Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 35:1-10

ರಚನೆಗಾರ: ದಾವೀದ.

35 ಯೆಹೋವನೇ, ನನ್ನ ವ್ಯಾಜ್ಯಗಳಲ್ಲಿ ವಾದಿಸು!
    ನನ್ನ ಯುದ್ಧಗಳಲ್ಲಿ ಹೋರಾಡು!
ಯೆಹೋವನೇ, ಗುರಾಣಿಗಳನ್ನು ಹಿಡಿದುಕೊಂಡು
    ನನಗೆ ಸಹಾಯಕನಾಗಿ ನಿಲ್ಲು.
ಈಟಿಯನ್ನೂ ಭಲ್ಲೆಯನ್ನೂ[a] ತೆಗೆದುಕೊ.
    ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿರುವ ವೈರಿಗಳೊಡನೆ ಹೋರಾಡು.
“ನಾನು ನಿನ್ನನ್ನು ರಕ್ಷಿಸುತ್ತೇನೆ” ಎಂಬ ಅಭಯವಚನ ನೀಡು.

ನನ್ನನ್ನು ಕೊಲ್ಲಬೇಕೆಂದಿರುವವರು ನಿರಾಶೆಗೊಂಡು ನಾಚಿಕೆಗೀಡಾಗಲಿ.
    ನನಗೆ ಕೇಡುಮಾಡಬೇಕೆಂದಿರುವವರು ಅವಮಾನಗೊಂಡು ಓಡಿಹೋಗಲಿ.
ಅವರು ಗಾಳಿಬಡಿದುಕೊಂಡು ಹೋಗುವ ಹೊಟ್ಟಿನಂತಾಗಲಿ;
    ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
ಯೆಹೋವನೇ, ಅವರ ರಸ್ತೆಯು ಕತ್ತಲಾಗಿರಲಿ; ಜಾರುತ್ತಿರಲಿ.
    ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
ನಾನು ನಿರಪರಾಧಿಯಾಗಿದ್ದರೂ ಅವರು ನನಗೆ ಬಲೆಯೊಡ್ಡಿದ್ದಾರೆ.
    ನಿಷ್ಕಾರಣವಾಗಿ ಅವರು ನನಗೆ ಬಲೆಯೊಡ್ಡಿದ್ದಾರೆ.
ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಕೊಳ್ಳಲಿ;
    ತಾವು ತೋಡಿದ ಗುಂಡಿಯೊಳಗೆ ತಾವೇ ಮುಗ್ಗರಿಸಿ ಬೀಳಲಿ.
    ಇದ್ದಕ್ಕಿದಂತೆ ಅಪಾಯವು ಅವರನ್ನು ಹಿಡಿದುಕೊಳ್ಳಲಿ.
ಆಗ ನಾನು ಯೆಹೋವನಲ್ಲಿ ಹರ್ಷಿಸುವೆನು.
    ಆತನು ನನ್ನನ್ನು ರಕ್ಷಿಸಿದ್ದರಿಂದ ಸಂತೋಷಪಡುವೆನು.
10 ಯೆಹೋವನೇ, ಹೃದಯಪೂರ್ವಕವಾಗಿ ಹೇಳುವೆ,
    “ನಿನಗೆ ಸಮಾನರು ಇಲ್ಲವೇ ಇಲ್ಲ.
ಬಡವರನ್ನು ಬಲಿಷ್ಠರಿಂದ ತಪ್ಪಿಸಿ ರಕ್ಷಿಸುವಾತನು ನೀನೇ.
    ಬಲಿಷ್ಠರನ್ನು ಸೂರೆಮಾಡಿ ಬಡವರಿಗೂ ಅಸಹಾಯಕರಿಗೂ ಕೊಡುವಾತನು ನೀನೇ.”

