Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 22:23-31

23 ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ.
    ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ!
    ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ!
24 ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ;
    ಆತನು ಅವರನ್ನು ದ್ವೇಷಿಸುವುದಿಲ್ಲ.
ಅವರು ಆತನನ್ನು ಕೂಗಿಕೊಳ್ಳುವಾಗ
    ಆತನು ಅವರಿಗೆ ಮರೆಯಾಗುವುದಿಲ್ಲ.

25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
    ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
    ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
    ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[a]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
    ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
    ಆತನು ಜನಾಂಗಗಳನ್ನೆಲ್ಲಾ ಆಳುವನು.
29 ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು.
    ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು.
30 ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು.
    ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು.
31 ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ
    ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು.[b]

ಆದಿಕಾಂಡ 15:1-6

ದೇವರು ಅಬ್ರಾಮನೊಡನೆ ಮಾಡಿಕೊಂಡ ಒಡಂಬಡಿಕೆ

15 ಈ ಸಂಗತಿಗಳಾದ ಮೇಲೆ, ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ಸಂದೇಶ ಬಂದಿತು. ದೇವರು ಅವನಿಗೆ, “ಅಬ್ರಾಮನೇ ಭಯಪಡಬೇಡ; ನಾನೇ ನಿನಗೆ ಗುರಾಣಿಯಾಗಿದ್ದೇನೆ. ನಾನು ನಿನಗೆ ದೊಡ್ಡ ಪ್ರತಿಫಲವನ್ನು ಕೊಡುತ್ತೇನೆ” ಎಂದು ಹೇಳಿದನು.

ಅದಕ್ಕೆ ಅಬ್ರಾಮನು, “ದೇವರಾದ ಯೆಹೋವನೇ, ನೀನು ನನಗೆ ಏನೇ ಕೊಟ್ಟರೂ ನನಗೆ ಸಂತೋಷವಾಗುವುದಿಲ್ಲ. ಯಾಕೆಂದರೆ, ನನಗೆ ಮಗನೇ ಇಲ್ಲ. ಆದ್ದರಿಂದ ನಾನು ಸತ್ತಮೇಲೆ ನನ್ನ ಆಸ್ತಿಯೆಲ್ಲ ನನ್ನ ಸೇವಕನಾದ ದಮಸ್ಕದ ಎಲೀಯೆಜರನ ಪಾಲಾಗುವುದು” ಎಂದು ಹೇಳಿದನು. ಮತ್ತೆ ಅಬ್ರಾಮನು, “ನೀನು ನನಗೆ ಮಗನನ್ನೇ ಕೊಟ್ಟಿಲ್ಲ. ಆದ್ದರಿಂದ ನನ್ನ ಮನೆಯಲ್ಲಿ ಹುಟ್ಟಿದ ಸೇವಕನೊಬ್ಬನು ನನಗಿರುವುದನ್ನೆಲ್ಲ ಪಡೆದುಕೊಳ್ಳುವನು” ಎಂದು ಹೇಳಿದನು.

ಆಗ ಯೆಹೋವನು ಅಬ್ರಾಮನಿಗೆ, “ನಿನ್ನ ಆಸ್ತಿಯನ್ನೆಲ್ಲ ಪಡೆದುಕೊಳ್ಳುವವನು ನಿನ್ನ ಸೇವಕನಲ್ಲ. ನೀನೇ ಮಗನನ್ನು ಪಡೆಯುವೆ; ನಿನ್ನ ಮಗನೇ ನಿನ್ನ ಆಸ್ತಿಯನ್ನೆಲ್ಲಾ ಪಡೆಯುವನು” ಎಂದು ಹೇಳಿದನು.

ನಂತರ ದೇವರು ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು ಅವನಿಗೆ, “ಆಕಾಶದ ಕಡೆಗೆ ಕಣ್ಣೆತ್ತಿ ನಕ್ಷತ್ರಗಳನ್ನು ನೋಡು. ನೀನು ಲೆಕ್ಕ ಮಾಡಲಾರದಷ್ಟು ನಕ್ಷತ್ರಗಳಿವೆ. ಮುಂದಿನ ಕಾಲದಲ್ಲಿ ನಿನ್ನ ಕುಟುಂಬವು ಅದೇ ರೀತಿಯಲ್ಲಿರುವುದು” ಎಂದು ಹೇಳಿದನು.

ಅಬ್ರಾಮನು ಯೆಹೋವನನ್ನು ನಂಬಿದನು. ಆ ನಂಬಿಕೆಯ ನಿಮಿತ್ತವೇ ಯೆಹೋವನು ಅಬ್ರಾಮನನ್ನು ನೀತಿವಂತನೆಂದು ಪರಿಗಣಿಸಿದನು.

