Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 50:1-6

ರಚನೆಗಾರ: ಆಸಾಫ.

50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
    ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
    ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
    ಆತನ ಸುತ್ತಲೂ ಬಿರುಗಾಳಿ ಬೀಸುವುದು.
ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
    ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
    ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.

ದೇವರೊಬ್ಬನೇ ನ್ಯಾಯಾಧಿಪತಿ;
    ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.

1 ರಾಜರುಗಳು 14:1-18

ಯಾರೊಬ್ಬಾಮನ ಮಗನ ಮರಣ

14 ಆ ಸಮಯದಲ್ಲಿ, ಯಾರೊಬ್ಬಾಮನ ಮಗನಾದ ಅಬೀಯನು ಅಸ್ವಸ್ಥನಾದನು. ಯಾರೊಬ್ಬಾಮನು ತನ್ನ ಪತ್ನಿಗೆ, “ಶೀಲೋವಿಗೆ ಹೋಗು. ಅಲ್ಲಿಗೆ ಹೋಗಿ ಪ್ರವಾದಿಯಾದ ಅಹೀಯನನ್ನು ನೋಡು. ನಾನು ಇಸ್ರೇಲಿನ ರಾಜನಾಗುವೆನೆಂದು ತಿಳಿಸಿದ ಮನುಷ್ಯನೇ ಅಹೀಯನು. ನೀನು ನನ್ನ ಪತ್ನಿಯೆಂದು ಜನರಿಗೆ ತಿಳಿಯದ ರೀತಿಯಲ್ಲಿ ವಸ್ತ್ರಗಳನ್ನು ಧರಿಸಿಕೊ. ಪ್ರವಾದಿಗೆ ಹತ್ತು ರೊಟ್ಟಿಗಳನ್ನು, ಕೆಲವು ಸಿಹಿ ಪದಾರ್ಥಗಳನ್ನು ಮತ್ತು ಜೇನುತುಪ್ಪ ಜಾಡಿಯನ್ನು ಕೊಡು. ನಂತರ ನಮ್ಮ ಮಗನಿಗೆ ಏನಾಗುತ್ತದೆಂಬುದನ್ನು ಕೇಳು. ಪ್ರವಾದಿಯಾದ ಅಹೀಯನು ನಿನಗೆ ತಿಳಿಸುತ್ತಾನೆ” ಎಂದು ಹೇಳಿದನು.

ರಾಜನ ಪತ್ನಿಯು ಅವನು ಹೇಳಿದಂತೆ ಮಾಡಿದಳು. ಅವಳು ಶೀಲೋವಿಗೆ ಹೋದಳು. ಅವಳು ಪ್ರವಾದಿಯಾದ ಅಹೀಯನ ಮನೆಗೆ ಹೋದಳು. ಅಹೀಯನಿಗೆ ಬಹಳ ವಯಸ್ಸಾಗಿತ್ತು; ಅವನು ಕುರುಡನಾಗಿದ್ದನು. ಆದರೆ ಯೆಹೋವನು ಅವನಿಗೆ, “ಯಾರೊಬ್ಬಾಮನ ಪತ್ನಿಯು ಅಸ್ವಸ್ಥನಾಗಿರುವ ತನ್ನ ಮಗನ ಬಗ್ಗೆ ಕೇಳಲು ನಿನ್ನ ಬಳಿಗೆ ಬರುತ್ತಿದ್ದಾಳೆ” ಎಂದು ಹೇಳಿದ್ದನು. ಅಹೀಯನು ಏನು ಹೇಳಬೇಕೆಂಬುದನ್ನು ಯೆಹೋವನು ಅವನಿಗೆ ತಿಳಿಸಿದ್ದನು.

