Revised Common Lectionary (Semicontinuous)
9 ಯೌವನಸ್ಥನು ಪವಿತ್ರನಾಗಿ ಜೀವಿಸುವುದು ಯಾವುದರಿಂದ?
ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದರಿಂದಲೇ.
10 ನಾನು ಪೂರ್ಣಹೃದಯದಿಂದ ದೇವರ ಸೇವೆಮಾಡುವೆ;
ದೇವರೇ, ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನನಗೆ ಸಹಾಯಮಾಡು.
11 ನಾನು ನಿನಗೆ ವಿರೋಧವಾಗಿ ಪಾಪಮಾಡದಂತೆ
ನಿನ್ನ ಉಪದೇಶಗಳನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.
12 ಯೆಹೋವನೇ, ನಿನಗೆ ಸ್ತೋತ್ರವಾಗಲಿ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
13 ನನ್ನ ತುಟಿಗಳು
ನಿನ್ನ ಜ್ಞಾನದ ನಿರ್ಧಾರಗಳ ಕುರಿತು ವರ್ಣಿಸುತ್ತವೆ.
14 ಸಕಲ ಸಂಪತ್ತಿನಲ್ಲಿ ಹೇಗೋ
ಹಾಗೆಯೇ ನಿನ್ನ ಒಡಂಬಡಿಕೆಯನ್ನು ಅಭ್ಯಾಸ ಮಾಡುವುದರಲ್ಲಿ ಆನಂದಿಸುವೆನು.
15 ನಾನು ನಿನ್ನ ನಿಯಮಗಳನ್ನು ಚರ್ಚಿಸುವೆನು
ನಿನ್ನ ಜೀವಮಾರ್ಗವನ್ನು ಅನುಸರಿಸುವೆನು.
16 ನಾನು ನಿನ್ನ ಕಟ್ಟಳೆಗಳಲ್ಲಿ ಆನಂದಿಸುವೆನು,
ನಿನ್ನ ಮಾತುಗಳನ್ನು ಮರೆಯುವುದಿಲ್ಲ.
ಯೆಹೋವನ ಉತ್ತೇಜನ; ಕೆಲಸದ ಪ್ರಾರಂಭ
2 ಏಳನೇ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಹಗ್ಗಾಯನಿಗೆ ಯೆಹೋವನಿಂದ ಈ ಸಂದೇಶವು ದೊರಕಿತು: 2 “ಶೆಯಲ್ತಿಯೇಲನ ಮಗನೂ ರಾಜ್ಯಪಾಲನೂ ಆಗಿರುವ ಜೆರುಬ್ಬಾಬೆಲನಿಗೂ ಮಹಾಯಾಜಕನೂ ಯೆಹೋಚಾದಾಕನ ಮಗನೂ ಆಗಿರುವ ಯೆಹೋಶುವನಿಗೂ ಮತ್ತು ಎಲ್ಲಾ ಜನರಿಗೂ ಈ ವಿಷಯಗಳನ್ನು ತಿಳಿಸು. 3 ‘ನಿಮ್ಮಲ್ಲಿ ಎಷ್ಟು ಮಂದಿ ಹೊಸ ಆಲಯವನ್ನು ನೋಡುವಾಗ ಕೆಡವಲ್ಪಟ್ಟ ಮೊದಲನೇ ಆಲಯದ ಸೌಂದರ್ಯವನ್ನೂ ಗಾಂಭೀರ್ಯವನ್ನೂ ನೆನಪು ಮಾಡುತ್ತೀರಿ? ನಿಮ್ಮ ಆಲೋಚನೆಯೇನು? ಮೊದಲಿನ ಆಲಯದೊಡನೆ ಈ ಆಲಯವನ್ನು ಹೋಲಿಸಿದಾಗ ಇದು ಏನೂ ಅಲ್ಲವೆಂದು ತೋರುತ್ತದೋ? 4 ಆದರೆ ಜೆರುಬ್ಬಾಬೆಲನೇ, ಯೆಹೋವನು ಹೀಗೆನ್ನುತ್ತಾನೆ, “ನಿರುತ್ಸಾಹಗೊಳ್ಳಬೇಡ! ಮಹಾಯಾಜಕನಾದ ಯೆಹೋಶುವನೇ, ನಿರುತ್ಸಾಹಗೊಳ್ಳಬೇಡ! ಈ ದೇಶದ ಎಲ್ಲಾ ಜನರೇ, ನಿರುತ್ಸಾಹಗೊಳ್ಳಬೇಡಿ, ಕೆಲಸವನ್ನು ಮುಂದುವರಿಸಿರಿ, ಯಾಕೆಂದರೆ ನಾನೇ ನಿಮ್ಮೊಂದಿಗಿದ್ದೇನೆ” ಎಂದು ಯೆಹೋವನು ಹೇಳುತ್ತಾನೆ.’” ಇದು ಸರ್ವಶಕ್ತನಾದ ಯೆಹೋವನ ನುಡಿ.
