Revised Common Lectionary (Semicontinuous)
8-9 ಆಮೇಲೆ ದೇವರು ನೋಹನಿಗೂ ಅವನ ಮಕ್ಕಳಿಗೂ, “ನಾನು ನಿಮಗೆ ಮತ್ತು ಮುಂದೆ ಜೀವಿಸುವ ನಿಮ್ಮ ಜನರಿಗೆ ವಾಗ್ದಾನ ಮಾಡುತ್ತೇನೆ. 10 ನಾವೆಯೊಳಗಿಂದ ಬಂದ ಎಲ್ಲಾ ಪಕ್ಷಿಗಳಿಗೆ, ಎಲ್ಲಾ ಪಶುಗಳಿಗೆ ಮತ್ತು ಪ್ರಾಣಿಗಳಿಗೆ ನಾನು ವಾಗ್ದಾನ ಮಾಡುತ್ತೇನೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೆ ವಾಗ್ದಾನ ಮಾಡುತ್ತೇನೆ. 11 ನಾನು ನಿಮಗೆ ಮಾಡುವ ವಾಗ್ದಾನವೇನೆಂದರೆ: ಭೂಮಿಯ ಮೇಲಿದ್ದ ಎಲ್ಲಾ ಜೀವಿಗಳು ಜಲಪ್ರಳಯದಿಂದ ನಾಶವಾದವು. ಆದರೆ ಮತ್ತೆಂದಿಗೂ ಈ ರೀತಿ ಆಗುವುದಿಲ್ಲ. ಜಲಪ್ರಳಯವು ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ಇನ್ನೆಂದಿಗೂ ನಾಶಗೊಳಿಸುವುದಿಲ್ಲ” ಎಂದು ಹೇಳಿದನು.
12 ಇದಲ್ಲದೆ ದೇವರು, “ನನ್ನ ವಾಗ್ದಾನಕ್ಕೆ ಸಾಕ್ಷಿಯಾಗಿ ನಾನು ನಿಮಗೊಂದು ಗುರುತನ್ನು ಕೊಡುವೆನು. ನಾನು ನಿಮ್ಮೊಡನೆ ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೊಡನೆ ಒಡಂಬಡಿಕೆ ಮಾಡಿಕೊಂಡಿರುವುದನ್ನು ಈ ಗುರುತು ತೋರಿಸುತ್ತದೆ. ಈ ಗುರುತು ಯಾವಾಗಲೂ ಇರುವುದು. 13 ನಾನು ಮೋಡಗಳಲ್ಲಿ ಇಟ್ಟಿರುವ ಮುಗಿಲುಬಿಲ್ಲು ನನಗೂ ಭೂಮಿಗೂ ಆಗಿರುವ ಒಡಂಬಡಿಕೆಗೆ ಗುರುತಾಗಿರುವುದು. 14 ನಾನು ಮೋಡಗಳನ್ನು ಭೂಮಿಯ ಮೇಲೆ ಕವಿಸುವಾಗ, ಮೋಡದಲ್ಲಿ ಮುಗಿಲುಬಿಲ್ಲನ್ನು ಕಾಣುವಿರಿ. 15 ನಾನು ಈ ಮುಗಿಲುಬಿಲ್ಲನ್ನು ನೋಡುವಾಗ, ನನಗೂ ನಿಮಗೂ ಮತ್ತು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಆಗಿರುವ ಒಡಂಬಡಿಕೆಯನ್ನು ನೆನಪುಮಾಡಿಕೊಳ್ಳುವೆನು. ಜಲಪ್ರಳಯವು ಇನ್ನೆಂದಿಗೂ ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ನಾಶಗೊಳಿಸುವುದಿಲ್ಲ ಎಂಬುದೇ ಈ ಒಡಂಬಡಿಕೆ. 16 ನಾನು ಮೋಡಗಳಲ್ಲಿರುವ ಮುಗಿಲುಬಿಲ್ಲನ್ನು ನೋಡುವಾಗ, ಶಾಶ್ವತವಾದ ಈ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುವೆನು. ನನಗೂ ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗಳಿಗೂ ಆದ ಒಡಂಬಡಿಕೆಯನ್ನು ನೆನಸಿಕೊಳ್ಳುವೆನು” ಎಂದು ಹೇಳಿದನು.
17 ಆದ್ದರಿಂದ ದೇವರು ನೋಹನಿಗೆ, “ಭೂಮಿಯ ಮೇಲಿರುವ ಎಲ್ಲಾ ಜೀವಿಗಳೊಡನೆ ನಾನು ಮಾಡಿಕೊಂಡ ಒಡಂಬಡಿಕೆಗೆ ಈ ಮುಗಿಲುಬಿಲ್ಲು ಗುರುತಾಗಿರುವುದು” ಎಂದು ಹೇಳಿದನು.
ರಚನೆಗಾರ: ದಾವೀದ.
25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
2 ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
3 ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
ದ್ರೋಹಿಗಳಾದರೋ ನಿರಾಶರಾಗುವರು.
ಅವರಿಗೆ ಏನೂ ದೊರೆಯುವುದಿಲ್ಲ.
4 ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
5 ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
6 ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
7 ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.
8 ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
9 ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.
10 ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ
ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.
18 ನಿಮ್ಮ ಪಾಪಗಳಿಗಾಗಿ ಕ್ರಿಸ್ತನು ಒಂದೇಸಾರಿ
ಬಾಧೆ ಅನುಭವಿಸಿ ಸತ್ತನು.
ನೀತಿವಂತನಾಗಿದ್ದ ಆತನು
ಅಪರಾಧಿಗಳಿಗಾಗಿ ಪ್ರಾಣಕೊಟ್ಟನು.