ಆದಿಕಾಂಡ 15:12-18

12 ಸಾಯಂಕಾಲವಾಯಿತು, ಸೂರ್ಯ ಮುಳುಗತೊಡಗಿದಾಗ ಅಬ್ರಾಮನಿಗೆ ಗಾಢ ನಿದ್ರೆ ಬಂದಿತು. ಅವನು ನಿದ್ರೆ ಮಾಡುತ್ತಿರುವಾಗ ಕಾರ್ಗತ್ತಲಾಯಿತು. 13 ಆಗ ಯೆಹೋವನು ಅಬ್ರಾಮನಿಗೆ, “ನಿನಗೆ ಈ ವಿಷಯಗಳು ತಿಳಿದಿರಬೇಕು. ನಿನ್ನ ಸಂತತಿಯವರು ಪರದೇಶಿಯರಾಗಿ ತಮ್ಮದಲ್ಲದ ದೇಶದಲ್ಲಿ ವಾಸಮಾಡುವರು. ಅಲ್ಲಿನ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವರು. ಅಲ್ಲಿ ಅವರು ನಾನೂರು ವರ್ಷಗಳವರೆಗೆ ಬಾಧೆಪಡುವರು. 14 ಆದರೆ ನಾನೂರು ವರ್ಷಗಳಾದ ಮೇಲೆ ಅವರ ಮೇಲೆ ದೊರೆತನ ಮಾಡಿದ ಆ ದೇಶವನ್ನು ನಾನು ದಂಡಿಸುವೆನು; ನಿನ್ನ ಜನರು ಆ ದೇಶವನ್ನು ಬಿಟ್ಟು ಹೊರಡುವರು. ನಿನ್ನ ಜನರು ಅದನ್ನು ಬಿಡುವಾಗ ತಮ್ಮೊಡನೆ ಸಂಪತ್ತುಗಳನ್ನು ತೆಗೆದುಕೊಂಡು ಹೋಗುವರು.

15 “ನೀನು ತುಂಬಾ ಮುದುಕನಾಗುವ ತನಕ ಜೀವಿಸಿ ಸಮಾಧಾನದಿಂದ ಸಾಯುವೆ; ನಿನ್ನನ್ನು ನಿನ್ನ ಕುಟುಂಬದವರೊಡನೆ ಸಮಾಧಿ ಮಾಡುವರು. 16 ನಾಲ್ಕು ತಲೆಮಾರುಗಳ ನಂತರ ನಿನ್ನ ಜನರು ಈ ನಾಡಿಗೆ ಹಿಂತಿರುಗುವರು. ಆ ಕಾಲದಲ್ಲಿ ನಿನ್ನ ಜನರು ಅಮೋರಿಯರನ್ನು ಸೋಲಿಸುವರು. ಇಲ್ಲಿ ವಾಸಿಸುತ್ತಿರುವ ಅಮೋರಿಯರನ್ನು ನಿನ್ನ ಜನರ ಮೂಲಕ ನಾನೇ ಶಿಕ್ಷಿಸುವೆನು. ಇದು ಮುಂದೆ ನಡೆಯುವ ಸಂಗತಿ. ಯಾಕೆಂದರೆ ಆ ಸಮಯದಲ್ಲಿ ಅಮೋರಿಯರು ಅಂಥ ಶಿಕ್ಷೆ ಅನುಭವಿಸುವಷ್ಟು ಕೆಟ್ಟವರಾಗಿರಲಿಲ್ಲ” ಎಂದು ಹೇಳಿದನು.

17 ಸೂರ್ಯನು ಮುಳುಗಿದ ಮೇಲೆ ತುಂಬ ಕತ್ತಲಾಯಿತು. ಕಡಿದುಹಾಕಿದ್ದ ಪ್ರತಿಯೊಂದು ಪ್ರಾಣಿಗಳ ದೇಹದ ಎರಡೆರಡು ಹೋಳುಗಳು ಇನ್ನೂ ನೆಲದ ಮೇಲೆ ಇದ್ದವು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಹೊಗೆ ಮತ್ತು ಬೆಂಕಿಗಳಿಂದ ಕೂಡಿದ ದೀವಿಟಿಗೆಯು ಈ ತುಂಡುಗಳ ನಡುವೆ ಹಾದುಹೋಯಿತು.

18 ಆದ್ದರಿಂದ ಅಂದು ಯೆಹೋವನು ಒಂದು ವಾಗ್ದಾನವನ್ನು ಮಾಡಿ ಅಬ್ರಾಮನೊಡನೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಯೆಹೋವನು ಅವನಿಗೆ, “ನಾನು ನಿನ್ನ ಸಂತತಿಯವರಿಗೆ ಈ ನಾಡನ್ನು ಕೊಡುವೆನು. ನಾನು ಅವರಿಗೆ ಈಜಿಪ್ಟ್ ನದಿಯಿಂದ ಯೂಫ್ರೇಟೀಸ್ ಮಹಾನದಿಯವರೆಗೂ ಇರುವ ನಾಡನ್ನು ಕೊಡುವೆನು.

