Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 25:1-10

ರಚನೆಗಾರ: ದಾವೀದ.

25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
    ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
    ದ್ರೋಹಿಗಳಾದರೋ ನಿರಾಶರಾಗುವರು.
    ಅವರಿಗೆ ಏನೂ ದೊರೆಯುವುದಿಲ್ಲ.

ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
    ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
    ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
    ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
    ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.

ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
    ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
    ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.
10 ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ
    ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.

ದಾನಿಯೇಲ 9:15-25

15 “ನಮ್ಮ ದೇವರಾದ ಯೆಹೋವನೇ, ನೀನು ನಿನ್ನ ಶಕ್ತಿಯಿಂದ ನಮ್ಮನ್ನು ಈಜಿಪ್ಟಿನಿಂದ ಹೊರಗೆ ತೆಗೆದುಕೊಂಡು ಬಂದೆ. ನಾವು ನಿನ್ನ ಜನರಾಗಿದ್ದೇವೆ. ನೀನು ಕರುಣೆ ತೋರುವುದರಲ್ಲಿ ಇಂದಿಗೂ ಸುಪ್ರಸಿದ್ಧನಾಗಿರುವೆ. ಯೆಹೋವನೇ, ನಾವು ಪಾಪ ಮಾಡಿದ್ದೇವೆ. ನಾವು ಬಹಳ ಹೀನಕೃತ್ಯಗಳನ್ನು ಮಾಡಿದ್ದೇವೆ. 16 ಯೆಹೋವನೇ, ನಾವು ಮತ್ತು ನಮ್ಮ ಪೂರ್ವಿಕರು ನಿನಗೆ ಪಾಪಮಾಡಿದ್ದರಿಂದ ಇದೆಲ್ಲಾ ಆಗುತ್ತಿದೆ. ಜೆರುಸಲೇಮಿನ ಮೇಲೆ ಕೋಪ ಮಾಡುವದನ್ನು ದಯವಿಟ್ಟು ನಿಲ್ಲಿಸು. ಜೆರುಸಲೇಮ್ ನಗರವು ನಿನ್ನ ಪವಿತ್ರವಾದ ಬೆಟ್ಟದ ಮೇಲೆ ಇದೆ. ನೀನು ಸರಿಯಾದದ್ದನ್ನು ಮಾಡುವೆ. ಆದ್ದರಿಂದ ಜೆರುಸಲೇಮಿನ ಮೇಲೆ ಕೋಪಗೊಳ್ಳುವದನ್ನು ದಯವಿಟ್ಟು ನಿಲ್ಲಿಸಿಬಿಡು. ನಮ್ಮ ಸುತ್ತಮುತ್ತಲಿನ ಜನರೆಲ್ಲ ನಮ್ಮನ್ನು ನಿಂದಿಸುವರು ಮತ್ತು ನಮ್ಮ ಜನರನ್ನು ಗೇಲಿ ಮಾಡುವರು.

17 “ಯೆಹೋವನೇ, ನಿನ್ನ ಸೇವಕನಾದ ನನ್ನ ಪ್ರಾರ್ಥನೆಯನ್ನು ಕೇಳು. ಸಹಾಯಕೋರಿ ಮಾಡುವ ನನ್ನ ಪ್ರಾರ್ಥನೆಯನ್ನು ಲಾಲಿಸು. ನಿನ್ನ ಪವಿತ್ರ ಸ್ಥಳಕ್ಕಾಗಿ ಒಳ್ಳೆಯದನ್ನು ಮಾಡು. ಆ ಕಟ್ಟಡವನ್ನು ನಾಶಮಾಡಲಾಗಿದೆ. ಯೆಹೋವನೇ, ಈ ಒಳ್ಳೆಯ ಕಾರ್ಯಗಳನ್ನು ನಿನ್ನ ಹಿತಕ್ಕಾಗಿ ಮಾಡು. 18 ನನ್ನ ದೇವರೆ, ನನ್ನ ಪ್ರಾರ್ಥನೆಯನ್ನು ಕೇಳು. ನಿನ್ನ ಕಣ್ಣುಗಳನ್ನು ತೆರೆದು ನಮಗಾದ ಎಲ್ಲ ಕೇಡನ್ನು ನೋಡು. ನಿನ್ನ ಹೆಸರುಳ್ಳ ಪಟ್ಟಣದ ಗತಿ ಏನಾಗಿದೆ ನೋಡು. ನಾವು ಒಳ್ಳೆಯ ಜನರೆಂದು ನಾನು ಹೇಳುತ್ತಿಲ್ಲ. ನಾವು ಒಳ್ಳೆಯ ಜನರೆಂದು ಇದೆಲ್ಲವನ್ನು ಕೇಳುತ್ತಿಲ್ಲ. ನೀನು ಕರುಣಾಮಯನಾಗಿರುವುದರಿಂದಲೇ ಇದನ್ನೆಲ್ಲ ಕೇಳುತ್ತಿದ್ದೇನೆ. 19 ಯೆಹೋವನೇ, ನನ್ನ ಮೊರೆಯನ್ನು ಕೇಳು. ಯೆಹೋವನೇ, ನಮ್ಮನ್ನು ಕ್ಷಮಿಸು. ಯೆಹೋವನೇ, ನಮ್ಮ ಕಡೆಗೆ ಗಮನ ನೀಡಿ ಸಹಾಯಮಾಡು. ತಡಮಾಡಬೇಡ. ಈಗಲೇ ಸಹಾಯಮಾಡು. ನಿನ್ನ ಮಹಿಮೆಗಾಗಿಯೇ ಸಹಾಯಮಾಡು. ನನ್ನ ದೇವರೇ, ನಿನ್ನ ಹೆಸರಿನಿಂದ ಕರೆಯಲ್ಪಡುವ ನಿನ್ನ ನಗರಕ್ಕಾಗಿಯೂ ನಿನ್ನ ಜನರಿಗಾಗಿಯೂ ಈಗಲೇ ಸಹಾಯಮಾಡು” ಎಂದು ಪ್ರಾರ್ಥಿಸಿದೆನು.

