Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 133

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

133 ಆಹಾ, ಸಹೋದರರು ಅನ್ಯೋನ್ಯತೆಯಿಂದಿರುವುದು
    ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು.
ಅದು ಯಾಜಕನ ತಲೆಯ ಮೇಲೆ ಹಾಕಲ್ಪಟ್ಟು ಆರೋನನ ಗಡ್ಡಕ್ಕೂ
    ಅಲ್ಲಿಂದ ಅವನ ಉಡುಪುಗಳ ಮೇಲೆಯೂ ಇಳಿದುಬರುವ ಪರಿಮಳ ತೈಲದಂತಿರುವುದು;
ಅದು ಹೆರ್ಮೋನ್ ಪರ್ವತದಿಂದ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ದಟ್ಟವಾದ ಮಂಜಿನಂತಿರುವುದು.
    ಯೆಹೋವನು ನಿತ್ಯಜೀವವೆಂಬ ತನ್ನ ಆಶೀರ್ವಾದವನ್ನು ಅನುಗ್ರಹಿಸಿದ್ದು ಚೀಯೋನಿನಲ್ಲಿಯೇ.

ದಾನಿಯೇಲ 2:1-23

ನೆಬೂಕದ್ನೆಚ್ಚರನ ಸ್ವಪ್ನ

ತನ್ನ ಆಳ್ವಿಕೆಯ ಎರಡನೇ ವರ್ಷದಲ್ಲಿ ನೆಬೂಕದ್ನೆಚ್ಚರನು ಕೆಲವು ಕನಸುಗಳನ್ನು ಕಂಡನು. ಆ ಕನಸುಗಳು ಅವನನ್ನು ತತ್ತರಿಸಿಬಿಟ್ಟವು ಮತ್ತು ಅವನಿಗೆ ನಿದ್ರೆ ಬರದಂತೆ ಮಾಡಿದವು. ಅರಸನು ತನ್ನ ಎಲ್ಲಾ ಪಂಡಿತರನ್ನು ಕರೆಸಿದನು. ಅವರು ಮಾಟಮಂತ್ರಗಳಿಂದ, ಜ್ಯೋತಿಶ್ಶಾಸ್ತ್ರದ ಸಹಾಯದಿಂದ ಅರಸನ ಕನಸಿನ ಅರ್ಥವನ್ನೂ ಭವಿಷ್ಯದಲ್ಲಿ ಸಂಭವಿಸಲಿರುವುದನ್ನೂ ತಿಳಿದುಕೊಳ್ಳಲು ಪ್ರಯತ್ನ ಮಾಡಿದರು. ರಾಜನು ತಾನು ಕಂಡ ಕನಸಿನ ಅರ್ಥವನ್ನು ತಿಳಿಯಬಯಸಿದ್ದರಿಂದ ಅವರು ಒಳಗೆ ಬಂದು ಅರಸನ ಸಮ್ಮುಖದಲ್ಲಿ ನಿಂತುಕೊಂಡರು.

ಆಗ ಅರಸನು ಅವರಿಗೆ, “ನಾನೊಂದು ಕನಸು ಕಂಡೆ. ಅದು ನನ್ನನ್ನು ಪೀಡಿಸುತ್ತಿದೆ. ಆ ಕನಸಿನ ಅರ್ಥವೇನೆಂಬುದನ್ನು ನಾನು ತಿಳಿಯಬಯಸುತ್ತೇನೆ” ಎಂದನು.

ಆಗ ಆ ಕಸ್ದೀಯರು ಅರಮೇಯಿಕ್ ಭಾಷೆಯಲ್ಲಿ, “ಅರಸನೇ ಚಿರಂಜೀವಿಯಾಗಿರು. ನಾವು ನಿನ್ನ ಸೇವಕರು. ದಯವಿಟ್ಟು ನಮಗೆ ನಿನ್ನ ಕನಸನ್ನು ಹೇಳು. ನಾವು ಅದರ ಅರ್ಥವನ್ನು ತಿಳಿಸುತ್ತೇವೆ” ಎಂದು ಉತ್ತರಕೊಟ್ಟರು.