5 ಯೆಹೋವನು ಹೇಳುವುದೇನೆಂದರೆ, “‘ನೀವು ಈಜಿಪ್ಟ್ ದೇಶವನ್ನು ಬಿಟ್ಟಾಗ ನಾನು ನಿಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡೆನು. ನಾನು ಆ ವಾಗ್ದಾನವನ್ನು ನೆರವೇರಿಸಿದ್ದೇನೆ! ನನ್ನ ಆತ್ಮವು ನಿಮ್ಮೊಂದಿಗಿದೆ. ಆದ್ದರಿಂದ ಭಯಪಡಬೇಡಿ!’ 6 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ಇನ್ನು ಸ್ವಲ್ಪ ಸಮಯದಲ್ಲಿ ನಾನು ಭೂಪರಲೋಕಗಳನ್ನು ಅದುರಿಸುವೆನು. ಸಮುದ್ರವನ್ನೂ ಒಣನೆಲವನ್ನೂ ಕಂಪಿಸುವೆನು, 7 ನಾನು ಜನಾಂಗಗಳನ್ನು ನಡುಗಿಸುವೆನು. ಆಗ ಅವರು ಎಲ್ಲಾ ಜನಾಂಗಗಳ ಐಶ್ವರ್ಯದೊಡನೆ ನಿಮ್ಮಲ್ಲಿಗೆ ಬರುವರು. ಆಗ ನನ್ನ ಈ ಆಲಯವನ್ನು ಮಹಿಮೆಯಿಂದ ತುಂಬಿಸುವೆನು.’ ಸರ್ವಶಕ್ತನಾದ ದೇವರು ಇದನ್ನು ಹೇಳುತ್ತಿದ್ದಾನೆ! 8 ‘ಅವರ ಬೆಳ್ಳಿಯೆಲ್ಲವೂ ನನ್ನದೇ, ಅವರ ಬಂಗಾರವೂ ನನ್ನದೇ.’ ಇದು ಸರ್ವಶಕ್ತನಾದ ಯೆಹೋವನ ನುಡಿ. 9 ‘ಈ ಅಂತಿಮ ದೇವಾಲಯವು ಮೊದಲನೆ ಆಲಯಕ್ಕಿಂತಲೂ ಸುಂದರವಾಗಿಯೂ ವೈಭವವಾಗಿಯೂ ಇರುವುದು! ನಾನು ಈ ಸ್ಥಳಕ್ಕೆ ಸಮಾಧಾನವನ್ನು ತರುವೆನು!’ ಜ್ಞಾಪಕದಲ್ಲಿಡಿ, ಇವುಗಳನ್ನು ಸರ್ವಶಕ್ತನಾದ ಯೆಹೋವನು ಹೇಳುತ್ತಿದ್ದಾನೆ!”
