Revised Common Lectionary (Semicontinuous)
ರಚನೆಗಾರ: ಆಸಾಫ.
50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
2 ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
3 ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
ಆತನ ಸುತ್ತಲೂ ಬಿರುಗಾಳಿ ಬೀಸುವುದು.
4 ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
5 ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.
6 ದೇವರೊಬ್ಬನೇ ನ್ಯಾಯಾಧಿಪತಿ;
ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.
26 ಸೊಲೊಮೋನನ ಸೇವಕರಲ್ಲಿ ನೆಬಾಟನ ಮಗನಾದ ಯಾರೊಬ್ಬಾಮನೂ ಒಬ್ಬನಾಗಿದ್ದನು. ಯಾರೊಬ್ಬಾಮನು ಎಫ್ರಾಯೀಮ್ ಕುಲದವನು, ಅವನು ಚರೇದ ಪಟ್ಟಣದವನು. ಯಾರೊಬ್ಬಾಮನ ತಾಯಿಯ ಹೆಸರು ಜೆರೂಗ, ಆಕೆ ವಿಧವೆಯಾಗಿದ್ದಳು. ಯಾರೊಬ್ಬಾಮನು ರಾಜನ ವಿರುದ್ಧ ತಿರುಗಿಬಿದ್ದನು.
27 ಯಾರೊಬ್ಬಾಮನು ರಾಜನ ವಿರುದ್ಧ ಏಕೆ ತಿರುಗಿ ಬಿದ್ದನೆಂಬ ಕಥೆಯು ಹೀಗಿದೆ: ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟುತ್ತಿದ್ದನು ಮತ್ತು ತನ್ನ ತಂದೆಯಾದ ದಾವೀದನ ನಗರದ ಗೋಡೆಯನ್ನು ಭದ್ರಪಡಿಸುತ್ತಿದ್ದನು. 28 ಯಾರೊಬ್ಬಾಮನು ಸಮರ್ಥನಾದ ಮನುಷ್ಯನಾಗಿದ್ದನು. ಈ ಯುವಕನು ಒಳ್ಳೆಯ ಕೆಲಸಗಾರನೆಂಬುದು ಸೊಲೊಮೋನನಿಗೆ ತಿಳಿಯಿತು. ಆದ್ದರಿಂದ ಸೊಲೊಮೋನನು ಯೋಸೇಫ್ ಕುಲದ ಕೆಲಸಗಾರರೆಲ್ಲರಿಗೂ ಮೇಲ್ವಿಚಾರಕನನ್ನಾಗಿ ಅವನನ್ನು ನೇಮಿಸಿದನು. 29 ಒಂದು ದಿನ ಯಾರೊಬ್ಬಾಮನು ಜೆರುಸಲೇಮಿನ ಹೊರಗೆ ಹೋಗುತ್ತಿದ್ದನು. ಶೀಲೋವಿನ ಪ್ರವಾದಿಯಾದ ಅಹೀಯನು ಅವನನ್ನು ರಸ್ತೆಯಲ್ಲಿ ಸಂಧಿಸಿದನು. ಅಹೀಯನು ಹೊಸ ಅಂಗಿಯನ್ನು ಧರಿಸಿದ್ದನು. ನಿರ್ಜನವಾಗಿದ್ದ ಆ ದೇಶದಲ್ಲಿ ಇವರಿಬ್ಬರೇ ಇದ್ದರು.