ಯೆರೆಮೀಯ 29:1-14

ಬಾಬಿಲೋನಿನಲ್ಲಿದ್ದ ಯೆಹೂದದ ಸೆರೆಯಾಳುಗಳಿಗೆ ಒಂದು ಪತ್ರ

29 ಯೆರೆಮೀಯನು ಬಾಬಿಲೋನಿನಲ್ಲಿದ್ದ ಯೆಹೂದ್ಯ ಸೆರೆಯಾಳುಗಳಿಗೆ, ಅಂದರೆ ಹಿರಿಯನಾಯಕರಿಗೆ, ಯಾಜಕರಿಗೆ, ಪ್ರವಾದಿಗಳಿಗೆ ಮತ್ತು ಇನ್ನುಳಿದ ಸಮಸ್ತ ಜನರಿಗೆ ಪತ್ರವನ್ನು ಕಳುಹಿಸಿದನು. ಇವರನ್ನು ನೆಬೂಕದ್ನೆಚ್ಚರನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆಯಾಳುಗಳಾಗಿ ಕೊಂಡೊಯ್ದನು. (ರಾಜನಾದ ಯೆಹೋಯಾಕೀನನನ್ನು, ರಾಜಮಾತೆಯನ್ನು, ಯೆಹೂದದ ಮತ್ತು ಜೆರುಸಲೇಮಿನ ಅಧಿಕಾರಿಗಳನ್ನು, ಮುಂದಾಳುಗಳನ್ನು, ಬಡಗಿಗಳನ್ನು ಮತ್ತು ಕಮ್ಮಾರರನ್ನು ಜೆರುಸಲೇಮಿನಿಂದ ತೆಗೆದುಕೊಂಡು ಹೋದ ಮೇಲೆ ಈ ಪತ್ರವನ್ನು ಕಳಿಸಲಾಯಿತು.) ಚಿದ್ಕೀಯನು ಎಲ್ಲಾಸ ಮತ್ತು ಗೆಮರ್ಯರನ್ನು ರಾಜನಾದ ನೆಬೂಕದ್ನೆಚ್ಚರನ ಬಳಿಗೆ ಕಳಿಸಿದನು. ಚಿದ್ಕೀಯನು ಯೆಹೂದದ ರಾಜನಾಗಿದ್ದನು. ಎಲ್ಲಾಸನು ಶಾಫಾನನ ಮಗನಾಗಿದ್ದನು. ಗೆಮರ್ಯನು ಹಿಲ್ಕೀಯನ ಮಗನಾಗಿದ್ದನು. ಬಾಬಿಲೋನಿಗೆ ಕೊಂಡೊಯ್ಯುವಂತೆ ಯೆರೆಮೀಯನು ಅವರಿಗಾಗಿ ಪತ್ರವನ್ನು ಕೊಟ್ಟನು. ಆ ಪತ್ರದಲ್ಲಿ ಹೀಗೆ ಬರೆಯಲಾಗಿತ್ತು:

ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ತಾನು ಜೆರುಸಲೇಮಿನಿಂದ ಬಾಬಿಲೋನಿಗೆ ಬಂಧಿಗಳನ್ನಾಗಿ ಕಳುಹಿಸಿದ ಎಲ್ಲಾ ಜನರಿಗೆ ಈ ಮಾತುಗಳನ್ನು ಹೇಳುತ್ತಾನೆ. “ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಿಸಿರಿ. ಆ ಪ್ರದೇಶದಲ್ಲಿ ನೆಲೆಸಿರಿ. ತೋಟಗಳನ್ನು ಬೆಳೆಸಿರಿ ಮತ್ತು ನೀವು ಬೆಳೆಸಿದ ಆಹಾರವನ್ನು ಸೇವಿಸಿರಿ. ಮದುವೆ ಮಾಡಿಕೊಳ್ಳಿರಿ; ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೂ ನಿಮ್ಮ ಹೆಣ್ಣುಮಕ್ಕಳಿಗೂ ಮದುವೆ ಮಾಡಿರಿ. ಅವರಿಗೂ ಗಂಡು ಮತ್ತು ಹೆಣ್ಣು ಮಕ್ಕಳಾಗಲಿ. ಅನೇಕ ಮಕ್ಕಳನ್ನು ಹೆತ್ತು ಬಾಬಿಲೋನಿನಲ್ಲಿ ಬಹುಸಂಖ್ಯಾತರಾಗಿ. ಅಲ್ಪಸಂಖ್ಯಾತರಾಗಬೇಡಿ. ಅಂತೆಯೇ, ನಾನು ನಿಮ್ಮನ್ನು ಕಳುಹಿಸಿದ ನಗರಕ್ಕೆ ಒಳ್ಳೆಯದನ್ನು ಮಾಡಿರಿ. ನೀವು ವಾಸಮಾಡುತ್ತಿರುವ ನಗರಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಏಕೆಂದರೆ ಆ ನಗರದಲ್ಲಿ ನೆಮ್ಮದಿಯಿದ್ದರೆ ನಿಮಗೂ ನೆಮ್ಮದಿ ಸಿಗುವುದು.” ಇಸ್ರೇಲರ ದೇವರೂ, ಸರ್ವಶಕ್ತನೂ ಆಗಿರುವ ಯೆಹೋವನು, ಹೀಗೆನ್ನುತ್ತಾನೆ: “ನಿಮ್ಮ ಪ್ರವಾದಿಗಳು ಮತ್ತು ಮಾಟಮಂತ್ರಗಾರರು ನಿಮ್ಮನ್ನು ಮರುಳುಗೊಳಿಸದಿರಲಿ. ಅವರು ನೋಡುವ ಕನಸುಗಳಿಗೆ ಕಿವಿಗೊಡಬೇಡಿ. ಅವರು ಸುಳ್ಳುಗಳನ್ನು ಬೋಧಿಸುತ್ತಿರುವರು. ಅವರ ಸಂದೇಶವು ನನ್ನಿಂದ ಬಂದಿದೆ ಎಂದು ಅವರು ಹೇಳುತ್ತಿರುವರು. ಆದರೆ ನಾನು ಅದನ್ನು ಕಳುಹಿಸಲಿಲ್ಲ.” ಈ ಸಂದೇಶವು ಯೆಹೋವನಿಂದ ಬಂದದ್ದು.

