Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ದಾವೀದ.
110 ಯೆಹೋವನು ನನ್ನ ಒಡೆಯನಿಗೆ,
“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು.
2 ಯೆಹೋವನು ನಿನ್ನ ರಾಜ್ಯವನ್ನು ಅಭಿವೃದ್ಧಿಪಡಿಸುವನು.
ನಿನ್ನ ರಾಜ್ಯವು ಚೀಯೋನಿನಲ್ಲಿ ಆರಂಭಗೊಂಡು ನಿನ್ನ ಶತ್ರುಗಳ ದೇಶಗಳನ್ನು ಆವರಿಸಿಕೊಳ್ಳುವುದು.
3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ
ಜನರು ತಾವಾಗಿಯೇ ನಿನ್ನ ಸೈನ್ಯವನ್ನು ಸೇರಿಕೊಳ್ಳುವರು.
ಅವರು ಸಮವಸ್ತ್ರಗಳನ್ನು ಧರಿಸಿಕೊಂಡು ಪ್ರತಿ ಮುಂಜಾನೆ ಸೇರಿಬರುವರು.
ಆ ಯುವಕರು ನಿನಗೆ ಉದಯಕಾಲದ ಇಬ್ಬನಿಯಂತಿರುವರು.
4 ಯೆಹೋವನು ನನಗೆ, “ನೀನು ಸದಾಕಾಲ ಮೆಲ್ಕಿಜೆದೇಕನಂತಹ ಯಾಜಕನಾಗಿರುವೆ”
ಎಂದು ವಾಗ್ದಾನ ಮಾಡಿದ್ದಾನೆ.
ಆತನು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ.
7 ಆದ್ದರಿಂದ ಮೋಶೆ ಬೆಟ್ಟದಿಂದಿಳಿದು ಬಂದು ಜನರ ಹಿರಿಯರನ್ನು ಒಟ್ಟಾಗಿ ಕರೆಸಿದನು. ಯೆಹೋವನು ಹೇಳಬೇಕೆಂದು ಆಜ್ಞಾಪಿಸಿದ ಸಂಗತಿಗಳನ್ನೆಲ್ಲಾ ಮೋಶೆಯು ಹಿರಿಯರಿಗೆ ಹೇಳಿದನು. 8 ಜನರೆಲ್ಲರೂ ಒಟ್ಟಾಗಿ ಮಾತಾಡಿದರು. “ಯೆಹೋವನು ಹೇಳುವ ಪ್ರತಿಯೊಂದಕ್ಕೂ ನಾವು ವಿಧೇಯರಾಗುವೆವು” ಎಂದು ಅವರು ಅರಿಕೆಮಾಡಿದರು.
ಬಳಿಕ ಮೋಶೆಯು ತಿರುಗಿ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋಗಿ ಜನರ ಪ್ರತಿಕ್ರಿಯೆಯನ್ನು ದೇವರಿಗೆ ತಿಳಿಸಿದನು. 9 ಯೆಹೋವನು ಮೋಶೆಗೆ, “ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬಂದು ಜನರೆಲ್ಲರಿಗೂ ಕೇಳುವಂತೆ ನಿನ್ನೊಡನೆ ಮಾತಾಡುವೆನು. ನೀನು ಹೇಳುವುದನ್ನು ಜನರು ಯಾವಾಗಲೂ ನಂಬಲು ಇದು ಸಹಾಯಕವಾಗುವುದು” ಎಂದು ಹೇಳಿದನು.
ಆಗ ಮೋಶೆಯು ಜನರು ಹೇಳಿದ್ದನ್ನೆಲ್ಲಾ ದೇವರಿಗೆ ಅರಿಕೆಮಾಡಿದನು.
10 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ಈ ದಿನ ಮತ್ತು ನಾಳೆ ನೀನು ಜನರನ್ನು ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧಪಡಿಸಬೇಕು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು 11 ಮೂರನೆಯ ದಿನದಲ್ಲಿ ನನಗಾಗಿ ಸಿದ್ಧರಾಗಬೇಕು. ಮೂರನೆಯ ದಿನದಲ್ಲಿ ನಾನು ಸೀನಾಯ್ ಬೆಟ್ಟದ ಮೇಲೆ ಇಳಿದುಬರುವೆನು; ಜನರೆಲ್ಲರೂ ನನ್ನನ್ನು ನೋಡುವರು. 12-13 ಆದರೆ ಬೆಟ್ಟದಿಂದ ದೂರವಿರಬೇಕೆಂದು ನೀನು ಜನರಿಗೆ ಹೇಳಬೇಕು. ಒಂದು ಗೆರೆಯನ್ನು ಹಾಕಿ ಆ ಗೆರೆಯನ್ನು ದಾಟಬಾರದೆಂದು ಅವರಿಗೆ ತಿಳಿಸು. ಯಾವ ವ್ಯಕ್ತಿಯಾಗಲಿ ಬೆಟ್ಟವನ್ನು ಮುಟ್ಟಿದರೆ ಅವನನ್ನು ಕಲ್ಲುಗಳಿಂದಾಗಲಿ ಬಾಣಗಳಿಂದಾಗಲಿ ಕೊಲ್ಲಬೇಕು. ಯಾವ ಪ್ರಾಣಿಯಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕೊಲ್ಲಬೇಕು. ಯಾರೂ ಬೆಟ್ಟವನ್ನು ಮುಟ್ಟಕೂಡದು. ಕೊಂಬಿನ ತುತ್ತೂರಿ ಊದಿದಾಗ ಜನರು ಬೆಟ್ಟದ ಸಮೀಪಕ್ಕೆ ಬರಬೇಕು ಎಂದು ಹೇಳು” ಎಂದನು.
