Revised Common Lectionary (Semicontinuous)
ರಚನೆಗಾರ: ದಾವೀದ.
25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
2 ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
3 ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
ದ್ರೋಹಿಗಳಾದರೋ ನಿರಾಶರಾಗುವರು.
ಅವರಿಗೆ ಏನೂ ದೊರೆಯುವುದಿಲ್ಲ.
4 ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
5 ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
6 ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
7 ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.
8 ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
9 ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.
10 ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ
ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.
ದಾನಿಯೇಲನ ಪ್ರಾರ್ಥನೆ
9 ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಂದು ನಡೆದ ಸಂಗತಿಗಳಿವು: ದಾರ್ಯಾವೆಷನು ಅಹಷ್ವೇರೋಷನೆಂಬವನ ಮಗನು. ದಾರ್ಯವೆಷನು ಮೇದ್ಯಯ ವಂಶದವನು. ಅವನು ಕಸ್ದೀಯ ರಾಜ್ಯದ ದೊರೆಯಾದನು. 2 ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷ ದಾನಿಯೇಲನೆಂಬ ನಾನು ಕೆಲವು ಧರ್ಮಗ್ರಂಥಗಳನ್ನು ಓದುತ್ತಿದ್ದೆ. ಎಪ್ಪತ್ತು ವರ್ಷಗಳ ತರುವಾಯ ಜೆರುಸಲೇಮಿನ ಪುನರ್ನಿರ್ಮಾಣವಾಗುವದೆಂದು ಯೆಹೋವನು ಯೆರೆಮೀಯನಿಗೆ ಹೇಳಿದ್ದು ನನಗೆ ಈ ಧರ್ಮಗ್ರಂಥಗಳಿಂದ ತಿಳಿಯಿತು.
3 ಆಗ ನಾನು ದೇವರಾದ ನನ್ನ ಯೆಹೋವನನ್ನು ಪ್ರಾರ್ಥಿಸಿದೆ ಮತ್ತು ಆತನ ಸಹಾಯವನ್ನು ಕೋರಿದೆ. ನಾನು ಯಾವ ಆಹಾರವನ್ನೂ ಸ್ವೀಕರಿಸಲಿಲ್ಲ ಮತ್ತು ದುಃಖಸೂಚಕವಾದ ವಸ್ತ್ರಗಳನ್ನು ಧರಿಸಿಕೊಂಡೆ. ನನ್ನ ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡೆ. 4 ನಾನು ಯೆಹೋವನಾದ ನನ್ನ ದೇವರನ್ನು ಪ್ರಾರ್ಥಿಸಿದೆ. ನಾನು ನನ್ನ ಎಲ್ಲ ಪಾಪಗಳ ಬಗ್ಗೆ ಆತನಿಗೆ ಹೇಳಿದೆ. ನಾನು,
“ಯೆಹೋವನೇ, ನೀನು ಭಯಂಕರನಾಗಿರುವೆ. ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ, ಮಾಡಿದ ಪ್ರೀತಿಯ ಮತ್ತು ಕರುಣೆಯ ವಾಗ್ದಾನಗಳನ್ನು ನೀನು ನೆರವೇರಿಸುವೆ.
5 “ಆದರೆ ಯೆಹೋವನೇ, ನಾವು ಪಾಪ ಮಾಡಿದ್ದೇವೆ. ನಾವು ತಪ್ಪುಗಳನ್ನು ಮಾಡಿದ್ದೇವೆ. ನಾವು ನಿನಗೆ ವಿರೋಧವಾಗಿ ದಂಗೆ ಎದ್ದಿದ್ದೇವೆ. ನಾವು ನಿನ್ನ ಆಜ್ಞೆಗಳನ್ನು ಮತ್ತು ಸರಿಯಾದ ನಿರ್ಣಯಗಳನ್ನು ತೊರೆದಿದ್ದೇವೆ. 6 ಪ್ರವಾದಿಗಳು ಹೇಳಿದ್ದನ್ನು ನಾವು ಕೇಳಲಿಲ್ಲ. ಅವರು ನಿನ್ನ ಸೇವಕರಾಗಿದ್ದರು. ಆ ಪ್ರವಾದಿಗಳು ನಿನ್ನ ಪರವಾಗಿ ಹೇಳಿದರು. ಅವರು ನಮ್ಮ ರಾಜರುಗಳಿಗೆ, ನಮ್ಮ ನಾಯಕರುಗಳಿಗೆ ಮತ್ತು ನಮ್ಮ ಹಿರಿಯರಿಗೆ ಹೇಳಿದರು. ಅವರು ಇಸ್ರೇಲಿನ ಎಲ್ಲ ಜನರಿಗೆ ಹೇಳಿದರು. ಆದರೆ ನಾವು ಆ ಪ್ರವಾದಿಗಳ ಮಾತಿಗೆ ಕಿವಿಗೊಡಲಿಲ್ಲ.
