Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

ಆದಿಕಾಂಡ 30:25-43

ಯಾಕೋಬನು ಲಾಬಾನನಿಗೆ ಮೋಸ ಮಾಡಿದ್ದು

25 ಯೋಸೇಫನು ಹುಟ್ಟಿದ ಮೇಲೆ, ಯಾಕೋಬನು ಲಾಬಾನನಿಗೆ, “ಈಗ ನಾನು ನನ್ನ ಸ್ವಂತ ಮನೆಗೆ ಹೋಗಲು ಅನುಮತಿ ಕೊಡು. 26 ನನ್ನ ಹೆಂಡತಿಯರನ್ನೂ ಮಕ್ಕಳನ್ನೂ ನನಗೆ ಕೊಡು. ನಾನು ಹದಿನಾಲ್ಕು ವರ್ಷ ನಿನ್ನ ಸೇವೆಮಾಡಿ ಅವರನ್ನು ಸಂಪಾದಿಸಿಕೊಂಡಿದ್ದೇನೆ. ನಾನು ನಿನಗೆ ಒಳ್ಳೆಯ ಸೇವೆ ಮಾಡಿರುವುದು ನಿನಗೆ ತಿಳಿದಿದೆ” ಎಂದು ಹೇಳಿದನು.

27 ಲಾಬಾನನು ಅವನಿಗೆ, “ನಾನು ಹೇಳುವುದನ್ನು ಕೇಳು; ಯೆಹೋವನು ನಿನ್ನ ನಿಮಿತ್ತವಾಗಿ ನನ್ನನ್ನು ಆಶೀರ್ವದಿಸಿದ್ದಾನೆಂದು ನನಗೆ ತಿಳಿದಿದೆ. 28 ಹೇಳು, ನಾನು ನಿನಗೆ ಎಷ್ಟು ಸಂಬಳ ಕೊಡಬೇಕು? ನೀನು ಹೇಳಿದಷ್ಟು ಕೊಡುತ್ತೇನೆ” ಎಂದು ಹೇಳಿದನು.

29 ಯಾಕೋಬನು, “ನಾನು ನಿನಗೋಸ್ಕರ ಕಷ್ಟಪಟ್ಟು ಕೆಲಸ ಮಾಡಿರುವುದು ನಿನಗೆ ಗೊತ್ತಿದೆ. ನಾನು ನಿನ್ನ ಕುರಿಮಂದೆಗಳನ್ನು ನೋಡಿಕೊಂಡಿದ್ದರಿಂದ ಅವು ಹೆಚ್ಚಾಗಿವೆ. 30 ನಾನು ಬಂದಾಗ ನಿನಗೆ ಸ್ವಲ್ಪವಿತ್ತು, ಈಗ ನಿನಗೆ ಬೇಕಾದಷ್ಟಿದೆ. ನಾನು ನಿನಗೋಸ್ಕರ ಮಾಡಿದ್ದನ್ನೆಲ್ಲ ಯೆಹೋವನು ಆಶೀರ್ವದಿಸಿದನು. ನಾನು ನನಗೋಸ್ಕರ ಕೆಲಸ ಮಾಡುವ ಸಮಯವಿದು. ನನ್ನ ಸ್ವಂತ ಮನೆಗೆ ಒದಗಿಸುವ ಸಮಯವಿದು” ಎಂದು ಹೇಳಿದನು.

31 ಲಾಬಾನನು “ಹಾಗಾದರೆ ನಾನು ನಿನಗೇನು ಕೊಡಬೇಕು” ಎಂದು ಕೇಳಿದನು.

