್ಡ ಮಗನಾದ ಮನಸ್ಸೆಯ ತಲೆಯ ಮೇಲಿಟ್ಟನು. ಮನಸ್ಸೆಯು ಹಿರಿಯ ಮಗನಾಗಿದ್ದರೂ ಇಸ್ರೇಲನು ಮನಸ್ಸೆಯ ತಲೆಯ ಮೇಲೆ ಎಡಗೈಯನ್ನಿಟ್ಟನು. 15 ಬಳಿಕ ಇಸ್ರೇಲನು ಯೋಸೇಫನನ್ನು ಆಶೀರ್ವದಿಸಿ ಹೀಗೆಂದನು:

“ನನ್ನ ಪೂರ್ವಿಕರಾದ ಅಬ್ರಹಾಮನೂ ಇಸಾಕನೂ ನಮ್ಮ ದೇವರನ್ನು ಆರಾಧಿಸಿದರು.
    ಆ ದೇವರೇ ನನ್ನನ್ನು ನನ್ನ ಜೀವಮಾನವೆಲ್ಲಾ ನಡೆಸಿದನು.
16 ನನ್ನನ್ನು ಎಲ್ಲಾ ತೊಂದರೆಗಳಿಂದ ಕಾಪಾಡಿದ ದೂತನೇ ಆತನು.
    ಈ ಹುಡುಗರನ್ನು ಆಶೀರ್ವದಿಸಬೇಕೆಂದು ನಾನು ಆತನಲ್ಲಿ ಪ್ರಾರ್ಥಿಸುವೆನು.
ಇಂದಿನಿಂದ ಈ ಮಕ್ಕಳು ನನ್ನ ಹೆಸರನ್ನೇ ಹೊಂದಿಕೊಳ್ಳುವರು.
    ನನ್ನ ಪೂರ್ವಿಕರಾದ ಅಬ್ರಹಾಮ್ ಮತ್ತು ಇಸಾಕರ ಹೆಸರನ್ನು ಇವರು ಹೊಂದಿಕೊಳ್ಳುವರು.
ಇವರು ಭೂಮಿಯ ಮೇಲೆ ಬೆಳೆದು ದೊಡ್ಡ ಕುಟುಂಬಗಳಾಗುವಂತೆಯೂ
    ದೊಡ್ಡ ಜನಾಂಗಗಳಾಗುವಂತೆಯೂ ನಾನು ಪ್ರಾರ್ಥಿಸುವೆನು.”

17 ಇಸ್ರೇಲನು ತನ್ನ ಬಲಗೈಯನ್ನು ಎಫ್ರಾಯೀಮನ ತಲೆಯ ಮೇಲಿಟ್ಟಿದ್ದರಿಂದ ಯೋಸೇಫನು ಅಸಮಾಧಾನದಿಂದ ನೋಡಿ ತಂದೆಯ ಕೈಯನ್ನು ಹಿಡಿದುಕೊಂಡನು; ಅಲ್ಲದೆ ತಂದೆಯ ಕೈಯನ್ನು ಎಫ್ರಾಯೀಮನ ತಲೆಯ ಮೇಲಿಂದ ತೆಗೆದುಕೊಂಡು ಮನಸ್ಸೆಯ ತಲೆಯ ಮೇಲೆ ಇಡಬೇಕೆಂದಿದ್ದನು. 18 ಯೋಸೇಫನು ತನ್ನ ತಂದೆಗೆ, “ನೀನು ನಿನ್ನ ಬಲಗೈಯನ್ನು ತಪ್ಪಾಗಿ ಎಫ್ರಾಯೀಮನ ಮೇಲೆ ಇಟ್ಟಿರುವೆ. ಮೊದಲು ಹುಟ್ಟಿದವನು ಮನಸ್ಸೆ” ಎಂದು ಹೇಳಿದನು.

