Revised Common Lectionary (Semicontinuous)
21 ಈ ವಿಷಯಗಳನ್ನೆಲ್ಲಾ ನೀವು ಸರಿಯಾಗಿ ತಿಳಿದಿದ್ದೀರಲ್ಲವೆ?
ಇದರ ವಿಚಾರವಾಗಿ ನೀವು ಕೇಳಿರುವಿರಿ.
ಎಷ್ಟೋ ವರ್ಷಗಳ ಹಿಂದೆ ಯಾರೋ ನಿಮಗೆ ಹೇಳಿದ್ದಿರಬಹುದು.
ಖಂಡಿತವಾಗಿಯೂ ಭೂಮಿಯನ್ನು ಯಾರು ನಿರ್ಮಿಸಿದ್ದಾರೆಂದು ನೀವು ತಿಳಿದಿರುವಿರಿ.
22 ಯೆಹೋವನು ಸತ್ಯವಾದ ದೇವರು.
ಆತನು ಉನ್ನತವಾದ ಆಕಾಶದಲ್ಲಿ ಕುಳಿತುಕೊಳ್ಳುವನು.
ಆತನಿಗೆ ಹೋಲಿಸಿದರೆ ಜನರು ಮಿಡತೆಗಳಂತಿರುವರು.
ಆತನು ಬಟ್ಟೆಯಂತೆ ಆಕಾಶಮಂಡಲವನ್ನು ಸುರುಳಿಯಾಗಿ ಸುತ್ತುವನು.
ಆಕಾಶಮಂಡಲವನ್ನು ಆತನು ಎಳೆದು ಗುಡಾರದಂತೆ ಅಗಲಮಾಡಿ ಅದರಡಿಯಲ್ಲಿ ಕುಳಿತುಕೊಳ್ಳುವನು.
23 ಆತನು ಅಧಿಪತಿಗಳನ್ನು ಅಯೋಗ್ಯರನ್ನಾಗಿ ಮಾಡುವನು.
ಆತನು ಲೋಕದ ನ್ಯಾಯಾಧೀಶರನ್ನು ನಿಷ್ಪ್ರಯೋಜಕರನ್ನಾಗಿ ಮಾಡುವನು.
24 ಇವರು ನೆಲದಲ್ಲಿ ನೆಟ್ಟಿರುವ ಸಸಿಗಳಂತಿರುವರು.
ಅವುಗಳ ಬೇರುಗಳು ನೆಲದೊಳಗೆ ಆಳವಾಗಿ ಹೋಗುವ ಮೊದಲೇ
ದೇವರ ಉಸಿರಿಗೆ ಅವು ಬಾಡಿ ಸಾಯುವವು;
ಗಾಳಿಯು ಒಣಹುಲ್ಲಿನಂತೆ ಅವುಗಳನ್ನು ಬಡಿದುಕೊಂಡು ಹೋಗುವದು.
25 ಪರಿಶುದ್ಧನಾದ ದೇವರು ಹೇಳುವುದೇನೆಂದರೆ: “ನನ್ನನ್ನು ಯಾರಿಗಾದರೂ ಹೋಲಿಸಲು ಸಾಧ್ಯವೇ?
ನನಗೆ ಸಮಾನರು ಯಾರೂ ಇಲ್ಲ.”
26 ಆಕಾಶಮಂಡಲದ ಕಡೆಗೆ ನೋಡಿರಿ!
ಆ ನಕ್ಷತ್ರಗಳನ್ನೆಲ್ಲಾ ಮಾಡಿದವರು ಯಾರು?
ಆಕಾಶದಲ್ಲಿರುವ ಆ “ಸೈನ್ಯಗಳನ್ನು” ಸಿದ್ಧ ಮಾಡಿದವರು ಯಾರು?
ಪ್ರತಿಯೊಂದು ನಕ್ಷತ್ರವನ್ನು ಹೆಸರೆತ್ತಿ ಕರೆಯುವವರು ಯಾರು?
ಆತನು ಬಲಿಷ್ಠನೂ ಪರಾಕ್ರಮಶಾಲಿಯೂ ಆಗಿದ್ದಾನೆ.
ಆದ್ದರಿಂದ ಆ ನಕ್ಷತ್ರಗಳಲ್ಲಿ ಒಂದೂ ನಾಶವಾಗಲಿಲ್ಲ.
