Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 102:12-28

12 ಯೆಹೋವನೇ, ನೀನಾದರೋ ಎಂದೆಂದಿಗೂ ಜೀವಿಸುವೆ!
    ನಿನ್ನ ಹೆಸರು ಶಾಶ್ವತವಾದದ್ದು!
13 ನೀನು ಎದ್ದು ಚೀಯೋನನ್ನು ಸಂತೈಸುವೆ.
    ನೀನು ಚೀಯೋನಿಗೆ ದಯೆತೋರುವ ಕಾಲ ಬರುತ್ತಿದೆ.
14 ನಿನ್ನ ಸೇವಕರು ಆಕೆಯ (ಜೆರುಸಲೇಮಿನ) ಕಲ್ಲುಗಳನ್ನು ಪ್ರೀತಿಸುವರು.
    ಅವರು ಆ ಪಟ್ಟಣದ ಧೂಳನ್ನು ಇಷ್ಟಪಡುವರು!
15 ಜನರು ಯೆಹೋವನ ಹೆಸರನ್ನು ಆರಾಧಿಸುತ್ತಾರೆ.
    ದೇವರೇ, ಭೂರಾಜರುಗಳೆಲ್ಲಾ ನಿನ್ನನ್ನು ಸನ್ಮಾನಿಸುವರು.
16 ಯಾಕೆಂದರೆ, ಯೆಹೋವನು ಚೀಯೋನನ್ನು ಮತ್ತೆ ಕಟ್ಟುವನು.
    ಜನಾಂಗಗಳು ಆಕೆಯ (ಜೆರುಸಲೇಮಿನ) ವೈಭವವನ್ನು ಮತ್ತೆ ನೋಡುವರು.
17 ಆತನು ನಿರ್ಗತಿಕರ ಪ್ರಾರ್ಥನೆಗಳಿಗೆ ಉತ್ತರ ಕೊಡುವನು.
    ಅವರ ಮೊರೆಗಳನ್ನು ಆತನು ತಿರಸ್ಕರಿಸುವುದಿಲ್ಲ.
18 ಮುಂದಿನ ತಲೆಮಾರುಗಳವರಿಗಾಗಿ ಇವುಗಳನ್ನು ಬರೆದಿಡಿ.
    ಮುಂದಿನ ಕಾಲದಲ್ಲಿ ಅವರು ಯೆಹೋವನನ್ನು ಸ್ತುತಿಸುತ್ತಾರೆ.
19 ಯೆಹೋವನು ಉನ್ನತದಲ್ಲಿರುವ ತನ್ನ ಪರಿಶುದ್ಧ ಸ್ಥಳದಿಂದ ಕೆಳಗೆ ನೋಡುತ್ತಾನೆ.
    ಆತನು ಪರಲೋಕದಿಂದ ಭೂಮಿಯನ್ನು ನೋಡುತ್ತಾನೆ.
20 ಆತನು ಸೆರೆಯಾಳುಗಳ ಪ್ರಾರ್ಥನೆಗಳನ್ನು ಕೇಳುತ್ತಾನೆ.
    ಮರಣದಂಡನೆಗೆ ಒಳಗಾದವರನ್ನು ಆತನು ಬಿಡಿಸುತ್ತಾನೆ.
21 ಆಗ ಚೀಯೋನಿನಲ್ಲಿರುವ ಜನರು ಯೆಹೋವನ ಕುರಿತು ಪ್ರಕಟಿಸುವರು:
ಅವರು ಆತನ ಹೆಸರನ್ನು ಜೆರುಸಲೇಮಿನಲ್ಲಿ ಸ್ತುತಿಸುವರು.
22     ಜನಾಂಗಗಳು ಒಟ್ಟುಗೂಡಿ ಬರುವವು.
    ರಾಜ್ಯಗಳು ಯೆಹೋವನ ಸೇವೆಮಾಡಲು ಬರುವವು.