10 ಯೆಹೋವನು ಹೀಗೆನ್ನುತ್ತಾನೆ: “ಬಾಬಿಲೋನ್ ಎಪ್ಪತ್ತು ವರ್ಷಗಳವರೆಗೆ ಬಲಿಷ್ಠವಾಗಿರುವುದು. ಅನಂತರ ನಾನು ಬಾಬಿಲೋನಿನಲ್ಲಿ ವಾಸಮಾಡುತ್ತಿರುವ ನಿಮ್ಮ ಬಳಿಗೆ ಬಂದು ನನ್ನ ವಾಗ್ದಾನದಂತೆ ನಿಮ್ಮನ್ನು ಜೆರುಸಲೇಮಿಗೆ ಮತ್ತೆ ಕರೆದುಕೊಂಡು ಬರುವೆನು. 11 ನಾನು ನಿಮಗಾಗಿ ಹಾಕಿದ ಯೋಜನೆಗಳು ನನಗೆ ಗೊತ್ತಿರುವುದರಿಂದ ನಾನು ಹೀಗೆ ಹೇಳುತ್ತಿದ್ದೇನೆ.” ಇದು ಯೆಹೋವನ ಸಂದೇಶ. “ನಾನು ನಿಮಗಾಗಿ ಒಳ್ಳೆಯ ಯೋಜನೆಗಳನ್ನು ಹಾಕಿದ್ದೇನೆ. ನಿಮಗೆ ಕೆಟ್ಟದ್ದನ್ನು ಮಾಡುವ ವಿಚಾರ ನನಗಿಲ್ಲ. ನಾನು ನಿಮಗಾಗಿ ಆಶಾದಾಯಕವಾದ ಮತ್ತು ಒಳ್ಳೆಯ ಭವಿಷ್ಯದ ವಿಚಾರಗಳನ್ನಿಟ್ಟುಕೊಂಡಿದ್ದೇನೆ. 12 ಆಗ ನೀವು ನನ್ನಲ್ಲಿ ಮೊರೆಯಿಡುವಿರಿ. ನೀವು ನನ್ನಲ್ಲಿಗೆ ಬಂದು ನನ್ನನ್ನು ಪ್ರಾರ್ಥಿಸಿರಿ; ಆಗ ನಾನು ನಿಮಗೆ ಕಿವಿಗೊಡುವೆನು. 13 ನೀವು ನನ್ನನ್ನು ಹುಡುಕುವಿರಿ. ನೀವು ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. 14 ನಾನು ನಿಮಗೆ ದೊರೆಯುವೆನು.” ಇದು ಯೆಹೋವನ ನುಡಿ. “ನಾನು ನಿಮ್ಮನ್ನು ನಿಮ್ಮ ಬಂಧನದಿಂದ ಬಿಡಿಸಿ ಕರೆದುತರುವೆನು. ನಾನು ಈ ಸ್ಥಳವನ್ನು ಬಿಡಲು ನಿಮಗೆ ಒತ್ತಾಯಿಸಿದೆ. ಆದರೆ ನಾನು ನಿಮ್ಮನ್ನು ಕಳುಹಿಸಿದ್ದ ಎಲ್ಲಾ ಜನಾಂಗಗಳಿಂದ ಮತ್ತು ಎಲ್ಲಾ ಸ್ಥಳಗಳಿಂದ ನಿಮ್ಮನ್ನು ಒಟ್ಟುಗೂಡಿಸಿ ಈ ಸ್ಥಳಕ್ಕೆ ಕರೆದು ತರುವೆನು.” ಇದು ಯೆಹೋವನ ನುಡಿ.