ಎಪ್ಪತ್ತು ವಾರಗಳ ಬಗ್ಗೆ ದರ್ಶನ

20 ನಾನು ಪ್ರಾರ್ಥನೆಯಲ್ಲಿ ನನ್ನ ಪಾಪಗಳ ಬಗ್ಗೆ ಮತ್ತು ಇಸ್ರೇಲರ ಪಾಪಗಳ ಬಗ್ಗೆ ಹೇಳಿಕೊಂಡೆ. ನಾನು ನನ್ನ ದೇವರಾದ ಯೆಹೋವನ ಪವಿತ್ರ ಪರ್ವತಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದೆ. 21 ನಾನು ಪ್ರಾರ್ಥಿಸುತ್ತಿದ್ದಾಗ ಗಬ್ರಿಯೇಲನೆಂಬ ಪುರುಷನು ನನ್ನಲ್ಲಿಗೆ ಬಂದನು. ಗಬ್ರಿಯೇಲನನ್ನೇ ನಾನು ದರ್ಶನದಲ್ಲಿ ಕಂಡಿದ್ದೆನು. ಗಬ್ರಿಯೇಲನು ವೇಗವಾಗಿ ಹಾರುತ್ತಾ ಸಾಯಂಕಾಲದ ನೈವೇದ್ಯದ ಸಮಯದಲ್ಲಿ ನನ್ನ ಬಳಿಗೆ ಬಂದನು. 22 ನಾನು ತಿಳಿದುಕೊಳ್ಳಬಯಸಿದ ವಿಷಯಗಳನ್ನು ತಿಳಿದುಕೊಳ್ಳಲು ಗಬ್ರಿಯೇಲನು ನನಗೆ ಸಹಾಯ ಮಾಡಿದನು. ಗಬ್ರಿಯೇಲನು, “ದಾನಿಯೇಲನೇ, ನಾನು ನಿನಗೆ ಜ್ಞಾನವನ್ನು ಕೊಡಲು ಮತ್ತು ಅರ್ಥಮಾಡಿಕೊಳ್ಳಲು ನಿನಗೆ ಸಹಾಯ ಮಾಡಲು ಬಂದಿದ್ದೇನೆ. 23 ನೀನು ಪ್ರಾರ್ಥಿಸಲು ಪ್ರಾರಂಭಿಸಿದಾಗಲೇ ನನಗೆ ದೇವರ ಆಜ್ಞೆಯಾಯಿತು. ನಾನು ಅದನ್ನು ನಿನಗೆ ತಿಳಿಸಲು ಬಂದಿರುವೆನು. ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ನೀನು ದೈವಾಜ್ಞೆಯನ್ನು ಅರಿತುಕೊಳ್ಳುವೆ ಮತ್ತು ದರ್ಶನದ ಅರ್ಥವನ್ನು ತಿಳಿದುಕೊಳ್ಳುವೆ.

24 “ದಾನಿಯೇಲನೇ, ನಿಮ್ಮ ಜನರಿಗೆ ಮತ್ತು ನಿಮ್ಮ ಪವಿತ್ರ ನಗರಕ್ಕೆ ದೇವರು ಎಪ್ಪತ್ತು ವಾರಗಳ ಅವಧಿಯನ್ನು ಗೊತ್ತುಮಾಡಿದ್ದಾನೆ. ಅಧರ್ಮವನ್ನು ಕೊನೆಗಾಣಿಸುವದು, ಪಾಪಗಳನ್ನು ತಡೆಯುವುದು, ಅಪರಾಧಗಳನ್ನು ನಿವಾರಿಸುವುದು, ಜನರನ್ನು ಪರಿಶುದ್ಧಗೊಳಿಸುವುದು, ಎಂದೆಂದಿಗೂ ಉಳಿಯುವ ಧರ್ಮವನ್ನು ಸ್ಥಾಪಿಸುವುದು, ದರ್ಶನಗಳಿಗೆ ಮತ್ತು ಪ್ರವಾದಿಯ ನುಡಿಗಳಿಗೆ ಮುದ್ರೆಹಾಕಿ ಕಾರ್ಯರೂಪಕ್ಕೆ ತರುವುದು, ಪವಿತ್ರ ಸ್ಥಳವನ್ನು ಪ್ರತಿಷ್ಠಿಸುವುದು, ಇವೆಲ್ಲವುಗಳಿಗಾಗಿ ಈ ಎಪ್ಪತ್ತು ವಾರಗಳ ಅವಧಿಯನ್ನು ಗೊತ್ತು ಮಾಡಲಾಗಿದೆ.