23 ನನ್ನ ಬಲವು ಕುಂದಿಹೋಯಿತು.
    ನನ್ನ ಆಯುಷ್ಕಾಲವು ಕಡಿಮೆಯಾಯಿತು.
24 ಆದ್ದರಿಂದ ನಾನು ಇಂತೆಂದೆನು: “ಯೌವನಸ್ಥನಾಗಿರುವಾಗಲೇ ನನ್ನನ್ನು ಸಾಯಿಸಬೇಡ.
    ದೇವರೇ, ನೀನು ಶಾಶ್ವತವಾಗಿ ಜೀವಿಸುವೆ!
25 ಬಹುಕಾಲದ ಹಿಂದೆ, ನೀನು ಪ್ರಪಂಚವನ್ನು ಸೃಷ್ಟಿಮಾಡಿದೆ.
    ನೀನು ಆಕಾಶವನ್ನು ನಿನ್ನ ಕೈಗಳಿಂದ ನಿರ್ಮಿಸಿದೆ!
26 ಲೋಕವೂ ಆಕಾಶವೂ ಕೊನೆಗೊಳುತ್ತವೆ.
    ನೀನಾದರೊ ಶಾಶ್ವತವಾಗಿರುವೆ!
ಅವು ಬಟ್ಟೆಗಳಂತೆ ಹಳೆಯದಾಗುತ್ತವೆ.
    ನೀನು ಅವುಗಳನ್ನು ಉಡುಪುಗಳಂತೆ ಬದಲಾಯಿಸುವೆ.
    ಅವುಗಳೆಲ್ಲಾ ಬದಲಾಗುತ್ತವೆ.
27 ದೇವರೇ, ನೀನಾದರೋ ಎಂದಿಗೂ ಬದಲಾಗುವುದಿಲ್ಲ.
    ನೀನು ಎಂದೆಂದಿಗೂ ಜೀವಿಸುವೆ!
28 ನಾವು ನಿನ್ನ ಸೇವಕರಾಗಿದ್ದೇವೆ.
    ಇಲ್ಲಿ ನಮ್ಮ ಮಕ್ಕಳು ವಾಸವಾಗಿರುತ್ತಾರೆ;
    ಅವರ ಸಂತತಿಗಳವರೂ ನಿನ್ನನ್ನು ಆರಾಧಿಸಲು ಇಲ್ಲಿರುತ್ತಾರೆ.”

2 ರಾಜರುಗಳು 4:8-17

ಎಲೀಷ ಮತ್ತು ಶೂನೇಮಿನ ಸ್ತ್ರೀ

ಒಂದು ದಿನ ಎಲೀಷನು ಶೂನೇಮಿಗೆ ಹೋದನು. ಪ್ರಮುಖಳಾದ ಸ್ತ್ರೀಯೊಬ್ಬಳು ಶೂನೇಮಿನಲ್ಲಿ ವಾಸಿಸುತ್ತಿದ್ದಳು. ಆ ಸ್ತ್ರೀಯು ತನ್ನ ಮನೆಯಲ್ಲಿ ಊಟಮಾಡಿಕೊಂಡು ಹೋಗುವಂತೆ ಎಲೀಷನನ್ನು ಕೇಳಿಕೊಂಡಳು. ಅಂದಿನಿಂದ ಎಲೀಷನು ಆ ಸ್ಥಳದ ಮೂಲಕ ಹೋಗುವಾಗಲೆಲ್ಲಾ ಅವಳ ಮನೆಯಲ್ಲಿ ಊಟಮಾಡುತ್ತಿದ್ದನು.

ಆ ಸ್ತ್ರೀಯು ತನ್ನ ಗಂಡನಿಗೆ, “ನೋಡಿ, ನಮ್ಮ ಮನೆಯ ದಾರಿಯಲ್ಲಿ ಹಾದುಹೋಗುವ ಎಲೀಷನು ಪರಿಶುದ್ಧನೂ ದೇವಮನುಷ್ಯನೂ ಎಂದು ನನಗೆ ತೋರುತ್ತದೆ. 10 ದಯವಿಟ್ಟು ಎಲೀಷನಿಗಾಗಿ ಮಾಳಿಗೆಯ ಮೇಲೆ ಚಿಕ್ಕದೊಂದು ಕೊಠಡಿಯನ್ನು ಕಟ್ಟೋಣ. ಆ ಕೊಠಡಿಯಲ್ಲಿ ಹಾಸಿಗೆಯೊಂದನ್ನು ಹಾಕೋಣ. ಅಲ್ಲಿ ಒಂದು ಮೇಜು, ಕುರ್ಚಿ ಮತ್ತು ದೀಪಸ್ತಂಭವನ್ನು ಇಡೋಣ. ಅವನು ನಮ್ಮ ಮನೆಗೆ ಬಂದಾಗ, ಈ ಕೊಠಡಿಯನ್ನು ತನಗಾಗಿ ಉಪಯೋಗಿಸಲಿ” ಎಂದು ಹೇಳಿದನು.