7 “ಯೆಹೋವನೇ, ನೀನು ಒಳ್ಳೆಯವನು, ಒಳ್ಳೆಯತನ ನಿನ್ನ ಪಾಲಾಗಿದೆ. ಆದರೆ ಈಗ ನಮ್ಮದು ನಾಚಿಕೆಪಡುವ ಸ್ಥಿತಿಯಾಗಿದೆ. ಯೆಹೂದ ಮತ್ತು ಜೆರುಸಲೇಮಿನ ಜನರು ನಾಚಿಕೆಪಡುವಂತಾಗಿದೆ. ಹತ್ತಿರದಲ್ಲಿದ್ದವರು ಹಾಗೂ ದೂರದಲ್ಲಿದ್ದವರು, ಒಟ್ಟಿನಲ್ಲಿ ಇಸ್ರೇಲಿನ ಎಲ್ಲ ಜನರು ನಾಚಿಕೆಪಡುವಂತಾಗಿದೆ. ಯೆಹೋವನೇ, ನೀನು ಆ ಜನರನ್ನು ಎಲ್ಲಾ ದೇಶಗಳಲ್ಲಿ ಚದರಿಸಿಬಿಟ್ಟಿರುವೆ. ಆ ಎಲ್ಲಾ ದೇಶಗಳಲ್ಲಿರುವ ಇಸ್ರೇಲರು ನಾಚಿಕೆಪಡಬೇಕಾಗಿದೆ. ಯೆಹೋವನೇ, ನಿನ್ನ ವಿರುದ್ಧ ಮಾಡಿದ ಎಲ್ಲಾ ಹೀನಕೃತ್ಯಗಳಿಗಾಗಿ ಅವರು ನಾಚಿಕೆಪಡಬೇಕಾಗಿದೆ.
8 “ಯೆಹೋವನೇ, ನಾವೆಲ್ಲರೂ ನಾಚಿಕೆಪಡಬೇಕು. ನಮ್ಮ ಎಲ್ಲ ರಾಜರು, ನಾಯಕರು ನಾಚಿಕೆಪಟ್ಟುಕೊಳ್ಳಬೇಕು. ನಮ್ಮ ಹಿರಿಯರು ನಾಚಿಕೆಪಡಬೇಕು. ಏಕೆಂದರೆ ನಾವು ನಿನ್ನ ವಿಷಯದಲ್ಲಿ ಪಾಪ ಮಾಡಿದ್ದೇವೆ.
