Revised Common Lectionary (Semicontinuous)
ತಾಮ್ರದ ಸರ್ಪ
4 ಇಸ್ರೇಲರು ಹೋರ್ ಬೆಟ್ಟದಿಂದ ಹೊರಟು ಕೆಂಪು ಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಅವರು ಎದೋಮ್ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಹೀಗೆ ಮಾಡಿದರು. ಜನರು ಮಾರ್ಗದಲ್ಲಿ ತಾಳ್ಮೆ ತಪ್ಪಿದರು. 5 ಆಗ ಅವರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತಾಡುತ್ತಾ, “ಈ ಮರುಭೂಮಿಯಲ್ಲಿ ಸಾಯಲೆಂದು ನಮ್ಮನ್ನು ಈಜಿಪ್ಟಿನಿಂದ ಯಾಕೆ ಬರಮಾಡಿದೆ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು.
6 ಆದ್ದರಿಂದ ಯೆಹೋವನು ಅವರ ಮಧ್ಯದಲ್ಲಿ ವಿಷಕರವಾದ ಹಾವುಗಳನ್ನು ಕಳುಹಿಸಿದನು. ಅವುಗಳು ಅವರನ್ನು ಕಚ್ಚಿದ್ದರಿಂದ ಅನೇಕ ಇಸ್ರೇಲರು ಸತ್ತರು. 7 ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಯೆಹೋವನಿಗೂ ವಿರೋಧವಾಗಿ ಮಾತಾಡಿ ಪಾಪ ಮಾಡಿದ್ದೇವೆ. ಈ ಸರ್ಪಗಳನ್ನು ನಮ್ಮಿಂದ ತೊಲಗಿ ಹೋಗುವಂತೆ ಪ್ರಾರ್ಥನೆ ಮಾಡು” ಎಂದು ಬೇಡಿಕೊಂಡರು. ಮೋಶೆ ಜನರಿಗೋಸ್ಕರ ಪ್ರಾರ್ಥಿಸಿದನು.
8 ಯೆಹೋವನು ಮೋಶೆಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು, ಸರ್ಪಗಳಿಂದ ಕಚ್ಚಿಸಿಕೊಂಡವನು ಅದನ್ನು ನೋಡಿದರೆ ಬದುಕಿಕೊಳ್ಳುವನು” ಎಂದು ಆಜ್ಞಾಪಿಸಿದನು. 9 ಆದ್ದರಿಂದ ಮೋಶೆ ತಾಮ್ರದಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಕಚ್ಚಿಸಿಕೊಂಡಿದ್ದವನು ಆ ತಾಮ್ರದ ಸರ್ಪವನ್ನು ನೋಡಿ ಬದುಕಿಕೊಂಡನು.
ಐದನೆಯ ಭಾಗ
(ಕೀರ್ತನೆಗಳು 107–150)
107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
ಆತನ ಪ್ರೀತಿ ಶಾಶ್ವತವಾದದ್ದು!
2 ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
3 ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.
17 ಕೆಲವರು ತಮ್ಮ ಪಾಪಗಳಿಂದಲೂ
ದೋಷಗಳಿಂದಲೂ ಮೂಢರಾದರು.
18 ಆ ಜನರು ಊಟವನ್ನು ನಿರಾಕರಿಸಿದ್ದರಿಂದ
ಮರಣಾವಸ್ಥೆಗೆ ಬಂದರು.
19 ಅವರು ಆಪತ್ತಿನಲ್ಲಿ ಯೆಹೋವನಿಗೆ ಮೊರೆಯಿಟ್ಟರು.
ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
20 ಆತನು ಆಜ್ಞಾಪಿಸಲು ಜನರು ಗುಣಹೊಂದಿದರು.
ಸಮಾಧಿಯಿಂದ ತಪ್ಪಿಸಿಕೊಂಡರು.
21 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
22 ಯೆಹೋವನ ಕಾರ್ಯಗಳಿಗೆ ಕೃತಜ್ಞತಾ ಯಜ್ಞಗಳನ್ನು ಅರ್ಪಿಸಿರಿ.
ಆತನ ಕಾರ್ಯಗಳ ಬಗ್ಗೆ ಹರ್ಷದಿಂದ ತಿಳಿಸಿರಿ.
