Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಆದಿಕಾಂಡ 17:1-7

ಸುನ್ನತಿ—ಒಡಂಬಡಿಕೆ

17 ಅಬ್ರಾಮನಿಗೆ ತೊಂಭತ್ತೊಂಬತ್ತು ವರ್ಷವಾಗಿದ್ದಾಗ ಯೆಹೋವನು ಅವನಿಗೆ ಪ್ರತ್ಯಕ್ಷನಾಗಿ, “ನಾನು ಸರ್ವಶಕ್ತನಾದ ದೇವರು. ನನಗೆ ವಿಧೇಯನಾಗಿದ್ದು ನಿರ್ದೋಷಿಯಾಗಿರು. ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುವುದಾಗಿ ವಾಗ್ದಾನ ಮಾಡುತ್ತೇನೆ” ಎಂದು ಹೇಳಿದನು.

ಆ ಕೂಡಲೇ ಅಬ್ರಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆಗ ದೇವರು ಅವನಿಗೆ, “ನಾನು ನಿನಗೆ ಮಾಡುವ ವಾಗ್ದಾನವೇನೆಂದರೆ: ‘ಅಬ್ರಾಮ’ ಎಂಬ ನಿನ್ನ ಹೆಸರನ್ನು ಬದಲಾಯಿಸಿ ನಿನಗೆ ‘ಅಬ್ರಹಾಮ’ ಎಂದು ಹೆಸರಿಡುವೆನು. ನಿನ್ನನ್ನು ಅಬ್ರಹಾಮ ಎಂದೇ ಕರೆಯುವರು; ಯಾಕೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆ. ಹೊಸ ಜನಾಂಗಗಳು ನಿನ್ನಿಂದ ಹುಟ್ಟುವವು; ರಾಜರುಗಳು ನಿನ್ನಿಂದ ಬರುವರು. ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಯು ನಿನ್ನ ಎಲ್ಲಾ ಸಂತತಿಯವರಿಗೆ ಶಾಶ್ವತವಾಗಿ ಅನ್ವಯಿಸುವುದು. ನಾನೇ ನಿನಗೂ ನಿನ್ನ ಎಲ್ಲಾ ಸಂತತಿಯವರಿಗೂ ದೇವರಾಗಿರುವೆನು.

ಆದಿಕಾಂಡ 17:15-16

ಇಸಾಕನು ವಾಗ್ದಾನದ ಮಗನು

15 ದೇವರು ಅಬ್ರಹಾಮನಿಗೆ, “ನಿನ್ನ ಹೆಂಡತಿಯಾದ, ಸಾರಯಳಿಗೆ ನಾನು ಒಂದು ಹೆಸರನ್ನು ಕೊಡುತ್ತೇನೆ. ಆಕೆಯ ಹೊಸ ಹೆಸರು ಸಾರ. 16 ನಾನು ಆಕೆಯನ್ನು ಆಶೀರ್ವದಿಸಿ ಆಕೆಗೆ ಒಬ್ಬ ಮಗನನ್ನು ದಯಪಾಲಿಸುವೆನು; ನೀನೇ ಅವನ ತಂದೆ. ಅನೇಕ ಜನಾಂಗಗಳಿಗೂ ರಾಜರುಗಳಿಗೂ ಆಕೆಯು ಮೂಲಮಾತೆಯಾಗಿರುವಳು” ಎಂದು ಹೇಳಿದನು.

ಕೀರ್ತನೆಗಳು 22:23-31

23 ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ.
    ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ!
    ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ!
24 ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ;
    ಆತನು ಅವರನ್ನು ದ್ವೇಷಿಸುವುದಿಲ್ಲ.
ಅವರು ಆತನನ್ನು ಕೂಗಿಕೊಳ್ಳುವಾಗ
    ಆತನು ಅವರಿಗೆ ಮರೆಯಾಗುವುದಿಲ್ಲ.

25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
    ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
    ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
    ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[a]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
    ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
    ಆತನು ಜನಾಂಗಗಳನ್ನೆಲ್ಲಾ ಆಳುವನು.
29 ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು.
    ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು.
30 ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು.
    ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು.
31 ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ
    ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು.[b]