ಆಗ ಅರಸನಾದ ನೆಬೂಕದ್ನೆಚ್ಚರನು, “ಹಾಗಲ್ಲ, ನೀವು ನನಗೆ ನನ್ನ ಕನಸನ್ನೂ ಅದರ ಅರ್ಥವನ್ನೂ ತಿಳಿಸಬೇಕು. ಇಲ್ಲವಾದರೆ ನಾನು ನಿಮ್ಮ ದೇಹವನ್ನು ತುಂಡುತುಂಡಾಗಿ ಕತ್ತರಿಸಲು ಆಜ್ಞಾಪಿಸುತ್ತೇನೆ. ನಿಮ್ಮ ಮನೆಗಳನ್ನು ಬೀಳಿಸಿ ಮಣ್ಣುಗುಡ್ಡೆಯನ್ನಾಗಿಯೂ ಮತ್ತು ಬೂದಿರಾಶಿಯನ್ನಾಗಿಯೂ ಮಾಡುವಂತೆ ಆಜ್ಞಾಪಿಸುತ್ತೇನೆ. ಆದರೆ ನೀವು ನನಗೆ ನನ್ನ ಕನಸನ್ನೂ ಅದರ ಅರ್ಥವನ್ನೂ ಹೇಳಿದರೆ ಕಾಣಿಕೆಗಳನ್ನೂ ಬಹುಮಾನಗಳನ್ನೂ ಕೊಡುತ್ತೇನೆ ಮತ್ತು ಮಹಾಸನ್ಮಾನವನ್ನು ಮಾಡುತ್ತೇನೆ. ಆದ್ದರಿಂದ ನೀವು ನನಗೆ ಕನಸನ್ನೂ ಅದರ ಅರ್ಥವನ್ನೂ ಹೇಳಿರಿ” ಎಂದನು.

ಆ ಪಂಡಿತರು ಅರಸನಿಗೆ, “ದಯವಿಟ್ಟು ತಾವು ಕನಸಿನ ಬಗ್ಗೆ ಹೇಳಿರಿ. ನಾವು ಅದರ ಅಭಿಪ್ರಾಯವನ್ನು ಹೇಳುತ್ತೇವೆ” ಎಂದರು.

ಅರಸನಾದ ನೆಬೂಕದ್ನೆಚ್ಚರನು, “ನೀವು ಹೆಚ್ಚಿನ ಕಾಲಾವಕಾಶವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದೀರೆಂಬುದನ್ನು ನಾನು ಬಲ್ಲೆ. ನಾನು ಹೇಳಿದ್ದು ನಿಮಗೆ ಸರಿಯಾಗಿ ತಿಳಿದಿದೆ. ನೀವು ನನಗೆ ನನ್ನ ಕನಸಿನ ಬಗ್ಗೆ ಹೇಳದಿದ್ದರೆ ನಿಮಗೆ ಶಿಕ್ಷೆಯಾಗುವದೆಂದು ನೀವು ಬಲ್ಲಿರಿ. ನೀವೆಲ್ಲ ನನಗೆ ಸುಳ್ಳು ಹೇಳಬೇಕೆಂದು ನಿರ್ಧರಿಸಿಕೊಂಡಿದ್ದೀರಿ. ನೀವು ಹೆಚ್ಚಿನ ಸಮಯವನ್ನು ಪಡೆಯಲಿಚ್ಛಿಸುತ್ತಿದ್ದೀರಿ. ನಿಮಗೆ ಹೇಳಿದ್ದನ್ನು ನಾನು ಮರೆತುಬಿಡಬಹುದೆಂದು ನೀವು ಭಾವಿಸುತ್ತಿರುವಿರಿ. ಈಗ ನನ್ನ ಕನಸನ್ನು ತಿಳಿಸಿರಿ. ನೀವು ಕನಸನ್ನು ತಿಳಿಸಿದರೆ ಅದರ ನಿಜವಾದ ಅರ್ಥವನ್ನೂ ಹೇಳಬಲ್ಲಿರಿ” ಎಂದು ಅವರಿಗೆ ಉತ್ತರಕೊಟ್ಟನು.

