Revised Common Lectionary (Semicontinuous)
147 ಯೆಹೋವನನ್ನು ಸ್ತುತಿಸಿರಿ! ಆತನು ಒಳ್ಳೆಯವನು.
ನಮ್ಮ ದೇವರನ್ನು ಸಂಕೀರ್ತಿಸಿರಿ.
ಆತನನ್ನು ಸ್ತುತಿಸುವುದು ಒಳ್ಳೆಯದೂ ಸಂತೋಷಕರವೂ ಆಗಿದೆ.
2 ಯೆಹೋವನು ಜೆರುಸಲೇಮನ್ನು ಕಟ್ಟಿದನು.
ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದ ಇಸ್ರೇಲರನ್ನು ಆತನು ಹಿಂದಕ್ಕೆ ಕರೆತಂದನು.
3 ಅವರ ಒಡೆದ ಹೃದಯಗಳನ್ನು ಆತನು ವಾಸಿಮಾಡುವನು;
ಅವರ ಗಾಯಗಳನ್ನು ಕಟ್ಟುವನು.
4 ಆತನು ನಕ್ಷತ್ರಗಳನ್ನು ಎಣಿಸುವನು.
ಆತನಿಗೆ ಪ್ರತಿಯೊಂದು ನಕ್ಷತ್ರದ ಹೆಸರು ತಿಳಿದಿದೆ.
5 ನಮ್ಮ ಒಡೆಯನು ಬಹು ದೊಡ್ಡವನೂ ಪರಾಕ್ರಮಿಯೂ ಆಗಿದ್ದಾನೆ.
ಆತನ ಜ್ಞಾನವು ಅಪರಿಮಿತವಾಗಿದೆ.
6 ಯೆಹೋವನು ದೀನರಿಗೆ ಆಧಾರವಾಗಿದ್ದಾನೆ.
ದುಷ್ಟರನ್ನಾದರೋ ನಾಚಿಕೆಗೆ ಗುರಿಪಡಿಸುವನು.
7 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
ನಮ್ಮ ದೇವರನ್ನು ಹಾರ್ಪ್‌ವಾದ್ಯಗಳೊಂದಿಗೆ ಸ್ತುತಿಸಿರಿ.
8 ಆತನು ಆಕಾಶವನ್ನು ಮೋಡಗಳಿಂದ ತುಂಬಿಸುವನು;
ಭೂಮಿಗಾಗಿ ಮಳೆಯನ್ನು ಸುರಿಸುವನು;
ಬೆಟ್ಟಗಳ ಮೇಲೆ ಹುಲ್ಲನ್ನು ಬೆಳೆಯಮಾಡುವನು.
9 ದೇವರು ಪ್ರಾಣಿಗಳಿಗೂ
ಪಕ್ಷಿಯ ಮರಿಗಳಿಗೂ ಆಹಾರ ಕೊಡುವನು.
10 ಯುದ್ಧದ ಕದುರೆಗಳಾಗಲಿ ಶಕ್ತಿಯುತರಾದ ಸೈನಿಕರಾಗಲಿ ಆತನನ್ನು ಮೆಚ್ಚಿಸಲಾರವು.
11 ಯೆಹೋವನು ತನ್ನನ್ನು ಆರಾಧಿಸುವ ಜನರಲ್ಲೇ ಸಂತೋಷಪಡುವನು.
ಆತನು ತನ್ನ ಶಾಶ್ವತ ಪ್ರೀತಿಯಲ್ಲಿ ಭರವಸವಿಟ್ಟಿರುವವರನ್ನು ಮೆಚ್ಚಿಕೊಳ್ಳುವನು.
20 ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ.
ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ.
ಯೆಹೋವನಿಗೆ ಸ್ತೋತ್ರವಾಗಲಿ!
10 ಶಿಷ್ಟನು ತನ್ನ ಪಶುಗಳನ್ನು ನೋಡಿಕೊಳ್ಳುತ್ತಾನೆ. ಆದರೆ ದುಷ್ಟನ ವಾತ್ಸಲ್ಯವು ಕ್ರೂರವಾಗಿದೆ.
