Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 46

ರಚನೆಗಾರರು: ಕೋರಹೀಯರು.

46 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ.
    ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.
ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು
    ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.
ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ
    ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.

ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ
    ದೇವನಗರವನ್ನು ಸಂತೋಷಪಡಿಸುತ್ತದೆ.
ದೇವರು ಆ ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ.
    ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.
ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ;
    ಭೂಮಿಯು ಕರಗಿಹೋಗುವುದು.
ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.
ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ;
    ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.
ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು;
    ಬಿಲ್ಲುಗಳನ್ನೂ ಗುರಾಣಿಗಳನ್ನೂ[a] ಮುರಿದುಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.

10 ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ!
    ನಾನು ಜನಾಂಗಗಳನ್ನು ಸೋಲಿಸುವೆನು!
    ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”

11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.

ಆದಿಕಾಂಡ 12:1-9

ದೇವರು ಅಬ್ರಾಮನನ್ನು ಕರೆದದ್ದು

12 ಯೆಹೋವನು ಅಬ್ರಾಮನಿಗೆ,

“ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ಹೊರಡು.
ನಿನ್ನ ತಂದೆಯ ಕುಟುಂಬವನ್ನು ಬಿಟ್ಟು
    ನಾನು ತೋರಿಸುವ ದೇಶಕ್ಕೆ ಹೋಗು.
ನಾನು ನಿನ್ನನ್ನು ಆಶೀರ್ವದಿಸುವೆನು;
    ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡಿ
    ನಿನ್ನ ಹೆಸರನ್ನು ಪ್ರಖ್ಯಾತಿಪಡಿಸುವೆನು;
ನೀನು ಆಶೀರ್ವಾದದಾಯಕನಾಗುವಂತೆ[a] ಮಾಡುವೆನು.
ನಿನಗೆ ಒಳ್ಳೆಯದನ್ನು ಮಾಡುವವರನ್ನು ಆಶೀರ್ವದಿಸುವೆನು;
    ನಿನಗೆ ಕೇಡುಮಾಡುವವರನ್ನು ಶಿಕ್ಷಿಸುವೆನು.
ನಿನ್ನ ನಿಮಿತ್ತವಾಗಿ ಲೋಕದವರೆಲ್ಲರೂ
    ಆಶೀರ್ವಾದ ಹೊಂದುವರು” ಎಂದು ಹೇಳಿದನು.

ಕಾನಾನಿಗೆ ಅಬ್ರಾಮನ ಪ್ರಯಾಣ

ಆದ್ದರಿಂದ ಅಬ್ರಾಮನು ಯೆಹೋವನಿಗೆ ವಿಧೇಯನಾದನು. ಅವನು ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟನು. ಅವನೊಡನೆ ಲೋಟನು ಸಹ ಹೋದನು. ಆಗ ಅಬ್ರಾಮನಿಗೆ ಎಪ್ಪತ್ತೈದು ವರ್ಷ ವಯಸ್ಸಾಗಿತ್ತು. ಅಬ್ರಾಮನು ಹಾರಾನ್ ಪಟ್ಟಣವನ್ನು ಬಿಟ್ಟು ಒಬ್ಬಂಟಿಗನಾಗಿ ಹೋಗಲಿಲ್ಲ. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ತಮ್ಮನ ಮಗನಾದ ಲೋಟನನ್ನೂ ತನ್ನೊಂದಿಗೆ ಕರೆದುಕೊಂಡು ಹೋದನು. ಹಾರಾನ್ ಪಟ್ಟಣದಲ್ಲಿ ತಮಗಿದ್ದ ಸ್ವತ್ತುಗಳನ್ನೆಲ್ಲ ಅವರು ತೆಗೆದುಕೊಂಡು ಹೋದರು. ಅಬ್ರಾಮನು ಹಾರಾನ್ ಪಟ್ಟಣದಲ್ಲಿ ಹೊಂದಿದ್ದ ಸೇವಕರು ಸಹ ಅವನೊಡನೆ ಹೋದರು. ಅಬ್ರಾಮನು ಮತ್ತು ಅವನ ಸಂಗಡಿಗರು ಹಾರಾನ್ ಪಟ್ಟಣವನ್ನು ಬಿಟ್ಟು ಕಾನಾನ್ ದೇಶಕ್ಕೆ ಪ್ರಯಾಣಮಾಡಿದರು. ಅಬ್ರಾಮನು ಕಾನಾನ್ ದೇಶದಲ್ಲಿ ಪ್ರಯಾಣವನ್ನು ಮುಂದುವರಿಸಿದನು. ಅವನು ಶೆಕೆಮ್ ನಗರವನ್ನು ತಲುಪಿ, ಅಲ್ಲಿಂದ ಮೋರೆ ಎಂಬ ದೊಡ್ಡ ಓಕ್ ಮರವಿದ್ದ ಸ್ಥಳಕ್ಕೆ ಬಂದನು. ಆ ಕಾಲದಲ್ಲಿ ಕಾನಾನ್ಯರು ಆ ದೇಶದಲ್ಲಿ ವಾಸವಾಗಿದ್ದರು.

ಯೆಹೋವನು ಅಬ್ರಾಮನಿಗೆ ಕಾಣಿಸಿಕೊಂಡು, “ನಿನ್ನ ಸಂತತಿಯವರಿಗೆ ಈ ದೇಶವನ್ನು ಕೊಡುವೆನು” ಎಂದು ಹೇಳಿದನು.