ಯಾಕೋಬನು, “ನೀನು ನನಗೆ ಏನೂ ಕೊಡಬೇಕಾಗಿಲ್ಲ. (ನಾನು ಕೆಲಸ ಮಾಡಿದ್ದಕ್ಕೆ ನೀನು ಸಂಬಳ ಕೊಟ್ಟರೆ ಸಾಕು.) ಇದೊಂದು ಕಾರ್ಯವನ್ನು ಮಾಡು; ನಾನು ಹೋಗಿ ನಿನ್ನ ಕುರಿಗಳನ್ನು ನೋಡಿಕೊಳ್ಳುವೆ. 32 ನಾನು ನಿನ್ನ ಕುರಿಮಂದೆಯೊಳಗೆ ಹೋಗಿ, ಚುಕ್ಕೆಮಚ್ಚೆಗಳಿರುವ ಪ್ರತಿಯೊಂದು ಕುರಿಯನ್ನೂ ಪ್ರತಿಯೊಂದು ಕಪ್ಪು ಕುರಿಯನ್ನೂ ಚುಕ್ಕೆಮಚ್ಚೆಗಳಿರುವ ಪ್ರತಿಯೊಂದು ಮೇಕೆಯನ್ನೂ ತೆಗೆದುಕೊಳ್ಳುವೆನು. ಅದೇ ನನಗೆ ಸಂಬಳ. 33 ಮುಂದಿನ ದಿನಗಳಲ್ಲಿ ನೀನು ಬಂದು ಪರೀಕ್ಷಿಸಿದಾಗ ನಾನು ಯಥಾರ್ಥನೊ ಇಲ್ಲವೊ ಎಂಬುದನ್ನು ನೀನು ಸುಲಭವಾಗಿ ಕಂಡುಕೊಳ್ಳಬಹುದು. ನಾನೇನಾದರೂ ಚುಕ್ಕೆಯಿಲ್ಲದ ಮೇಕೆಗಳನ್ನಾಗಲಿ ಅಥವಾ ಕಪ್ಪಿಲ್ಲದ ಕುರಿಗಳನ್ನಾಗಲಿ ಹೊಂದಿದ್ದರೆ, ನಾನು ಅದನ್ನು ಕದ್ದುಕೊಂಡದ್ದೆಂದು ನೀನು ಪರಿಗಣಿಸಬಹುದು” ಎಂದು ಹೇಳಿದನು.

34 ಲಾಬಾನನು, “ನಾನು ಅದಕ್ಕೆ ಒಪ್ಪಿಕೊಂಡಿದ್ದೇನೆ. ನೀನು ಹೇಳಿದಂತೆ ನಾವು ಮಾಡೋಣ” ಎಂದು ಹೇಳಿದನು. 35 ಆ ದಿನ ಲಾಬಾನನು ಚುಕ್ಕೆಗಳಿದ್ದ ಎಲ್ಲಾ ಹೋತಗಳನ್ನೂ ಮೇಕೆಗಳನ್ನೂ ಕಪ್ಪಾದ ಕುರಿಗಳನ್ನೂ ಪ್ರತ್ಯೇಕಿಸಿದನು. ಲಾಬಾನನು ತನ್ನ ಗಂಡುಮಕ್ಕಳಿಗೆ ಆ ಕುರಿಗಳನ್ನು ನೋಡಿಕೊಳ್ಳಲು ಹೇಳಿದನು. 36 ಆದ್ದರಿಂದ ಅವನ ಗಂಡುಮಕ್ಕಳು ಚುಕ್ಕೆಗಳಿದ್ದ ಅವುಗಳೊಂದಿಗೆ ಮತ್ತೊಂದು ಸ್ಥಳಕ್ಕೆ ಹೋದರು. ಅವರು ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಯಾಕೋಬನು ಅಲ್ಲಿದ್ದುಕೊಂಡು ಉಳಿದವುಗಳನ್ನೆಲ್ಲ ನೋಡಿಕೊಳ್ಳತೊಡಗಿದನು.