11 ತನ್ನ ಜಮೀನಿನಲ್ಲಿ ದುಡಿಯುವ ರೈತನಿಗೆ ಸಾಕಷ್ಟು ಆಹಾರವಿರುವುದು. ಆದರೆ ಮೂಢನು ಪ್ರಯೋಜನವಿಲ್ಲದ ಸಂಗತಿಗಳಲ್ಲಿ ತನ್ನ ಸಮಯವನ್ನು ಹಾಳುಮಾಡುವನು.
12 ಕಳವು ಮಾಲುಗಳಲ್ಲಿ ದುಷ್ಟರಿಗೆ ಆಸೆ. ಒಳ್ಳೆಯವರಿಗಾದರೋ ತಮ್ಮಲ್ಲಿರುವುದನ್ನು ಬೇರೆಯವರಿಗೆ ಕೊಡಬೇಕೆಂಬ ಆಸೆ.
13 ಕೆಡುಕನು ತನ್ನ ಕೆಟ್ಟಮಾತುಗಳಿಂದಲೇ ಸಿಕ್ಕಿಕೊಳ್ಳುವನು. ಆದರೆ ಒಳ್ಳೆಯವನು ಇಕ್ಕಟ್ಟುಗಳಿಂದ ಪಾರಾಗುವನು.
14 ಮನುಷ್ಯನು ತನ್ನ ಒಳ್ಳೆಯ ಮಾತುಗಳಿಗೆ ಪ್ರತಿಫಲವನ್ನು ಪಡೆಯುವನು. ಅದೇ ರೀತಿಯಲ್ಲಿ, ಅವನ ಕೆಲಸವು ಅವನಿಗೆ ಲಾಭವನ್ನು ಕೊಡುವುದು.
15 ಮೂಢನು ತನ್ನ ದಾರಿಯನ್ನೇ ಒಳ್ಳೆಯದೆಂದು ಭಾವಿಸಿಕೊಂಡಿರುತ್ತಾನೆ. ಜ್ಞಾನಿಯಾದರೋ ಉಪದೇಶಕ್ಕೆ ಕಿವಿಗೊಡುತ್ತಾನೆ.
16 ಮೂಢನು ತನ್ನ ಸಿಟ್ಟನ್ನು ತಟ್ಟನೆ ತೋರಿಸುವನು. ಆದರೆ ಜ್ಞಾನಿಯು ಅವಮಾನವನ್ನು ಕಡೆಗಣಿಸುವನು.
17 ಸತ್ಯಸಾಕ್ಷಿಯು ನ್ಯಾಯವನ್ನು ಪ್ರತಿಪಾದಿಸುವನು. ಆದರೆ ಸುಳ್ಳುಸಾಕ್ಷಿಯು ಅನ್ಯಾಯವನ್ನು ಪ್ರಕಟಿಸುವನು.
18 ದುಡುಕಿದ ಮಾತು ಖಡ್ಗದಂತೆ ನೋವು ಮಾಡುತ್ತದೆ; ಜ್ಞಾನಿಯ ಮಾತು ಗುಣಪಡಿಸುತ್ತದೆ.
19 ಸುಳ್ಳುತುಟಿಗಳು ಕ್ಷಣಿಕ. ಆದರೆ ಸತ್ಯವು ಶಾಶ್ವತ.
20 ಕೆಡುಕರು ಯಾವಾಗಲೂ ಕೇಡು ಮಾಡಲಿಚ್ಛಿಸುವರು. ಸಮಾಧಾನವನ್ನು ಅಪೇಕ್ಷಿಸುವವರು ಸಂತೋಷವಾಗಿರುವರು.