11 ಒಂದು ದಿನ ಎಲೀಷನು ಆ ಸ್ತ್ರೀಯ ಮನೆಗೆ ಬಂದನು. ಅವನು ಆ ಕೊಠಡಿಗೆ ಹೋಗಿ ವಿಶ್ರಾಂತಿಯನ್ನು ಪಡೆದನು. 12 ಎಲೀಷನು ತನ್ನ ಸೇವಕನಾದ ಗೇಹಜಿಗೆ, “ಶೂನೇಮ್ಯಳಾದ ಆ ಸ್ತ್ರೀಯನ್ನು ಕರೆದುಕೊಂಡು ಬಾ” ಎಂದು ಹೇಳಿದನು.

ಸೇವಕನು ಶೂನೇಮ್ಯಳಾದ ಆ ಸ್ತ್ರೀಯನ್ನು ಕರೆದುಕೊಂಡು ಬಂದಾಗ ಆಕೆಯು ಎಲೀಷನ ಎದುರಿನಲ್ಲಿ ನಿಂತುಕೊಂಡಳು. 13 ಎಲೀಷನು ಗೇಹಜಿಗೆ (ಸೇವಕನಿಗೆ), “ನೀನು ಆ ಸ್ತ್ರೀಯ ಬಳಿಗೆ ಹೋಗಿ, ‘ನೋಡು, ನೀನು ನಮ್ಮನ್ನು ಉಪಚರಿಸುವುದಕ್ಕಾಗಿ ನಿನ್ನಿಂದ ಸಾಧ್ಯವಾದಷ್ಟು ಮಾಡಿರುವೆ. ನಮ್ಮಿಂದ ನಿನಗೇನಾದರೂ ಉಪಕಾರವಾಗಬೇಕೇ? ನಿನ್ನ ಬಗ್ಗೆ ರಾಜನ ಬಳಿಯಲ್ಲಾದರೂ ಅಥವಾ ಸೈನ್ಯಾಧಿಕಾರಿಯ ಬಳಿಯಲ್ಲಾದರೂ ನಾವು ಮಾತನಾಡಬೇಕೇ?’ ಎಂದು ಕೇಳು” ಎಂಬುದಾಗಿ ಹೇಳಿದನು.

ಆ ಸ್ತ್ರೀಯು, “ಇಲ್ಲಿ ನಾನು ನನ್ನ ಜನರೊಡನೆ ಸುಖವಾಗಿ ಜೀವಿಸುತ್ತಿದ್ದೇನೆ” ಎಂದು ಉತ್ತರಿಸಿದಳು.

14 ಎಲೀಷನು ಗೇಹಜಿಗೆ, “ನಾನು ಅವಳಿಗೆ ಏನು ಮಾಡಲಿ?” ಎಂದು ಕೇಳಿದನು.

ಗೇಹಜಿಯು, “ನನಗೆ ತಿಳಿದಿದೆ! ಅವಳಿಗೆ ಮಕ್ಕಳಿಲ್ಲ, ಅವಳ ಗಂಡ ಮುದುಕನಾಗಿದ್ದಾನೆ” ಎಂದು ಉತ್ತರಿಸಿದನು.

15 ಆಗ ಎಲೀಷನು, “ಅವಳನ್ನು ಕರೆದುಕೊಂಡು ಬಾ” ಎಂದು ಹೇಳಿದನು.

ಗೇಹಜಿಯು ಆ ಸ್ತ್ರೀಯನ್ನು ಕರೆದನು. ಆಕೆಯು ಬಂದು ಅವನ ಬಾಗಿಲಿನ ಹತ್ತಿರ ನಿಂತಳು. 16 ಎಲೀಷನು ಆ ಸ್ತ್ರೀಗೆ, “ಮುಂದಿನ ವಸಂತಮಾಸದ ಈ ಕಾಲಕ್ಕೆ ನೀನು ನಿನ್ನ ಗಂಡುಮಗುವನ್ನು ಅಪ್ಪಿಕೊಂಡಿರುವೆ” ಎಂದು ಹೇಳಿದನು.