ರೋಮ್ನಗರದವರಿಗೆ 4:13-25

ವಾಗ್ದಾನವನ್ನು ಹೊಂದಿಕೊಳ್ಳಲು ನಂಬಿಕೆಯೇ ಮಾರ್ಗ

13 ಅಬ್ರಹಾಮನಿಗೂ ಅವನ ಸಂತತಿಯವರಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದನು. ಆದರೆ ಅಬ್ರಹಾಮನು ಆ ವಾಗ್ದಾನವನ್ನು ಹೊಂದಿಕೊಂಡದ್ದು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಅಬ್ರಹಾಮನು ನಂಬಿಕೆಯ ಮೂಲಕ ನೀತಿವಂತನಾದ ಕಾರಣ ಆ ವಾಗ್ದಾನವನ್ನು ಹೊಂದಿಕೊಂಡನು. 14 ದೇವರು ವಾಗ್ದಾನ ಮಾಡಿದವುಗಳನ್ನು ಜನರು ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಹೊಂದಿಕೊಳ್ಳಬಲ್ಲವರಾಗಿದ್ದರೆ, ನಂಬಿಕೆಯು ನಿಷ್ಪ್ರಯೋಜಕವಾಗಿದೆ. ಅಲ್ಲದೆ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವೂ ನಿಷ್ಪ್ರಯೋಜಕವಾಗಿದೆ. 15 ಏಕೆಂದರೆ ಧರ್ಮಶಾಸ್ತ್ರಕ್ಕೆ ವಿಧೇಯರಾಗದೆ ಹೋದಾಗ, ಧರ್ಮಶಾಸ್ತ್ರವು ದೇವರ ಕೋಪವನ್ನು ಮಾತ್ರ ತರುತ್ತದೆ. ಆದರೆ ಧರ್ಮಶಾಸ್ತ್ರವು ಇಲ್ಲದಿದ್ದರೆ ಅವಿಧೇಯರಾಗುವುದಕ್ಕೆ ಏನೂ ಇರುವುದಿಲ್ಲ.

16 ಆದಕಾರಣ ಜನರು ನಂಬಿಕೆಯ ಮೂಲಕವಾಗಿ ದೇವರ ವಾಗ್ದಾನವನ್ನು ಹೊಂದಿಕೊಳ್ಳುವರು. ವಾಗ್ದಾನವು ಉಚಿತ ಕೊಡುಗೆಯಾಗಬೇಕೆಂತಲೇ ಹೀಗಾಯಿತು. ವಾಗ್ದಾನವು ಉಚಿತ ಕೊಡುಗೆಯಾಗಿದ್ದರೆ, ಅಬ್ರಹಾಮನ ಜನರೆಲ್ಲರೂ ಆ ವಾಗ್ದಾನವನ್ನು ಹೊಂದಿಕೊಳ್ಳುವರು. ಈ ವಾಗ್ದಾನವನ್ನು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಿ ಜೀವಿಸುವ ಜನರಿಗೆ ಮಾತ್ರವಲ್ಲ, ಅಬ್ರಹಾಮನಂತೆ ನಂಬಿಕೆಯಲ್ಲಿ ಜೀವಿಸುವ ಎಲ್ಲರಿಗೂ ಕೊಡಲಾಗಿದೆ. ಅಬ್ರಹಾಮನು ನಮ್ಮೆಲ್ಲರಿಗೂ ತಂದೆಯಾಗಿದ್ದಾನೆ. 17 “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ”(A) ಎಂದು ಪವಿತ್ರ ಗ್ರಂಥದಲ್ಲೇ ಬರೆದಿದೆ. ಇದು ದೇವರ ಸನ್ನಿಧಿಯಲ್ಲಿ ಸತ್ಯವಾಗಿದೆ. ಸತ್ತವರಿಗೆ ಜೀವವನ್ನು ಕೊಡುವವನೂ ಇನ್ನೂ ಸಂಭವಿಸಿಲ್ಲದ ಕಾರ್ಯಗಳನ್ನು ಮಾಡುವವನೂ ಆಗಿರುವ ದೇವರನ್ನು ಅಬ್ರಹಾಮನು ನಂಬಿದನು.