21 ಸಜ್ಜನರು ಯೆಹೋವನಿಂದ ಕ್ಷೇಮವಾಗಿರುವರು. ಆದರೆ ದುರ್ಜನರಿಗೆ ಅನೇಕ ತೊಂದರೆಗಳಿರುತ್ತವೆ.
2 ಕೇಳಿ, ನಾನೇ ಪೌಲನು. ನೀವು ಸುನ್ನತಿ ಮಾಡಿಸಿಕೊಂಡು ಧರ್ಮಶಾಸ್ತ್ರಕ್ಕೆ ಹಿಂತಿರುಗಿಕೊಳ್ಳುವುದಾದರೆ ಕ್ರಿಸ್ತನಿಂದ ನಿಮಗೇನೂ ಪ್ರಯೋಜನವಿಲ್ಲ. 3 ಮತ್ತೆ ನಾನು ಪ್ರತಿಯೊಬ್ಬನನ್ನೂ ಎಚ್ಚರಿಸುತ್ತೇನೆ. ನೀವು ಸುನ್ನತಿ ಮಾಡಿಸಿಕೊಂಡರೆ, ಧರ್ಮಶಾಸ್ತ್ರವನ್ನೆಲ್ಲಾ ಅನುಸರಿಸಬೇಕು. 4 ನೀವು ಧರ್ಮಶಾಸ್ತ್ರದ ಮೂಲಕ ನೀತಿವಂತರಾಗಲು ಪ್ರಯತ್ನಿಸುವವರಾಗಿದ್ದರೆ, ದೇವರ ಕೃಪಾಶ್ರಯದಿಂದ ಬಿದ್ದುಹೋದ ಕಾರಣ ಕ್ರಿಸ್ತನೊಂದಿಗಿರುವ ನಿಮ್ಮ ಜೀವಿತವು ಅಂತ್ಯಗೊಳ್ಳುವುದು. 5 ಆದರೆ ನಾವು ನಂಬಿಕೆಯ ಮೂಲಕ ನೀತಿವಂತರಾಗಿದ್ದೇವೆ ಎಂಬ ನಿರೀಕ್ಷೆ ನಮಗುಂಟು. ದೇವರಾತ್ಮನ ಸಹಾಯದಿಂದ ಈ ನಿರೀಕ್ಷೆ ಸಫಲವಾಗುವುದೆಂದು ತವಕದಿಂದ ಎದುರುನೋಡುತ್ತಿದ್ದೇವೆ. 6 ಒಬ್ಬನು ಕ್ರಿಸ್ತ ಯೇಸುವಿನಲ್ಲಿರುವಾಗ ಸುನ್ನತಿ ಹೊಂದಿದ್ದಾನೋ ಇಲ್ಲವೋ ಎಂಬುದು ಮುಖ್ಯವಲ್ಲ. ಮುಖ್ಯವಾದದ್ದೇನೆಂದರೆ ಪ್ರೀತಿಯಿಂದ ಕಾರ್ಯನಡೆಸುವ ನಂಬಿಕೆ.
7 ನೀವು ಚೆನ್ನಾಗಿ ಓಡುತ್ತಾ ಇದ್ದಿರಿ. ನೀವು ಸತ್ಯಕ್ಕೆ ವಿಧೇಯರಾಗಿದ್ದಿರಿ. ಸತ್ಯಮಾರ್ಗವನ್ನು ಅನುಸರಿಸದಂತೆ ನಿಮ್ಮನ್ನು ಒತ್ತಾಯಪಡಿಸಿದವರ್ಯಾರು? 8 ಆ ಒತ್ತಾಯವು ಬಂದದ್ದು ನಿಮ್ಮನ್ನು ಆರಿಸಿಕೊಂಡಾತನಿಂದಲ್ಲ. 9 ಎಚ್ಚರಿಕೆಯಿಂದಿರಿ! “ಸ್ವಲ್ಪ ಹುಳಿಯಿಂದ ಪಾತ್ರೆಯಲ್ಲಿರುವ ನಾದಿದ ಹಿಟ್ಟೆಲ್ಲಾ ಹುಳಿಯಾಗುವುದು.” 10 ಆ ಬೇರೆ ಅಭಿಪ್ರಾಯಗಳನ್ನು ನೀವು ನಂಬುವುದಿಲ್ಲವೆಂದು ಪ್ರಭುವಿನಲ್ಲಿ ನಿಮ್ಮನ್ನು ಕುರಿತು ಭರವಸೆಯಿಂದಿದ್ದೇನೆ. ಯಾರೊ ಒಬ್ಬನು ಆ ಅಭಿಪ್ರಾಯಗಳಿಂದ ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾನೆ. ಅವನು ಯಾರೇ ಆಗಿದ್ದರೂ ದಂಡನೆ ಹೊಂದುವನು.