ಯಾರೊಬ್ಬಾಮನ ಪತ್ನಿಯು ಅಹೀಯನ ಮನೆಗೆ ಬಂದಳು. ತಾನಾರೆಂಬುದು ಜನರಿಗೆ ತಿಳಿಯಬಾರದೆಂದು ಅವಳು ಪ್ರಯತ್ನಿಸುತ್ತಿದ್ದಳು. ಅವಳು ಬಾಗಿಲಿನ ಬಳಿಗೆ ಬಂದಾಗಲೇ ಅಹೀಯನಿಗೆ ಆಕೆಯ ಪಾದಗಳ ಸಪ್ಪಳವು ಕೇಳಿಸಿತು. ಆಗ ಅಹೀಯನು, “ಯಾರೊಬ್ಬಾಮನ ಪತ್ನಿಯೇ, ಒಳಗೆ ಬಾ. ನೀನು ಯಾರೆಂಬುದು ಜನರಿಗೆ ತಿಳಿಯದಂತೆ ಮಾಡಲು ಯಾಕೆ ಪ್ರಯತ್ನಿಸುತ್ತಿರುವೆ? ನಾನು ನಿನಗೆ ಅಶುಭದ ಸುದ್ದಿಯನ್ನು ತಿಳಿಸುತ್ತೇನೆ. ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆಂದು ನೀನು ಹಿಂದಿರುಗಿ ಹೋಗಿ ಯಾರೊಬ್ಬಾಮನಿಗೆ ತಿಳಿಸು. ಯೆಹೋವನು ಹೀಗೆನ್ನುತ್ತಾನೆ: ‘ಯಾರೊಬ್ಬಾಮನೇ, ಇಸ್ರೇಲಿನ ಜನರಲ್ಲೆಲ್ಲಾ ನಾನು ನಿನ್ನನ್ನು ಆರಿಸಿಕೊಂಡೆ. ನನ್ನ ಜನರನ್ನು ಆಳಲು ನಾನು ನಿನ್ನನ್ನು ನೇಮಿಸಿದೆ. ದಾವೀದನ ಕುಲವು ಇಸ್ರೇಲ್ ರಾಜ್ಯವನ್ನು ಆಳುತ್ತಿತ್ತು. ಆದರೆ ನಾನು ಅವರಿಂದ ರಾಜ್ಯವನ್ನು ತೆಗೆದುಕೊಂಡು, ನಿನಗೆ ಅದನ್ನು ಕೊಟ್ಟೆ. ಆದರೆ ನೀನು ನನ್ನ ಸೇವಕನಾದ ದಾವೀದನಂತಲ್ಲ. ಅವನು ನನ್ನ ಆಜ್ಞೆಗಳಿಗೆ ಯಾವಾಗಲೂ ವಿಧೇಯನಾಗಿದ್ದನು. ಅವನು ಪೂರ್ಣಮನಸ್ಸಿನಿಂದ ನನ್ನನ್ನು ಅನುಸರಿಸುತ್ತಿದ್ದನು. ನಾನು ಒಪ್ಪಿಕೊಳ್ಳುವ ಸಂಗತಿಗಳನ್ನು ಮಾತ್ರ ಅವನು ಮಾಡಿದನು. ಆದರೆ ನೀನು ಅನೇಕ ಪಾಪಗಳನ್ನು ಮಾಡಿರುವೆ. ನಿನಗಿಂತಲೂ ಮೊದಲು ಆಳಿದವರ ಪಾಪಗಳಿಗಿಂತ ನಿನ್ನ ಪಾಪಗಳು ಹೆಚ್ಚು ಭಯಂಕರವಾಗಿವೆ. ನೀನು ನನ್ನನ್ನು ಅನುಸರಿಸುವುದನ್ನು ಬಿಟ್ಟುಬಿಟ್ಟೆ. ನೀನು ವಿಗ್ರಹಗಳನ್ನು ಮತ್ತು ಅನ್ಯದೇವರುಗಳನ್ನು ನಿರ್ಮಿಸಿದೆ. ಇದು ನನ್ನಲ್ಲಿ ಹೆಚ್ಚು ಕೋಪವುಂಟುಮಾಡಿತು. 10 ಆದ್ದರಿಂದ ಯಾರೊಬ್ಬಾಮನೇ, ನಾನು ನಿನ್ನ ಕುಟುಂಬಕ್ಕೆ ಕೇಡುಗಳನ್ನು ಬರಮಾಡುತ್ತೇನೆ. ನಿನ್ನ ಕುಟುಂಬದ ಗಂಡಸರೆಲ್ಲರನ್ನು ನಾನು ಕೊಲ್ಲುತ್ತೇನೆ. ಬೆಂಕಿಯು ಕಸವನ್ನು ಸುಟ್ಟುಹಾಕುವಂತೆ ನಾನು ನಿನ್ನ ಕುಟುಂಬವನ್ನು ಸಂಪೂರ್ಣವಾಗಿ ನಾಶಪಡಿಸುತ್ತೇನೆ. 11 ನಿನ್ನ ಕುಟುಂಬದಲ್ಲಿ ಯಾವನಾದರೂ ನಗರದಲ್ಲಿ ಸತ್ತರೆ, ಅವನನ್ನು ನಾಯಿಗಳು ಕಿತ್ತುತಿನ್ನುತ್ತವೆ. ನಿನ್ನ ಕುಟುಂಬದಲ್ಲಿ ಯಾವನಾದರೂ ಹೊಲಗಳಲ್ಲಿ ಸತ್ತರೆ, ಅವನನ್ನು ಪಕ್ಷಿಗಳು ಕಿತ್ತುತಿನ್ನುತ್ತವೆ. ಇದು ಯೆಹೋವನ ನುಡಿ’” ಎಂದು ಹೇಳಿದನು.