37 ಆದ್ದರಿಂದ ಯಾಕೋಬನು ಲಿಬ್ನೆ, ಲೂಜ್ ಮತ್ತು ಅರ್ಮೋನ್ ಎಂಬ ಮರಗಳಿಂದ ಹಸಿರುಕೊಂಬೆಗಳನ್ನು ಕತ್ತರಿಸಿದನು. ಅವುಗಳನ್ನು ಪಟ್ಟಿಪಟ್ಟಿಯಾಗಿ ತೊಗಟೆ ಸುಲಿದು ಅವುಗಳಲ್ಲಿರುವ ಬಿಳುಪುಬಣ್ಣವು ಕಾಣಿಸುವಂತೆ ಮಾಡಿದನು. 38 ಯಾಕೋಬನು ಆ ಕೊಂಬೆಗಳನ್ನು ಮಂದೆಗಳ ಎದುರಿಗೆ ನೀರು ಕುಡಿಯುವ ಸ್ಥಳದಲ್ಲಿಟ್ಟನು. ಪ್ರಾಣಿಗಳು ನೀರು ಕುಡಿಯುವುದಕ್ಕೆ ಬಂದಾಗ ಆ ಸ್ಥಳದಲ್ಲಿ ಸಂಗಮ ಮಾಡುತ್ತಿದ್ದವು. 39 ಮೇಕೆಗಳು ಆ ಕೊಂಬೆಗಳ ಎದುರಿನಲ್ಲಿ ಸಂಗಮ ಮಾಡಿದಾಗ, ಅವುಗಳಲ್ಲಿ ಹುಟ್ಟಿದ ಮರಿಗಳೆಲ್ಲ ಚುಕ್ಕೆಮಚ್ಚೆಗಳಿಂದಲೂ ಕಪ್ಪು ಬಣ್ಣದಿಂದಲೂ ಕೂಡಿದ್ದವು.

40 ಯಾಕೋಬನು ಚುಕ್ಕೆಯುಳ್ಳ ಮತ್ತು ಕಪ್ಪಾಗಿರುವ ಆಡುಕುರಿಗಳನ್ನು ಮಂದೆಯ ಇತರ ಆಡುಕುರಿಗಳಿಂದ ಬೇರ್ಪಡಿಸಿದನು. ಯಾಕೋಬನು ತನ್ನ ಪಶುಗಳನ್ನು ಲಾಬಾನನ ಪಶುಗಳಿಂದ ಪ್ರತ್ಯೇಕವಾಗಿರಿಸಿದನು. 41 ಬಲವಾದ ಆಡುಕುರಿಗಳು ಸಂಗಮ ಮಾಡುವಾಗಲೆಲ್ಲ ಯಾಕೋಬನು ಆ ಕೊಂಬೆಗಳನ್ನು ಅವುಗಳ ಕಣ್ಣಿಗೆ ಎದುರಾಗಿಡುತ್ತಿದ್ದನು. ಅವುಗಳು ಆ ಕೊಂಬೆಗಳ ಸಮೀಪದಲ್ಲಿ ಸಂಗಮ ಮಾಡುತ್ತಿದ್ದವು. 42 ಆದರೆ ಬಲಹೀನವಾದ ಪ್ರಾಣಿಗಳು ಸಂಗಮ ಮಾಡುವಾಗ ಯಾಕೋಬನು ಆ ಕೊಂಬೆಗಳನ್ನು ಅಲ್ಲಿ ಇಡುತ್ತಿರಲಿಲ್ಲ. ಆದ್ದರಿಂದ ಬಲಹೀನವಾದ ಆಡುಕುರಿಗಳಿಗೆ ಹುಟ್ಟಿದ ಮರಿಗಳೆಲ್ಲ ಲಾಬಾನನಿಗೆ ಸೇರಿಕೊಂಡವು. ಬಲವಾದ ಆಡುಕುರಿಗಳಿಗೆ ಹುಟ್ಟಿದ ಮರಿಗಳೆಲ್ಲ ಯಾಕೋಬನಿಗೆ ಸೇರಿಕೊಂಡವು. 43 ಹೀಗೆ ಯಾಕೋಬನು ತುಂಬ ಐಶ್ವರ್ಯವಂತನಾದನು. ಅವನಿಗೆ ದೊಡ್ಡ ಮಂದೆಗಳಿದ್ದವು. ಅನೇಕ ಸೇವಕರಿದ್ದರು; ಒಂಟೆಗಳಿದ್ದವು ಮತ್ತು ಕತ್ತೆಗಳಿದ್ದವು.