9 “ಆದರೆ ನಮ್ಮ ದೇವರಾದ ಯೆಹೋವನೇ, ನೀನು ಕರುಣಾಳು, ದುಷ್ಕೃತ್ಯಗಳನ್ನು ಮಾಡಿದ ಜನರನ್ನು ನೀನು ಕ್ಷಮಿಸುವೆ. ನಾವು ನಿಜವಾಗಿಯೂ ನಿನಗೆ ತಿರುಗಿಬಿದ್ದೆವು. 10 ನಾವು ನಮ್ಮ ದೇವರಾದ ಯೆಹೋವನ ಆಜ್ಞಾಪಾಲನೆ ಮಾಡಿಲ್ಲ. ಯೆಹೋವನು ತನ್ನ ಸೇವಕರಾದ ಪ್ರವಾದಿಗಳ ಮುಖಾಂತರ ನಮಗೆ ಕಟ್ಟಳೆಗಳನ್ನು ತಿಳಿಸಿದನು. ಆದರೆ ನಾವು ಆ ಕಟ್ಟಳೆಗಳನ್ನು ಪಾಲಿಸಲಿಲ್ಲ. 11 ಇಸ್ರೇಲಿನ ಜನರಲ್ಲಿ ಒಬ್ಬರೂ ಸಹ ನಿನ್ನ ಉಪದೇಶವನ್ನು ಪಾಲಿಸಲಿಲ್ಲ. ಅವರೆಲ್ಲರೂ ಅದರಿಂದ ದೂರಾದರು. ಅವರು ನಿನ್ನ ಆಜ್ಞೆಯನ್ನು ಪಾಲಿಸಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಶಾಪಗಳ ಮತ್ತು ವಾಗ್ದಾನಗಳ ಬಗ್ಗೆ ಹೇಳಲಾಗಿದೆ. (ಮೋಶೆಯು ದೇವರ ಸೇವಕನಾಗಿದ್ದನು) ಆ ಶಾಪಗಳು ಧರ್ಮಶಾಸ್ತ್ರವನ್ನು ಪಾಲಿಸದಿದ್ದವರಿಗೆ ಆಗುವ ಶಿಕ್ಷೆಯಾಗಿದೆ. ಆ ಎಲ್ಲಾ ಶಿಕ್ಷೆಗಳು ನಮಗೆ ಆಗಿವೆ. ನಾವು ಯೆಹೋವನಾದ ನಿನ್ನ ವಿರುದ್ಧ ಪಾಪ ಮಾಡಿದ್ದರಿಂದ ನಮಗೆ ಹೀಗಾಯಿತು.
12 “ನಮಗೂ ನಮ್ಮ ನಾಯಕರುಗಳಿಗೂ ನೀನು ಹೇಳಿದಂತೆಯೇ ಮಾಡಿರುವೆ. ನೀನು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿರುವೆ. ಜೆರುಸಲೇಮ್ ನಗರಕ್ಕೆ ಉಂಟಾದಷ್ಟು ಕೇಡು ಭೂಮಂಡಲದಲ್ಲಿ ಯಾವ ನಗರಕ್ಕೂ ಆಗಿಲ್ಲ. 13 ಆ ಕೇಡುಗಳೆಲ್ಲಾ ನಮಗೆ ಉಂಟಾದವು. ಇದೆಲ್ಲಾ ಮೋಶೆಯ ಧರ್ಮಶಾಸ್ತ್ರದಲ್ಲಿ ಹೇಳಿದಂತೆಯೇ ನಡೆದುಹೋಯಿತು. ಆದರೆ ಈವರೆಗೂ ನಾವು ನಿನ್ನ ಸಹಾಯವನ್ನು ಕೇಳಲಿಲ್ಲ. ಇಂದಿಗೂ ನಾವು ಪಾಪ ಮಾಡುವದನ್ನು ನಿಲ್ಲಿಸಲಿಲ್ಲ. ಯೆಹೋವನೇ, ಇನ್ನೂ ನಾವು ನಿನ್ನ ಸತ್ಯೋಪದೇಶದ ಕಡೆಗೆ ಗಮನ ಕೊಡುತ್ತಿಲ್ಲ. 14 ಯೆಹೋವನಾದ ನೀನು ನಮಗೆ ಆಪತ್ತುಗಳನ್ನು ಸಿದ್ಧಪಡಿಸಿಟ್ಟಿದ್ದೆ. ಆ ಆಪತ್ತುಗಳು ನಮ್ಮ ಮೇಲೆ ಬರುವಂತೆ ನೀನು ಮಾಡಿದೆ. ಯೆಹೋವನಾದ ನೀನು ಎಲ್ಲವನ್ನು ನಿಷ್ಪಕ್ಷಪಾತವಾಗಿ ಮಾಡುವೆ. ಆದ್ದರಿಂದಲೇ ಇದೆಲ್ಲವನ್ನು ಮಾಡಿದೆ. ಆದರೆ ಇಂದಿಗೂ ನಾವು ನಿನ್ನ ಉಪದೇಶಕ್ಕೆ ಕಿವಿಗೊಟ್ಟಿಲ್ಲ.