ಮಾರ್ಕ 5:1-20

ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ

(ಮತ್ತಾಯ 8:28-34; ಲೂಕ 8:26-39)

ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು ದಾಟಿ ಗೆರಸೇನರ ಪ್ರಾಂತ್ಯಕ್ಕೆ ಹೋದರು. ಯೇಸು ದೋಣಿಯಿಂದ ಹೊರಕ್ಕೆ ಬಂದಾಗ, ಒಬ್ಬ ಮನುಷ್ಯನು ಸಮಾಧಿಯ ಗವಿಗಳಿಂದ ಆತನ ಬಳಿಗೆ ಬಂದನು. ಅವನಿಗೆ ದೆವ್ವಹಿಡಿದಿತ್ತು. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು. ಅವನನ್ನು ಕಟ್ಟಿಹಾಕಲು ಯಾರಿಗೂ ಸಾಧ್ಯವಿರಲಿಲ್ಲ. ಅವನನ್ನು ಸರಪಣಿಗಳಿಂದ ಕಟ್ಟಿದರೂ ಪ್ರಯೋಜನವಾಗುತ್ತಿರಲಿಲ್ಲ. ಜನರು ಅನೇಕ ಸಾರಿ ಅವನ ಕೈ ಕಾಲುಗಳನ್ನು ಸರಪಣಿಗಳಿಂದ ಕಟ್ಟಿಹಾಕಿದರು. ಆದರೆ ಅವನು ಅವುಗಳನ್ನೆಲ್ಲ ಕಿತ್ತೊಗೆದುಬಿಟ್ಟನು. ಅವನನ್ನು ಹತೋಟಿಗೆ ತರುವ ಬಲಿಷ್ಠನು ಅಲ್ಲಿ ಯಾರೂ ಇರಲಿಲ್ಲ. ಅವನು ಹಗಲಿರುಳು ಸಮಾಧಿಯ ಗವಿಗಳ ಸುತ್ತಲು ಮತ್ತು ಬೆಟ್ಟಗಳ ಮೇಲೆ ನಡೆದಾಡುತ್ತಿದ್ದನು. ಅವನು ಕಿರುಚುತ್ತಾ ತನ್ನನ್ನು ಕಲ್ಲುಗಳಿಂದ ಜಜ್ಜಿಕೊಳ್ಳುತ್ತಿದ್ದನು.

ಯೇಸು ಬಹಳ ದೂರದಲ್ಲಿದ್ದಾಗಲೇ, ಅವನು ಆತನನ್ನು ಕಂಡು, ಆತನ ಬಳಿಗೆ ಓಡಿಹೋಗಿ ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿದನು. 7-8 ಯೇಸು ಅವನಿಗೆ, “ಎಲೈ ದೆವ್ವವೇ, ಅವನೊಳಗಿಂದ ಹೊರಗೆ ಬಾ” ಎಂದು ಹೇಳಿದನು. ಆಗ ಅವನು ಗಟ್ಟಿಯಾದ ಧ್ವನಿಯಿಂದ ಅರಚುತ್ತಾ, “ಯೇಸುವೇ, ಪರಾತ್ಪರನಾದ ದೇವಕುಮಾರನೇ, ನನ್ನಿಂದ ನಿನಗೆ ಏನಾಗಬೇಕಾಗಿದೆ? ದೇವರಾಣೆಯಿಟ್ಟು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ” ಎಂದು ಕೇಳಿಕೊಂಡನು.

ಆಗ ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು.

ಅವನು “ನನ್ನ ಹೆಸರು ದಂಡು,[a] ಏಕೆಂದರೆ ನನ್ನಲ್ಲಿ ಅನೇಕ ದೆವ್ವಗಳಿವೆ” ಎಂದು ಉತ್ತರಕೊಟ್ಟನು. 10 ಆ ಮನುಷ್ಯನ ಒಳಗಿದ್ದ ದೆವ್ವಗಳು ಆ ಪ್ರದೇಶದಿಂದ ತಮ್ಮನ್ನು ಹೊರಕ್ಕೆ ಕಳುಹಿಸದಂತೆ ಯೇಸುವಿನಲ್ಲಿ ಮತ್ತೆ ಮತ್ತೆ ಬೇಡಿಕೊಂಡವು.