20 ಒಂಭತ್ತನೇ ತಿಂಗಳ ಇಪ್ಪತ್ನಾಲ್ಕನೆಯ ದಿವಸದಲ್ಲಿ ಇನ್ನೊಂದು ಸಂದೇಶವು ಹಗ್ಗಾಯನಿಗೆ ಯೆಹೋವನಿಂದ ಬಂದಿತು. ಇದೇ ಆ ಸಂದೇಶ: 21 “ಯೆಹೂದ ಪ್ರಾಂತ್ಯದ ರಾಜ್ಯಪಾಲನಾದ ಜೆರುಬ್ಬಾಬೆಲನ ಬಳಿಗೆ ಹೋಗು. ನಾನು ಭೂಮ್ಯಾಕಾಶಗಳನ್ನು ಅಲ್ಲಾಡಿಸುವೆನು ಎಂದು ಅವನಿಗೆ ಹೇಳು. 22 ನಾನು ಅನೇಕ ಅರಸರನ್ನೂ ದೇಶಗಳನ್ನೂ ಕೆಡವಿಹಾಕುವೆನು; ಆ ಅನ್ಯ ಜನರ ಬಲಿಷ್ಠ ಸಾಮ್ರಾಜ್ಯಗಳನ್ನು ನಾಶಮಾಡುವೆನು. ಅವರ ರಥಗಳನ್ನೂ ರಾಹುತರನ್ನೂ ನಾಶಮಾಡುವೆನು. ಅವರ ಯುದ್ಧದ ಕುದುರೆಗಳನ್ನೂ ಸವಾರರನ್ನೂ ಸೋಲಿಸುವೆನು. ಆ ಸೈನ್ಯಗಳವರು ಈಗ ಸ್ನೇಹಿತರಾಗಿದ್ದರೂ ಒಬ್ಬರಿಗೊಬ್ಬರು ವೈರಿಗಳಾಗಿ ಒಬ್ಬರನ್ನೊಬ್ಬರು ಖಡ್ಗಗಳಿಂದ ಕೊಲ್ಲುವರು.” 23 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲನೇ, ನೀನು ನನ್ನ ಸೇವಕ. ನಿನ್ನನ್ನು ನಾನು ಆರಿಸಿಕೊಂಡಿದ್ದೇನೆ. ಆ ಸಮಯದಲ್ಲಿ ನಾನು ನಿನ್ನನ್ನು ಒಂದು ಮುದ್ರೆಯುಂಗುರವನ್ನಾಗಿ ಮಾಡುವೆನು. ನಾನು ಇವೆಲ್ಲವನ್ನು ಮಾಡಿದೆನೆಂಬುದಕ್ಕೆ ನೀನು ಸಾಕ್ಷಿಯಾಗಿರುವೆ.”
ಸರ್ವಶಕ್ತನಾದ ಯೆಹೋವನು ಇವೆಲ್ಲವನ್ನು ನುಡಿದಿದ್ದಾನೆ.
34 ಜನರು, “ಕ್ರಿಸ್ತನು ಸದಾಕಾಲ ಜೀವಿಸುತ್ತಾನೆ ಎಂದು ನಮ್ಮ ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ, ‘ಮನುಷ್ಯಕುಮಾರನು ಮೇಲೆತ್ತಲ್ಪಡುವನು’ ಎಂದು ನೀನು ಹೇಳುವುದೇಕೆ? ಈ ಮನುಷ್ಯಕುಮಾರನು ಯಾರು?” ಎಂದು ಕೇಳಿದರು.
