Revised Common Lectionary (Semicontinuous)
23 ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ.
ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ!
ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ!
24 ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ;
ಆತನು ಅವರನ್ನು ದ್ವೇಷಿಸುವುದಿಲ್ಲ.
ಅವರು ಆತನನ್ನು ಕೂಗಿಕೊಳ್ಳುವಾಗ
ಆತನು ಅವರಿಗೆ ಮರೆಯಾಗುವುದಿಲ್ಲ.
25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[a]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
ಆತನು ಜನಾಂಗಗಳನ್ನೆಲ್ಲಾ ಆಳುವನು.
29 ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು.
ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು.
30 ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು.
ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು.
31 ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ
ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು.[b]
ಸೇವಕಿಯಾಗಿದ್ದ ಹಾಗರಳು
16 ಸಾರಯಳು ಅಬ್ರಾಮನ ಹೆಂಡತಿ. ಆಕೆಗೆ ಮಕ್ಕಳಿರಲಿಲ್ಲ. ಸಾರಯಳಿಗೆ ಈಜಿಪ್ಟಿನ ಒಬ್ಬ ಸೇವಕಿಯಿದ್ದಳು. ಅವಳ ಹೆಸರು ಹಾಗರಳು. 2 ಸಾರಯಳು ಅಬ್ರಾಮನಿಗೆ, “ಯೆಹೋವನು ನನಗೆ ಮಕ್ಕಳನ್ನು ಪಡೆಯುವ ಅವಕಾಶವನ್ನು ಕೊಡಲಿಲ್ಲ. ಆದ್ದರಿಂದ ನನ್ನ ಸೇವಕಿಯಾದ ಹಾಗರಳ ಬಳಿಗೆ ಹೋಗು. ಆಕೆಯಲ್ಲಿ ಹುಟ್ಟುವ ಮಗುವನ್ನು ನನ್ನ ಮಗುವಂತೆ ಸ್ವೀಕರಿಸಿಕೊಳ್ಳುವೆನು” ಎಂದು ಹೇಳಿದಳು. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳಿಗೆ ವಿಧೇಯನಾದನು.
3 ಅಬ್ರಾಮನು ಕಾನಾನಿಗೆ ಬಂದು ಹತ್ತು ವರ್ಷಗಳಾದ ಮೇಲೆ ಇದು ನಡೆಯಿತು. ಹೀಗೆ ಸಾರಯಳು ತನ್ನ ಗಂಡನಾದ ಅಬ್ರಾಮನಿಗೆ ಹಾಗರಳನ್ನು ಕೊಟ್ಟಳು. ಹಾಗರಳು ಆಕೆಯ ಈಜಿಪ್ಟಿನ ಸೇವಕಿಯಾಗಿದ್ದಳು. 4 ಹಾಗರಳು ಅಬ್ರಾಮನಿಂದ ಗರ್ಭಿಣಿಯಾದಾಗ ತನ್ನ ಯಜಮಾನಿಯಾದ ಸಾರಯಳನ್ನೇ ಕಡೆಗಣಿಸತೊಡಗಿದಳು. 5 ಆಗ ಸಾರಯಳು ಅಬ್ರಾಮನಿಗೆ, “ನನ್ನ ಸಂಕಟಕ್ಕೆ ನೀನೇ ಕಾರಣ. ನಾನು ಅವಳನ್ನು ನಿನಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾಗಿದ್ದಾಳೆ ಮತ್ತು ನನ್ನನ್ನೇ ಕಡೆಗಣಿಸುತ್ತಿದ್ದಾಳೆ. ಯೆಹೋವನೇ ನನಗೂ ನಿನಗೂ ನ್ಯಾಯ ತೀರಿಸಲಿ” ಎಂದು ಹೇಳಿದಳು.