ಆ ಸ್ತ್ರೀಯು, “ದೇವಮನುಷ್ಯನೇ, ಹೀಗೆ ಹೇಳಿ ನಿನ್ನ ಸೇವಕಿಯನ್ನು ವಂಚಿಸಬೇಡ” ಎಂದು ಹೇಳಿದಳು.

17 ಆ ಸ್ತ್ರೀಯು ಗರ್ಭಿಣಿಯಾದಳು. ಎಲೀಷನು ಹೇಳಿದಂತೆ, ಮುಂದಿನ ವಂಸತದಲ್ಲಿ ಅವಳು ಒಬ್ಬ ಮಗನಿಗೆ ಜನ್ಮನೀಡಿದಳು.

2 ರಾಜರುಗಳು 4:32-37

32 ಎಲೀಷನು ಮನೆಯೊಳಕ್ಕೆ ಬಂದನು. ಆ ಮಗು ಅವನ ಹಾಸಿಗೆಯ ಮೇಲೆ ಸತ್ತುಬಿದ್ದಿತ್ತು. 33 ಎಲೀಷನು ಕೊಠಡಿಯಲ್ಲಿ ಪ್ರವೇಶಿಸಿ ಬಾಗಿಲನ್ನು ಮುಚ್ಚಿದನು. ಈಗ ಎಲೀಷ ಮತ್ತು ಮಗು ಮಾತ್ರ ಕೊಠಡಿಯಲ್ಲಿದ್ದರು. ನಂತರ ಎಲೀಷನು ಯೆಹೋವನಲ್ಲಿ ಪ್ರಾರ್ಥಿಸಿದನು. 34 ಎಲೀಷನು ಹಾಸಿಗೆಗೆ ಹೋಗಿ ಮಗುವಿನ ಮೇಲೆ ಮಲಗಿದನು. ಎಲೀಷನು ತನ್ನ ಬಾಯಿಯನ್ನು ಮಗುವಿನ ಬಾಯಿಯ ಮೇಲಿಟ್ಟನು. ಎಲೀಷನು ತನ್ನ ಕೈಗಳನ್ನು ಮಗುವಿನ ಕೈಗಳ ಮೇಲಿಟ್ಟನು. ಎಲೀಷನು ಕೈಚಾಚಿ ಮಗುವನ್ನು ಅಪ್ಪಿಕೊಂಡನು. ಆಗ ಮಗುವಿನ ದೇಹವು ಬೆಚ್ಚಗಾಯಿತು.

35 ಎಲೀಷನು ಕೊಠಡಿಯಿಂದ ಹೊರಗೆ ಬಂದು ಮನೆಯಲ್ಲಿ ಸುತ್ತಲೂ ನಡೆದಾಡಿದನು. ನಂತರ ಅವನು ಕೊಠಡಿಯೊಳಕ್ಕೆ ಹಿಂದಿರುಗಿ ಹೋಗಿ ಕೈಚಾಚಿ ಮಗುವನ್ನು ಅಪ್ಪಿಕೊಂಡನು. ಆಗ ಮಗು ಏಳು ಸಾರಿ ಸೀನಿ ತನ್ನ ಕಣ್ಣುಗಳನ್ನು ತೆರೆಯಿತು.

36 ಎಲೀಷನು ಗೇಹಜಿಯನ್ನು ಕರೆದು, “ಶೂನೇಮಿನ ಸ್ತ್ರೀಯನ್ನು ಕರೆ” ಎಂದು ಹೇಳಿದನು.

ಗೇಹಜಿಯು ಶೂನೇಮಿನ ಸ್ತ್ರೀಯನ್ನು ಕರೆದನು. ಅವಳು ಎಲೀಷನ ಹತ್ತಿರಕ್ಕೆ ಬಂದಳು. ಎಲೀಷನು, “ನಿನ್ನ ಮಗನನ್ನು ಎತ್ತಿಕೊ” ಎಂದು ಹೇಳಿದನು.