35 ಅದಕ್ಕೆ ಯೇಸು, “ಇನ್ನು ಸ್ವಲ್ಪಕಾಲ ಮಾತ್ರ ಬೆಳಕು ನಿಮ್ಮೊಂದಿಗಿರುತ್ತದೆ. ಆದ್ದರಿಂದ ಬೆಳಕು ನಿಮ್ಮೊಂದಿಗೆ ಇರುವಾಗಲೇ ನಡೆಯಿರಿ. ಆಗ ಕತ್ತಲೆಯು (ಪಾಪ) ನಿಮ್ಮನ್ನು ಕವಿದುಕೊಳ್ಳುವುದಿಲ್ಲ. ಕತ್ತಲೆಯಲ್ಲಿ ನಡೆಯುವವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬುದು ತಿಳಿಯದು. 36 ಆದ್ದರಿಂದ ನೀವು ಬೆಳಕನ್ನು ಇನ್ನೂ ಹೊಂದಿರುವಾಗಲೇ ಅದರಲ್ಲಿ ನಂಬಿಕೆ ಇಡಿರಿ. ಆಗ ನೀವು ಬೆಳಕಿನವರಾಗುವಿರಿ” ಎಂದು ಹೇಳಿದನು. ಈ ಸಂಗತಿಗಳನ್ನು ಹೇಳಿದ ಮೇಲೆ ಯೇಸು ಅಲ್ಲಿಂದ ಹೊರಟು, ತನ್ನನ್ನು ಜನರು ಕಂಡುಕೊಳ್ಳಲಾಗದ ಸ್ಥಳಕ್ಕೆ ಹೋದನು.
ಯೆಹೂದ್ಯರ ಅಪನಂಬಿಕೆ
37 ಯೇಸು ಅನೇಕ ಮಹತ್ಕಾರ್ಯಗಳನ್ನು ಮಾಡಿದನು. ಜನರು ಆ ಕಾರ್ಯಗಳನ್ನೆಲ್ಲಾ ನೋಡಿದರೂ ಆತನಲ್ಲಿ ನಂಬಿಕೆ ಇಡಲಿಲ್ಲ. 38 ಇದರಿಂದಾಗಿ, ಪ್ರವಾದಿಯಾದ ಯೆಶಾಯನು ಹೇಳಿದ್ದ ಮಾತುಗಳು ನೆರವೇರಿದವು. ಅದೇನೆಂದರೆ:
“ಪ್ರಭುವೇ, ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು?
ಪ್ರಭುವಿನ ಬಾಹುಬಲವು ಯಾರಿಗೆ ಗೋಚರವಾಯಿತು?”(A)
39 ಆದಕಾರಣವೇ ಜನರು ನಂಬಲಾಗಲಿಲ್ಲ. ಏಕೆಂದರೆ ಯೆಶಾಯನು ಮತ್ತೊಂದು ಕಡೆಯಲ್ಲಿ ಹೀಗೆ ಹೇಳಿದ್ದಾನೆ:
40 “ತಮ್ಮ ಕಣ್ಣುಗಳಿಂದ ಕಾಣದಂತೆ
ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆ
ಪರಿವರ್ತನೆಗೊಂಡು ಗುಣಹೊಂದದಂತೆ ಆತನು ಅವರನ್ನು ಕುರುಡರನ್ನಾಗಿ ಮಾಡಿದ್ದಾನೆ,
ಅವರ ಮನಸ್ಸುಗಳನ್ನು ಕಲ್ಲಾಗಿಸಿದ್ದಾನೆ.”(B)
41 ಯೆಶಾಯನು ಆತನ (ಯೇಸುವಿನ) ಮಹಿಮೆಯನ್ನು ನೋಡಿದ್ದರಿಂದಲೇ ಹೀಗೆ ಹೇಳಿದನು.