6 ಅದಕ್ಕೆ ಅಬ್ರಾಮನು ಸಾರಯಳಿಗೆ, “ನೀನು ಹಾಗರಳ ಯಜಮಾನಿ. ನೀನು ಅವಳಿಗೆ ಏನುಬೇಕಾದರೂ ಮಾಡಬಹುದು” ಎಂದು ಹೇಳಿದನು. ಆದ್ದರಿಂದ ಸಾರಯಳು ಹಾಗರಳನ್ನು ಶಿಕ್ಷಿಸಿದಳು. ಆಗ ಹಾಗರಳು ಓಡಿಹೋದಳು.
ಅಬ್ರಹಾಮನ ಉದಾಹರಣೆ
4 ಹಾಗಾದರೆ, ನಮ್ಮ ಪಿತೃವಾದ ಅಬ್ರಹಾಮನ ಬಗ್ಗೆ ನಾವು ಏನು ಹೇಳೋಣ? ಅವನು ನಂಬಿಕೆಯ ಬಗ್ಗೆ ಏನು ಕಲಿತುಕೊಂಡನು? 2 ಅವನು ತನ್ನ ಕ್ರಿಯೆಗಳಿಂದ ನೀತಿವಂತನಾಗಿದ್ದರೆ ಹೊಗಳಿಕೊಳ್ಳಲು ಅವನಿಗೆ ಕಾರಣವಿರುತ್ತಿತ್ತು. ಆದರೆ ಅಬ್ರಹಾಮನು ದೇವರ ಮುಂದೆ ಹೊಗಳಿಕೊಳ್ಳಲು ಆಗಲಿಲ್ಲ. 3 “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿದನು. ಇದು ಅಬ್ರಹಾಮನನ್ನು ನೀತಿವಂತನನ್ನಾಗಿ ಮಾಡಿತು”(A) ಎಂದು ಪವಿತ್ರ ಗ್ರಂಥವು ಹೇಳುತ್ತದೆ.
4 ದುಡಿದವನಿಗೆ ದೊರೆಯುವ ಸಂಬಳ ಉಡುಗೊರೆಯಲ್ಲ, ಅದು ಅವನಿಗೆ ಸಲ್ಲತಕ್ಕದ್ದೇ ಆಗಿದೆ. 5 ಆದರೆ ಒಬ್ಬನು ತಾನು ಮಾಡುವ ಯಾವುದೇ ಕಾರ್ಯದ ಮೂಲಕವಾಗಲಿ ತನ್ನನ್ನು ನೀತಿವಂತನನ್ನಾಗಿ ಮಾಡಿಕೊಳ್ಳಲಾರನು. ಆದ್ದರಿಂದ ಆ ವ್ಯಕ್ತಿ ದೇವರಲ್ಲಿ ನಂಬಿಕೆ ಇಡಲೇಬೇಕು. ಆಗ ದೇವರು ಆ ವ್ಯಕ್ತಿಯ ನಂಬಿಕೆಯನ್ನು ಸ್ವೀಕರಿಸಿಕೊಂಡು ಅವನನ್ನು ನೀತಿವಂತನನ್ನಾಗಿ ಮಾಡುವನು. ದೇವರು ದುಷ್ಟರನ್ನು ಸಹ ನೀತಿವಂತರನ್ನಾಗಿ ಮಾಡುವನು. 6 ದೇವರು ಒಬ್ಬನ ಒಳ್ಳೆಯ ಕಾರ್ಯಗಳನ್ನು ಲಕ್ಷಿಸದೆ ಅವನನ್ನು ನೀತಿವಂತನೆಂದು ಒಪ್ಪಿಕೊಂಡರೆ ಅವನು ನಿಜವಾಗಿಯೂ ಭಾಗ್ಯವಂತನೆಂದು ದಾವೀದನು ಸಹ ಹೇಳಿದ್ದಾನೆ:
7 “ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ
ಯಾರ ಅಪರಾಧಗಳು ಮುಚ್ಚಲ್ಪಟ್ಟಿವೆಯೋ
ಅವರು ನಿಜವಾಗಿಯೂ ಭಾಗ್ಯವಂತರು!
