Revised Common Lectionary (Semicontinuous)
ರಚನೆಗಾರ: ದಾವೀದ.
35 ಯೆಹೋವನೇ, ನನ್ನ ವ್ಯಾಜ್ಯಗಳಲ್ಲಿ ವಾದಿಸು!
ನನ್ನ ಯುದ್ಧಗಳಲ್ಲಿ ಹೋರಾಡು!
2 ಯೆಹೋವನೇ, ಗುರಾಣಿಗಳನ್ನು ಹಿಡಿದುಕೊಂಡು
ನನಗೆ ಸಹಾಯಕನಾಗಿ ನಿಲ್ಲು.
3 ಈಟಿಯನ್ನೂ ಭಲ್ಲೆಯನ್ನೂ[a] ತೆಗೆದುಕೊ.
ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿರುವ ವೈರಿಗಳೊಡನೆ ಹೋರಾಡು.
“ನಾನು ನಿನ್ನನ್ನು ರಕ್ಷಿಸುತ್ತೇನೆ” ಎಂಬ ಅಭಯವಚನ ನೀಡು.
4 ನನ್ನನ್ನು ಕೊಲ್ಲಬೇಕೆಂದಿರುವವರು ನಿರಾಶೆಗೊಂಡು ನಾಚಿಕೆಗೀಡಾಗಲಿ.
ನನಗೆ ಕೇಡುಮಾಡಬೇಕೆಂದಿರುವವರು ಅವಮಾನಗೊಂಡು ಓಡಿಹೋಗಲಿ.
5 ಅವರು ಗಾಳಿಬಡಿದುಕೊಂಡು ಹೋಗುವ ಹೊಟ್ಟಿನಂತಾಗಲಿ;
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
6 ಯೆಹೋವನೇ, ಅವರ ರಸ್ತೆಯು ಕತ್ತಲಾಗಿರಲಿ; ಜಾರುತ್ತಿರಲಿ.
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
7 ನಾನು ನಿರಪರಾಧಿಯಾಗಿದ್ದರೂ ಅವರು ನನಗೆ ಬಲೆಯೊಡ್ಡಿದ್ದಾರೆ.
ನಿಷ್ಕಾರಣವಾಗಿ ಅವರು ನನಗೆ ಬಲೆಯೊಡ್ಡಿದ್ದಾರೆ.
8 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಕೊಳ್ಳಲಿ;
ತಾವು ತೋಡಿದ ಗುಂಡಿಯೊಳಗೆ ತಾವೇ ಮುಗ್ಗರಿಸಿ ಬೀಳಲಿ.
ಇದ್ದಕ್ಕಿದಂತೆ ಅಪಾಯವು ಅವರನ್ನು ಹಿಡಿದುಕೊಳ್ಳಲಿ.
9 ಆಗ ನಾನು ಯೆಹೋವನಲ್ಲಿ ಹರ್ಷಿಸುವೆನು.
ಆತನು ನನ್ನನ್ನು ರಕ್ಷಿಸಿದ್ದರಿಂದ ಸಂತೋಷಪಡುವೆನು.
10 ಯೆಹೋವನೇ, ಹೃದಯಪೂರ್ವಕವಾಗಿ ಹೇಳುವೆ,
“ನಿನಗೆ ಸಮಾನರು ಇಲ್ಲವೇ ಇಲ್ಲ.
ಬಡವರನ್ನು ಬಲಿಷ್ಠರಿಂದ ತಪ್ಪಿಸಿ ರಕ್ಷಿಸುವಾತನು ನೀನೇ.
ಬಲಿಷ್ಠರನ್ನು ಸೂರೆಮಾಡಿ ಬಡವರಿಗೂ ಅಸಹಾಯಕರಿಗೂ ಕೊಡುವಾತನು ನೀನೇ.”
22 ಬಿಳಾಮನು ಕತ್ತೆಯ ಮೇಲೆ ಸವಾರಿ ಮಾಡುತ್ತಿದ್ದನು. ಅವನ ಜೊತೆ ಇಬ್ಬರು ಆಳುಗಳಿದ್ದರು. ಬಿಳಾಮನು ಪ್ರಯಾಣ ಮಾಡತೊಡಗಿದ್ದರಿಂದ ದೇವರು ಕೋಪಗೊಂಡನು. ಆದ್ದರಿಂದ ಯೆಹೋವನ ದೂತನು ಬಿಳಾಮನನ್ನು ತಡೆಯಲು ದಾರಿಯಲ್ಲಿ ನಿಂತುಕೊಂಡನು.