18 ಅಬ್ರಹಾಮನಿಗೆ ಮಕ್ಕಳಾಗುವ ಆಸ್ಪದವೇ ಇರಲಿಲ್ಲ. ಆದರೂ ಅವನು ದೇವರನ್ನು ನಂಬಿ ತನ್ನ ನಿರೀಕ್ಷೆಯಲ್ಲಿಯೇ ಮುಂದುವರೆದನು. ಆದಕಾರಣವೇ ಅವನು ಅನೇಕ ಜನಾಂಗಗಳಿಗೆ ತಂದೆಯಾದನು. ದೇವರು ಅವನಿಗೆ, “ನೀನು ಅನೇಕ ಜನಾಂಗಗಳನ್ನು ಪಡೆಯುವೆ”(B) ಎಂದು ಹೇಳಿದ್ದಂತೆಯೇ ಇದಾಯಿತು. 19 ಅಬ್ರಹಾಮನು ಸುಮಾರು ನೂರು ವರ್ಷದವನಾಗಿದ್ದರಿಂದ ಅವನ ದೇಹವು ದುರ್ಬಲವಾಗಿತ್ತು. ಆದಕಾರಣ ಅವನು ಮಕ್ಕಳನ್ನು ಪಡೆಯುವ ಸಾಧ್ಯತೆ ಇರಲಿಲ್ಲ. ಅಲ್ಲದೆ ಸಾರಳಿಗೂ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ. ಅಬ್ರಹಾಮನು ಇದರ ಬಗ್ಗೆ ಆಲೋಚಿಸಿದನು. ಆದರೂ ದೇವರ ಮೇಲೆ ಅವನಿಗಿದ್ದ ನಂಬಿಕೆಯು ಬಲಹೀನವಾಗಲಿಲ್ಲ. 20 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಸಂಶಯಪಡಲಿಲ್ಲ ಮತ್ತು ತನ್ನ ನಂಬಿಕೆಯನ್ನು ಕೊನೆಗೊಳಿಸಲಿಲ್ಲ. ಅವನು ತನ್ನ ನಂಬಿಕೆಯಲ್ಲಿ ಬಲವಾಗಿ ಬೆಳೆದನು ಮತ್ತು ದೇವರಿಗೆ ಸ್ತೋತ್ರ ಸಲ್ಲಿಸಿದನು. 21 ದೇವರು ತಾನು ಮಾಡಿದ ವಾಗ್ದಾನವನ್ನು ಖಂಡಿತವಾಗಿ ನೆರವೇರಿಸಬಲ್ಲನೆಂದು ಅಬ್ರಹಾಮನು ದೃಢವಾಗಿ ನಂಬಿದನು. 22 ಆದ್ದರಿಂದ, “ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿದನು. ಅದು ಅವನನ್ನು ನೀತಿವಂತನನ್ನಾಗಿ ಮಾಡಿತು.” 23 ಆ ಮಾತುಗಳು ಬರೆಯಲ್ಪಟ್ಟಿರುವುದು ಅಬ್ರಹಾಮನಿಗೆ ಮಾತ್ರವಲ್ಲ. 24 ನಮಗಾಗಿಯೂ ಬರೆಯಲ್ಪಟ್ಟಿವೆ. ನಾವು ನಂಬುವುದರಿಂದ ದೇವರು ನಮ್ಮನ್ನು ಸಹ ಸ್ವೀಕರಿಸಿಕೊಳ್ಳುವನು. ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನಲ್ಲಿ (ದೇವರಲ್ಲಿ) ನಾವು ನಂಬಿಕೆ ಇಡುತ್ತೇವೆ. 25 ನಮ್ಮ ಪಾಪಗಳ ದೆಸೆಯಿಂದ ಯೇಸುವನ್ನು ಮರಣಕ್ಕೆ ಒಪ್ಪಿಸಲಾಯಿತು. ನಮ್ಮನ್ನು ನೀತಿವಂತರನ್ನಾಗಿ ಮಾಡುವುದಕ್ಕಾಗಿ ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಲಾಯಿತು.

ಮಾರ್ಕ 8:31-38

ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು

(ಮತ್ತಾಯ 16:21-28; ಲೂಕ 9:22-27)

31 ನಂತರ ಯೇಸು ತನ್ನ ಶಿಷ್ಯರಿಗೆ ಉಪದೇಶಿಸುತ್ತಾ “ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಿರಿಯ ಯೆಹೂದ್ಯನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಆತನನ್ನು ತಿರಸ್ಕರಿಸಿ ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಆತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬರುತ್ತಾನೆ” ಎಂದು ಹೇಳಿದನು. 32 ಮುಂದೆ ಸಂಭವಿಸುವದೆಲ್ಲವನ್ನು ಯೇಸು ಅವರಿಗೆ ಹೇಳಿದನು. ಆತನು ಯಾವುದನ್ನೂ ರಹಸ್ಯವಾಗಿ ಇಡಲಿಲ್ಲ.

ಪೇತ್ರನು ಯೇಸುವನ್ನು ಸ್ವಲ್ಪದೂರ ಕರೆದೊಯ್ದು, “ನೀನು ಹಾಗೆಲ್ಲಾ ಹೇಳಕೂಡದು” ಎಂದು ಪ್ರತಿಭಟಿಸಿದನು. 33 ಆದರೆ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು! ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ” ಎಂದು ಗದರಿಸಿದನು.

