Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 4

ರಚನೆಗಾರ: ದಾವೀದ.

ನೀತಿಸ್ವರೂಪನಾದ ದೇವರೇ, ನನ್ನ ಪ್ರಾರ್ಥನೆಗೆ ಉತ್ತರಿಸು!
    ನನ್ನ ಮೊರೆಗೆ ಕಿವಿಗೊಟ್ಟು ನನ್ನನ್ನು ಕರುಣಿಸು!
ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸಿ
    ಸುರಕ್ಷಿತ ಸ್ಥಳದಲ್ಲಿ ಸೇರಿಸು.

ಜನರೇ, ಇನ್ನೆಷ್ಟರವರೆಗೆ ನನ್ನ ಬಗ್ಗೆ ಕೆಟ್ಟದ್ದನ್ನು ಹೇಳುವಿರಿ?
    ಅಸತ್ಯವನ್ನೇ ಪ್ರೀತಿಸುತ್ತಾ, ನನ್ನ ಮೇಲೆ ಹೊರಿಸಲು ಸುಳ್ಳಪವಾದಗಳಿಗಾಗಿ ಯಾಕೆ ಹುಡುಕುತ್ತಿದ್ದೀರಿ?

ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆಂಬುದು ನಿಮಗೆ ತಿಳಿದಿರಲಿ.
    ನಾನು ಮೊರೆಯಿಡುವಾಗಲೆಲ್ಲಾ ಆತನು ನನಗೆ ಕಿವಿಗೊಡುತ್ತಾನೆ.

ನೀವು ಕೋಪದಿಂದಿರುವಾಗ ಎಚ್ಚರಿಕೆಯಾಗಿದ್ದು ಪಾಪಮಾಡದಿರಿ.
    ಹಾಸಿಗೆಯ ಮೇಲಿರುವಾಗ ಹೃದಯಗಳನ್ನು ಪರೀಕ್ಷಿಸಿಕೊಳ್ಳಿರಿ.
ದೇವರಿಗೆ ಯೋಗ್ಯವಾದ ಯಜ್ಞಗಳನ್ನು ಅರ್ಪಿಸಿರಿ;
    ಯೆಹೋವನಲ್ಲಿಯೇ ಭರವಸೆಯಿಡಿರಿ!

“ನಮಗೆ ಒಳ್ಳೆಯದನ್ನು ಯಾರು ತೋರಿಸುವರು?
    ಯೆಹೋವನೇ, ನಿನ್ನ ಪ್ರಕಾಶಮಾನವಾದ ಮುಖವನ್ನು ನಾವು ನೋಡುವಂತಾಗಲಿ!” ಎಂದು ಅನೇಕರು ಅಂದುಕೊಳ್ಳುವರು.
ಧಾನ್ಯಯವೂ ದ್ರಾಕ್ಷಿಯೂ ಸಮೃದ್ಧಿಯಾಗಿ ಬೆಳೆದ ಸುಗ್ಗಿಕಾಲದಲ್ಲಿ ಜನರಲ್ಲಿರುವ ಸಂತೋಷಕ್ಕಿಂತಲೂ ಅಧಿಕವಾದ ಆನಂದವನ್ನು ನೀನು ನನ್ನ ಹೃದಯದಲ್ಲಿ ತುಂಬಿರುವೆ.
ನಾನು ಹಾಸಿಗೆಯ ಮೇಲೆ ಸಮಾಧಾನದಿಂದ ನಿದ್ರಿಸುವೆನು.
    ಯಾಕೆಂದರೆ, ಯೆಹೋವನೇ, ನನ್ನನ್ನು ಕಾಪಾಡುವಾತನು ನೀನೇ.

ಅಪೊಸ್ತಲರ ಕಾರ್ಯಗಳು 3:1-10

ಪೇತ್ರನಿಂದ ಗುಣಹೊಂದಿದ ಕುಂಟ

ಒಂದು ದಿನ ಪೇತ್ರ ಮತ್ತು ಯೋಹಾನ ದೇವಾಲಯಕ್ಕೆ ಹೋದರು. ಆಗ ಮಧ್ಯಾಹ್ನ ಮೂರು ಗಂಟೆಯ ಸಮಯವಾಗಿತ್ತು. ಈ ವೇಳೆಯಲ್ಲೇ ಪ್ರತಿದಿನ ಪ್ರಾರ್ಥನಾಕೂಟ ನಡೆಯುತ್ತಿತ್ತು. ಅವರು ದೇವಾಲಯಕ್ಕೆ ಹೋಗುತ್ತಿದ್ದಾಗ ಅಲ್ಲೊಬ್ಬ ಹುಟ್ಟುಕುಂಟನಿದ್ದನು. ಅವನಿಗೆ ನಡೆಯಲಾಗುತ್ತಿರಲಿಲ್ಲ. ಆದ್ದರಿಂದ ಅವನ ಕೆಲವು ಸ್ನೇಹಿತರು ಅವನನ್ನು ಪ್ರತಿದಿನ ದೇವಾಲಯಕ್ಕೆ ಹೊತ್ತುಕೊಂಡು ಬಂದು, ದೇವಾಲಯದ ಹೊರ ಬಾಗಿಲುಗಳ ಒಂದರ ಸಮೀಪದಲ್ಲಿ ಕುಳ್ಳಿರಿಸುತ್ತಿದ್ದರು. ಆ ಬಾಗಿಲಿನ ಹೆಸರು “ಸುಂದರ ದ್ವಾರ.” ಅವನು ದೇವಾಲಯಕ್ಕೆ ಹೋಗುವ ಜನರಿಂದ ಭಿಕ್ಷೆ ಬೇಡುತ್ತಿದ್ದನು. ಅಂದು ದೇವಾಲಯದೊಳಕ್ಕೆ ಹೋಗುತ್ತಿದ್ದ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಕೇಳಿದನು.