12 ನಂತರ ಪ್ರವಾದಿಯಾದ ಅಹೀಯನು ಯಾರೊಬ್ಬಾಮನ ಪತ್ನಿಯ ಸಂಗಡ ಮಾತನಾಡುವುದನ್ನು ಮುಂದುವರಿಸಿ, “ಈಗ ಮನೆಗೆ ಹೋಗು. ನೀನು ನಿನ್ನ ನಗರವನ್ನು ಪ್ರವೇಶಿಸಿದ ತಕ್ಷಣ, ನಿನ್ನ ಮಗನು ಸತ್ತುಹೋಗುತ್ತಾನೆ. 13 ಇಸ್ರೇಲರೆಲ್ಲರು ಅವನಿಗಾಗಿ ಗೋಳಾಡಿ ಸಮಾಧಿಮಾಡುತ್ತಾರೆ. ಯಾರೊಬ್ಬಾಮನ ಕುಟುಂಬದಲ್ಲಿ ನಿನ್ನ ಮಗನನೊಬ್ಬನನ್ನು ಮಾತ್ರ ಸಮಾಧಿ ಮಾಡುತ್ತಾರೆ. ಏಕೆಂದರೆ ಯಾರೊಬ್ಬಾಮನ ಕುಟುಂಬದಲ್ಲಿ ಇವನೊಬ್ಬನು ಮಾತ್ರ ಇಸ್ರೇಲಿನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು. 14 ಯೆಹೋವನು ಇಸ್ರೇಲಿಗೆ ಹೊಸ ರಾಜನನ್ನು ನೇಮಿಸುತ್ತಾನೆ. ಆ ಹೊಸ ರಾಜನು ಯಾರೊಬ್ಬಾಮನ ಕುಟುಂಬವನ್ನು ನಾಶಗೊಳಿಸುತ್ತಾನೆ. ಇದು ಬಹುಬೇಗನೆ ಸಂಭವಿಸುತ್ತದೆ. 15 ನಂತರ ಯೆಹೋವನು ಇಸ್ರೇಲರನ್ನು ಹೊಡೆಯುತ್ತಾನೆ. ಇಸ್ರೇಲಿನ ಜನರು ಬಹಳ ಭಯಗೊಳ್ಳುವರು. ಅವರು ನೀರಿನಲ್ಲಿ ಎತ್ತರವಾಗಿ ಬೆಳೆದಿರುವ ಹುಲ್ಲಿನಂತೆ ನಡುಗುವರು. ಯೆಹೋವನು ಇಸ್ರೇಲರನ್ನು ಈ ಶ್ರೇಷ್ಠವಾದ ದೇಶದಿಂದ ಚದರಿಸಿಬಿಡುವನು; ಆತನು ಈ ದೇಶವನ್ನು ಅವರ ಪೂರ್ವಿಕರಿಗೆ ಕೊಟ್ಟಿದ್ದನು. ಆತನು ಇಸ್ರೇಲರನ್ನು ಯೂಫ್ರೇಟೀಸ್ ನದಿಯ ಮತ್ತೊಂದು ಕಡೆಗೆ ಚದರಿಸಿಬಿಡುತ್ತಾನೆ. ಯೆಹೋವನು ಅವರ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ. ಅವರು ಅಶೇರ್ ವಿಗ್ರಹವನ್ನು ಆರಾಧಿಸಲು ವಿಶೇಷ ಸ್ತಂಭಗಳನ್ನು ಮಾಡಿಕೊಂಡಿದ್ದರಿಂದ ಆತನು ಅವರ ಮೇಲೆ ಕೋಪಗೊಂಡನು. 16 ಯಾರೊಬ್ಬಾಮನು ಪಾಪವನ್ನು ಮಾಡಿದನು. ನಂತರ ಇಸ್ರೇಲಿನ ಜನರೂ ಪಾಪ ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದನು. ಆದ್ದರಿಂದ ಇಸ್ರೇಲಿನ ಜನರು ಸೋಲಿಸಲ್ಪಡುವಂತೆ ಯೆಹೋವನು ಅವಕಾಶ ಮಾಡುತ್ತಾನೆ” ಎಂದು ಹೇಳಿದನು.

