Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 118:1-2

118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು!
ಇಸ್ರೇಲರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.

ಕೀರ್ತನೆಗಳು 118:19-29

19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

25 “ಯೆಹೋವನಿಗೆ ಸ್ತೋತ್ರವಾಗಲಿ!
    ಆತನು ನಮ್ಮನ್ನು ರಕ್ಷಿಸಿದ್ದಾನೆ.
26     ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಸುಸ್ವಾಗತ!”

“ಯೆಹೋವನ ಆಲಯದಿಂದ ನಾವು ನಿನ್ನನ್ನು ಆಶೀರ್ವದಿಸುತ್ತೇವೆ!
27 ಯೆಹೋವನೇ ದೇವರು.
    ಆತನು ನಮ್ಮನ್ನು ಸ್ವೀಕರಿಸಿಕೊಳ್ಳುವನು.
    ಯಜ್ಞಕ್ಕೋಸ್ಕರ ಕುರಿಮರಿಯನ್ನು ಕಟ್ಟಿ ಯಜ್ಞವೇದಿಕೆಯ ಕೊಂಬುಗಳ ಸಮೀಪಕ್ಕೆ ಹೊತ್ತುಕೊಂಡು ಬನ್ನಿರಿ” ಎಂದು ಯಾಜಕರು ಉತ್ತರಿಸಿದರು.

28 ಯೆಹೋವನೇ, ನೀನೇ ನನ್ನ ದೇವರು; ನಾನು ನಿನಗೆ ಕೃತಜ್ಞತೆ ಸಲ್ಲಿಸುವೆನು.
    ನಾನು ನಿನ್ನನ್ನು ಘನಪಡಿಸುವೆನು!
29 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು.

ಧರ್ಮೋಪದೇಶಕಾಂಡ 16:1-8

ಪಸ್ಕಹಬ್ಬ

16 “ಅಬೀಬ್ ತಿಂಗಳನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆ ತಿಂಗಳಲ್ಲಿ ನಿಮ್ಮ ದೇವರಾದ ಯೆಹೋವನನ್ನು ಗೌರವಿಸುವುದಕ್ಕಾಗಿ ಪಸ್ಕಹಬ್ಬವನ್ನು ಆಚರಿಸಬೇಕು. ಯಾಕೆಂದರೆ ಆ ತಿಂಗಳಲ್ಲೇ ನಿಮ್ಮ ದೇವರಾದ ಯೆಹೋವನು ರಾತ್ರಿಯಲ್ಲಿ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ನಿಮ್ಮ ದೇವರು ತನ್ನ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಪ್ರತ್ಯೇಕ ಸ್ಥಳಕ್ಕೆ ನೀವು ಹೋಗಿ ಅಲ್ಲಿ ಪಸ್ಕದ ಯಜ್ಞಾರ್ಪಣೆ ಮಾಡಿ ನಿಮ್ಮ ಯೆಹೋವನನ್ನು ಮಹಿಮೆಪಡಿಸಬೇಕು. ಅಲ್ಲಿ ದನವನ್ನಾಗಲಿ ಆಡನ್ನಾಗಲಿ ಯಜ್ಞವಾಗಿ ಅರ್ಪಿಸಬೇಕು. ಯಜ್ಞ ಪಶುವಿನೊಂದಿಗೆ ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನ ತಿನ್ನಬೇಕು. ಈ ಸಮಯದಲ್ಲಿ ಹುಳಿ ಬೆರೆಸಿದ ರೊಟ್ಟಿಯನ್ನು ತಿನ್ನಲೇಬಾರದು. ಹುಳಿಯಿಲ್ಲದ ರೊಟ್ಟಿಗೆ ‘ಸಂಕಟದ ರೊಟ್ಟಿ’ ಎಂದು ಕರೆಯಬೇಕು. ಯಾಕೆಂದರೆ ನೀವು ಈಜಿಪ್ಟಿನಲ್ಲಿ ದಾಸತ್ವದಲ್ಲಿದ್ದಾಗ ಅನುಭವಿಸಿದ್ದ ಸಂಕಟವನ್ನು ಅದು ನೆನಪಿಗೆ ತರುತ್ತದೆ. ನೀವು ಅಲ್ಲಿಂದ ತುಂಬಾ ಅವಸರವಾಗಿ ಹೊರಬಂದಿರಿ! ಇದನ್ನು ನಿಮ್ಮ ಜೀವಮಾನ ಪರ್ಯಂತ ಜ್ಞಾಪಿಸಿಕೊಳ್ಳಬೇಕು. ಏಳು ದಿನಗಳ ತನಕ ಇಡೀ ದೇಶದಲ್ಲಿ ಯಾರ ಮನೆಯಲ್ಲಿಯಾದರೂ ರೊಟ್ಟಿಗೆ ಬೆರೆಸುವ ಹುಳಿಯು ಇರಬಾರದು. ಮತ್ತು ಮೊದಲನೇ ದಿನದ ಸಾಯಂಕಾಲ ನೀವು ವಧಿಸುವ ಪ್ರಾಣಿಯ ಮಾಂಸವನ್ನು ಮುಂಜಾನೆಯೊಳಗೆ ತಿಂದು ಮುಗಿಸತಕ್ಕದ್ದು.