30 ಅಹೀಯನು ತನ್ನ ಹೊಸ ಅಂಗಿಯನ್ನು ತೆಗೆದು, ಅದನ್ನು ಹನ್ನೆರಡು ತುಂಡುಗಳನ್ನಾಗಿ ಹರಿದನು. 31 ಬಳಿಕ ಅಹೀಯನು ಯಾರೊಬ್ಬಾಮನಿಗೆ, “ಈ ಅಂಗಿಯ ಹತ್ತು ತುಂಡುಗಳನ್ನು ನಿನಗೋಸ್ಕರವಾಗಿ ತೆಗೆದುಕೋ. ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ಸೊಲೊಮೋನನ ರಾಜ್ಯವನ್ನು ನಾನು ಹರಿದು ತುಂಡುಗಳನ್ನಾಗಿ ಮಾಡುತ್ತೇನೆ. ನಾನು ಹತ್ತು ಕುಲಗಳನ್ನು ನಿನಗೆ ಒಪ್ಪಿಸುತ್ತೇನೆ. 32 ಒಂದು ಕುಲವನ್ನು ಮಾತ್ರ ದಾವೀದನ ವಂಶದ ಅಧೀನದಲ್ಲಿ ಬಿಡುತ್ತೇನೆ. ಅವರು ಈ ಕುಲವನ್ನು ಉಳಿಸಿಕೊಳ್ಳಲು ನಾನು ಅವಕಾಶ ಮಾಡಿಕೊಡುತ್ತೇನೆ. ನನ್ನ ಸೇವಕನಾದ ದಾವೀದನಿಗಾಗಿ ಮತ್ತು ಜೆರುಸಲೇಮಿಗಾಗಿ ನಾನು ಇದನ್ನು ಮಾಡುತ್ತೇನೆ. ಇಸ್ರೇಲಿನ ಎಲ್ಲಾ ಕುಲಗಳಿಂದಲೂ ನಾನು ಜೆರುಸಲೇಮ್ ನಗರವನ್ನು ಆರಿಸಿಕೊಂಡಿದ್ದೇನೆ. 33 ಸೊಲೊಮೋನನು ನನ್ನನ್ನು ಅನುಸರಿಸುವುದನ್ನು ನಿಲ್ಲಿಸಿದ ಕಾರಣ ನಾನು ಅವನ ರಾಜ್ಯವನ್ನು ಅವನಿಂದ ತೆಗೆದುಕೊಳ್ಳುವೆನು. ಅವನು ಚೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ ಮೋವಾಬ್ಯರ ದೇವರಾದ ಕೆಮೋಷನನ್ನೂ ಅಮ್ಮೋನಿಯರ ದೇವರಾದ ಮಿಲ್ಕೋಮನನ್ನೂ ಪೂಜಿಸಿದನು. ಸೊಲೊಮೋನನು ತಾನು ಮಾಡುತ್ತಿದ್ದ ಸರಿಯಾದ ಮತ್ತು ಉತ್ತಮವಾದ ಕಾರ್ಯಗಳನ್ನು ನಿಲ್ಲಿಸಿದನು. ಅವನು ನನ್ನ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸಲಿಲ್ಲ. ತನ್ನ ತಂದೆಯಾದ ದಾವೀದನು ಜೀವಿಸಿದಂತೆ ಅವನು ಜೀವಿಸುತ್ತಿಲ್ಲ. 34 ಆದ್ದರಿಂದ ನಾನು ಸೊಲೊಮೋನನ ಕುಟುಂಬದಿಂದ ರಾಜ್ಯವನ್ನು ತೆಗೆದುಕೊಳ್ಳುತ್ತೇನೆ. ಆದರೆ ಸೊಲೊಮೋನನು ತನ್ನ ಜೀವಮಾನವೆಲ್ಲಾ ಆಳುವಂತೆ ನಾನು ಅವನಿಗೆ ಅವಕಾಶ ಕೊಡುತ್ತೇನೆ. ನಾನು ನನ್ನ ಸೇವಕನಾದ ದಾವೀದನಿಗಾಗಿ ಇದನ್ನು ಮಾಡುತ್ತೇನೆ. ನಾನು ದಾವೀದನನ್ನು ಆರಿಸಿಕೊಂಡೆನು; ಏಕೆಂದರೆ ಅವನು ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಅನುಸರಿಸಿದನು. 35 ಆದರೆ ನಾನು ರಾಜ್ಯವನ್ನು ಅವನ ಮಗನಿಂದ ಕಿತ್ತುಕೊಂಡು ನಿನಗೆ ಹತ್ತು ಕುಲಗಳನ್ನು ಕೊಡುತ್ತೇನೆ. 36 ಸೊಲೊಮೋನನ ಮಗನಿಗೆ ಒಂದು ಕುಲವನ್ನು ಮಾತ್ರ ಕೊಡುತ್ತೇನೆ. ಜೆರುಸಲೇಮಿನ ನನ್ನ ಸನ್ನಿಧಿಯಲ್ಲಿ ಆಳಲು ನನ್ನ ಸೇವಕನಾದ ದಾವೀದನು ಯಾವಾಗಲೂ ತನ್ನ ಸಂತತಿಯವರಲ್ಲಿ ಒಬ್ಬನನ್ನು ಹೊಂದಿರಲೆಂದು ನಾನು ಇದನ್ನು ಮಾಡುತ್ತೇನೆ. ಜೆರುಸಲೇಮ್ ನಗರವನ್ನು ನಾನು ನನ್ನ ಸ್ವಂತದ್ದೆಂದು ಆರಿಸಿಕೊಂಡೆನು. 37 ನಾನು ನಿನ್ನನ್ನು ಇಡೀ ಇಸ್ರೇಲಿಗೆ ರಾಜನನ್ನಾಗಿ ಮಾಡುತ್ತೇನೆ. ನೀನು ನಿನ್ನ ಇಷ್ಟಾನುಸಾರವಾಗಿ ಪ್ರತಿಯೊಂದರ ಮೇಲೆ ದೊರೆತನ ಮಾಡುವಂತೆ ಮಾಡುತ್ತೇನೆ. 38 ನೀನು ಸರಿಯಾದ ಮಾರ್ಗದಲ್ಲಿ ಜೀವಿಸುತ್ತಾ, ನನ್ನ ಆಜ್ಞೆಗಳನ್ನು ಅನುಸರಿಸಿದರೆ, ನಾನು ಈ ಕಾರ್ಯಗಳೆನ್ನೆಲ್ಲ ನಿನಗೆ ಮಾಡುವೆನು. ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ನೀನು ದಾವೀದನಂತೆ ಅನುಸರಿಸಿದರೆ ನಾನು ನಿನ್ನೊಂದಿಗೆ ಇರುತ್ತೇನೆ. ನಾನು ನಿನ್ನ ಕುಟುಂಬವನ್ನು ದಾವೀದನ ಕುಟುಂಬದಂತೆ ರಾಜರುಗಳ ಕುಟುಂಬವನ್ನಾಗಿ ಮಾಡುತ್ತೇನೆ. ನಾನು ನಿನಗೆ ಇಸ್ರೇಲನ್ನು ಕೊಡುತ್ತೇನೆ. 39 ಸೊಲೊಮೋನನು ಮಾಡಿದ ಕಾರ್ಯಗಳ ನಿಮಿತ್ತ ನಾನು ದಾವೀದನ ಮಕ್ಕಳನ್ನು ದಂಡಿಸುತ್ತೇನೆ. ಆದರೆ ನನ್ನ ದಂಡನೆಯು ಅವರ ಮೇಲೆ ಶಾಶ್ವತವಾಗಿರುವುದಿಲ್ಲ” ಎಂದು ಹೇಳಿದನು.
ಸೊಲೊಮೋನನ ಮರಣ
40 ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲಲು ಪ್ರಯತ್ನಿಸಿದನು. ಆದರೆ ಯಾರೊಬ್ಬಾಮನು ಈಜಿಪ್ಟಿಗೆ ಓಡಿಹೋದನು. ಅವನು ಈಜಿಪ್ಟಿನ ರಾಜನಾದ ಶೀಶಕನ ಬಳಿಗೆ ಹೋದನು. ಸೊಲೊಮೋನನು ಸಾಯುವವರೆಗೆ ಯಾರೊಬ್ಬಾಮನು ಅಲ್ಲಿಯೇ ನೆಲೆಸಿದನು.