17 ಯಾರೊಬ್ಬಾಮನ ಪತ್ನಿಯು ತಿರ್ಚಾಗೆ ಹಿಂದಿರುಗಿ ಹೋದಳು. ಆಕೆಯು ಮನೆಯೊಳಕ್ಕೆ ಕಾಲಿಟ್ಟಕೂಡಲೇ ಮಗನು ಸತ್ತುಹೋದನು. 18 ಇಸ್ರೇಲರೆಲ್ಲರು ಅವನಿಗಾಗಿ ಅತ್ತು, ಸಮಾಧಿಮಾಡಿದರು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು. ಯೆಹೋವನು ತನ್ನ ಸೇವಕನೂ ಪ್ರವಾದಿಯೂ ಆದ ಅಹೀಯನ ಮೂಲಕ ಈ ಸಂಗತಿಗಳನ್ನು ಹೇಳಿಸಿದ್ದನು.

1 ತಿಮೊಥೆಯನಿಗೆ 1:12-20

ದೇವರ ಕರುಣೆಗಾಗಿ ಕೃತಜ್ಞತೆಗಳು

12 ನಮ್ಮ ಪ್ರಭುವಾದ ಕ್ರಿಸ್ತ ಯೇಸು ನನ್ನ ಮೇಲಿನ ನಂಬಿಕೆಯಿಂದ, ಆತನ ಸೇವೆ ಮಾಡುವ ಈ ಕಾರ್ಯವನ್ನು ನನಗೆ ದಯಪಾಲಿಸಿದ್ದರಿಂದ ನಾನು ಆತನಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆತನು ನನ್ನನ್ನು ಬಲಪಡಿಸುತ್ತಾನೆ. 13 ಮೊದಲು, ನಾನು ಕ್ರಿಸ್ತನ ವಿರುದ್ಧ ಮಾತನಾಡಿದ್ದೆನು. ಆತನನ್ನು ಹಿಂಸಿಸಿದ್ದೆನು. ಆತನಿಗೆ ನೋವಾಗುವಂಥ ಕಾರ್ಯಗಳನ್ನು ಮಾಡಿದ್ದೆನು. ಆದರೆ ನಾನೇನು ಮಾಡುತ್ತಿದ್ದೇನೆಂಬುದು ನನಗೆ ತಿಳಿದಿರಲಿಲ್ಲವಾದ್ದರಿಂದ ದೇವರು ನನಗೆ ಕರುಣೆ ತೋರಿದನು. ನಂಬದಿರುವಾಗ ನಾನು ಅವುಗಳನ್ನು ಮಾಡಿದೆನು. 14 ಆದರೆ ನಮ್ಮ ಪ್ರಭುವಿನ ಕೃಪೆಯು ಸಂಪೂರ್ಣವಾಗಿ ನನಗೆ ಲಭಿಸಿತು. ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಗಳು ಆ ಕೃಪೆಯೊಂದಿಗೆ ಬಂದವು.