10 ಕಸ್ದೀಯರು, “ಮಹಾಪ್ರಭುಗಳು ಕೇಳುತ್ತಿರುವುದನ್ನು ಹೇಳುವವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಈ ಹಿಂದೆ ಯಾವ ಅರಸನೂ ತನ್ನ ಆಸ್ಥಾನ ಪಂಡಿತರಿಗೂ ಮಂತ್ರವಾದಿಗಳಿಗೂ ಇಂತಹ ಪ್ರಶ್ನೆಯನ್ನು ಕೇಳಲಿಲ್ಲ. ಅತ್ಯಂತ ದೊಡ್ಡ ಮತ್ತು ಪ್ರಬಲನಾದ ಅರಸನೂ ತನ್ನ ಪಂಡಿತರಿಗಾಗಲಿ ಜೋಯಿಸರಿಗಾಗಲಿ ಇಂಥದ್ದನ್ನು ಕೇಳಲಿಲ್ಲ. 11 ಮಹಾಪ್ರಭುಗಳು ಕೇಳುವ ವಿಷಯ ಅತಿ ಕಠಿಣವಾದದ್ದು. ದೇವತೆಗಳು ಮಾತ್ರ ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸಲು ಸಾಧ್ಯ. ಆದರೆ ದೇವತೆಗಳು ಮಾನವರೊಂದಿಗೆ ವಾಸಮಾಡುವುದಿಲ್ಲ” ಎಂದರು.

12 ಇದನ್ನು ಕೇಳಿ ಅರಸನು ಬಹಳ ಕೋಪಗೊಂಡು ಬಾಬಿಲೋನಿನ ಎಲ್ಲಾ ವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು. 13 ಅರಸನಾದ ನೆಬೂಕದ್ನೆಚ್ಚರನ ಆಜ್ಞೆಯನ್ನು ಪ್ರಕಟಗೊಳಿಸಲಾಯಿತು. ಎಲ್ಲಾ ವಿದ್ವಾಂಸರನ್ನು ಕೊಲ್ಲಬೇಕಾಗಿತ್ತು. ದಾನಿಯೇಲ ಮತ್ತು ಅವನ ಸ್ನೇಹಿತರನ್ನು ಹುಡುಕಿ ಅವರ ಕೊಲೆ ಮಾಡುವುದಕ್ಕಾಗಿ ರಾಜಭಟರನ್ನು ಕಳುಹಿಸಲಾಯಿತು.

14 ಅರ್ಯೋಕನು ಅರಸನ ಮೈಗಾವಲಿನವರ ದಳವಾಯಿಯಾಗಿದ್ದನು. ಅವನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಲು ಹೊರಟಿದ್ದನು. ಆದರೆ ದಾನಿಯೇಲನು ಅವನೊಂದಿಗೆ ಮಾತನಾಡಿದನು. ದಾನಿಯೇಲನು ಅವನ ಸಂಗಡ ವಿವೇಕ ಮತ್ತು ನಮ್ರತೆಯಿಂದ ಮಾತನಾಡಿದನು. 15 ದಾನಿಯೇಲನು ಅರ್ಯೋಕನಿಗೆ, “ಅರಸನು ಅಂತಹ ಕಠಿಣ ಶಿಕ್ಷೆಯನ್ನು ಏಕೆ ಆಜ್ಞಾಪಿಸಿದನು?” ಎಂದು ಕೇಳಿದನು.

ಆಗ ಅರ್ಯೋಕನು ಅರಸನ ಕನಸಿಗೆ ಸಂಬಂಧಿಸಿದ ಎಲ್ಲಾ ವಿಷಯವನ್ನು ವಿವರಿಸಿದನು. 16 ಆಗ ದಾನಿಯೇಲನು ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಹೋಗಿ ತನಗೆ ಸ್ವಲ್ಪ ಸಮಯ ಕೊಡುವುದಾದರೆ ತಾನು ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸುವುದಾಗಿ ಹೇಳಿದನು.

17 ದಾನಿಯೇಲನು ಮನೆಗೆ ಹೋಗಿ ತನ್ನ ಸ್ನೇಹಿತರಾದ ಹನನ್ಯ, ಮೀಶಾಯೇಲ ಮತ್ತು ಅಜರ್ಯ ಇವರುಗಳಿಗೆ ಈ ವಿಷಯ ತಿಳಿಸಿದನು. 18 ಪರಲೋಕದ ದೇವರು ತನಗೆ ಸಹಾಯ ಮಾಡುವಂತೆಯೂ ಕೃಪೆ ತೋರುವಂತೆಯೂ ಪ್ರಾರ್ಥಿಸಬೇಕೆಂದು ದಾನಿಯೇಲನು ಅವರನ್ನು ಕೇಳಿಕೊಂಡನು. ದಾನಿಯೇಲ ಮತ್ತು ಅವನ ಸ್ನೇಹಿತರು ಮರಣದಂಡನೆಯಿಂದ ಪಾರಾಗಬೇಕಿದ್ದರೆ ಕನಸನ್ನೂ ಅದರ ಅರ್ಥವನ್ನೂ ತಿಳಿಸಬೇಕಿತ್ತು.