14 ಮೋಶೆ ಬೆಟ್ಟದಿಂದಿಳಿದು ಹೋದನು. ಅವನು ಜನರ ಬಳಿಗೆ ಹೋಗಿ ವಿಶೇಷ ಸಂದರ್ಶನಕ್ಕಾಗಿ ಅವರನ್ನು ಸಿದ್ಧ ಮಾಡಿದನು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡರು.
15 ಆಗ ಮೋಶೆ ಜನರಿಗೆ, “ಮೂರನೆಯ ದಿನದಲ್ಲಿ ಯೆಹೋವನೊಡನೆ ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧರಾಗಿರಿ. ಅಲ್ಲಿಯವರೆಗೆ, ಪುರುಷರು ಸ್ತ್ರೀಯರ ಸಂಗ ಮಾಡಬಾರದು” ಎಂದು ಹೇಳಿದನು.
16 ಮೂರನೆಯ ದಿನದ ಮುಂಜಾನೆಯಲ್ಲಿ ಆ ಬೆಟ್ಟದ ಮೇಲೆ ಗುಡುಗು ಮಿಂಚುಗಳು ಉಂಟಾದವು. ಒಂದು ಕಾರ್ಮುಗಿಲು ಬೆಟ್ಟದ ಮೇಲೆ ಇಳಿದುಬಂತು; ತುತ್ತೂರಿಯ ಮಹಾ ಧ್ವನಿಯು ಕೇಳಿಸಿತು. ಪಾಳೆಯದಲ್ಲಿದ್ದ ಜನರೆಲ್ಲರೂ ಭಯಭೀತರಾದರು. 17 ಆಗ ಮೋಶೆ ದೇವರನ್ನು ಸಂಧಿಸುವುದಕ್ಕಾಗಿ ಜನರನ್ನು ಪಾಳೆಯದಿಂದ ಹೊರಗೆ ನಡಿಸಿ, ಬೆಟ್ಟದ ಬಳಿಗೆ ಕರೆದುಕೊಂಡು ಬಂದನು. 18 ಸೀನಾಯಿ ಬೆಟ್ಟವು ಹೊಗೆಯಿಂದ ಕವಿದುಕೊಂಡಿತು. ಕುಲುಮೆಯಿಂದ ಬರುವ ಹೊಗೆಯಂತೆ, ಬೆಟ್ಟದಿಂದ ಹೊಗೆಯು ಮೇಲಕ್ಕೇರಿತು. ಯೆಹೋವನು ಬೆಂಕಿಯಲ್ಲಿ ಬೆಟ್ಟದ ಮೇಲೆ ಇಳಿದು ಬಂದದ್ದರಿಂದ ಇದು ಸಂಭವಿಸಿತು. ಇಡೀ ಬೆಟ್ಟ ನಡುಗಲಾರಂಭಿಸಿತು. 19 ತುತ್ತೂರಿಯ ಧ್ವನಿ ಹೆಚ್ಚುಹೆಚ್ಚಾಯಿತು. ಮೋಶೆಯು ದೇವರೊಂದಿಗೆ ಮಾತಾಡಿದಾಗಲೆಲ್ಲಾ ದೇವರು ಗುಡುಗಿನಂತಿದ್ದ ಧ್ವನಿಯಲ್ಲಿ ಅವನಿಗೆ ಉತ್ತರಕೊಟ್ಟನು.
20 ಯೆಹೋವನು ಸೀನಾಯಿ ಬೆಟ್ಟಕ್ಕೆ ಇಳಿದುಬಂದನು. ಬಳಿಕ ಯೆಹೋವನು ಮೋಶೆಯನ್ನು ಕರೆದು ಬೆಟ್ಟದ ತುದಿಗೆ ಬರಲು ಹೇಳಿದನು. ಆದ್ದರಿಂದ ಮೋಶೆ ಮೇಲಕ್ಕೆ ಹೋದನು.