23 ಯೆಹೋವನ ದೂತನು ಬಿಚ್ಚುಕತ್ತಿಯನ್ನು ಹಿಡಿದುಕೊಂಡು ದಾರಿಯಲ್ಲೇ ನಿಂತಿರುವುದನ್ನು ಆ ಕತ್ತೆ ನೋಡಿ ದಾರಿಯನ್ನು ಬಿಟ್ಟು ಬಯಲಿನ ಕಡೆ ಹೋಯಿತು. ಕತ್ತೆಯನ್ನು ದಾರಿಗೆ ತಿರುಗಿಸುವದಕ್ಕೆ ಬಿಳಾಮನು ಅದನ್ನು ಹೊಡೆದನು. ಅವನಿಗೆ ದೂತನು ಕಾಣಿಸಲಿಲ್ಲ.
24 ಆಮೇಲೆ ಯೆಹೋವನ ದೂತನು ಎರಡು ದ್ರಾಕ್ಷಿತೋಟಗಳ ನಡುವಿನ ಕಿರಿದಾದ ದಾರಿಯಲ್ಲಿ ನಿಂತುಕೊಂಡನು. ಎರಡು ಕಡೆಯಲ್ಲಿಯೂ ಗೋಡೆಗಳಿದ್ದವು. 25 ತಿರುಗಿ ಕತ್ತೆಯು ಯೆಹೋವನ ದೂತನನ್ನು ನೋಡಿ ಗೋಡೆಗೆ ತನ್ನನ್ನು ಒತ್ತರಿಸಿಕೊಂಡಿತು. ಆಗ ಬಿಳಾಮನ ಪಾದವು ಗೋಡೆಗೆ ಒತ್ತರಿಸಿತು. ಆದ್ದರಿಂದ ಬಿಳಾಮನು ತಿರುಗಿ ಕತ್ತೆಯನ್ನು ಹೊಡೆದನು.
26 ಬಳಿಕ ಯೆಹೋವನ ದೂತನು ಮತ್ತೆ ಮುಂದೆ ಹೋಗಿ ಕತ್ತೆಯು ಎಡಕ್ಕಾಗಲಿ ಬಲಕ್ಕಾಗಲಿ ಹೊರಳಲು ಸಾಧ್ಯವಿಲ್ಲದಷ್ಟು ಇನ್ನೂ ಕಿರಿದಾದ ಸ್ಥಳದಲ್ಲಿ ನಿಂತುಕೊಂಡನು. 27 ಕತ್ತೆಯು ಯೆಹೋವನ ದೂತನನ್ನು ನೋಡಿ ಬಿಳಾಮನ ಕೆಳಗೆ ಅಡಗಿ ಮಲಗಿಕೊಂಡಿತು. ಆಗ ಬಿಳಾಮನು ಸಿಟ್ಟುಗೊಂಡು ತನ್ನ ಕೋಲಿನಿಂದ ಕತ್ತೆಯನ್ನು ಹೊಡೆದನು.
28 ಆಗ ಯೆಹೋವನು ಆ ಕತ್ತೆಗೆ ಮಾತಾಡುವ ಶಕ್ತಿಯನ್ನು ಕೊಟ್ಟನು. ಅದು ಬಿಳಾಮನಿಗೆ, “ನೀನು ಮೂರು ಸಾರಿ ನನ್ನನ್ನು ಹೊಡೆದದ್ದೇಕೆ? ನಾನು ನಿನಗೇನು ಮಾಡಿದ್ದೇನೆ?” ಎಂದು ಕೇಳಿತು.
32 ನೀವು ಚಿಂತೆ ಇಲ್ಲದೆ ಇರಬೇಕೆಂಬುದೇ ನನ್ನ ಬಯಕೆಯಾಗಿದೆ. ಮದುವೆಯಾಗಿಲ್ಲದ ವ್ಯಕ್ತಿಯು ಪ್ರಭುವಿನ ಸೇವೆಯಲ್ಲಿ ನಿರತನಾಗಿರುತ್ತಾನೆ. ಅವನು ಪ್ರಭುವನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾನೆ. 33 ಆದರೆ ಮದುವೆಯಾಗಿರುವ ವ್ಯಕ್ತಿಯು ಈ ಲೋಕದ ಕಾರ್ಯಗಳಲ್ಲಿ ನಿರತನಾಗಿರುತ್ತಾನೆ. ಅವನು ತನ್ನ ಹೆಂಡತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾನೆ. 34 ಅವನು ತನ್ನ ಹೆಂಡತಿಯನ್ನು ಮತ್ತು ಪ್ರಭುವನ್ನು ಮೆಚ್ಚಿಸುವುದರ ಬಗ್ಗೆ ಆಲೋಚಿಸಬೇಕಾಗುತ್ತದೆ. ಮದುವೆಯಾಗಿಲ್ಲದ ಸ್ತ್ರೀಯಾಗಲಿ ಹುಡುಗಿಯಾಗಲಿ ಪ್ರಭುವಿನ ಸೇವೆಯಲ್ಲಿ ನಿರತಳಾಗಿರುತ್ತಾಳೆ. ಆಕೆ ತನ್ನ ದೇಹ ಮತ್ತು ಆತ್ಮಗಳನ್ನು ಸಂಪೂರ್ಣವಾಗಿ ಪ್ರಭುವಿಗೆ ಕೊಡಲು ಬಯಸುತ್ತಾಳೆ. ಆದರೆ ಮದುವೆಯಾದ ಸ್ತ್ರೀಯು ಈ ಲೋಕದ ಕಾರ್ಯಗಳಲ್ಲಿ ನಿರತಳಾಗಿರುತ್ತಾಳೆ. ಆಕೆ ತನ್ನ ಗಂಡನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾಳೆ. 