ತ್ರೋವದಲ್ಲಿ ಪೌಲನ ಉದ್ವೇಗ
12 ನಾನು ಕ್ರಿಸ್ತನ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ತ್ರೋವಕ್ಕೆ ಹೋದೆನು. ಪ್ರಭುವು ಅಲ್ಲಿ ನನಗೆ ಒಳ್ಳೆಯ ಅವಕಾಶವನ್ನು ಕೊಟ್ಟನು. 13 ಆದರೆ ನನ್ನ ಸಹೋದರನಾದ ತೀತನನ್ನು ನಾನು ಅಲ್ಲಿ ಕಾಣಲಿಲ್ಲವಾದ್ದರಿಂದ ನನಗೆ ಸಮಾಧಾನವಿರಲಿಲ್ಲ. ಆದ್ದರಿಂದ ನಾನು ಅವರನ್ನು ವಂದಿಸಿ ಮಕೆದೋನಿಯಕ್ಕೆ ಹೊರಟೆನು.
14 ದೇವರಿಗೆ ಸ್ತೋತ್ರವಾಗಲಿ. ದೇವರು ನಮ್ಮನ್ನು ಕ್ರಿಸ್ತನ ಮೂಲಕ ಯಾವಾಗಲೂ ವಿಜಯೋತ್ಸವದತ್ತ ನಡೆಸುತ್ತಿದ್ದಾನೆ. ದೇವರು ತನ್ನ ಜ್ಞಾನವೆಂಬ ಪರಿಮಳವನ್ನು ಎಲ್ಲಾ ಕಡೆಗಳಲ್ಲಿಯೂ ಹರಡಲು ನಮ್ಮನ್ನು ಉಪಯೋಗಿಸುತ್ತಿದ್ದಾನೆ. 15 ರಕ್ಷಣಾಮಾರ್ಗದಲ್ಲಿರುವವರ ಮತ್ತು ನಾಶನಮಾರ್ಗದಲ್ಲಿರುವವರ ಮಧ್ಯದಲ್ಲಿ ನಾವು ಕ್ರಿಸ್ತನ ಪರಿಮಳವಾಗಿದ್ದೇವೆ. ದೇವರಿಗೆ ಇದೇ ನಮ್ಮ ಕಾಣಿಕೆ. 16 ನಾಶನಮಾರ್ಗದಲ್ಲಿರುವ ಜನರಿಗೆ ಮರಣವನ್ನು ಉಂಟುಮಾಡುವ ಮರಣದ ವಾಸನೆಯಾಗಿದ್ದೇವೆ. ಆದರೆ ರಕ್ಷಣಾಮಾರ್ಗದಲ್ಲಿರುವ ಜನರಿಗೆ ಜೀವವನ್ನು ಉಂಟುಮಾಡುವ ಜೀವದ ವಾಸನೆಯಾಗಿದ್ದೇವೆ. ಹೀಗಿರಲಾಗಿ, ಈ ಕಾರ್ಯವನ್ನು ಮಾಡಲು ಯಾರು ಯೋಗ್ಯರಾಗಿದ್ದಾರೆ? 17 ಇತರ ಅನೇಕರು ಮಾಡುವಂತೆ ನಾವು ದೇವರ ವಾಕ್ಯವನ್ನು ಕಲಬೆರಕೆ ಮಾಡುವುದಿಲ್ಲ. ಆದರೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸನ್ನಿಧಾನದಲ್ಲಿ ಸತ್ಯವನ್ನು ಹೇಳುತ್ತೇವೆ. ದೇವರಿಂದ ಕಳುಹಿಸಲ್ಪಟ್ಟ ಜನರಂತೆ ನಾವು ಮಾತಾಡುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International