8 ಪ್ರಭುವು ಯಾವನ ಪಾಪವನ್ನು ಪರಿಗಣಿಸುವುದಿಲ್ಲವೋ
ಅವನು ನಿಜವಾಗಿಯೂ ಭಾಗ್ಯವಂತನು!”(B)
9 ಈ ಭಾಗ್ಯವಿರುವುದು ಸುನ್ನತಿ[a] ಮಾಡಿಸಿಕೊಂಡವರಿಗೆ (ಯೆಹೂದ್ಯರಿಗೆ) ಮಾತ್ರವೋ? ಅಥವಾ ಸುನ್ನತಿ ಮಾಡಿಸಿಕೊಂಡಿಲ್ಲದವರಿಗೂ (ಯೆಹೂದ್ಯರಲ್ಲದವರಿಗೂ) ಸಹ ಈ ಭಾಗ್ಯವಿದೆಯೋ? ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿಕೊಂಡನೆಂದು ನಾವು ಆಗಲೇ ಹೇಳಿದ್ದೇವೆ. ಆ ನಂಬಿಕೆಯೇ ಅವನನ್ನು ನೀತಿವಂತನನ್ನಾಗಿ ಮಾಡಿತು. 10 ಆದರೆ ಇದು ಯಾವಾಗ ಆಯಿತು? ದೇವರು ಅಬ್ರಹಾಮನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೋ ಅಥವಾ ಸುನ್ನತಿಯಾದಮೇಲೋ? ದೇವರು ಅವನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೇ. 11 ದೇವರು ತನ್ನನ್ನು ಸ್ವೀಕರಿಸಿಕೊಂಡಿದ್ದಾನೆಂಬುದನ್ನು ತೋರಿಸುವುದಕ್ಕಾಗಿ ಅಬ್ರಹಾಮನು ಅನಂತರ ಸುನ್ನತಿ ಮಾಡಿಸಿಕೊಂಡನು. ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವುದಕ್ಕಿಂತ ಮೊದಲೇ ನಂಬಿಕೆಯ ಮೂಲಕ ನೀತಿವಂತನಾಗಿದ್ದನು ಎಂಬುದಕ್ಕೆ ಅವನ ಸುನ್ನತಿಯೇ ಆಧಾರವಾಗಿದೆ. ಆದಕಾರಣ ನಂಬುವ ಎಲ್ಲಾ ಜನರಿಗೆ, ಅವರು ಸುನ್ನತಿ ಮಾಡಿಸಿಕೊಂಡಿಲ್ಲದಿದ್ದರೂ ಅಬ್ರಹಾಮನು ತಂದೆಯಾಗಿದ್ದಾನೆ. ಏಕೆಂದರೆ ಅವರು ತಮ್ಮ ನಂಬಿಕೆಯ ಮೂಲಕ ನೀತಿವಂತರೆಂದು ಎಣಿಸಲ್ಪಡುವರು. 12 ಅಲ್ಲದೆ ಸುನ್ನತಿ ಮಾಡಿಸಿಕೊಂಡಿರುವ ಜನರಿಗೂ ಸಹ ಅಬ್ರಹಾಮನು ತಂದೆಯಾಗಿದ್ದಾನೆ. ಆದರೆ ಅವನನ್ನು ಅವರ ತಂದೆಯನ್ನಾಗಿ ಮಾಡುವಂಥದ್ದು ಅವರ ಸುನ್ನತಿಯಲ್ಲ. ನಮ್ಮ ತಂದೆಯಾದ ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವ ಮೊದಲು ಹೊಂದಿದ್ದ ನಂಬಿಕೆಗನುಸಾರವಾಗಿ ಅವರು ಜೀವಿಸಿದರೆ ಮಾತ್ರ ಅವನು ಅವರ ತಂದೆಯಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International