Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 62:5-12

ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
    ನನ್ನ ನಿರೀಕ್ಷೆ ದೇವರಲ್ಲಿಯೇ.
ಆತನೇ ನನಗೆ ಬಂಡೆಯೂ
    ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
ನನ್ನ ರಕ್ಷಣೆಯೂ ಮಾನವೂ ದೇವರೇ.
    ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ.
    ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ.
    ಆತನೇ ನಮ್ಮ ಆಶ್ರಯಸ್ಥಾನ.

ಸಾಮಾನ್ಯ ಜನರು ಕೇವಲ ಉಸಿರಷ್ಟೇ.
    ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ.
ತೂಗಿನೋಡಿದರೆ ಅವರು ಕೇವಲ ಶೂನ್ಯ;
    ಉಸಿರಿಗಿಂತಲೂ ಹಗುರ.
10 ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ.
    ಕದ್ದವಸ್ತುಗಳಲ್ಲಿ ಜಂಬಪಡಬೇಡಿ.
ಐಶ್ವರ್ಯವು ಅಧಿಕವಾಗುತ್ತಿದ್ದರೂ
    ಅದರಲ್ಲಿ ಮನಸ್ಸಿಡಬೇಡಿ.
11 “ಶಕ್ತಿಯೂ ದೇವರಿಂದಲೇ”
    ಎಂದು ದೇವರು ನುಡಿದಿದ್ದಾನೆ.

12 ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ.
    ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.

ಯೆರೆಮೀಯ 20:14-18

ಯೆರೆಮೀಯನ ಆರನೇ ದೂರು

14 ನಾನು ಹುಟ್ಟಿದ ದಿನವು ಶಾಪಗ್ರಸ್ತವಾಗಲಿ;
    ತಾಯಿಯು ನನ್ನನ್ನು ಹೆತ್ತ ದಿನವು ಶುಭವೆನಿಸಿಕೊಳ್ಳದಿರಲಿ.
15 “ನಿನಗೆ ಗಂಡುಮಗು ಹುಟ್ಟಿದೆ” ಎಂಬ ಸಮಾಚಾರವನ್ನು ನನ್ನ ತಂದೆಗೆ ತಿಳಿಸಿ
    ಅವನಿಗೆ ಅತ್ಯಾನಂದವನ್ನು ಉಂಟುಮಾಡಿದವನು ಶಪಿಸಲ್ಪಡಲಿ.
16 ಯೆಹೋವನು ಕನಿಕರಪಡದೆ
    ಕೆಡವಿಬಿಟ್ಟ ನಗರಗಳ ಗತಿಯು ಅವನಿಗೆ ಬರಲಿ.
ಬೆಳಿಗ್ಗೆ ಯುದ್ಧದ ಕೂಗಾಟವೂ,
    ಮಧ್ಯಾಹ್ನದಲ್ಲಿ ಯುದ್ಧದ ಕಿರುಚಾಟವೂ ಅವನ ಕಿವಿಗೆ ಬೀಳಲಿ.
17 ಯಾಕೆ ಆ ಮನುಷ್ಯನು
    ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಕೊಲ್ಲಲಿಲ್ಲ?
ಆಗ ಅವನು ನನ್ನನ್ನು ಕೊಂದಿದ್ದರೆ
    ನನ್ನ ತಾಯಿಯೇ ನನಗೆ ಗೋರಿಯಾಗುತ್ತಿದ್ದಳು.
    ನಾನೆಂದೂ ಹುಟ್ಟುತ್ತಲೇ ಇರಲಿಲ್ಲ.
18 ನಾನು ತಾಯಿಯ ಗರ್ಭದಿಂದ ಏಕೆ ಹೊರಬರಬೇಕಿತ್ತು?
    ನಾನು ಕಷ್ಟವನ್ನು ಮತ್ತು ದುಃಖವನ್ನು ಕಂಡಿರುವೆನಷ್ಟೇ.
    ನನ್ನ ಜೀವನವು ನಾಚಿಕೆಯಲ್ಲಿಯೇ ಕೊನೆಗೊಳ್ಳುವುದು.

ಲೂಕ 10:13-16

ನಂಬಲೊಲ್ಲದ ಜನರಿಗೆ ಯೇಸುವಿನ ಎಚ್ಚರಿಕೆ

(ಮತ್ತಾಯ 11:20-24)

13 “ಕೊರಾಜಿನೇ, ಬೆತ್ಸಾಯಿದವೇ,[a] ನಿಮ್ಮ ಗತಿಯನ್ನು ಏನು ಹೇಳಲಿ! ನಿಮ್ಮಲ್ಲಿ ನಾನು ಅನೇಕ ಸೂಚಕಕಾರ್ಯಗಳನ್ನು ಮಾಡಿದೆನು. ಅದೇ ಸೂಚಕ ಕಾರ್ಯಗಳು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅವುಗಳ ಜನರು ಬಹಳ ಹಿಂದೆಯೇ, ತಮ್ಮ ಜೀವಿತಗಳನ್ನು ಮಾರ್ಪಡಿಸಿಕೊಂಡು, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ಗೋಣಿತಟ್ಟನ್ನು ಧರಿಸಿಕೊಂಡು, ಬೂದಿಯನ್ನು ಬಳಿದುಕೊಳ್ಳುತ್ತಿದ್ದರು. 14 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಸ್ಥಿತಿಯು ಟೈರ್ ಮತ್ತು ಸಿದೋನ್‌ಗಳ ಸ್ಥಿತಿಗಿಂತಲೂ ಕಠಿಣವಾಗಿರುವುದು. 15 ಕಪೆರ್ನೌಮೇ,[b] ನೀನು ಪರಲೋಕಕ್ಕೆ ಏರಿಸಲ್ಪಡುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ!

16 “ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನೇ ಕೇಳುವವನಾಗಿದ್ದಾನೆ. ನಿಮ್ಮನ್ನು ಅಂಗೀಕರಿಸದವನು ನನ್ನನ್ನೇ ಅಂಗಿಕರಿಸದವನಾಗಿದ್ದಾನೆ. ನನ್ನನ್ನು ನಿರಾಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ (ದೇವರು) ನಿರಾಕರಿಸುವವನಾಗಿದ್ದಾನೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International