37 ಆಗ ಶೂನೇಮಿನ ಆ ಸ್ತ್ರೀಯು ಕೊಠಡಿಯೊಳಕ್ಕೆ ಹೋಗಿ, ಎಲೀಷನ ಪಾದಗಳಿಗೆ ಬಾಗಿ ನಮಸ್ಕರಿಸಿದಳು. ನಂತರ ಅವಳು ತನ್ನ ಮಗನನ್ನು ಎತ್ತಿಕೊಂಡು ಹೊರಗೆ ಹೋದಳು.

ಅಪೊಸ್ತಲರ ಕಾರ್ಯಗಳು 14:1-7

ಇಕೋನಿಯಾದಲ್ಲಿ ಪೌಲ ಮತ್ತು ಬಾರ್ನಬ

14 ಪೌಲ ಬಾರ್ನಬರು ಇಕೋನಿಯಾ ಪಟ್ಟಣಕ್ಕೆ ಹೋದರು. (ಪ್ರತಿಯೊಂದು ಪಟ್ಟಣದಲ್ಲಿಯೂ ಅವರು ಮಾಡುತ್ತಿದ್ದಂತೆ) ಇಲ್ಲಿಯೂ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಜನರಿಗೆ ಬೋಧಿಸಿದರು. ಪೌಲ ಬಾರ್ನಬರ ಅಮೋಘ ಬೋಧನೆಯನ್ನು ಕೇಳಿ ಅನೇಕ ಯೆಹೂದ್ಯರು ಮತ್ತು ಗ್ರೀಕರು ನಂಬಿಕೊಂಡರು. ಆದರೆ ಯೆಹೂದ್ಯರಲ್ಲಿ ನಂಬದೆ ಹೋದ ಕೆಲವರು ಯೆಹೂದ್ಯರಲ್ಲದವರನ್ನು ಪ್ರಚೋಧಿಸಿ ಸಹೋದರರ ವಿರುದ್ಧ ಜನರನ್ನು ಎಬ್ಬಿಸಿದರು.

ಆದರೆ ಪೌಲ ಬಾರ್ನಬರು ಇಕೋನಿಯಾದಲ್ಲಿ ಬಹುಕಾಲವಿದ್ದು ಪ್ರಭುವಿನ ಕುರಿತು ಧೈರ್ಯದಿಂದ ಮಾತಾಡಿದರು. ಪ್ರಭುವು ಅವರ ಮೂಲಕ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡಿ ತನ್ನ ಕೃಪಾಸಂದೇಶವನ್ನು ನಿರೂಪಿಸಿದನು. ಆದರೆ ಪಟ್ಟಣದ ಜನರಲ್ಲಿ ಕೆಲವರು ಯೆಹೂದ್ಯರ ಮಾತನ್ನೂ ಇನ್ನು ಕೆಲವರು ಪೌಲ ಬಾರ್ನಬರ ಮಾತನ್ನೂ ನಂಬಿಕೊಂಡದ್ದರಿಂದ ಅವರಲ್ಲಿಯೇ ಎರಡು ಪಂಗಡವಾಯಿತು.

ಯೆಹೂದ್ಯರಲ್ಲದವರಲ್ಲಿ ಮತ್ತು ಯೆಹೂದ್ಯರಲ್ಲಿ ಕೆಲವರು ತಮ್ಮ ನಾಯಕರೊಡನೆ ಸೇರಿಕೊಂಡು ಪೌಲ ಬಾರ್ನಬರನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು. ಇದನ್ನು ಅರಿತುಕೊಂಡ ಪೌಲ ಬಾರ್ನಬರು ಆ ಪಟ್ಟಣವನ್ನು ಬಿಟ್ಟು ಲುಕವೋನಿಯಾದ ಪಟ್ಟಣಗಳಾದ ಲುಸ್ತ್ರ ಮತ್ತು ದರ್ಬೆಗಳಿಗೂ ಹಾಗೂ ಆ ಪಟ್ಟಣಗಳ ಸುತ್ತಮುತ್ತಲಿದ್ದ ಪ್ರದೇಶಗಳಿಗೂ ಹೋದರು. ಅವರು ಅಲ್ಲಿಯೂ ಸುವಾರ್ತೆ ತಿಳಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International