Revised Common Lectionary (Semicontinuous)
ರಚನೆಗಾರ: ಆಸಾಫ.
77 ನಾನು ಸ್ವರವೆತ್ತಿ ದೇವರಿಗೆ ಮೊರೆಯಿಡುವೆನು.
ದೇವರೇ, ಸ್ವರವೆತ್ತಿ ಮೊರೆಯಿಡುವೆನು, ನನಗೆ ಕಿವಿಗೊಡು.
2 ನನ್ನ ಯೆಹೋವನೇ, ಇಕ್ಕಟ್ಟಿನಲ್ಲಿ ನಿನ್ನನ್ನು ಕರೆದೆನು;
ರಾತ್ರಿಯೆಲ್ಲಾ ನಿನಗಾಗಿ ಕೈಚಾಚಿಕೊಂಡಿದ್ದೆನು.
ಆದರೆ ನನ್ನ ಮನಸ್ಸು ಸಮಾಧಾನಗೊಳ್ಳಲಿಲ್ಲ.
3 ನಾನು ದೇವರನ್ನೇ ಧ್ಯಾನಿಸುತ್ತಾ ನನ್ನ ವ್ಯಥೆಯನ್ನು ಹೇಳಿಕೊಳ್ಳಬಯಸಿದೆ.
ಆದರೂ ನನ್ನಿಂದಾಗಲಿಲ್ಲ.
4 ನೀನು ನನಗೆ ನಿದ್ರೆಮಾಡಗೊಡಿಸಲಿಲ್ಲ.
ನಾನು ಬಹು ಗಲಿಬಿಲಿಗೊಂಡಿದ್ದರಿಂದ ನಿನ್ನೊಂದಿಗೆ ಮಾತಾಡಲಾಗಲಿಲ್ಲ.
5 ಹಿಂದಿನಕಾಲದ ಬಗ್ಗೆ ಯೋಚಿಸತೊಡಗಿದೆನು.
ಬಹುಕಾಲದ ಹಿಂದೆ ನಡೆದ ಸಂಗತಿಗಳ ಬಗ್ಗೆ ಯೋಚಿಸತೊಡಗಿದೆನು.
6 ರಾತ್ರಿಯಲ್ಲಿ, ನಾನು ಮಾಡುತ್ತಿದ್ದ ಗಾನವನ್ನು ನೆನಸಿಕೊಳ್ಳುವೆನು;
ಆಂತರ್ಯದಲ್ಲಿ ಮಾತಾಡುತ್ತಾ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವೆನು.
7 ನಾನು ಆಶ್ಚರ್ಯದಿಂದ ಹೀಗೆಂದುಕೊಳ್ಳುವೆನು:
“ನಮ್ಮ ಯೆಹೋವನು ನಮ್ಮನ್ನು ಶಾಶ್ವತವಾಗಿ ಕೈಬಿಟ್ಟಿರುವನೇ?
ಆತನು ನಮ್ಮನ್ನು ಮತ್ತೆಂದಾದರೂ ಅಪೇಕ್ಷಿಸುವನೇ?
8 ದೇವರ ಕೃಪಾವಾತ್ಸಲ್ಯವು ಎಂದೆಂದಿಗೂ ನಿಂತುಹೋಯಿತೇ?
ಆತನು ನಮ್ಮೊಂದಿಗೆ ಮತ್ತೆಂದೂ ಮಾತಾಡುವುದಿಲ್ಲವೇ?
9 ದೇವರು ಕರುಣೆಯನ್ನು ಮರೆತುಬಿಟ್ಟಿರುವನೇ?
ಆತನ ಕನಿಕರವು ಬದಲಾವಣೆ ಹೊಂದಿ ಕೋಪವಾಗಿರುವುದೇ?”
10 ಬಳಿಕ ನಾನು ಹೀಗೆ ಆಲೋಚಿಸಿಕೊಂಡೆ: “ಮಹೋನ್ನತವಾದ ದೇವರು ತನ್ನ ಶಕ್ತಿಯನ್ನು ಕಳೆದುಕೊಂಡನೇ?”
ಎಂಬುದೇ ನನ್ನನ್ನು ಕಾಡಿಸುವ ಪ್ರಶ್ನೆ.