“ಪಸ್ಕದ ಪಶುವನ್ನು ದೇಶದ ಬೇರೆ ಯಾವ ಸ್ಥಳದಲ್ಲಿಯೂ ಕೊಯ್ಯಬಾರದು. ನಿಮ್ಮ ದೇವರಾದ ಯೆಹೋವನು ತನ್ನ ವಿಶೇಷವಾದ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಸ್ಥಳದಲ್ಲಿಯೇ ಸಾಯಂಕಾಲ ಸೂರ್ಯಾಸ್ತಮಾನ ಕಾಲದಲ್ಲಿ ಪಸ್ಕಹಬ್ಬದ ಪಶುವನ್ನು ಅರ್ಪಿಸಬೇಕು. ದೇವರು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ಕಾಲವನ್ನು ಈ ಪವಿತ್ರ ದಿನವು ನಿಮಗೆ ನೆನಪು ಮಾಡುತ್ತದೆ. ನಿಮ್ಮ ದೇವರಾದ ಯೆಹೋವನು ತನ್ನ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಸ್ಥಳದಲ್ಲಿ ನೀವು ಪಸ್ಕದ ಪಶುವನ್ನು ಅಡಿಗೆ ಮಾಡಿ ತಿನ್ನಬೇಕು. ಆಮೇಲೆ ಮುಂಜಾನೆ ನೀವು ನಿಮ್ಮನಿಮ್ಮ ಮನೆಗಳಿಗೆ ಹೋಗಬಹುದು. ಆರು ದಿನಗಳ ತನಕ ನೀವು ಹುಳಿ ಇಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳನೆಯ ದಿನದಲ್ಲಿ ನೀವು ಏನೂ ಕೆಲಸ ಮಾಡದೆ ಇರಬೇಕು. ಆ ದಿನ ಒಟ್ಟಾಗಿ ಸೇರಿ ನಿಮ್ಮ ದೇವರಾದ ಯೆಹೋವನನ್ನು ಘನಪಡಿಸಬೇಕು.