ರೋಮ್ನಗರದವರಿಗೆ 3:21-31

ದೇವರು ಜನರನ್ನು ನೀತಿವಂತರನ್ನಾಗಿ ಮಾಡುವ ಬಗೆ

21 ಆದರೆ ಈಗ ದೇವರು ಧರ್ಮಶಾಸ್ತ್ರದ ನೆರವಿಲ್ಲದೆಯೇ ಜನರನ್ನು ನೀತಿವಂತರನ್ನಾಗಿ ಮಾಡುವ ಮಾರ್ಗವನ್ನು ತೋರಿಸಿದ್ದಾನೆ. ಧರ್ಮಶಾಸ್ತ್ರ ಮತ್ತು ಪ್ರವಾದಿಗಳು ಈ ಹೊಸ ಮಾರ್ಗದ ಬಗ್ಗೆ ನಮಗೆ ಹೇಳಿದ್ದಾರೆ. 22 ನಂಬಿಕೆಯ ಮೂಲಕವಾಗಿ ಅಂದರೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಎಲ್ಲಾ ಜನರನ್ನು ದೇವರು ನೀತಿವಂತರನ್ನಾಗಿ ಮಾಡುತ್ತಾನೆ. ಆತನಿಗೆ ಎಲ್ಲಾ ಜನರು ಒಂದೇ. 23 ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದವರಾಗಿದ್ದಾರೆ. 24 ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವರವಾದ ಕೃಪೆಯಿಂದಲೇ. ದೇವರು ಯೇಸು ಕ್ರಿಸ್ತನ ಮೂಲಕವಾಗಿ ಜನರನ್ನು ಪಾಪದಿಂದ ಬಿಡುಗಡೆ ಮಾಡಿ, ನೀತಿವಂತರನ್ನಾಗಿ ಮಾಡುತ್ತಾನೆ. 25 ದೇವರು ನಂಬಿಕೆಯ ಮೂಲಕ ಜನರ ಪಾಪಗಳನ್ನು ಕ್ಷಮಿಸುವ ಮಾರ್ಗವನ್ನು ಮಾಡಿದ್ದಾನೆ. ಆ ಮಾರ್ಗವೇ ಯೇಸು. ದೇವರು ಯೇಸುವಿನ ರಕ್ತದ ಮೂಲಕ ಪಾಪವನ್ನು ಕ್ಷಮಿಸುತ್ತಾನೆ. ದೇವರು ಮಾಡುವಂಥದ್ದು ಯಾವಾಗಲೂ ಸರಿಯಾಗಿರುತ್ತದೆ ಮತ್ತು ನ್ಯಾಯಬದ್ಧವಾಗಿರುತ್ತದೆ ಎಂಬುದನ್ನು ಇದು ತೋರಿಸುತ್ತದೆ. ದೇವರು ಹಿಂದಿನ ಕಾಲದಲ್ಲಿ ತಾಳ್ಮೆಯಿಂದಿದ್ದು ಜನರನ್ನು ಅವರ ಪಾಪಗಳಿಗಾಗಿ ದಂಡಿಸದೆ ಹೋದಾಗಲೂ ದೇವರು ನೀತಿವಂತನಾಗಿದ್ದನು. 26 ಹೀಗೆ ದೇವರು ತಾನೇ ನೀತಿವಂತನೆಂಬುದನ್ನು ಮತ್ತು ಯೇಸುವಿನಲ್ಲಿ ನಂಬಿಕೆಯಿಡುವ ಯಾವನನ್ನೇ ಆಗಲಿ ನೀತಿವಂತನನ್ನಾಗಿ ಮಾಡುತ್ತೇನೆಂಬದನ್ನು ನಿರೂಪಿಸಿದ್ದಾನೆ.

27 ಹೀಗಿರಲು, ನಮ್ಮ ಬಗ್ಗೆ ಹೊಗಳಿಕೊಳ್ಳಲು ನಮಗೆ ಏನಾದರೂ ಕಾರಣಗಳಿವೆಯೋ? ಇಲ್ಲ! ಏಕೆ? ಎಲ್ಲಾ ಹೊಗಳಿಕೆಯನ್ನು ನಿಲ್ಲಿಸುವಂಥದ್ದು ನಂಬಿಕೆಯ ಮಾರ್ಗವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸುವ ಮಾರ್ಗವಲ್ಲ. 28 ಏಕೆಂದರೆ ಒಬ್ಬನು ನೀತಿವಂತನಾಗುವುದು ನಂಬಿಕೆಯ ಮೂಲಕವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಲು ಅವನು ಮಾಡಿದ ಕಾರ್ಯಗಳಿಂದಲ್ಲ. ನಾವು ನಂಬುವುದೂ ಇದನ್ನೇ. 29 ದೇವರು ಕೇವಲ ಯೆಹೂದ್ಯರ ದೇವರಲ್ಲ. ಆತನು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾನೆ. 30 ದೇವರು ಒಬ್ಬನೇ. ಆತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. 31 ಹೀಗಿರಲು, ನಂಬಿಕೆಯ ಮಾರ್ಗವನ್ನು ಅನುಸರಿಸುವುದರ ಮೂಲಕ ನಾವು ಧರ್ಮಶಾಸ್ತ್ರವನ್ನು ಅಲ್ಲಗಳೆಯುತ್ತೇವೋ? ಇಲ್ಲ! ನಾವು ಧರ್ಮಶಾಸ್ತ್ರವನ್ನು ಸಮರ್ಥಿಸುತ್ತೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International