11 ಯೆಹೋವನೇ, ನಿನ್ನ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
ಬಹುಕಾಲದ ಹಿಂದೆ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
12 ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು;
ನಿನ್ನ ಕಾರ್ಯಗಳ ಕುರಿತಾಗಿ ಆಲೋಚಿಸುವೆನು.
13 ದೇವರೇ, ನಿನ್ನ ಮಾರ್ಗಗಳು ಪರಿಶುದ್ಧವಾಗಿವೆ.
ದೇವರೇ, ನಿನ್ನಂತೆ ಮಹತ್ವವುಳ್ಳವರು ಬೇರೆ ಯಾರೂ ಇಲ್ಲ.
14 ಅದ್ಭುತಕಾರ್ಯಗಳನ್ನು ಮಾಡಿದ ದೇವರು ನೀನೇ.
ನೀನು ಜನರಿಗೆ ನಿನ್ನ ಮಹಾಶಕ್ತಿಯನ್ನು ತೋರಿಸಿದೆ.
15 ನೀನು ನಿನ್ನ ಶಕ್ತಿಯಿಂದ ನಿನ್ನ ಜನರನ್ನು ರಕ್ಷಿಸಿದೆ.
ಯಾಕೋಬನ ಮತ್ತು ಯೋಸೇಫನ ಸಂತತಿಯವರನ್ನು ನೀನು ರಕ್ಷಿಸಿದೆ.
16 ದೇವರೇ, ನಿನ್ನನ್ನು ಕಂಡು ಜಲರಾಶಿಗಳು ಭಯಗೊಂಡವು.
ಆಳವಾದ ಜಲರಾಶಿಗಳು ಭಯದಿಂದ ನಡುಗಿದವು.
17 ದಟ್ಟವಾದ ಕಪ್ಪುಮೋಡಗಳು ಮಳೆಗರೆದವು.
ಜನರಿಗೆ ಮೇಘಮಂಡಲದಿಂದ ಗುಡುಗು ಕೇಳಿಸಿತು.
ನಿನ್ನ ಮಿಂಚಿನ ಬಾಣಗಳು ಆ ಮೋಡಗಳಲ್ಲಿ ಹಾರಿದವು.
18 ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು.
ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು.
ಭೂಮಿಯು ಅಲ್ಲಾಡಿ ಕಂಪಿಸಿತು.
19 ನೀನು ಸಮುದ್ರದಲ್ಲಿ ಮಾರ್ಗಮಾಡಿದೆ;
ಆಳವಾದ ಜಲರಾಶಿಗಳನ್ನು ದಾಟಿದೆ.
ಆದರೆ ನಿನ್ನ ಹೆಜ್ಜೆಯ ಗುರುತು ಕಾಣಲೇ ಇಲ್ಲ.
20 ಕುರುಬನು ಕುರಿಹಿಂಡನ್ನು ಕರೆದೊಯ್ಯುವಂತೆ
ನಿನ್ನ ಜನರನ್ನು ಕರೆದೊಯ್ಯಲು ಮೋಶೆಯನ್ನೂ ಆರೋನನನ್ನೂ ಉಪಯೋಗಿಸಿದೆ.
ಎಲೀಫಜನ ವಾದ
4 ಆಗ ತೇಮಾನ್ಯನಾದ ಎಲೀಫಜನು ಹೀಗೆ ಉತ್ತರಿಸಿದನು:
2 “ಒಬ್ಬನು ನಿನ್ನೊಂದಿಗೆ ಮಾತಾಡತೊಡಗಿದರೆ ನಿನಗೆ ಬೇಸರವಾಗುವುದೇ?
ಸುಮ್ಮನಿರಲು ನನಗಂತೂ ಸಾಧ್ಯವಿಲ್ಲ.
3 ಯೋಬನೇ, ನೀನು ಅನೇಕರಿಗೆ ಉಪದೇಶಿಸಿರುವೆ.
ನೀನು ಬಲಹೀನನ ಕೈಗಳಿಗೆ ಶಕ್ತಿಯನ್ನು ಕೊಟ್ಟಿರುವೆ;
4 ಎಡವಿಬಿದ್ದವರನ್ನು ನಿನ್ನ ಮಾತುಗಳಿಂದ ಉದ್ಧರಿಸಿರುವೆ;
ಬಲಹೀನವಾದ ಮೊಣಕಾಲುಗಳನ್ನು ಪ್ರೋತ್ಸಾಹದಿಂದ ಬಲಗೊಳಿಸಿರುವೆ.