ಅಪೊಸ್ತಲರ ಕಾರ್ಯಗಳು 3:17-26

17 “ಸಹೋದರರೇ, ನೀವು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನನಗೆ ಗೊತ್ತಿದೆ. ನಿಮ್ಮ ನಾಯಕರು ಸಹ ಅರ್ಥಮಾಡಿಕೊಳ್ಳಲಿಲ್ಲ. 18 ಹೀಗಾಗುತ್ತದೆ ಎಂದು ದೇವರು ಮೊದಲೇ ತಿಳಿಸಿದ್ದನು. ಕ್ರಿಸ್ತನು ಶ್ರಮೆ ಅನುಭವಿಸಿ ಸಾಯುವನೆಂದು ದೇವರು ತನ್ನ ಪ್ರವಾದಿಗಳ ಮೂಲಕ ಮೊದಲೇ ತಿಳಿಸಿದ್ದನ್ನು ಹೀಗೆ ನೆರವೇರಿಸಿದ್ದಾನೆ. 19 ಆದ್ದರಿಂದ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿ. ಆಗ ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು. 20 ಪ್ರಭುವು ನಿಮಗೆ ಆತ್ಮಿಕ ವಿಶ್ರಾಂತಿಯನ್ನು ಕೊಡುವನು. ಆತನು ಕ್ರಿಸ್ತನನ್ನಾಗಿ ಆರಿಸಿಕೊಂಡ ಯೇಸುವನ್ನು ನಿಮಗೆ ಕೊಡುವನು.

21 “ಆದರೆ ಎಲ್ಲವನ್ನು ಸರಿಪಡಿಸುವ ಕಾಲ ಬರುವ ತನಕ ಯೇಸು ಪರಲೋಕದಲ್ಲೇ ಇರಬೇಕು. ದೇವರು ಬಹುಕಾಲದ ಹಿಂದೆ ತನ್ನ ಪವಿತ್ರ ಪ್ರವಾದಿಗಳ ಸಂದೇಶದ ಮೂಲಕ ಮಾತಾಡಿದಾಗ, ಈ ಕಾಲದ ಬಗ್ಗೆ ಹೇಳಿದನು. 22 ಮೋಶೆಯು ಇಂತೆಂದಿದ್ದಾನೆ: ‘ನಿಮ್ಮ ದೇವರಾದ ಪ್ರಭುವು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ನಿಮ್ಮ ಸ್ವಂತ ಜನರ ಮಧ್ಯದಿಂದಲೇ ಆ ಪ್ರವಾದಿ ಬರುವನು. ಆತನು ನನ್ನಂತೆ ಇರುವನು. ಆ ಪ್ರವಾದಿ ಹೇಳುವ ಪ್ರತಿಯೊಂದಕ್ಕೂ ನೀವು ವಿಧೇಯರಾಗಬೇಕು. 23 ಆತನಿಗೆ ವಿಧೇಯನಾಗದವನು ದೇವಜನರಿಂದ ಬೇರ್ಪಟ್ಟು ಮರಣ ಹೊಂದುವನು.’(A)

24 “ಸಮುವೇಲನು ಮತ್ತು ಅವನ ನಂತರದ ಪ್ರವಾದಿಗಳು ಇಂದಿನ ಈ ಕಾಲದ ಬಗ್ಗೆ ಮಾತಾಡಿದರು. 25 ಆ ಪ್ರವಾದಿಗಳು ಹೇಳಿದ ಸಂಗತಿಗಳನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃವಾದ ಅಬ್ರಹಾಮನಿಗೆ, ‘ನಿನ್ನ ಸಂತತಿಯಿಂದ ಭೂಮಿಯ ಮೇಲಿರುವ ಜನರೆಲ್ಲರು ಆಶೀರ್ವಾದ ಹೊಂದುವರು’(B) ಎಂದು ಹೇಳಿದನು. 26 ದೇವರು ತನ್ನ ವಿಶೇಷ ಸೇವಕನನ್ನು (ಯೇಸುವನ್ನು) ಮೊಟ್ಟಮೊದಲು ನಿಮ್ಮ ಬಳಿಗೆ ಕಳುಹಿಸಿದನು. ನಿಮ್ಮನ್ನು ಆಶೀರ್ವದಿಸುವುದಕ್ಕಾಗಿ ದೇವರು ಯೇಸುವನ್ನು ಕಳುಹಿಸಿದನು. ಆತನು ನಿಮ್ಮನ್ನು ನಿಮ್ಮ ಕೆಟ್ಟಕಾರ್ಯಗಳಿಂದ ದೂರಮಾಡಿ ಆಶೀರ್ವದಿಸುತ್ತಾನೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International