3 ನಾವು ನೋಡಿದವುಗಳನ್ನೂ ಕೇಳಿದವುಗಳನ್ನೂ ಈಗ ನಿಮಗೆ ಹೇಳುತ್ತೇವೆ. ಏಕೆಂದರೆ ನೀವು ನಮ್ಮ ಅನ್ಯೋನ್ಯತೆಯಲ್ಲಿ ಪಾಲುಗಾರರಾಗಬೇಕೆಂಬುದು ನಮ್ಮ ಅಪೇಕ್ಷೆ. ನಮ್ಮ ಈ ಅನ್ಯೋನ್ಯತೆಯು ತಂದೆಯಾದ ದೇವರ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಸಂಗಡವಿರುವಂಥದ್ದು. 4 ನಮ್ಮ[a] ಸಂತೋಷವು ಪರಿಪೂರ್ಣವಾಗಲೆಂದು ನಾವು ನಿಮಗೆ ಈ ಸಂಗತಿಗಳನ್ನು ಬರೆಯುತ್ತಿದ್ದೇವೆ.
ದೇವರು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ
5 ನಾವು ದೇವರಿಂದ ಕೇಳಿ ನಿಮಗೆ ತಿಳಿಸುವ ವಾರ್ತೆ ಏನೆಂದರೆ, ದೇವರು ಬೆಳಕಾಗಿದ್ದಾನೆ; ಆತನಲ್ಲಿ ಅಂಧಕಾರವಿಲ್ಲ. 6 ಆದ್ದರಿಂದ ದೇವರ ಜೊತೆಯಲ್ಲಿ ಅನ್ಯೋನ್ಯತೆಯಿಂದ ಇದ್ದೇವೆ ಎಂದು ನಾವು ಹೇಳಿಕೊಂಡು, ಅಂಧಕಾರದಲ್ಲಿ ಜೀವಿಸುತ್ತಿದ್ದರೆ ಸುಳ್ಳು ಹೇಳಿದಂತಾಯಿತು. ಏಕೆಂದರೆ ನಾವು ಸತ್ಯವನ್ನು ಅನುಸರಿಸುತ್ತಿಲ್ಲ. 7 ದೇವರು ಬೆಳಕಿನಲ್ಲಿದ್ದಾನೆ. ಆದ್ದರಿಂದ ನಾವೂ ಬೆಳಕಿನಲ್ಲಿ ಜೀವಿಸಬೇಕಾಗಿದೆ. ನಾವು ಬೆಳಕಿನಲ್ಲಿ ಜೀವಿಸುವವರಾಗಿದ್ದರೆ ಪರಸ್ಪರ ಅನ್ಯೋನ್ಯತೆಯಲ್ಲಿದ್ದೇವೆ ಮತ್ತು ದೇವರ ಮಗನಾದ ಯೇಸುವಿನ ರಕ್ತವು ನಮ್ಮ ಪಾಪಗಳನ್ನೆಲ್ಲಾ ನಿವಾರಣೆ ಮಾಡುತ್ತದೆ.
8 ನಮ್ಮಲ್ಲಿ ಪಾಪವಿಲ್ಲವೆಂದು ಹೇಳಿಕೊಂಡರೆ, ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುವವರಾಗಿದ್ದೇವೆ ಮತ್ತು ನಮ್ಮಲ್ಲಿ ಸತ್ಯವೇ ಇಲ್ಲ. 9 ಆದರೆ ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿ ನಮ್ಮನ್ನು ಶುದ್ಧೀಕರಿಸುತ್ತಾನೆ. 10 ನಾವು ಪಾಪಮಾಡಿಲ್ಲವೆಂದು ಹೇಳಿದರೆ ದೇವರನ್ನೇ ಸುಳ್ಳುಗಾರನನ್ನಾಗಿ ಮಾಡುವವರಾಗಿದ್ದೇವೆ ಮತ್ತು ದೇವರ ವಾಕ್ಯವನ್ನು ಒಪ್ಪಿಕೊಳ್ಳದವರಾಗಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International