5 ಈಗಲಾದರೋ ನಿನಗೆ ಕೇಡು ಬಂದಿದೆ;
ಆದ್ದರಿಂದ ನೀನು ನಿರಾಶನಾಗಿರುವೆ.
ಕೇಡು ನಿನಗೆ ಬಡಿದಿರುವುದರಿಂದ
ಭ್ರಮೆಗೊಂಡಿರುವೆ.
6 ನೀನು ದೇವರಲ್ಲಿ ಭಯಭಕ್ತಿಯಿಂದಿರುವುದರಿಂದ
ಆತನಲ್ಲಿ ಭರವಸವಿಡು.
ನೀನು ನೀತಿವಂತನಾಗಿರುವುದರಿಂದ
ಅದೇ ನಿನ್ನ ನಿರೀಕ್ಷೆಯಾಗಿರಲಿ.
7 ಯೋಬನೇ, ಆಲೋಚಿಸು: ಎಂದಾದರೂ ನಿರಪರಾಧಿಯು ನಾಶವಾಗಿರುವನೇ?
ಎಂದಾದರೂ ಯಥಾರ್ಥವಂತರು ನಾಶವಾಗಿರುವರೇ?
8 ನಾನು ನೋಡಿರುವಂತೆ, ಅಧರ್ಮವನ್ನು ಮತ್ತು ಕೇಡನ್ನು ಬಿತ್ತುವವರು
ಅದನ್ನೇ ಕೊಯ್ಯುವರು.
9 ದೇವರ ಉಸಿರು ಅವರನ್ನು ಕೊಲ್ಲುತ್ತದೆ;
ಆತನ ಕೋಪದ ಗಾಳಿಯು ಅವರನ್ನು ನಾಶಮಾಡುತ್ತದೆ.
10 ದುಷ್ಟರು ಸಿಂಹಗಳಂತೆ ಗರ್ಜಿಸುತ್ತಾ ಗುರುಗುಟ್ಟುವರು.
ಆದರೆ ದೇವರು ದುಷ್ಟರನ್ನು ಸುಮ್ಮನಿರಿಸಿ, ಅವರ ಹಲ್ಲುಗಳನ್ನು
ಮುರಿದುಹಾಕುವನು.
11 ದುಷ್ಟರು ಆಹಾರವಿಲ್ಲದ ಸಿಂಹಗಳಂತಿದ್ದು ಸಾಯುವರು;
ಅವರ ಮಕ್ಕಳು ಚದರಿಹೋಗಿ ಅಳಿದುಹೋಗುವರು.
12 “ಒಂದು ಸಂದೇಶವು ನನಗೆ ರಹಸ್ಯವಾಗಿ ತಿಳಿಸಲ್ಪಟ್ಟಿತು;
ನನ್ನ ಕಿವಿಗಳಿಗೆ ಅದು ಗುಸುಗುಸು ಸದ್ದಾಗಿ ಕೇಳಿಬಂತು.
13 ಮನುಷ್ಯರಿಗೆ ಗಾಢನಿದ್ರೆ ಹತ್ತುವ ಸಮಯದಲ್ಲಿ
ರಾತ್ರಿಯ ಕನಸುಗಳಿಂದ ಯೋಚನೆಯಲ್ಲಿರುವಾಗ
14 ನನಗೆ ಎಲುಬುಗಳೆಲ್ಲಾ ನಡುಗುವಷ್ಟು
ಭಯಂಕರವಾದ ಭಯ ಉಂಟಾಯಿತು.
15 ಯಾವುದೋ ಒಂದು ಉಸಿರು ನನ್ನ ಮುಖಕ್ಕೆ ಸುಳಿಯಲು
ಮೈಯೆಲ್ಲಾ ರೋಮಾಂಚನಗೊಂಡಿತು.
16 ಯಾವುದೋ ಒಂದು ಆತ್ಮ
ನನ್ನ ಕಣ್ಣೆದುರಿನಲ್ಲಿ ಬಂದು ನಿಂತುಕೊಂಡಿತು;
ಅದು ಏನೆಂಬುದು ನನಗೆ ಗೊತ್ತಾಗಲಿಲ್ಲ.