27 ಯಾಕೋಬೇ, ಇದು ಸತ್ಯ!
ಇಸ್ರೇಲೇ, ನೀನದನ್ನು ನಂಬಬೇಕು.
ಹೀಗಿರಲು ನೀನು, “ಯೆಹೋವನು ನನ್ನ ನಡತೆಯನ್ನು ಗಮನಿಸುವದಿಲ್ಲ.
ನನ್ನನ್ನು ಕಂಡುಹಿಡಿದು ಶಿಕ್ಷಿಸುವದಿಲ್ಲ” ಎಂದು ಹೇಳುವೆ.
28 ದೇವರಾದ ಯೆಹೋವನು ಜ್ಞಾನಿಯೆಂಬುದನ್ನು
ನೀನು ಖಂಡಿತವಾಗಿಯೂ ಕೇಳಿರುವೆ.
ಆತನು ತಿಳಿದಿರುವ ಪ್ರತಿಯೊಂದನ್ನೂ ಕಲಿತುಕೊಳ್ಳಲು ಜನರಿಗೆ ಸಾಧ್ಯವಿಲ್ಲ.
ಆತನು ಆಯಾಸಗೊಳ್ಳುವದಿಲ್ಲ; ಆತನಿಗೆ ವಿಶ್ರಾಂತಿಯ ಅವಶ್ಯವಿಲ್ಲ.
ಭೂಮಿಯಲ್ಲಿರುವ ದೂರ ಸ್ಥಳಗಳನ್ನೆಲ್ಲಾ ಮಾಡಿದವನು ಆತನೇ.
ಆತನು ನಿರಂತರಕ್ಕೂ ಜೀವಿಸುವಾತನಾಗಿದ್ದಾನೆ.
29 ಬಳಲಿಹೋದವರನ್ನು ಆತನು ಬಲಶಾಲಿಗಳನ್ನಾಗಿ ಮಾಡುತ್ತಾನೆ.
ಬಲಹೀನರನ್ನು ಶಕ್ತಿವಂತರನ್ನಾಗಿ ಮಾಡುತ್ತಾನೆ.
30 ಯೌವನಸ್ಥರು ಆಯಾಸಗೊಳ್ಳುವರು.
ಅವರಿಗೆ ವಿಶ್ರಾಂತಿ ಬೇಕು; ಹುಡುಗರೂ ಮುಗ್ಗರಿಸಿಬೀಳುವರು.
31 ಆದರೆ ಯೆಹೋವನಲ್ಲಿ ಭರವಸೆಯಿಟ್ಟವರು ಮತ್ತೆ ಬಲಹೊಂದುವರು.
ಹದ್ದು ಹೊಸಗರಿಗಳನ್ನು ಹೊಂದುವಂತೆ ಅವರು ಹೊಸ ಬಲವನ್ನು ಹೊಂದುವರು.
ಅವರು ಓಡಾಡಿದರೂ ಆಯಾಸಗೊಳ್ಳುವದಿಲ್ಲ.
ನಡೆದಾಡಿದರೂ ಬಳಲಿಹೋಗುವುದಿಲ್ಲ.
147 ಯೆಹೋವನನ್ನು ಸ್ತುತಿಸಿರಿ! ಆತನು ಒಳ್ಳೆಯವನು.
ನಮ್ಮ ದೇವರನ್ನು ಸಂಕೀರ್ತಿಸಿರಿ.
ಆತನನ್ನು ಸ್ತುತಿಸುವುದು ಒಳ್ಳೆಯದೂ ಸಂತೋಷಕರವೂ ಆಗಿದೆ.
2 ಯೆಹೋವನು ಜೆರುಸಲೇಮನ್ನು ಕಟ್ಟಿದನು.
ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದ ಇಸ್ರೇಲರನ್ನು ಆತನು ಹಿಂದಕ್ಕೆ ಕರೆತಂದನು.
3 ಅವರ ಒಡೆದ ಹೃದಯಗಳನ್ನು ಆತನು ವಾಸಿಮಾಡುವನು;
ಅವರ ಗಾಯಗಳನ್ನು ಕಟ್ಟುವನು.
4 ಆತನು ನಕ್ಷತ್ರಗಳನ್ನು ಎಣಿಸುವನು.