21 ಯೆಹೋವನು ಮೋಶೆಗೆ, “ಕೆಳಗಿಳಿದು ಹೋಗಿ, ಜನರು ನನ್ನನ್ನು ನೋಡಲು ನನ್ನ ಹತ್ತಿರ ಬರಬಾರದೆಂದು ಅವರನ್ನು ಎಚ್ಚರಿಸು. ಇಲ್ಲವಾದರೆ ಅವರಲ್ಲಿ ಅನೇಕರು ಸಾಯುವರು. 22 ಮಾತ್ರವಲ್ಲದೆ ನನ್ನ ಸಮೀಪಕ್ಕೆ ಬರುವ ಯಾಜಕರು ಈ ವಿಶೇಷ ಸಂದರ್ಶನಕ್ಕಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳಬೇಕೆಂದು ಹೇಳು. ಇಲ್ಲವಾದರೆ ನಾನು ಅವರನ್ನೂ ಶಿಕ್ಷಿಸುವೆನು” ಅಂದನು.
23 ಮೋಶೆಯು ಯೆಹೋವನಿಗೆ, “ಜನರು ಬೆಟ್ಟವನ್ನೇರಿ ಬರಲಾರರು. ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿ ಅದನ್ನು ಪವಿತ್ರ ಸ್ಧಳವನ್ನಾಗಿ ಪ್ರತ್ಯೇಕಿಸಬೇಕೆಂದು ನೀನೇ ನಮಗೆ ಎಚ್ಚರಿಕೆ ನೀಡಿದೆಯಲ್ಲಾ!” ಎಂದು ಹೇಳಿದನು.
24 ಯೆಹೋವನು ಅವನಿಗೆ, “ಜನರ ಬಳಿಗೆ ಇಳಿದುಹೋಗಿ ಆರೋನನನ್ನು ಕರೆದುಕೊಂಡು ಬಾ. ಆದರೆ ಯಾಜಕರಾಗಲಿ ಜನರಾಗಲಿ ಬರಕೂಡದು. ಅವರು ನನ್ನ ಸಮೀಪಕ್ಕೆ ಬಂದರೆ, ನಾನು ಅವರನ್ನು ದಂಡಿಸುವೆನು” ಎಂದು ಹೇಳಿದನು.
25 ಆದ್ದರಿಂದ ಮೋಶೆ ಜನರ ಬಳಿಗೆ ಇಳಿದುಹೋಗಿ ಈ ಸಂಗತಿಗಳನ್ನು ಅವರಿಗೆ ತಿಳಿಸಿದನು.
ನಮ್ಮ ರಕ್ಷಣೆಯು ಧರ್ಮಶಾಸ್ತ್ರಕ್ಕಿಂತ ಉತ್ತಮವಾದುದು
2 ಆದ್ದರಿಂದ ನಮಗೆ ಬೋಧಿಸಲ್ಪಟ್ಟ ಸಂಗತಿಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಬೇಕು. ಸತ್ಯಮಾರ್ಗವನ್ನು ಬಿಟ್ಟು ತಪ್ಪಿಹೋಗದಂತೆ ಎಚ್ಚರಿಕೆಯಿಂದಿರಬೇಕು. 2 ದೇವರು ತನ್ನ ದೂತರ ಮೂಲಕ ಕೊಟ್ಟ ವಾಕ್ಯವು ನಿಜವಾದದ್ದೆಂದು ತೋರಿಸಲ್ಪಟ್ಟಿದೆ. ಯೆಹೂದ್ಯರು ಈ ವಾಕ್ಯಕ್ಕೆ ವಿರುದ್ಧವಾಗಿ ತಪ್ಪು ಮಾಡಿದಾಗಲೆಲ್ಲಾ ಮತ್ತು ಅವಿಧೇಯರಾದಾಗಲೆಲ್ಲಾ ತಕ್ಕ ದಂಡನೆ ಹೊಂದುತ್ತಿದ್ದರು. 3 ನಮಗೆ ದಯಪಾಲಿಸಲ್ಪಟ್ಟ ಈ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ದಂಡನೆಯಂತೂ ಖಂಡಿತ. ಇದು ಪ್ರಭುವಿನಿಂದ ಮೊದಲು ಹೇಳಲ್ಪಟ್ಟಿತು. ಆತನಿಂದ ಕೇಳಿದವರೇ ಈ ರಕ್ಷಣೆಯ ಕುರಿತಾಗಿ ನಮಗೆ ಸ್ಥಿರಪಡಿಸಿದರು. 4 ಇದಲ್ಲದೆ, ದೇವರು ಅದ್ಭುತಕಾರ್ಯಗಳಿಂದ, ಸೂಚಕಕಾರ್ಯಗಳಿಂದ, ನಾನಾ ವಿಧವಾದ ಮಹತ್ಕಾರ್ಯಗಳಿಂದ ಮತ್ತು ಪವಿತ್ರಾತ್ಮನ ವರಗಳನ್ನು ತನ್ನ ಇಷ್ಟಾನುಸಾರವಾಗಿ ದಯಪಾಲಿಸುವುದರ ಮೂಲಕ ಅದನ್ನು ಸ್ಥಿರಪಡಿಸಿದನು.
Kannada Holy Bible: Easy-to-Read Version. All rights reserved. © 1997 Bible League International