ಫಿಲಿಪ್ಪಿಯವರಿಗೆ 2:1-11

ಐಕ್ಯಮತದಿಂದಿದ್ದು ಒಬ್ಬರನ್ನೊಬ್ಬರು ಪರಾಂಬರಿಸಿರಿ

ನಿಮ್ಮಲ್ಲಿ ಕ್ರಿಸ್ತನಿಂದಾದ ಉತ್ತೇಜನ, ಪ್ರೀತಿಯ ಪ್ರೇರಣೆ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯ ದಯಾರಸಗಳು ಇವೆಯೋ? ನಿಮ್ಮಲ್ಲಿ ಇವುಗಳು ಇರುವುದಾದರೆ, ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ. ಆಗ ನನ್ನ ಸಂತೋಷವು ಪರಿಪೂರ್ಣವಾಗುವುದು. ಒಬ್ಬರಿಗೊಬ್ಬರು ಒಂದೇ ಪ್ರೀತಿ ಉಳ್ಳವರಾಗಿರಿ. ಅನ್ಯೋನ್ಯಭಾವವುಳ್ಳವರಾಗಿದ್ದು ಒಂದೇ ಗುರಿಯಿಂದ ಜೀವಿಸಿರಿ. ನೀವು ಯಾವುದನ್ನೇ ಮಾಡುವಾಗ, ಸ್ವಾರ್ಥವಾಗಲಿ ಅಹಂಕಾರವಾಗಲಿ ನಿಮಗೆ ಮಾರ್ಗದರ್ಶಕವಾಗದಂತೆ ನೋಡಿಕೊಳ್ಳಿರಿ. ದೀನಭಾವವುಳ್ಳವರಾಗಿದ್ದು ನಿಮಗಿಂತಲೂ ಹೆಚ್ಚಾಗಿ ಬೇರೆಯವರಿಗೆ ಗೌರವವನ್ನು ಕೊಡಿರಿ. ನಿಮ್ಮ ಅಭಿಲಾಷೆಗಳ ಬಗ್ಗೆ ಮಾತ್ರ ಚಿಂತಿಸದೆ ಇತರರ ಜೀವಿತದ ಬಗ್ಗೆಯೂ ಚಿಂತಿಸಿರಿ.

ನಿಸ್ವಾರ್ಥರಾಗಿರುವುದನ್ನು ಕ್ರಿಸ್ತನಿಂದ ಕಲಿತುಕೊಳ್ಳಿರಿ

ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.

ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮನಾಗಿದ್ದರೂ
    ಆ ಪದವಿಯನ್ನು ಬಿಡಲಾರೆ ಎನ್ನಲಿಲ್ಲ.
ಆ ಪದವಿಯನ್ನು ಆತನು ಬಿಟ್ಟುಕೊಟ್ಟು
    ಸೇವಕನ ಸ್ವಭಾವವನ್ನು ಧರಿಸಿಕೊಂಡು ಮಾನವ ರೂಪದಲ್ಲಿ ಬಂದನು.
ಆತನು ಮನುಷ್ಯನಾಗಿ ಜೀವಿಸುತ್ತಿದ್ದಾಗ
    ತನ್ನನ್ನು ತಗ್ಗಿಸಿಕೊಂಡು ಮರಣವನ್ನೂ ಕಡೆಗಣಿಸಿ ದೇವರಿಗೆ ಸಂಪೂರ್ಣ ವಿಧೇಯನಾಗಿ,
    ಶಿಲುಬೆಯ ಮೇಲೆ ಪ್ರಾಣವನ್ನೇ ಕೊಟ್ಟನು.
ಆದ್ದರಿಂದ ದೇವರು ಆತನನ್ನು ಅತ್ಯುನ್ನತವಾದ ಸ್ಥಾನಕ್ಕೇರಿಸಿ
    ಉಳಿದೆಲ್ಲ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
10 ಆದ್ದರಿಂದ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಪಾತಾಳದಲ್ಲಿಯೂ ಇರುವ ಪ್ರತಿಯೊಬ್ಬರು
    ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು,
11 “ಯೇಸು ಕ್ರಿಸ್ತನೇ ಪ್ರಭು”ವೆಂದು ಹೇಳುವರು.
    ಇದರಿಂದ ತಂದೆಯಾದ ದೇವರಿಗೆ ಮಹಿಮೆ ಉಂಟಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International