ಆತನಿಗೆ ಪ್ರತಿಯೊಂದು ನಕ್ಷತ್ರದ ಹೆಸರು ತಿಳಿದಿದೆ.
5 ನಮ್ಮ ಒಡೆಯನು ಬಹು ದೊಡ್ಡವನೂ ಪರಾಕ್ರಮಿಯೂ ಆಗಿದ್ದಾನೆ.
ಆತನ ಜ್ಞಾನವು ಅಪರಿಮಿತವಾಗಿದೆ.
6 ಯೆಹೋವನು ದೀನರಿಗೆ ಆಧಾರವಾಗಿದ್ದಾನೆ.
ದುಷ್ಟರನ್ನಾದರೋ ನಾಚಿಕೆಗೆ ಗುರಿಪಡಿಸುವನು.
7 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
ನಮ್ಮ ದೇವರನ್ನು ಹಾರ್ಪ್‌ವಾದ್ಯಗಳೊಂದಿಗೆ ಸ್ತುತಿಸಿರಿ.
8 ಆತನು ಆಕಾಶವನ್ನು ಮೋಡಗಳಿಂದ ತುಂಬಿಸುವನು;
ಭೂಮಿಗಾಗಿ ಮಳೆಯನ್ನು ಸುರಿಸುವನು;
ಬೆಟ್ಟಗಳ ಮೇಲೆ ಹುಲ್ಲನ್ನು ಬೆಳೆಯಮಾಡುವನು.
9 ದೇವರು ಪ್ರಾಣಿಗಳಿಗೂ
ಪಕ್ಷಿಯ ಮರಿಗಳಿಗೂ ಆಹಾರ ಕೊಡುವನು.
10 ಯುದ್ಧದ ಕದುರೆಗಳಾಗಲಿ ಶಕ್ತಿಯುತರಾದ ಸೈನಿಕರಾಗಲಿ ಆತನನ್ನು ಮೆಚ್ಚಿಸಲಾರವು.
11 ಯೆಹೋವನು ತನ್ನನ್ನು ಆರಾಧಿಸುವ ಜನರಲ್ಲೇ ಸಂತೋಷಪಡುವನು.
ಆತನು ತನ್ನ ಶಾಶ್ವತ ಪ್ರೀತಿಯಲ್ಲಿ ಭರವಸವಿಟ್ಟಿರುವವರನ್ನು ಮೆಚ್ಚಿಕೊಳ್ಳುವನು.
20 ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ.
ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ.
ಯೆಹೋವನಿಗೆ ಸ್ತೋತ್ರವಾಗಲಿ!
16 ಸುವಾರ್ತೆಯನ್ನು ಬೋಧಿಸುತ್ತೇನೆಂಬುದು ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವಲ್ಲ. ಸುವಾರ್ತೆಯನ್ನು ಬೋಧಿಸುವುದು ನನ್ನ ಕರ್ತವ್ಯವಾಗಿದೆ. ಅದನ್ನು ನಾನು ಮಾಡಲೇಬೇಕು. ನಾನು ಸುವಾರ್ತೆಯನ್ನು ಬೋಧಿಸದಿದ್ದರೆ, ನನ್ನ ಗತಿಯನ್ನು ಏನು ಹೇಳಲಿ! 17 ನಾನು ನನ್ನ ಸ್ವಂತ ಇಷ್ಟದಿಂದ ಸುವಾರ್ತೆಯನ್ನು ಬೋಧಿಸುವುದಾಗಿದ್ದರೆ, ಬಹುಮಾನಕ್ಕೆ ಅರ್ಹನಾಗಿದ್ದೇನೆ. ಆದರೆ ಬೇರೊಂದನ್ನು ಆರಿಸಿಕೊಳ್ಳಲು ನನಗೆ ಅವಕಾಶವೇ ಇಲ್ಲ. ನಾನು ಸುವಾರ್ತೆಯನ್ನು ಸಾರಲೇಬೇಕು. ಇದು ನನಗೆ ಕೊಡಲ್ಪಟ್ಟಿರುವ ಕರ್ತವ್ಯವಷ್ಟೆ. 18 ಹೀಗಿರಲು, ನನಗೆ ಯಾವ ಬಹುಮಾನ ಸಿಕ್ಕುವುದು? ಸುವಾರ್ತೆಯನ್ನು ಉಚಿತವಾಗಿ ಬೋಧಿಸುವುದೊಂದೇ ನನಗೆ ದೊರೆಯುವ ಬಹುಮಾನವಾಗಿದೆ. ಆದ್ದರಿಂದ ಸುವಾರ್ತೆಯನ್ನು ಸಾರುವಾಗ ಅದರಿಂದ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳುವುದಿಲ್ಲ.