11 ಅಲ್ಲಿಗೆ ಹತ್ತಿರವಿದ್ದ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. 12 ದೆವ್ವಗಳು ಯೇಸುವಿಗೆ, “ನಮ್ಮನ್ನು ಹಂದಿಗಳೊಳಗೆ ಕಳುಹಿಸಿಕೊಡು” ಎಂದು ಬೇಡಿಕೊಂಡವು. 13 ಯೇಸು ಅವುಗಳಿಗೆ ಅಪ್ಪಣೆ ಕೊಡಲು ಅವು ಅವನನ್ನು ಬಿಟ್ಟು, ಹಂದಿಗಳೊಳಗೆ ಹೊಕ್ಕವು. ಆಗ ಹಂದಿಗಳೆಲ್ಲಾ ಬೆಟ್ಟದಿಂದ ಇಳಿದು, ಸರೋವರದೊಳಕ್ಕೆ ಬಿದ್ದು ಮುಳುಗಿಹೋದವು. ಆ ಹಿಂಡಿನಲ್ಲಿ ಸುಮಾರು ಎರಡು ಸಾವಿರ ಹಂದಿಗಳಿದ್ದವು.

14 ಹಂದಿಗಳನ್ನು ಕಾಯುತ್ತಿದ್ದ ಜನರು ಪಟ್ಟಣದೊಳಕ್ಕೆ ಮತ್ತು ತೋಟಗಳಿಗೆ ಓಡಿಹೋಗಿ ಜನರಿಗೆಲ್ಲ ತಿಳಿಸಿದರು. 15 ಆಗ ಜನರು ನಡೆದ ಸಂಗತಿಯನ್ನು ನೋಡಲು ಯೇಸುವಿನ ಬಳಿಗೆ ಬಂದರು. ಅನೇಕ ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನು ಬಟ್ಟೆ ಹಾಕಿಕೊಂಡು ಅಲ್ಲಿ ಕುಳಿತಿರುವುದನ್ನು ಅವರು ಕಂಡರು. ಅವನು ಮತ್ತೆ ಸ್ವಸ್ಥ ಬುದ್ಧಿಯುಳ್ಳವನಾಗಿದ್ದನು. ಆ ಜನರು ಅವನನ್ನು ನೋಡಿ ಹೆದರಿದರು. 16 ಅಲ್ಲಿದ್ದ ಕೆಲವು ಜನರು, ಯೇಸು ಮಾಡಿದ ಈ ಕಾರ್ಯವನ್ನು ನೋಡಿದ್ದರು. ಈ ಜನರೇ ಉಳಿದ ಜನರಿಗೆಲ್ಲರಿಗೂ ನಡೆದ ಸಂಗತಿಯನ್ನು ಅಂದರೆ ದೆವ್ವದಿಂದ ಪೀಡಿತನಾಗಿದ್ದವನಿಗೂ ದೆವ್ವಗಳಿಗೂ ಮತ್ತು ಹಂದಿಗಳಿಗೂ ಸಂಭವಿಸಿದ್ದನ್ನು ತಿಳಿಸಿದರು. 17 ಆಗ ಜನರು ತಮ್ಮ ಪ್ರಾಂತ್ಯವನ್ನು ಬಿಟ್ಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು.

18 ಯೇಸು ಅಲ್ಲಿಂದ ಹೋಗಲು ದೋಣಿ ಹತ್ತುವುದಕ್ಕೆ ಸಿದ್ಧನಾದಾಗ ದೆವ್ವಗಳಿಂದ ಬಿಡುಗಡೆ ಹೊಂದಿದ್ದ ಮನುಷ್ಯನು, “ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಬೇಡಿಕೊಂಡನು. 19 ಆದರೆ ಯೇಸು ಅವನನ್ನು ಕರೆದುಕೊಂಡು ಹೋಗಲು ಒಪ್ಪದೆ, “ನಿನ್ನ ಮನೆಗೂ ನಿನ್ನ ಸ್ನೇಹಿತರ ಬಳಿಗೂ ಹೋಗು. ಪ್ರಭುವು ನಿನಗೆ ಮಾಡಿದ ಒಳ್ಳೆಯದನ್ನೂ ಆತನು ನಿನಗೆ ತೋರಿದ ಕರುಣೆಯನ್ನೂ ಅವರಿಗೆ ತಿಳಿಸು” ಎಂದು ಹೇಳಿದನು.

20 ಆಗ ಅವನು ಅಲ್ಲಿಂದ ಹೊರಟುಹೋದನು ಮತ್ತು ಯೇಸು ತನಗೆ ಮಾಡಿದ ಉಪಕಾರವನ್ನು ಹತ್ತು ಪಟ್ಟಣಗಳ ಪ್ರದೇಶದ ಜನರಿಗೆ ತಿಳಿಸಿದನು. ಆ ಜನರೆಲ್ಲರೂ ಅತ್ಯಾಶ್ಚರ್ಯಪಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International