ಆ ಸ್ಥಳದಲ್ಲಿ ಯೆಹೋವನು ಅಬ್ರಾಮನಿಗೆ ಕಾಣಿಸಿಕೊಂಡನು. ಆದ್ದರಿಂದ ಅಬ್ರಾಮನು ಯೆಹೋವನನ್ನು ಆರಾಧಿಸುವುದಕ್ಕಾಗಿ ಅಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿದನು. ಆಮೇಲೆ ಅಬ್ರಾಮನು ಆ ಸ್ಥಳದಿಂದ ಹೊರಟು ಬೇತೇಲಿಗೆ ಪೂರ್ವದಲ್ಲಿರುವ ಗುಡ್ಡಗಳ ಬಳಿಗೆ ಪ್ರಯಾಣ ಮಾಡಿದನು. ಅಲ್ಲಿ ಅಬ್ರಾಮನು ತನ್ನ ಗುಡಾರಗಳನ್ನು ಹಾಕಿದನು. ಪಶ್ಚಿಮಕ್ಕೆ ಬೇತೇಲ್ ಪಟ್ಟಣವಿತ್ತು, ಪೂರ್ವಕ್ಕೆ ಆಯಿ ಪಟ್ಟಣವಿತ್ತು. ಆ ಸ್ಥಳದಲ್ಲಿ ಅವನು ಯೆಹೋವನಿಗೋಸ್ಕರ ಒಂದು ಯಜ್ಞವೇದಿಕೆಯನ್ನು ಕಟ್ಟಿ ಅಲ್ಲಿ ಅವನು ಯೆಹೋವನನ್ನು ಆರಾಧಿಸಿದನು. ತರುವಾಯ ಅವನು ಮತ್ತೆ ಪ್ರಯಾಣವನ್ನು ಮುಂದುವರಿಸಿ ನೆಗೆವ್ ಸ್ಥಳದ ಕಡೆಗೆ ಹೋದನು.

1 ಕೊರಿಂಥದವರಿಗೆ 7:17-24

ದೇವರ ಕರೆಗೆ ತಕ್ಕಂತೆ ಜೀವಿಸಿರಿ

17 ಆದರೂ ದೇವರು ಪ್ರತಿಯೊಬ್ಬನಿಗೆ ಜೀವನದಲ್ಲಿ ಯಾವ ಸ್ಥಿತಿಯನ್ನು ನೇಮಿಸಿದ್ದಾನೋ ಅಂದರೆ ದೇವರು ನಿಮ್ಮನ್ನು ಕರೆದಾಗ ನೀವು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು. ನಾನು ಎಲ್ಲಾ ಸಭೆಗಳಿಗೂ ಇದನ್ನೇ ಆಜ್ಞಾಪಿಸುತ್ತೇನೆ. 18 ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಮೊದಲೇ ಸುನ್ನತಿ ಮಾಡಿಸಿಕೊಂಡವನಾಗಿದ್ದರೆ, ಅವನು ಸುನ್ನತಿಯಿಲ್ಲದಂಥವನಾಗಬಾರದು. ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಸುನ್ನತಿಯನ್ನು ಹೊಂದಿಲ್ಲದವನಾಗಿದ್ದರೆ, ಅವನು ಸುನ್ನತಿಯನ್ನು ಮಾಡಿಸಿಕೊಳ್ಳಬಾರದು. 19 ಸುನ್ನತಿಯನ್ನು ಮಾಡಿಸಿಕೊಳ್ಳುವುದಾಗಲಿ ಮಾಡಿಸಿಕೊಳ್ಳದಿರುವುದಾಗಲಿ ಮುಖ್ಯವಲ್ಲ. ದೇವರ ಆಜ್ಞೆಗಳಿಗೆ ವಿಧೇಯರಾಗುವುದೇ ಮುಖ್ಯವಾದದ್ದು. 20 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಇರಬೇಕು. 21 ದೇವರು ನಿನ್ನನ್ನು ಕರೆದಾಗ ನೀನು ಗುಲಾಮನಾಗಿದ್ದರೆ, ಚಿಂತಿಸಬೇಡ. ಆದರೆ ನೀನು ಬಿಡುಗಡೆಯಾಗಲು ಸಾಧ್ಯವಿದ್ದರೆ, ಬಿಡುಗಡೆಯಾಗು. 22 ದೇವರು ಕರೆದಾಗ ಗುಲಾಮನಾಗಿದ್ದವನು ಪ್ರಭುವಿನಲ್ಲಿ ಬಿಡುಗಡೆಯಾಗಿದ್ದಾನೆ. ಅವನು ಪ್ರಭುವಿಗೆ ಸೇರಿದವನಾಗಿದ್ದಾನೆ. ಅದೇರೀತಿಯಲ್ಲಿ ದೇವರು ಕರೆದಾಗ ಸ್ವತಂತ್ರನಾಗಿದ್ದವನು ಈಗ ಕ್ರಿಸ್ತನ ಗುಲಾಮನಾಗಿದ್ದಾನೆ. 23 ನಿಮ್ಮನ್ನು ಕ್ರಯಕ್ಕೆ ಕೊಂಡುಕೊಳ್ಳಲಾಗಿದೆ. ಆದ್ದರಿಂದ ನೀವು ಮನುಷ್ಯರ ಗುಲಾಮರಾಗಬೇಡಿ. 24 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನಿಮ್ಮಲ್ಲಿ ಪ್ರತಿಯೊಬ್ಬರು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಹೊಸ ಜೀವನದಲ್ಲಿ ಮುಂದುವರಿಯಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International