19 ನಾನು ಸ್ವತಂತ್ರನಾಗಿದ್ದೇನೆ; ಯಾರ ಅಧೀನದಲ್ಲಿಯೂ ಇಲ್ಲ. ಆದರೆ ನನ್ನಿಂದ ಸಾಧ್ಯವಾದಷ್ಟು ಜನರನ್ನು ರಕ್ಷಣಾ ಮಾರ್ಗಕ್ಕೆ ನಡೆಸಲು ನನ್ನನ್ನು ಎಲ್ಲರಿಗೂ ಗುಲಾಮನನ್ನಾಗಿ ಮಾಡಿಕೊಳ್ಳುತ್ತೇನೆ. 20 ಯೆಹೂದ್ಯರನ್ನು ರಕ್ಷಣಾಮಾರ್ಗಕ್ಕೆ ತರಲು ಅವರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಾಗಿಲ್ಲದಿದ್ದರೂ ಧರ್ಮಶಾಸ್ತ್ರಕ್ಕೆ ಅಧೀನರಾಗಿರುವ ಜನರನ್ನು ರಕ್ಷಣಾಮಾರ್ಗಕ್ಕೆ ತರಬೇಕೆಂದು ಧರ್ಮಶಾಸ್ತ್ರಕ್ಕೆ ಅಧೀನನಾದೆನು. 21 ಧರ್ಮಶಾಸ್ತ್ರವಿಲ್ಲದ ಜನರನ್ನು ರಕ್ಷಣಾಮಾರ್ಗಕ್ಕೆ ನಡೆಸಬೇಕೆಂದು ಅವರಿಗೆ ಧರ್ಮಶಾಸ್ತ್ರವಿಲ್ಲದ ವ್ಯಕ್ತಿಯಂತಾದೆನು. (ಆದರೆ ನಿಜವಾಗಿಯೂ, ನಾನು ಧರ್ಮಶಾಸ್ತ್ರವಿಲ್ಲದವನಲ್ಲ. ನಾನು ಕ್ರಿಸ್ತನ ಧರ್ಮಶಾಸ್ತ್ರಕ್ಕೆ ಅಧೀನನಾಗಿದ್ದೇನೆ.) 22 ಬಲಹೀನರಾದ ಜನರನ್ನು ರಕ್ಷಣಾಮಾರ್ಗಕ್ಕೆ ನಡೆಸಬೇಕೆಂದು ಅವರಿಗೆ ಬಲಹೀನನಂತಾದೆನು. ಯಾವ ರೀತಿಯಲ್ಲಾದರೂ ರಕ್ಷಣಾ ಮಾರ್ಗಕ್ಕೆ ನಡೆಸಬೇಕೆಂದು ಯಾರ್ಯಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾದೆನು. 23 ಇವುಗಳನ್ನೆಲ್ಲ ಮಾಡುವುದು ಸುವಾರ್ತೆಗಾಗಿಯೇ. ಸುವಾರ್ತೆಯ ಆಶೀರ್ವಾದಗಳಲ್ಲಿ ಪಾಲುಗಾರನಾಗಬೇಕೆಂದು ಇವುಗಳನ್ನೆಲ್ಲ ಮಾಡುತ್ತೇನೆ.