ಸೂಕ್ಷ್ಮ ಧ್ವನಿಯೊಂದು ನನಗೆ ಕೇಳಿಬಂತು.
17 ಅದೇನೆಂದರೆ: ‘ದೇವರಿಗಿಂತಲೂ ನೀತಿವಂತನಾದ ಮನುಷ್ಯನಿರುವನೇ?
ಮನುಷ್ಯನು ತನ್ನ ಸೃಷ್ಟಿಕರ್ತನಿಗಿಂತಲೂ ಶುದ್ಧನಾಗಿರುವನೇ?
18 ದೇವರು ತನ್ನ ಪರಲೋಕದ ಸೇವಕರುಗಳಲ್ಲಿಯೂ ಭರವಸವಿಡುವುದಿಲ್ಲ.
ದೇವರು ತನ್ನ ದೂತರುಗಳಲ್ಲಿಯೂ ತಪ್ಪನ್ನು ಕಂಡುಹಿಡಿಯುವನು.
19 ಹೀಗಿರಲು ದೇವರು ಮನುಷ್ಯರಲ್ಲಿ ಎಷ್ಟೋ ತಪ್ಪುಗಳನ್ನು ಕಂಡುಹಿಡಿಯುವನು;
ಮನುಷ್ಯರು ಮಣ್ಣಿನ ಮನೆಗಳಲ್ಲಿ[a] ವಾಸಿಸುತ್ತಾರೆ.
ಈ ಮಣ್ಣಿನ ಮನೆಗಳ ಅಸ್ತಿವಾರಗಳು ಧೂಳಿನಲ್ಲಿವೆ.
ಅವರು ಹುಳಕ್ಕಿಂತಲೂ ಸುಲಭವಾಗಿ ಸಾವಿಗೀಡಾಗುವರು!
20 ಸೂರ್ಯೋದಯ ಮತ್ತು ಸೂರ್ಯಾಸ್ತಮಾನಗಳ ನಡುವೆ ಅವರು ನಜ್ಜುಗುಜ್ಜಾಗುವರು.
ಅವರು ಸತ್ತು ನಿತ್ಯ ನಾಶವಾಗುವುದನ್ನು ಯಾರೂ ಗಮನಿಸುವುದಿಲ್ಲ.
21 ಅವರ ಗುಡಾರಗಳ ಹಗ್ಗಗಳು ಬಿಚ್ಚಲ್ಪಡುವವು,
ಅವರು ಜ್ಞಾನವಿಲ್ಲದವರಾಗಿ ಸತ್ತುಹೋಗುವರು.’”
ಮರಣದಿಂದ ಜೀವಕ್ಕೆ
2 ಮೊದಲು ನಿಮ್ಮ ಆತ್ಮಿಕ ಜೀವಿತಗಳು, ನಿಮ್ಮ ಪಾಪಗಳ ಮತ್ತು ನೀವು ದೇವರಿಗೆ ವಿರುದ್ಧವಾಗಿ ಮಾಡಿದ ಕೆಟ್ಟಕಾರ್ಯಗಳ ದೆಸೆಯಿಂದ ಸತ್ತುಹೋಗಿದ್ದವು. 2 ಹೌದು, ಮೊದಲು ನೀವು ಆ ಪಾಪಗಳನ್ನೇ ಮಾಡುತ್ತಿದ್ದಿರಿ. ಈ ಲೋಕದ ಮಾರ್ಗಗಳಿಗನುಸಾರವಾಗಿ ನೀವು ಜೀವಿಸಿದಿರಿ. ವಾಯುಮಂಡಲದಲ್ಲಿರುವ ದುಷ್ಟಶಕ್ತಿಗಳ ಅಧಿಪತಿಯನ್ನು ನೀವು ಅನುಸರಿಸಿದಿರಿ. ದೇವರಿಗೆ ಅವಿಧೇಯರಾದ ಜನರಲ್ಲಿ ಈಗ ಕಾರ್ಯಮಾಡುತ್ತಿರುವುದು ಅದೇ ಆತ್ಮ. 3 ಮೊದಲು ನಾವೆಲ್ಲರೂ ಆ ಜನರಂತೆಯೇ ಜೀವಿಸುತ್ತಿದ್ದೆವು. ಶರೀರಭಾವದ ನಮ್ಮ ಇಚ್ಛೆಗಳನ್ನು ಪೂರೈಸಲು ನಾವು ಪ್ರಯತ್ನಿಸುತ್ತಿದ್ದೆವು. ನಮ್ಮ ದೇಹ, ಮನಸ್ಸುಗಳು ಬಯಸಿದ್ದನ್ನೆಲ್ಲಾ ನಾವು ಮಾಡಿದೆವು. ನಾವು ದುಷ್ಟಜನರಾಗಿದ್ದೆವು. ನಮ್ಮ ಆ ಜೀವಿತದ ದೆಸೆಯಿಂದ ನಾವು ಆಗಲೇ ದೇವರ ಕೋಪಕ್ಕೆ ಗುರಿಯಾಗಬೇಕಿತ್ತು. ನಮಗೂ ಇತರ ಜನರಿಗೂ ಯಾವ ವ್ಯತ್ಯಾಸವೂ ಇರಲಿಲ್ಲ.
