Revised Common Lectionary (Semicontinuous)
ರಚನೆಗಾರ: ದಾವೀದ.
19 ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು.
ಗಗನವು ಆತನ ಕೈಕೆಲಸವನ್ನು ತಿಳಿಸುವುದು.
2 ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು.
ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.
3 ಅವುಗಳ ಮಾತಾಗಲಿ
ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.
4 ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ;
ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ.
ಆಕಾಶವು ಸೂರ್ಯನಿಗೆ ಮನೆಯಂತಿದೆ.
5 ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು.
ಕ್ರೀಡಾಪಟುವಿನಂತೆ
ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.
6 ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ
ಮತ್ತೊಂದು ಕೊನೆಗೆ ಓಡುತ್ತಾಹೋಗುವನು.
ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.
7 ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
8 ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.
9 ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.
12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.
9 ಯೆಹೋವನು ಮೋಶೆಗೆ, “ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬಂದು ಜನರೆಲ್ಲರಿಗೂ ಕೇಳುವಂತೆ ನಿನ್ನೊಡನೆ ಮಾತಾಡುವೆನು. ನೀನು ಹೇಳುವುದನ್ನು ಜನರು ಯಾವಾಗಲೂ ನಂಬಲು ಇದು ಸಹಾಯಕವಾಗುವುದು” ಎಂದು ಹೇಳಿದನು.
ಆಗ ಮೋಶೆಯು ಜನರು ಹೇಳಿದ್ದನ್ನೆಲ್ಲಾ ದೇವರಿಗೆ ಅರಿಕೆಮಾಡಿದನು.
10 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ಈ ದಿನ ಮತ್ತು ನಾಳೆ ನೀನು ಜನರನ್ನು ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧಪಡಿಸಬೇಕು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು 11 ಮೂರನೆಯ ದಿನದಲ್ಲಿ ನನಗಾಗಿ ಸಿದ್ಧರಾಗಬೇಕು. ಮೂರನೆಯ ದಿನದಲ್ಲಿ ನಾನು ಸೀನಾಯ್ ಬೆಟ್ಟದ ಮೇಲೆ ಇಳಿದುಬರುವೆನು; ಜನರೆಲ್ಲರೂ ನನ್ನನ್ನು ನೋಡುವರು. 12-13 ಆದರೆ ಬೆಟ್ಟದಿಂದ ದೂರವಿರಬೇಕೆಂದು ನೀನು ಜನರಿಗೆ ಹೇಳಬೇಕು. ಒಂದು ಗೆರೆಯನ್ನು ಹಾಕಿ ಆ ಗೆರೆಯನ್ನು ದಾಟಬಾರದೆಂದು ಅವರಿಗೆ ತಿಳಿಸು. ಯಾವ ವ್ಯಕ್ತಿಯಾಗಲಿ ಬೆಟ್ಟವನ್ನು ಮುಟ್ಟಿದರೆ ಅವನನ್ನು ಕಲ್ಲುಗಳಿಂದಾಗಲಿ ಬಾಣಗಳಿಂದಾಗಲಿ ಕೊಲ್ಲಬೇಕು. ಯಾವ ಪ್ರಾಣಿಯಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕೊಲ್ಲಬೇಕು. ಯಾರೂ ಬೆಟ್ಟವನ್ನು ಮುಟ್ಟಕೂಡದು. ಕೊಂಬಿನ ತುತ್ತೂರಿ ಊದಿದಾಗ ಜನರು ಬೆಟ್ಟದ ಸಮೀಪಕ್ಕೆ ಬರಬೇಕು ಎಂದು ಹೇಳು” ಎಂದನು.
14 ಮೋಶೆ ಬೆಟ್ಟದಿಂದಿಳಿದು ಹೋದನು. ಅವನು ಜನರ ಬಳಿಗೆ ಹೋಗಿ ವಿಶೇಷ ಸಂದರ್ಶನಕ್ಕಾಗಿ ಅವರನ್ನು ಸಿದ್ಧ ಮಾಡಿದನು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡರು.
15 ಆಗ ಮೋಶೆ ಜನರಿಗೆ, “ಮೂರನೆಯ ದಿನದಲ್ಲಿ ಯೆಹೋವನೊಡನೆ ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧರಾಗಿರಿ. ಅಲ್ಲಿಯವರೆಗೆ, ಪುರುಷರು ಸ್ತ್ರೀಯರ ಸಂಗ ಮಾಡಬಾರದು” ಎಂದು ಹೇಳಿದನು.
30 “ನಲವತ್ತು ವರ್ಷಗಳಾದ ಮೇಲೆ ಮೋಶೆಯು ಸಿನಾಯ್ ಬೆಟ್ಟದ ಸಮೀಪದಲ್ಲಿರುವ ಮರಳುಗಾಡಿನಲ್ಲಿದ್ದಾಗ ಉರಿಯುತ್ತಿದ್ದ ಪೊದೆಯ ಜ್ವಾಲೆಯಲ್ಲಿ ದೇವದೂತನೊಬ್ಬನು ಕಾಣಿಸಿಕೊಂಡನು. 31 ಮೋಶೆಯು ಆಶ್ಚರ್ಯದಿಂದ ನೋಡಲು ಸಮೀಪಕ್ಕೆ ಹೋದನು. ಆಗ ಮೋಶೆಗೆ ವಾಣಿಯೊಂದು ಕೇಳಿಸಿತು. ಅದು ಪ್ರಭುವಿನ ವಾಣಿಯಾಗಿತ್ತು. 32 ಪ್ರಭುವು ಅವನಿಗೆ, ‘ನಾನೇ ನಿನ್ನ ಪಿತೃಗಳ ದೇವರು. ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(A) ಎಂದು ಹೇಳಿದನು. ಮೋಶೆಯು ಭಯದಿಂದ ನಡುಗ ತೊಡಗಿದನು; ಪೊದೆಯನ್ನು ನೋಡಲು ಹೆದರಿದನು.