ಪೇತ್ರ ಮತ್ತು ಯೋಹಾನ ಆ ಕುಂಟನಿಗೆ, “ನಮ್ಮನ್ನು ನೋಡು!” ಎಂದರು. ಅವನು ಅವರನ್ನು ನೋಡಿದನು. ಅವರು ಸ್ವಲ್ಪ ಹಣಕೊಡಬಹುದೆಂದು ಅವನು ಭಾವಿಸಿಕೊಂಡನು. ಆದರೆ ಪೇತ್ರನು, “ನನ್ನಲ್ಲಿ ಬೆಳ್ಳಿಬಂಗಾರಗಳಿಲ್ಲ, ಆದರೆ ನನ್ನಲ್ಲಿರುವುದನ್ನು ನಿನಗೆ ಕೊಡಬಲ್ಲೆನು. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದುನಡೆ!” ಎಂದು ಹೇಳಿ,

ಆ ಮನುಷ್ಯನ ಕೈಹಿಡಿದು ಎತ್ತಿದನು. ಆ ಕೂಡಲೇ ಅವನ ಕಾಲುಗಳು ಮತ್ತು ಪಾದಗಳು ಬಲಗೊಂಡವು. ಅವನು ಜಿಗಿದು, ತನ್ನ ಪಾದಗಳ ಮೇಲೆ ನಿಂತುಕೊಂಡು ನಡೆಯತೊಡಗಿದನು. ಅವನೂ ಅವರೊಂದಿಗೆ ದೇವಾಲಯಕ್ಕೆ ಹೋದನು. ಅವನು ನಡೆಯುತ್ತಾ ಜಿಗಿಯುತ್ತಾ ದೇವರನ್ನು ಕೊಂಡಾಡುತ್ತಿದ್ದನು. 9-10 ಜನರೆಲ್ಲರೂ ಅವನನ್ನು ಗುರುತಿಸಿದರು. ಸುಂದರ ದ್ವಾರದ ಬಳಿಯಲ್ಲಿ ಯಾವಾಗಲೂ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಕುಂಟನೇ ಇವನೆಂದು ಜನರಿಗೆ ತಿಳಿದಿತ್ತು. ಈಗ ಅದೇ ವ್ಯಕ್ತಿಯು ನಡೆಯುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಕಂಡು ಅವರು ಆಶ್ಚರ್ಯಗೊಂಡು ಬೆರಗಾದರು.

ಲೂಕ 22:24-30

ಸೇವಕರಂತಿರಿ

24 ಬಳಿಕ ಅಪೊಸ್ತಲರು ತಮ್ಮಲ್ಲಿ ಯಾರು ಅತಿ ಶ್ರೇಷ್ಠರೆಂದು ವಾದ ಮಾಡತೊಡಗಿದರು. 25 ಆಗ ಯೇಸು ಅವರಿಗೆ, “ಈ ಲೋಕದ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ. ಜನರ ಮೇಲೆ ಅಧಿಕಾರ ಹೊಂದಿರುವವರನ್ನು ಧರ್ಮಿಷ್ಠರೆಂದು ಕರೆಯುತ್ತಾರೆ. 26 ಆದರೆ ನೀವು ಹಾಗಾಗಬಾರದು. ಅತ್ಯಂತ ದೊಡ್ಡ ವ್ಯಕ್ತಿಯು ಅತ್ಯಂತ ಚಿಕ್ಕ ವ್ಯಕ್ತಿಯಾಗಬೇಕು. ನಾಯಕರು ಸೇವಕರಂತಿರಬೇಕು. 27 ಶ್ರೇಷ್ಠನಾದವನು ಯಾರು? ಊಟಕ್ಕೆ ಕುಳಿತವನೋ? ಅಥವಾ ಅವನಿಗೆ ಸೇವೆ ಮಾಡುವವನೋ? ಊಟಕ್ಕೆ ಕುಳಿತಿರುವವನೇ ಶ್ರೇಷ್ಠನೆಂದು ನೀವು ಭಾವಿಸುತ್ತೀರೋ? ಆದರೆ ನಾನು ನಿಮ್ಮಲ್ಲಿ ಸೇವಕನಂತಿದ್ದೇನೆ!

28 “ನೀವು ನನ್ನ ಅನೇಕ ಕಷ್ಟಗಳಲ್ಲಿ ನನ್ನ ಸಂಗಡ ಇದ್ದವರು. 29 ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ. 30 ನನ್ನ ರಾಜ್ಯದಲ್ಲಿ ನೀವು ನನ್ನ ಸಂಗಡ ಊಟಮಾಡುವಿರಿ ಮತ್ತು ಕುಡಿಯುವಿರಿ. ನೀವು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International