35 ನಿಮಗೆ ಸಹಾಯವಾಗಲೆಂದು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. ನಾನು ನಿಮ್ಮನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸುತ್ತಿಲ್ಲ. ಆದರೆ ನೀವು ಸರಿಯಾದ ಮಾರ್ಗದಲ್ಲಿ ಜೀವಿಸಬೇಕೆಂಬುದೇ ನನ್ನ ಬಯಕೆಯಾಗಿದೆ. ನೀವು ನಿಮ್ಮ ಸಮಯವನ್ನು ಬೇರೆ ಕಾರ್ಯಗಳಿಗೆ ಕೊಡದೆ ನಿಮ್ಮನ್ನು ಸಂಪೂರ್ಣವಾಗಿ ಪ್ರಭುವಿಗೆ ಅರ್ಪಿಸಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ.
36 ತನ್ನ ಮಗಳ (ಕನ್ನಿಕೆಯ) ಮದುವೆಯ ವಯಸ್ಸು ಮೀರಿ ಹೋಗುವಂತೆ ಬಿಟ್ಟುಕೊಡುವುದು ಒಳ್ಳೆಯದಲ್ಲವೆಂದೂ, ಆಕೆಗೆ ಮದುವೆ ಮಾಡಿಸುವುದು ಅವಶ್ಯಕವೆಂದೂ ಒಬ್ಬನು ಭಾವಿಸಿದರೆ, ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲಿ. ಅವನು ಅವರಿಗೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ. 37 ಆದರೆ ಮತ್ತೊಬ್ಬನು ಮದುವೆಯ ಅಗತ್ಯವಿಲ್ಲವೆಂದು ತನ್ನ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿಕೊಂಡಿದ್ದರೆ ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲು ಸ್ವತಂತ್ರನಾಗಿದ್ದಾನೆ. ಅವನು ತನ್ನ ಮಗಳಿಗೆ ಮದುವೆ ಮಾಡುವುದಿಲ್ಲವೆಂದು ತನ್ನ ಹೃದಯದಲ್ಲಿ ನಿರ್ಧರಿಸಿದ್ದರೆ ಅವನು ಒಳ್ಳೆಯದನ್ನೇ ಮಾಡುತ್ತಿದ್ದಾನೆ. 38 ಆದ್ದರಿಂದ ಒಬ್ಬನು ತನ್ನ ಮಗಳಿಗೆ ಮದುವೆ ಮಾಡಿಕೊಡುವುದು ಒಳ್ಳೆಯದಾಗಿದೆ. ಅಲ್ಲದೆ ತನ್ನ ಮಗಳಿಗೆ ಮದುವೆ ಮಾಡಿಕೊಡದಿರುವುದು ಮತ್ತಷ್ಟು ಒಳ್ಳೆಯದಾಗಿದೆ.[a]
39 ಗಂಡನು ಬದುಕಿರುವ ತನಕ ಹೆಂಡತಿಯು ಅವನೊಂದಿಗೆ ಬಾಳ್ವೆ ನಡೆಸಬೇಕು. ಆದರೆ ಗಂಡನು ಸತ್ತುಹೋದರೆ, ಆ ಸ್ತ್ರೀಯು ತಾನು ಬಯಸಿದವರನ್ನು ಮದುವೆಯಾಗಲು ಸ್ವತಂತ್ರಳಾಗಿದ್ದಾಳೆ. ಆದರೆ ಅವನು ಪ್ರಭುವನ್ನು ಅನುಸರಿಸುವವನಾಗಿರಬೇಕು. 40 ಆಕೆಯು ಮತ್ತೆ ಮದುವೆ ಮಾಡಿಕೊಳ್ಳದಿದ್ದರೆ ಹೆಚ್ಚು ಸಂತೋಷದಿಂದಿರುವಳು. ಇದು ನನ್ನ ಅಭಿಪ್ರಾಯವಾಗಿದೆ. ದೇವರಾತ್ಮನು ನನ್ನೊಳಗಿದ್ದಾನೆಂದು ನಾನು ನಂಬುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International