ಮರಣದಿಂದ ಜೀವಕ್ಕೆ
2 ಮೊದಲು ನಿಮ್ಮ ಆತ್ಮಿಕ ಜೀವಿತಗಳು, ನಿಮ್ಮ ಪಾಪಗಳ ಮತ್ತು ನೀವು ದೇವರಿಗೆ ವಿರುದ್ಧವಾಗಿ ಮಾಡಿದ ಕೆಟ್ಟಕಾರ್ಯಗಳ ದೆಸೆಯಿಂದ ಸತ್ತುಹೋಗಿದ್ದವು. 2 ಹೌದು, ಮೊದಲು ನೀವು ಆ ಪಾಪಗಳನ್ನೇ ಮಾಡುತ್ತಿದ್ದಿರಿ. ಈ ಲೋಕದ ಮಾರ್ಗಗಳಿಗನುಸಾರವಾಗಿ ನೀವು ಜೀವಿಸಿದಿರಿ. ವಾಯುಮಂಡಲದಲ್ಲಿರುವ ದುಷ್ಟಶಕ್ತಿಗಳ ಅಧಿಪತಿಯನ್ನು ನೀವು ಅನುಸರಿಸಿದಿರಿ. ದೇವರಿಗೆ ಅವಿಧೇಯರಾದ ಜನರಲ್ಲಿ ಈಗ ಕಾರ್ಯಮಾಡುತ್ತಿರುವುದು ಅದೇ ಆತ್ಮ. 3 ಮೊದಲು ನಾವೆಲ್ಲರೂ ಆ ಜನರಂತೆಯೇ ಜೀವಿಸುತ್ತಿದ್ದೆವು. ಶರೀರಭಾವದ ನಮ್ಮ ಇಚ್ಛೆಗಳನ್ನು ಪೂರೈಸಲು ನಾವು ಪ್ರಯತ್ನಿಸುತ್ತಿದ್ದೆವು. ನಮ್ಮ ದೇಹ, ಮನಸ್ಸುಗಳು ಬಯಸಿದ್ದನ್ನೆಲ್ಲಾ ನಾವು ಮಾಡಿದೆವು. ನಾವು ದುಷ್ಟಜನರಾಗಿದ್ದೆವು. ನಮ್ಮ ಆ ಜೀವಿತದ ದೆಸೆಯಿಂದ ನಾವು ಆಗಲೇ ದೇವರ ಕೋಪಕ್ಕೆ ಗುರಿಯಾಗಬೇಕಿತ್ತು. ನಮಗೂ ಇತರ ಜನರಿಗೂ ಯಾವ ವ್ಯತ್ಯಾಸವೂ ಇರಲಿಲ್ಲ.
4 ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು. 5 ನಾವು ದೇವರಿಗೆ ವಿರುದ್ಧವಾಗಿ ಮಾಡಿದ ಕಾರ್ಯಗಳ ದೆಸೆಯಿಂದ ಸತ್ತವರಾಗಿದ್ದೆವು. ಆದರೆ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ನೀವು ದೇವರ ಕೃಪೆಯಿಂದ ರಕ್ಷಣೆ ಹೊಂದಿದವರಾಗಿದ್ದೀರಿ. 6 ದೇವರು ನಮ್ಮನ್ನು ಕ್ರಿಸ್ತನೊಂದಿಗೆ ಎಬ್ಬಿಸಿ ಆತನೊಂದಿಗೆ ಪರಲೋಕದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ್ದಾನೆ. ಕ್ರಿಸ್ತ ಯೇಸುವಿನಲ್ಲಿರುವ ನಮಗಾಗಿ ದೇವರು ಇದನ್ನು ಮಾಡಿದನು. 7 ದೇವರು ತನ್ನ ಮಹಾತಿಶಯವಾದ ಕೃಪೆಯನ್ನು ಮುಂದಿನ ಕಾಲದಲ್ಲೆಲ್ಲಾ ತೋರಿಸಬೇಕೆಂದು ಹೀಗೆ ಮಾಡಿದ್ದಾನೆ. ದೇವರು ಈ ಕೃಪೆಯನ್ನು ತನ್ನ ಕರುಣೆಯ ಮೂಲಕ ನಮಗೆ ಕ್ರಿಸ್ತ ಯೇಸುವಿನಲ್ಲಿ ತೋರಿಸುತ್ತಾನೆ.