19 ಅದಕ್ಕೆ ಅವನ ತಂದೆಯು, “ನನಗೆ ಗೊತ್ತು ಮಗನೇ, ನನಗೆ ಗೊತ್ತು. ಮನಸ್ಸೆ ಮೊದಲು ಹುಟ್ಟಿದವನು. ಅವನು ಮಹಾವ್ಯಕ್ತಿಯಾಗುವನು. ಅವನು ಅನೇಕ ಜನರಿಗೆ ತಂದೆಯಾಗುವನು. ಆದರೆ ತಮ್ಮನು ಅಣ್ಣನಿಗಿಂತ ಮಹಾವ್ಯಕ್ತಿಯಾಗುವನು. ಅವನ ಕುಟುಂಬವು ತುಂಬ ದೊಡ್ಡದಾಗುವುದು” ಎಂದು ಹೇಳಿದನು.

ಮಾರ್ಕ 6:30-34

ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮತ್ತಾಯ 14:13-21; ಲೂಕ 9:10-17; ಯೋಹಾನ 6:1-14)

30 ಯೇಸು ಉಪದೇಶಿಸಲು ಕಳುಹಿಸಿದ್ದ ಅಪೊಸ್ತಲರು ಮರಳಿಬಂದು ತಾವು ಮಾಡಿದ ಮತ್ತು ಉಪದೇಶಿಸಿದ ಸಂಗತಿಗಳನ್ನೆಲ್ಲ ಆತನಿಗೆ ತಿಳಿಸಿದರು. 31 ಯೇಸು ಮತ್ತು ಆತನ ಶಿಷ್ಯರು ಜನರಿಂದ ತುಂಬಿದ ಸ್ಥಳದಲ್ಲಿದ್ದರು. ಅಲ್ಲಿ ಅನೇಕಾನೇಕ ಜನರಿದ್ದುದರಿಂದ ಯೇಸು ಮತ್ತು ಆತನ ಶಿಷ್ಯರಿಗೆ ಊಟಮಾಡಲು ಸಹ ಸಮಯವಿರಲಿಲ್ಲ. ಯೇಸು ತನ್ನ ಶಿಷ್ಯರಿಗೆ, “ನನ್ನೊಂದಿಗೆ ಬನ್ನಿ. ನಾವು ಪ್ರಶಾಂತವಾಗಿರುವ ಸ್ಥಳಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಳ್ಳೋಣ” ಎಂದು ಹೇಳಿದನು.

32 ಆದ್ದರಿಂದ ಯೇಸು ಮತ್ತು ಆತನ ಶಿಷ್ಯರು ಜನರಿಲ್ಲದ ಸ್ಥಳಕ್ಕೆ ದೋಣಿಯಲ್ಲಿ ಪ್ರತ್ಯೇಕವಾಗಿ ಹೊರಟರು. 33 ಆದರೆ ಅವರು ಹೋಗುತ್ತಿರುವುದನ್ನು ಅನೇಕ ಜನರು ನೋಡಿದರು. ಆತನು ಯೇಸುವೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಆತನು ಹೋಗುತ್ತಿರುವ ಸ್ಥಳಕ್ಕೆ ಎಲ್ಲಾ ಊರುಗಳಿಂದ ಜನರು ಓಡಿಹೋಗಿ, ಆತನು ಅಲ್ಲಿಗೆ ಬರುವುದಕ್ಕೆ ಮುಂಚೆಯೇ ಅಲ್ಲಿದ್ದರು. 34 ಯೇಸು ಅಲ್ಲಿಗೆ ಬಂದಾಗ, ಅನೇಕ ಜನರು ತನಗಾಗಿ ಕಾಯುತ್ತಿರುವುದನ್ನು ನೋಡಿದನು. ಅವರು ಕುರುಬನಿಲ್ಲದ ಕುರಿಗಳಂತೆ ಇರುವುದನ್ನು ಕಂಡು ದುಃಖಗೊಂಡು ಅವರಿಗೆ ಅನೇಕ ಸಂಗತಿಗಳನ್ನು ಉಪದೇಶಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International