11 ನನ್ನ ಸಹೋದರ ಸಹೋದರಿಯರೇ, ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನು ಬೋಧಿಸುವುದಿಲ್ಲ. ಸುನ್ನತಿಯ ಅಗತ್ಯತೆಯನ್ನು ಕುರಿತು ಉಪದೇಶಿಸುವವನಾಗಿದ್ದರೆ, ನಾನಿನ್ನೂ ಹಿಂಸೆಗೆ ಒಳಗಾಗಿರುವುದೇಕೆ? ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನಿನ್ನೂ ಉಪದೇಶಿಸುವುದಾಗಿದ್ದರೆ, ಶಿಲುಬೆಯ ವಿಷಯವಾದ ನನ್ನ ಬೋಧನೆಗೆ ಅಡ್ಡಿಯಾಗುವುದೇ ಇಲ್ಲ. 12 ನಿಮ್ಮನ್ನು ಕಳವಳಪಡಿಸುತ್ತಿರುವವರು ತಮಗಾಗಿರುವ ಸುನ್ನತಿಯಲ್ಲದೆ ತಮ್ಮ ಅಂಗವನ್ನೇ ಕತ್ತರಿಸಿಕೊಂಡರೆ ಒಳ್ಳೆಯದು.
13 ನನ್ನ ಸಹೋದರ ಸಹೋದರಿಯರೇ, ನೀವು ಸ್ವತಂತ್ರರಾಗಬೇಕೆಂದು ದೇವರು ನಿಮ್ಮನ್ನು ಕರೆದಿದ್ದಾನೆ. ಆದರೆ ಪಾಪಮಯವಾದ ನಿಮ್ಮ ಸ್ವಭಾವವನ್ನು ಮೆಚ್ಚಿಸುವುದಕ್ಕಾಗಿ ನಿಮ್ಮ ಸ್ವತಂತ್ರವನ್ನು ನೆಪಮಾಡಿಕೊಳ್ಳಬೇಡಿ. ಆದರೆ ಪ್ರೀತಿಯಿಂದ ಒಬ್ಬರ ಸೇವೆಯನ್ನೊಬ್ಬರು ಮಾಡಿರಿ. 14 “ನೀವು ನಿಮ್ಮನ್ನು ಪ್ರೀತಿಸುವಂತೆ ಇತರರನ್ನು ಪ್ರೀತಿಸಿರಿ”(A) ಎಂಬ ಒಂದೇ ಒಂದು ಆಜ್ಞೆಯಲ್ಲಿ ಇಡೀ ಧರ್ಮಶಾಸ್ತ್ರವೇ ಅಡಕವಾಗಿದೆ. 15 ನೀವು ಒಬ್ಬರನ್ನೊಬ್ಬರು ಕಚ್ಚಿ ಹರಿದುಹಾಕಿ ನುಂಗುವುದಾದರೆ ಒಬ್ಬರಿಂದೊಬ್ಬರು ನಾಶವಾಗುತ್ತೀರಿ. ಆದ್ದರಿಂದ ಎಚ್ಚರಿಕೆಯಿಂದಿರಿ!
Kannada Holy Bible: Easy-to-Read Version. All rights reserved. © 1997 Bible League International