25 “ದಾನಿಯೇಲನೇ, ಇದನ್ನು ತಿಳಿದುಕೊ. ಇದನ್ನು ಚೆನ್ನಾಗಿ ಅರ್ಥಮಾಡಿಕೊ. ‘ಹೋಗಿ ಜೆರುಸಲೇಮನ್ನು ಸರಿಪಡಿಸಿರಿ’ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ರಾಜನು ಬರುವದರೊಳಗೆ ಏಳು ವಾರಗಳು ಕಳೆಯಬೇಕು. ಆಗ ಜೆರುಸಲೇಮು ಮತ್ತೆ ನಿರ್ಮಾಣವಾಗುವುದು. ಜನರು ಒಂದಾಗಿ ಸೇರುವದಕ್ಕೆ ಜೆರುಸಲೇಮಿನಲ್ಲಿ ಮತ್ತೆ ಸ್ಥಳಾವಕಾಶವಾಗುವುದು. ನಗರದ ಸುತ್ತಲೂ ಅದನ್ನು ರಕ್ಷಿಸುವುದಕ್ಕಾಗಿ ಒಂದು ಕಂದಕವನ್ನು ಕೊರೆಯಲಾಗುವುದು. ಅರವತ್ತೆರಡು ವಾರಗಳವರೆಗೆ ಜೆರುಸಲೇಮ್ ನಗರವನ್ನು ಕಟ್ಟಲಾಗುವುದು. ಆದರೆ ಆ ಅವಧಿಯಲ್ಲಿ ಹಲವಾರು ಕಷ್ಟನಷ್ಟಗಳು ಸಂಭವಿಸುವವು.

2 ತಿಮೊಥೆಯನಿಗೆ 4:1-5

ಜೀವಂತರಾಗಿರುವ ಜನರಿಗೂ ಸತ್ತುಹೋಗಿರುವ ಜನರಿಗೂ ನ್ಯಾಯತೀರಿಸುವಾತನು ಕ್ರಿಸ್ತ ಯೇಸುವೇ. ಆತನು ತನ್ನ ರಾಜ್ಯವನ್ನು ಹೊಂದಿದ್ದಾನೆ. ಆತನು ಮತ್ತೆ ಬರುವನು. ಆದ್ದರಿಂದ ಯೇಸು ಕ್ರಿಸ್ತನ ಮತ್ತು ದೇವರ ಸನ್ನಿಧಿಯಲ್ಲಿ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಸುವಾರ್ತೆಯನ್ನು ಜನರಿಗೆ ತಿಳಿಸು. ಕಾಲವು ಅನುಕೂಲವಾಗಿದ್ದರೂ ಅನಾನುಕೂಲವಾಗಿದ್ದರೂ ಬೋಧನೆಯನ್ನು ಮುಂದುವರಿಸು. ಜನರು ಮಾಡಬೇಕಾದುದನ್ನು ಅವರಿಗೆ ತಿಳಿಸು. ಅವರು ತಪ್ಪು ಮಾಡಿದಾಗ ಅದನ್ನು ಅವರಿಗೆ ತೋರಿಸಿಕೊಡು. ಅವರನ್ನು ಗದರಿಸು, ಇವುಗಳನ್ನು ಬಹಳ ತಾಳ್ಮೆಯಿಂದಲೂ ಎಚ್ಚರಿಕೆಯಿಂದಲೂ ಮಾಡು.

ಜನರು ಸತ್ಯೋಪದೇಶವನ್ನು ಕೇಳದಿರುವ ಕಾಲವು ಬರಲಿದೆ. ಜನರು ತಮ್ಮನ್ನು ಮೆಚ್ಚಿಸುವಂಥ ಬೋಧಕರನ್ನು ಮತ್ತು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು. ಜನರು ಸತ್ಯವನ್ನು ಕೇಳದೆ ಸುಳ್ಳುಕಥೆಗಳನ್ನು ಕೇಳಲಾರಂಭಿಸುತ್ತಾರೆ. ಆದರೆ ನೀನು ಎಲ್ಲಾ ಕಾಲದಲ್ಲಿಯೂ ಸ್ವಸ್ಥಚಿತ್ತನಾಗಿರು. ತೊಂದರೆಗಳು ಬಂದಾಗ ಸಹಿಸಿಕೊ. ಸುವಾರ್ತೆಯನ್ನು ಪ್ರಚಾರಮಾಡು. ದೇವರ ಸೇವಕನಿಗೆ ಯೋಗ್ಯವಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಿರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International