4 ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು. 5 ನಾವು ದೇವರಿಗೆ ವಿರುದ್ಧವಾಗಿ ಮಾಡಿದ ಕಾರ್ಯಗಳ ದೆಸೆಯಿಂದ ಸತ್ತವರಾಗಿದ್ದೆವು. ಆದರೆ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ನೀವು ದೇವರ ಕೃಪೆಯಿಂದ ರಕ್ಷಣೆ ಹೊಂದಿದವರಾಗಿದ್ದೀರಿ. 6 ದೇವರು ನಮ್ಮನ್ನು ಕ್ರಿಸ್ತನೊಂದಿಗೆ ಎಬ್ಬಿಸಿ ಆತನೊಂದಿಗೆ ಪರಲೋಕದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ್ದಾನೆ. ಕ್ರಿಸ್ತ ಯೇಸುವಿನಲ್ಲಿರುವ ನಮಗಾಗಿ ದೇವರು ಇದನ್ನು ಮಾಡಿದನು. 7 ದೇವರು ತನ್ನ ಮಹಾತಿಶಯವಾದ ಕೃಪೆಯನ್ನು ಮುಂದಿನ ಕಾಲದಲ್ಲೆಲ್ಲಾ ತೋರಿಸಬೇಕೆಂದು ಹೀಗೆ ಮಾಡಿದ್ದಾನೆ. ದೇವರು ಈ ಕೃಪೆಯನ್ನು ತನ್ನ ಕರುಣೆಯ ಮೂಲಕ ನಮಗೆ ಕ್ರಿಸ್ತ ಯೇಸುವಿನಲ್ಲಿ ತೋರಿಸುತ್ತಾನೆ.
8 ಆದ್ದರಿಂದ ನೀವು ನಂಬಿಕೆಯ ಮೂಲಕ ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಅದು ದೇವರ ವರ. 9 ನಿಮಗೆ ರಕ್ಷಣೆ ದೊರೆತದ್ದು ನಿಮ್ಮ ಒಳ್ಳೆಯ ಕಾರ್ಯಗಳಿಂದಲ್ಲ. ಆದ್ದರಿಂದ ತನ್ನನ್ನು ತಾನೇ ರಕ್ಷಿಸಿಕೊಂಡಿರುವುದಾಗಿ ಯಾರೂ ಹೊಗಳಿಕೊಳ್ಳಲು ಸಾಧ್ಯವಿಲ್ಲ. 10 ನಾವು ದೇವರ ನಿರ್ಮಾಣ. ನಾವು ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ದೇವರು ನಮ್ಮನ್ನು ಕ್ರಿಸ್ತಯೇಸುವಿನಲ್ಲಿ ಹೊಸ ಜನರನ್ನಾಗಿ ಮಾಡಿದನು. ದೇವರು ನಮಗೋಸ್ಕರವಾಗಿ ಆ ಒಳ್ಳೆಯ ಕಾರ್ಯಗಳನ್ನು ಮೊದಲೇ ಯೋಜನೆ ಮಾಡಿದನು. ನಾವು ಆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಜೀವಿಸಬೇಕೆಂಬುದು ದೇವರ ಯೋಜನೆಯಾಗಿತ್ತು.
Kannada Holy Bible: Easy-to-Read Version. All rights reserved. © 1997 Bible League International