42 ಆದರೆ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅನೇಕ ಯೆಹೂದ್ಯನಾಯಕರು ಸಹ ಯೇಸುವಿನಲ್ಲಿ ನಂಬಿಕೆಯಿಟ್ಟರು. ಆದರೆ ಅವರು ಫರಿಸಾಯರಿಗೆ ಹೆದರಿಕೊಂಡು ತಮ್ಮ ನಂಬಿಕೆಯನ್ನು ಬಹಿರಂಗಪಡಿಸಲಿಲ್ಲ. ತಮ್ಮನ್ನು ಫರಿಸಾಯರು ಸಭಾಮಂದಿರದಿಂದ ಬಹಿಷ್ಕರಿಸುತ್ತಾರೆ ಎಂಬ ಭಯ ಅವರಿಗಿತ್ತು. 43 ಈ ಜನರು ದೇವರ ಹೊಗಳಿಕೆಗಿಂತಲೂ ಜನರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
ಯೇಸುವಿನ ಉಪದೇಶ ಜನರಿಗೆ ತೀರ್ಪು ಮಾಡುವುದು
44 ಬಳಿಕ ಯೇಸು ಗಟ್ಟಿಯಾಗಿ ಹೀಗೆಂದನು: “ನನ್ನಲ್ಲಿ ನಂಬಿಕೆ ಇಡುವವನು ನನ್ನನ್ನು ಕಳುಹಿಸಿದಾತನಲ್ಲಿ (ದೇವರು) ನಿಜವಾಗಿಯೂ ನಂಬಿಕೆ ಇಡುವವನಾಗಿದ್ದಾನೆ. 45 ನನ್ನನ್ನು ನೋಡುವವನು ನನ್ನನ್ನು ಕಳುಹಿಸಿದಾತನನ್ನು ನಿಜವಾಗಿಯೂ ನೋಡುವವನಾಗಿದ್ದಾನೆ. 46 ನಾನೇ ಬೆಳಕಾಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಕತ್ತಲೆಯಲ್ಲಿ ಇರಬಾರದೆಂದು ನಾನೇ ಈ ಲೋಕಕ್ಕೆ ಬಂದಿದ್ದೇನೆ.
47 “ನಾನು ಈ ಲೋಕಕ್ಕೆ ಬಂದದ್ದು ಜನರಿಗೆ ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದಲ್ಲಿರುವ ಜನರನ್ನು ರಕ್ಷಿಸುವುದಕ್ಕಾಗಿ ನಾನು ಬಂದೆನು. ಆದ್ದರಿಂದ ನನ್ನ ಮಾತುಗಳನ್ನು ಕೇಳಿಯೂ ನಂಬದಿರುವ ಜನರಿಗೆ ತೀರ್ಪು ಮಾಡುವವನು ನಾನಲ್ಲ. 48 ನನ್ನಲ್ಲಿ ನಂಬಿಕೆ ಇಡದಿರುವವನಿಗೆ ಮತ್ತು ನಾನು ಹೇಳುವುದನ್ನು ತಿರಸ್ಕರಿಸುವವನಿಗೆ ತೀರ್ಪುಮಾಡುವಂಥದ್ದು ನಾನು ಆಡಿದ ಮಾತುಗಳೇ. ಅಂತಿಮ ದಿನದಂದು ಅವೇ ಅವನಿಗೆ ತೀರ್ಪುಮಾಡುತ್ತವೆ. 49 ಏಕೆಂದರೆ, ನನ್ನ ಮಾತುಗಳು ನನ್ನಿಂದ ಬಂದವುಗಳಲ್ಲ. ನನ್ನನ್ನು ಕಳುಹಿಸಿದ ತಂದೆಯೇ ನಾನು ಏನು ಹೇಳಬೇಕು, ಏನು ಮಾತಾಡಬೇಕು ಎಂದು ನನಗೆ ಹೇಳಿಕೊಟ್ಟಿದ್ದಾನೆ. 50 ತಂದೆಯ ಆಜ್ಞೆಯು ನಿತ್ಯಜೀವಕ್ಕೆ ನಡೆಸುತ್ತದೆ ಎಂದು ನಾನು ಬಲ್ಲೆನು. ಆದ್ದರಿಂದ ತಂದೆಯು ನನಗೆ ಹೇಳಿಕೊಟ್ಟ ಸಂಗತಿಗಳನ್ನೇ ನಾನು ತಿಳಿಸುತ್ತೇನೆ.”
Kannada Holy Bible: Easy-to-Read Version. All rights reserved. © 1997 Bible League International