15 ನಾನು ಹೇಳುತ್ತಿರುವ ಈ ಸಂಗತಿ ಸತ್ಯವಾದದ್ದು. ಆದ್ದರಿಂದ ನೀವು ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಅದೇನೆಂದರೆ: ಪಾಪಿಗಳನ್ನು ರಕ್ಷಿಸುವುದಕ್ಕೆ ಕ್ರಿಸ್ತ ಯೇಸು ಈ ಲೋಕದಲ್ಲಿ ಪ್ರತ್ಯಕ್ಷನಾದನು. ಆ ಪಾಪಿಗಳಲ್ಲಿ ನಾನೇ ಮುಖ್ಯನು. 16 ಆದರೆ ನನಗೆ ಕರುಣೆ ದೊರೆಯಿತು. ಕ್ರಿಸ್ತ ಯೇಸು ತನ್ನ ಅಮಿತವಾದ ತಾಳ್ಮೆಯನ್ನು ನನ್ನಲ್ಲಿ ತೋರ್ಪಡಿಸುವುದಕ್ಕಾಗಿಯೇ ನನಗೆ ಕರುಣೆಯನ್ನು ದಯಪಾಲಿಸಿದನು. ಪಾಪಿಗಳಲ್ಲೆಲ್ಲಾ ಮುಖ್ಯನಾಗಿದ್ದ ನನಗೆ ಕ್ರಿಸ್ತನು ತನ್ನ ತಾಳ್ಮೆಯನ್ನು ತೋರಿದನು. ನಿತ್ಯಜೀವಕ್ಕಾಗಿ ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಜನರಿಗೆ ನಾನು ದೃಷ್ಟಾಂತವಾಗಿರಬೇಕೆಂದೇ ಆತನು ನನ್ನನ್ನು ಕರುಣಿಸಿದನು. 17 ಸದಾಕಾಲ ಆಳುವ ಅರಸನಿಗೆ ಗೌರವವೂ ಮಹಿಮೆಯೂ ಇರಲಿ. ಆತನಿಗೆ ಲಯವೆಂಬುದೇ ಇಲ್ಲ. ಆತನು ಅದೃಶ್ಯನಾಗಿರುವನು. ಒಬ್ಬನೇ ದೇವರಾದ ಆತನಿಗೆ ಗೌರವವೂ ಮಹಿಮೆಯೂ ಉಂಟಾಗಲಿ. ಆಮೆನ್.

18 ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಮೊದಲು ನಿನ್ನ ವಿಷಯದಲ್ಲಿ ತಿಳಿಸಲಾದ ಪ್ರವಾದನೆಗಳಿಗೆ ಅನುಗುಣವಾಗಿ ನಂಬಿಕೆಯ ದಿವ್ಯ ಹೋರಾಟವನ್ನು ಮಾಡು. 19 ನಂಬಿಕೆಯು ನಿನ್ನಲ್ಲಿ ಅಚಲವಾಗಿರಲಿ, ನಿನಗೆ ಯೋಗ್ಯವೆನಿಸಿದ್ದನ್ನೇ ಮಾಡು. ಕೆಲವು ಜನರು ಹೀಗೆ ಮಾಡಲಿಲ್ಲ. ಅವರ ನಂಬಿಕೆಯೆಲ್ಲವೂ ನಾಶವಾಯಿತು. 20 ಹುಮೆನಾಯನು ಮತ್ತು ಅಲೆಗ್ಸಾಂಡರನು ಹಾಗೆ ಮಾಡಿದರು. ದೇವರ ವಿರುದ್ಧವಾಗಿ ಮಾತನಾಡಕೂಡದೆಂದು ಅವರು ತಿಳಿದುಕೊಳ್ಳಲೆಂದೇ ಅವರನ್ನು ಸೈತಾನನಿಗೆ ಒಪ್ಪಿಸಿದೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International