8 ಆದ್ದರಿಂದ ನೀವು ನಂಬಿಕೆಯ ಮೂಲಕ ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಅದು ದೇವರ ವರ. 9 ನಿಮಗೆ ರಕ್ಷಣೆ ದೊರೆತದ್ದು ನಿಮ್ಮ ಒಳ್ಳೆಯ ಕಾರ್ಯಗಳಿಂದಲ್ಲ. ಆದ್ದರಿಂದ ತನ್ನನ್ನು ತಾನೇ ರಕ್ಷಿಸಿಕೊಂಡಿರುವುದಾಗಿ ಯಾರೂ ಹೊಗಳಿಕೊಳ್ಳಲು ಸಾಧ್ಯವಿಲ್ಲ. 10 ನಾವು ದೇವರ ನಿರ್ಮಾಣ. ನಾವು ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ದೇವರು ನಮ್ಮನ್ನು ಕ್ರಿಸ್ತಯೇಸುವಿನಲ್ಲಿ ಹೊಸ ಜನರನ್ನಾಗಿ ಮಾಡಿದನು. ದೇವರು ನಮಗೋಸ್ಕರವಾಗಿ ಆ ಒಳ್ಳೆಯ ಕಾರ್ಯಗಳನ್ನು ಮೊದಲೇ ಯೋಜನೆ ಮಾಡಿದನು. ನಾವು ಆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಜೀವಿಸಬೇಕೆಂಬುದು ದೇವರ ಯೋಜನೆಯಾಗಿತ್ತು.
14 “ಮೋಶೆಯು ಮರಳುಗಾಡಿನಲ್ಲಿ ಸರ್ಪವನ್ನು ಎತ್ತರವಾದ ಕಂಬದ ಮೇಲಿಟ್ಟನು. ಅಂತೆಯೇ ಮನುಷ್ಯಕುಮಾರನನ್ನು ಸಹ ಎತ್ತರವಾದ ಕಂಬದ ಮೇಲಿಡಬೇಕು. 15 ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಹೊಂದಿಕೊಳ್ಳುವರು” ಎಂದು ಹೇಳಿದನು.
16 ಹೌದು, ದೇವರು ಲೋಕವನ್ನು ಎಷ್ಟೋ ಪ್ರೀತಿಸಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು. 17 ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿದ್ದು, ಆತನ ಮೂಲಕವಾಗಿ ಈ ಲೋಕದ ಜನರನ್ನು ಅಪರಾಧಿಗಳೆಂದು ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದವರು ರಕ್ಷಣೆ ಹೊಂದಿಕೊಳ್ಳಲೆಂದು ದೇವರು ಆತನನ್ನು ಕಳುಹಿಸಿಕೊಟ್ಟನು. 18 ದೇವರ ಮಗನಲ್ಲಿ ನಂಬಿಕೆ ಇಡುವವನಿಗೆ ತೀರ್ಪಾಗುವುದಿಲ್ಲ. ಆದರೆ ನಂಬದವನಿಗೆ ಆಗಲೇ ತೀರ್ಪಾಗಿದೆ. ಏಕೆಂದರೆ ಅವನು ದೇವರ ಒಬ್ಬನೇ ಮಗನಲ್ಲಿ ನಂಬಿಕೆ ಇಡಲಿಲ್ಲ. 19 ಆ ತೀರ್ಪು ಏನೆಂದರೆ: ಬೆಳಕು ಈ ಲೋಕಕ್ಕೆ ಬಂದಿದೆ, ಆದರೆ ಜನರು ಬೆಳಕನ್ನು ಅಪೇಕ್ಷಿಸದೆ ಕತ್ತಲೆಯನ್ನೇ ಬಯಸಿದರು. ಏಕೆಂದರೆ ಅವರು ದುಷ್ಕೃತ್ಯಗಳನ್ನು ಮಾಡುತ್ತಿದ್ದರು. 20 ಕೇಡನ್ನು ಮಾಡುವ ಪ್ರತಿಯೊಬ್ಬನೂ ಬೆಳಕನ್ನು ದ್ವೇಷಿಸುವನು. ಅವನು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವನು ಮಾಡಿರುವ ಕೆಟ್ಟಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ. 21 ಆದರೆ ಸತ್ಯಮಾರ್ಗವನ್ನು ಅನುಸರಿಸುವವನು ಬೆಳಕಿಗೆ ಬರುತ್ತಾನೆ. ಅವನು ಮಾಡಿರುವ ಕಾರ್ಯಗಳೆಲ್ಲಾ ದೇವರ ಮೂಲಕವಾಗಿ ಮಾಡಿದ ಕಾರ್ಯಗಳೆಂದು ಬೆಳಕು ತೋರಿಸುತ್ತದೆ.
Kannada Holy Bible: Easy-to-Read Version. All rights reserved. © 1997 Bible League International