ನಿಮ್ಮೆಲ್ಲರನ್ನು ದೇವರ ಬಳಿಗೆ ನಡೆಸುವುದಕ್ಕಾಗಿ ಆತನು ಹೀಗೆ ಮಾಡಿದನು.
ಆತನ ದೇಹವು ಕೊಲ್ಲಲ್ಪಟ್ಟಿತು,
ಆದರೆ ಆತನು ಆತ್ಮಸಂಬಂಧದಲ್ಲಿ ಮತ್ತೆ ಜೀವಂತನಾದನು.
19 ಬಳಿಕ ಆತನು ಆತ್ಮರೂಪದಲ್ಲಿ ಹೋಗಿ ಸೆರೆಮನೆಯಲ್ಲಿದ್ದ ಆತ್ಮಗಳಿಗೆ ಸುವಾರ್ತೆ ಸಾರಿದನು. 20 ಬಹಳ ಹಿಂದೆ ನೋಹನ ಕಾಲದಲ್ಲಿ ದೇವರಿಗೆ ಅವಿಧೇಯರಾಗಿದ್ದವರೇ ಅವರು. ನೋಹನು ನಾವೆಯನ್ನು ಕಟ್ಟುತ್ತಿದ್ದಾಗ ದೇವರು ತಾಳ್ಮೆಯಿಂದ ಕಾಯುತ್ತಿದ್ದನು. ಕೆಲವರು ಅಂದರೆ ಎಂಟು ಮಂದಿ ಮಾತ್ರ, ಆ ನಾವೆಯಲ್ಲಿ ನೀರಿನ ಮೂಲಕ ರಕ್ಷಿಸಲ್ಪಟ್ಟರು. 21 ಆ ನೀರು ಈಗ ನಿಮ್ಮನ್ನು ರಕ್ಷಿಸುತ್ತಿರುವ ದೀಕ್ಷಾಸ್ನಾನದಂತಿದೆ. ದೀಕ್ಷಾಸ್ನಾನವು ಮೈಕೊಳೆಯನ್ನು ತೊಳೆಯುವಂಥದ್ದಲ್ಲ. ಅದು ಪರಿಶುದ್ಧ ಹೃದಯ ಬೇಕೆಂದು ವಿಜ್ಞಾಪಿಸಿಕೊಳ್ಳುವಂಥದಾಗಿದೆ. ಯೇಸು ಕ್ರಿಸ್ತನು ಸಾವಿನಿಂದ ಎದ್ದುಬಂದದ್ದರಿಂದ ಅದು ನಿಮ್ಮನ್ನು ರಕ್ಷಿಸುತ್ತದೆ. 22 ಈಗ ಯೇಸು ಪರಲೋಕಕ್ಕೆ ಹೋಗಿರುವನು. ಆತನು ದೇವರ ಬಲಗಡೆಯಲ್ಲಿದ್ದಾನೆ. ಆತನು ದೇವದೂತರನ್ನೂ ಅಧಿಕಾರಿಗಳನ್ನೂ ಶಕ್ತಿಗಳನ್ನೂ ಆಳುತ್ತಿದ್ದಾನೆ.
ಯೇಸುವಿಗೆ ದೀಕ್ಷಾಸ್ನಾನ
(ಮತ್ತಾಯ 3:13-17; ಲೂಕ 3:21-22)
9 ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿನಿಂದ ಯೋಹಾನನಿದ್ದ ಸ್ಥಳಕ್ಕೆ ಬಂದನು. ಯೋಹಾನನು ಯೇಸುವಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು. 10 ಯೇಸು ನೀರಿನಿಂದ ಮೇಲಕ್ಕೆ ಬರುತ್ತಿದ್ದಾಗ, ಆಕಾಶವು ತೆರೆಯಂತೆ ಹರಿದುಹೋಯಿತು; ಮತ್ತು ಪವಿತ್ರಾತ್ಮನು ತನ್ನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದುಬರುತ್ತಿರುವುದನ್ನು ಕಂಡನು. 11 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ನೀನೇ ನನ್ನ ಪ್ರಿಯ ಮಗನು. ನಾನು ನಿನ್ನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.
ಯೇಸುವಿಗಾದ ಪರಿಶೋಧನೆ
(ಮತ್ತಾಯ 4:1-11; ಲೂಕ 4:1-13)
12 ಆಗ ದೇವರಾತ್ಮನು ಯೇಸುವನ್ನು ಅಡವಿಗೆ ನಡೆಸಿದನು. 13 ಯೇಸು ಅಲ್ಲಿ ನಲವತ್ತು ದಿನಗಳ ಕಾಲ ಕಾಡುಮೃಗಗಳೊಂದಿಗಿದ್ದು ಸೈತಾನನಿಂದ ಪರಿಶೋಧಿಸಲ್ಪಟ್ಟನು. ಬಳಿಕ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು.
ಗಲಿಲಾಯದಲ್ಲಿ ಯೇಸುವಿನ ಸೇವೆಯ ಆರಂಭ
(ಮತ್ತಾಯ 4:12-17; ಲೂಕ 4:14-15)
14 ಯೋಹಾನನನ್ನು ಸೆರೆಮನೆಗೆ ಹಾಕಿದ ಮೇಲೆ, ಯೇಸು ಗಲಿಲಾಯಕ್ಕೆ ಹೋಗಿ ಜನರಿಗೆ, 15 “ಕಾಲ ಪರಿಪೂರ್ಣವಾಯಿತು. ದೇವರ ರಾಜ್ಯ ಸಮೀಪಿಸಿತು. ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ” ಎಂಬ ದೇವರ ಸುವಾರ್ತೆಯನ್ನು ಉಪದೇಶಿಸಿದನು.
Kannada Holy Bible: Easy-to-Read Version. All rights reserved. © 1997 Bible League International