33 “ಪ್ರಭುವು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು, ಈಗ ನೀನು ನಿಂತುಕೊಂಡಿರುವ ಸ್ಥಳ ಪರಿಶುದ್ಧವಾದದ್ದು. 34 ಜನರು ಈಜಿಪ್ಟಿನಲ್ಲಿ ಬಹಳ ಸಂಕಟಪಡುತ್ತಿರುವುದನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳಾಟವನ್ನು ನಾನು ಕೇಳಿದ್ದೇನೆ. ನಾನು ಅವರನ್ನು ರಕ್ಷಿಸುವುದಕ್ಕಾಗಿ ಇಳಿದುಬಂದಿದ್ದೇನೆ. ಮೋಶೆಯೇ, ಈಗ ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುತ್ತಿದ್ದೇನೆ’(B) ಎಂದು ಹೇಳಿದನು.
35 “ಆ ಯೆಹೂದ್ಯರಿಂದ ತಿರಸ್ಕೃತನಾದವನೇ ಈ ಮೋಶೆ. ಅವರು ಅವನಿಗೆ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ನಿನಗೆ ಯಾರಾದರೂ ಹೇಳಿದರೇ?’ ಎಂದು ಪ್ರಶ್ನಿಸಿದ್ದರು. ಆದರೆ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ಕಳುಹಿಸಿದ್ದು ಆ ಮೋಶೆಯನ್ನೇ. ದೇವರು ತನ್ನ ದೂತನ ಮೂಲಕವಾಗಿ ಮೋಶೆಯನ್ನು ಕಳುಹಿಸಿದನು. ಉರಿಯುವ ಪೊದೆಯಲ್ಲಿ ಮೋಶೆಯು ಕಂಡದ್ದು ಈ ದೇವದೂತನನ್ನೇ. 36 ಆದ್ದರಿಂದ ಮೋಶೆಯು ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವನು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಈಜಿಪ್ಟಿನಲ್ಲಿಯೂ ಕೆಂಪುಸಮುದ್ರದಲ್ಲಿಯೂ ಮತ್ತು ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿಯೂ ಮಾಡಿದನು.
37 “ಈ ಮೋಶೆಯೇ ಯೆಹೂದ್ಯ ಜನರಿಗೆ, ‘ದೇವರು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ಆ ಪ್ರವಾದಿಯು ನಿಮ್ಮ ಸ್ವಜನರ ಮಧ್ಯದಿಂದಲೇ ಬರುವನು. ಅವನು ನನ್ನಂತೆಯೇ ಇರುವನು’(C) ಎಂದು ಹೇಳಿದನು. 38 ಅರಣ್ಯದಲ್ಲಿ ಯೆಹೂದ್ಯರ ಸಮೂಹದೊಂದಿಗೆ ಇದ್ದವನು ಈ ಮೋಶೆಯೇ. ಸಿನಾಯ್ ಬೆಟ್ಟದ ಬಳಿ ತನ್ನೊಂದಿಗೆ ಮಾತಾಡಿದ ದೇವದೂತನೊಂದಿಗೆ ಅವನಿದ್ದನು. ಅಲ್ಲದೆ ಅವನು ನಮ್ಮ ಪಿತೃಗಳೊಂದಿಗೆ ಇದ್ದನು. ಜೀವಕರವಾದ ಆಜ್ಞೆಗಳನ್ನು ಮೋಶೆಯು ದೇವರಿಂದ ಸ್ವೀಕರಿಸಿಕೊಂಡು ಅವುಗಳನ್ನು ನಮಗೆ ಕೊಟ್ಟನು.
39 “ಆದರೆ ಮೋಶೆಗೆ ವಿಧೇಯರಾಗಲು ನಮ್ಮ ಪಿತೃಗಳಿಗೆ ಇಷ್ಟವಿರಲಿಲ್ಲ. ಅವರು ಅವನನ್ನು ತಿರಸ್ಕರಿಸಿ, ಈಜಿಪ್ಟಿಗೆ ಹಿಂತಿರುಗಬೇಕೆಂದಿದ್ದರು. 40 ನಮ್ಮ ಪಿತೃಗಳು ಆರೋನನಿಗೆ, ‘ಮೋಶೆಯು ನಮ್ಮನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದನು. ಆದರೆ ಅವನಿಗೆ ಏನಾಯಿತೋ ನಮಗೆ ಗೊತ್ತಿಲ್ಲ. ಆದ್ದರಿಂದ ನಮ್ಮ ಮುಂದೆ ಹೋಗಲು ಮತ್ತು ನಮ್ಮನ್ನು ನಡೆಸಲು ಕೆಲವು ದೇವರುಗಳನ್ನು ಮಾಡು’(D) ಎಂದರು.
Kannada Holy Bible: Easy-to-Read Version. All rights reserved. © 1997 Bible League International