34 ನಂತರ ಯೇಸು ಜನರನ್ನು ತನ್ನ ಬಳಿಗೆ ಕರೆದನು. ಆತನ ಶಿಷ್ಯರೂ ಅಲ್ಲಿದ್ದರು. ಯೇಸು ಅವರಿಗೆ, “ಯಾವನಿಗಾದರೂ ನನ್ನನ್ನು ಅನುಸರಿಸಲು ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಬೇಕು. 35 ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಇಚ್ಛಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ಹಾಗೂ ಸುವಾರ್ತೆಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ತನ್ನ ಪ್ರಾಣವನ್ನು ನಿರಂತರವಾಗಿ ಕಾಪಾಡಿಕೊಳ್ಳುತ್ತಾನೆ. 36 ಒಬ್ಬನು ಪ್ರಪಂಚವನ್ನೆಲ್ಲಾ ಸಂಪಾದಿಸಿಕೊಂಡು ತನ್ನ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಪ್ರಯೋಜನವೇನು? 37 ಒಬ್ಬನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಸಾಧ್ಯವೇ? 38 ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯವರಲ್ಲಿ ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಂಡರೆ, ಮನುಷ್ಯಕುಮಾರನಾದ ನಾನು ನನ್ನ ತಂದೆಯ ಮಹಿಮೆಯೊಂದಿಗೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವ ಸಮಯದಲ್ಲಿ ಅವನ ಬಗ್ಗೆ ನಾಚಿಕೆಪಡುವೆನು” ಎಂದು ಹೇಳಿದನು.

ಮಾರ್ಕ 9:2-9

ಮೋಶೆ ಮತ್ತು ಎಲೀಯರೊಡನೆ ಯೇಸು

(ಮತ್ತಾಯ 17:1-13; ಲೂಕ 9:28-36)

ಆರು ದಿನಗಳ ನಂತರ ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಯೇಸು ಎತ್ತರವಾದ ಬೆಟ್ಟದ ಮೇಲೆ ಹೋದನು. ಅಲ್ಲಿ ಅವರು ಮಾತ್ರ ಇದ್ದರು. ಈ ಶಿಷ್ಯರು ಯೇಸುವನ್ನು ನೋಡುತ್ತಿರಲು, ಇದ್ದಕ್ಕಿದ್ದಂತೆ ಆತನು ರೂಪಾಂತರ ಹೊಂದಿದನು. ಯೇಸುವಿನ ಬಟ್ಟೆಗಳು ಬಿಳುಪಾಗಿ ಹೊಳೆಯುತ್ತಿದ್ದವು. ಅಷ್ಟು ಬಿಳುಪಾದ ಬಟ್ಟೆಗಳನ್ನು ತಯಾರಿಸಲು ಸಾಧ್ಯವಿರಲಿಲ್ಲ. ಆಗ ಮೋಶೆ ಮತ್ತು ಎಲೀಯ ಅಲ್ಲಿ ಪ್ರತ್ಯಕ್ಷರಾಗಿ ಯೇಸುವಿನೊಂದಿಗೆ ಮಾತಾಡುತ್ತಿದ್ದರು.

ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನಾವು ಇಲ್ಲಿ ಮೂರು ಗುಡಾರಗಳನ್ನು ಹಾಕುತ್ತೇವೆ. ಒಂದು ನಿನಗೆ, ಒಂದು ಮೋಶೆಗೆ ಮತ್ತೊಂದು ಎಲೀಯನಿಗೆ” ಎಂದು ಹೇಳಿದನು. ಪೇತ್ರನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಏಕೆಂದರೆ ಅವನು ಮತ್ತು ಉಳಿದ ಇನ್ನಿಬ್ಬರು ಶಿಷ್ಯರು ಬಹಳ ಭಯಗೊಂಡಿದ್ದರು.

ಆಗ ಮೋಡವು ಬಂದು, ಅವರನ್ನು ಮುಸುಕಿತು. ಆ ಮೋಡದ ಒಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ಈತನಿಗೆ ವಿಧೇಯರಾಗಿ” ಎಂದು ಹೇಳಿತು.

ಆಗ ಪೇತ್ರ, ಯಾಕೋಬ ಮತ್ತು ಯೋಹಾನರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು.

ಯೇಸು ಮತ್ತು ಆ ಶಿಷ್ಯರು ಹಿಂತಿರುಗಿ ಬೆಟ್ಟದಿಂದ ಕೆಳಗಿಳಿದು ಬರುತ್ತಿರುವಾಗ, ಆತನು ಅವರಿಗೆ, “ನೀವು ಬೆಟ್ಟದ ಮೇಲೆ ನೋಡಿದ ಸಂಗತಿಗಳ ಬಗ್ಗೆ ಯಾರಿಗೂ ಹೇಳಬೇಡಿ. ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬರುವವರೆಗೆ ಕಾದುಕೊಂಡಿರಿ” ಎಂದು ಆಜ್ಞಾಪಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International