19 ಅಂದು ರಾತ್ರಿ ದಾನಿಯೇಲನಿಗೆ ದೇವದರ್ಶನವಾಯಿತು. ಆಗ ದಾನಿಯೇಲನು ಪರಲೋಕದ ದೇವರನ್ನು ಹೀಗೆ ಸ್ತುತಿಸಿದನು:

20 “ದೇವರ ನಾಮವನ್ನು ಎಂದೆಂದಿಗೂ ಸ್ತುತಿಸಿರಿ!
    ಜ್ಞಾನವೂ ಸಾಮರ್ಥ್ಯವೂ ಆತನವೇ.
21 ಆತನು ಕಾಲಸಮಯಗಳನ್ನು ಮಾರ್ಪಡಿಸುತ್ತಾನೆ.
    ಆತನು ಅರಸರನ್ನು ಬದಲಾಯಿಸುತ್ತಾನೆ.
    ಆತನು ಅರಸರಿಗೆ ಪ್ರಭುತ್ವವನ್ನು ಕೊಡುವನು.
    ಆತನು ಅವರ ಪ್ರಭುತ್ವವನ್ನು ಕಿತ್ತುಕೊಳ್ಳುವನು!
ಜನರಿಗೆ ಜ್ಞಾನವನ್ನು ಕೊಟ್ಟು ಜ್ಞಾನಿಗಳನ್ನಾಗಿ ಮಾಡುವವನು ಆತನೇ.
    ಜನರಿಗೆ ವಿವೇಕವನ್ನು ಕೊಟ್ಟು ವಿವೇಕಿಗಳನ್ನಾಗಿ ಮಾಡುವವನು ಆತನೇ.
22 ಆಳದಲ್ಲಿ ಅಡಗಿರುವ ರಹಸ್ಯಗಳನ್ನು ಬಲ್ಲವನು ಆತನೇ.
    ಬೆಳಕು ಆತನಲ್ಲಿಯೇ ಇದೆ.
    ಆದ್ದರಿಂದ ಕಗ್ಗತ್ತಲೆಯಲ್ಲಿ ಅಡಗಿರುವುದು ಆತನಿಗೆ ಗೋಚರವಾಗುವುದು.
23 ನನ್ನ ಪೂರ್ವಿಕರ ದೇವರೇ, ನಿನ್ನನ್ನು ಕೊಂಡಾಡಿ ಸ್ತುತಿಸುತ್ತೇನೆ.
    ನೀನು ನನಗೆ ಜ್ಞಾನವನ್ನೂ ಸಾಮರ್ಥ್ಯವನ್ನೂ ದಯಪಾಲಿಸಿದೆ.
ನಾನು ಕೇಳಿದ್ದನ್ನು ಅನುಗ್ರಹಿಸಿದೆ.
    ಅರಸನ ಕನಸಿನ ಬಗ್ಗೆ ತಿಳಿಸಿದೆ.”

ಅಪೊಸ್ತಲರ ಕಾರ್ಯಗಳು 4:23-31

ಪೇತ್ರ ಮತ್ತು ಯೋಹಾನರು ಹಿಂತಿರುಗಿದರು

23 ಪೇತ್ರ ಮತ್ತು ಯೋಹಾನರು ಯೆಹೂದ್ಯನಾಯಕರ ಸಭೆಯಿಂದ ಹೊರಟು ತಮ್ಮ ಸಮುದಾಯಕ್ಕೆ ಹೋದರು. ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ತಮಗೆ ಹೇಳಿದ ಪ್ರತಿಯೊಂದನ್ನು ಅವರು ತಮ್ಮ ಸಮುದಾಯದವರಿಗೆ ತಿಳಿಸಿದರು. 24 ಇದನ್ನು ಕೇಳಿದಾಗ ವಿಶ್ವಾಸಿಗಳು ಏಕಮನಸ್ಸಿನಿಂದ ದೇವರಲ್ಲಿ ಪ್ರಾರ್ಥಿಸಿದರು: ಅವರೆಲ್ಲರಲ್ಲಿ ಒಂದೇ ಮನಸ್ಸಿತ್ತು. “ಒಡೆಯನೇ, ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಲೋಕದಲ್ಲಿರುವ ಪ್ರತಿಯೊಂದನ್ನೂ ನಿರ್ಮಿಸಿದಾತನು ನೀನೇ. 25 ನಮ್ಮ ಪಿತೃವಾದ ದಾವೀದನು ನಿನ್ನ ಸೇವಕನಾಗಿದ್ದನು. ಅವನು ಪವಿತ್ರಾತ್ಮನ ಸಹಾಯದಿಂದ ಈ ಮಾತುಗಳನ್ನು ಬರೆದನು:

‘ಜನಾಂಗಗಳು ಕೂಗಾಡುವುದೇಕೆ?
ಈ ಲೋಕದ ಜನರು ದೇವರಿಗೆ ವಿರೋಧವಾಗಿ ಕಾರ್ಯಗಳನ್ನು ಯೋಚಿಸುತ್ತಿರುವುದೇಕೆ? ಇದರಿಂದ ಪ್ರಯೋಜನವೇನೂ ಇಲ್ಲ!

26 ‘ಭೂಲೋಕದ ರಾಜರು ಹೋರಾಡಲು ಸಿದ್ಧರಾಗಿದ್ದಾರೆ;
    ಪ್ರಭುವಿಗೂ ಆತನ ಕ್ರಿಸ್ತನಿಗೂ ವಿರೋಧವಾಗಿ ಅಧಿಪತಿಗಳೆಲ್ಲರೂ ಒಟ್ಟಾಗಿ ಸೇರಿದ್ದಾರೆ.’(A)

27 ಹೆರೋದರಾಜನು, ಪೊಂತಿಯಸ್ ಪಿಲಾತನು, ಜನಾಂಗಗಳು ಮತ್ತು ಯೆಹೂದ್ಯರು ಈ ಪಟ್ಟಣದಲ್ಲಿ ಒಟ್ಟಾಗಿ ಸೇರಿಕೊಂಡು ಯೇಸುವನ್ನು ವಿರೋಧಿಸಿದಾಗ ಈ ಸಂಗತಿಗಳು ನಿಜವಾಗಿಯೂ ನೆರವೇರಿದವು. ಯೇಸು ನಿನ್ನ ಪವಿತ್ರ ಸೇವಕನಾಗಿದ್ದಾನೆ. ನೀನು ಆತನನ್ನು ಅಭಿಷೇಕಿಸಿದೆ. 28 ಯೇಸುವಿನ ವಿರುದ್ಧ ಒಟ್ಟಾಗಿ ಬಂದ ಈ ಜನರು ನಿನ್ನ ಯೋಜನೆ ನೆರವೇರುವಂತೆ ಮಾಡಿದರು. ನಿನ್ನ ಶಕ್ತಿಯಿಂದಲೂ ನಿನ್ನ ಚಿತ್ತದಿಂದಲೂ ಇದು ನೆರವೇರಿತು. 29 ಪ್ರಭುವೇ, ಈಗ ಅವರು ಹೇಳುತ್ತಿರುವುದನ್ನು ಕೇಳು. ಅವರು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ! ಪ್ರಭುವೇ ನಾವು ನಿನ್ನ ಸೇವಕರು. ನಿನ್ನ ವಾಕ್ಯವನ್ನು ಭಯವಿಲ್ಲದೆ ಹೇಳಲು ನೀನೇ ಸಹಾಯ ಮಾಡು. 30 ನಿನ್ನ ಕೈಚಾಚಿ ಯೇಸುವಿನ ಹೆಸರಿನ ಮೂಲಕ ರೋಗಿಗಳನ್ನು ಗುಣಪಡಿಸು; ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡು” ಎಂದು ಅವರು ಪ್ರಾರ್ಥಿಸಿದರು.

31 ಹೀಗೆ ವಿಶ್ವಾಸಿಗಳು ಪ್ರಾರ್ಥಿಸುತ್ತಿದ್ದಾಗ, ಅವರು ಸಭೆ ಸೇರಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ದೇವರ ವಾಕ್ಯವನ್ನು ಭಯವಿಲ್ಲದೆ ಪ್ರಕಟಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International