ಅನೇಕರಿಗೆ ಸ್ವಸ್ಥತೆ
(ಮತ್ತಾಯ 8:14-17; ಲೂಕ 4:38-41)
29 ಯೇಸು ಮತ್ತು ಆತನ ಶಿಷ್ಯರು ಸಭಾಮಂದಿರದಿಂದ ಹೊರಟು ಯಾಕೋಬ ಮತ್ತು ಯೋಹಾನರ ಸಂಗಡ ಸೀಮೋನ ಮತ್ತು ಅಂದ್ರೆಯರ ಮನೆಗೆ ಹೋದರು. 30 ಸೀಮೋನನ ಅತ್ತೆ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದಳು. ಅಲ್ಲಿನ ಜನರು ಅವಳ ಬಗ್ಗೆ ಯೇಸುವಿಗೆ ಹೇಳಿದರು. 31 ಆದ್ದರಿಂದ ಯೇಸು ಅವಳ ಹಾಸಿಗೆಯ ಬಳಿ ಹೋಗಿ ಆಕೆಯ ಕೈಗಳನ್ನು ಹಿಡಿದುಕೊಂಡು, ಮೇಲೇಳಲು ಸಹಾಯ ಮಾಡಿದನು. ಕೂಡಲೇ ಅವಳಿಗೆ ಗುಣವಾಯಿತು. ಆಕೆ ಎದ್ದು ಅವರಿಗೆ ಉಪಚಾರ ಮಾಡಿದಳು.
32 ಅಂದು ಸೂರ್ಯನು ಮುಳುಗಿದ ಮೇಲೆ, ಜನರು ಕಾಯಿಲೆಯವರನ್ನೂ ದೆವ್ವಗಳಿಂದ ಪೀಡಿತರಾಗಿದ್ದವರನ್ನೂ ಆತನ ಬಳಿಗೆ ಕರೆತಂದರು. 33 ಊರಿನ ಜನರೆಲ್ಲರೂ ಆ ಮನೆಯ ಮುಂದೆ ಒಟ್ಟುಗೂಡಿದರು. 34 ಯೇಸು ನಾನಾ ಬಗೆಯ ರೋಗಗಳಿಂದ ನರಳುತ್ತಿದ್ದ ಅನೇಕ ಜನರನ್ನು ಗುಣಪಡಿಸಿದನು; ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಬಿಡಿಸಿದನು. ಆದರೆ ಆ ದೆವ್ವಗಳಿಗೆ ಮಾತನಾಡಲು ಆತನು ಅವಕಾಶ ಕೊಡಲಿಲ್ಲ; ಏಕೆಂದರೆ ಯೇಸು ಯಾರೆಂಬುದು ದೆವ್ವಗಳಿಗೆ ಗೊತ್ತಿತ್ತು.
ಸುವಾರ್ತೆ ಸಾರಲು ಯೇಸುವಿನ ಸಿದ್ಧತೆ
(ಲೂಕ 4:42-44)
35 ಮರುದಿನ ಮುಂಜಾನೆ, ಇನ್ನೂ ಕತ್ತಲೆ ಇರುವಾಗಲೇ ಯೇಸು ಎದ್ದು ಪ್ರಾರ್ಥಿಸುವುದಕ್ಕಾಗಿ ಏಕಾಂತವಾದ ಸ್ಥಳಕ್ಕೆ ಹೋದನು. 36 ತರುವಾಯ, ಸೀಮೋನ ಮತ್ತು ಅವನ ಗೆಳೆಯರು ಯೇಸುವನ್ನು ಹುಡುಕುತ್ತಾ ಹೋದರು. 37 ಅವರು ಯೇಸುವನ್ನು ಕಂಡುಕೊಂಡು, “ಜನರೆಲ್ಲರೂ ನಿನ್ನನ್ನೇ ಎದುರು ನೋಡುತ್ತಿದ್ದಾರೆ!” ಎಂದು ಹೇಳಿದರು.
38 ಯೇಸು, “ಇಲ್ಲಿಗೆ ಸಮೀಪದಲ್ಲಿರುವ ಊರುಗಳಿಗೆ ನಾವು ಹೋಗೋಣ. ಆ ಸ್ಥಳಗಳಲ್ಲಿಯೂ ನಾನು ಉಪದೇಶಿಸಬೇಕು. ಅದಕ್ಕಾಗಿಯೇ ನಾನು ಇಲ್ಲಿಗೆ ಬಂದೆನು” ಎಂದು ಹೇಳಿದನು. 39 ಹೀಗೆ ಯೇಸು ಗಲಿಲಾಯದ ಎಲ್ಲಾ ಕಡೆಗೆ ಪ್ರವಾಸಮಾಡಿ ಸಭಾಮಂದಿರಗಳಲ್ಲಿ ಉಪದೇಶಿಸಿದನು; ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು.
Kannada Holy Bible: Easy-to-Read Version. All rights reserved. © 1997 Bible League International