Revised Common Lectionary (Semicontinuous)
5 ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
ನನ್ನ ನಿರೀಕ್ಷೆ ದೇವರಲ್ಲಿಯೇ.
6 ಆತನೇ ನನಗೆ ಬಂಡೆಯೂ
ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
7 ನನ್ನ ರಕ್ಷಣೆಯೂ ಮಾನವೂ ದೇವರೇ.
ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
8 ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ.
ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ.
ಆತನೇ ನಮ್ಮ ಆಶ್ರಯಸ್ಥಾನ.
9 ಸಾಮಾನ್ಯ ಜನರು ಕೇವಲ ಉಸಿರಷ್ಟೇ.
ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ.
ತೂಗಿನೋಡಿದರೆ ಅವರು ಕೇವಲ ಶೂನ್ಯ;
ಉಸಿರಿಗಿಂತಲೂ ಹಗುರ.
10 ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ.
ಕದ್ದವಸ್ತುಗಳಲ್ಲಿ ಜಂಬಪಡಬೇಡಿ.
ಐಶ್ವರ್ಯವು ಅಧಿಕವಾಗುತ್ತಿದ್ದರೂ
ಅದರಲ್ಲಿ ಮನಸ್ಸಿಡಬೇಡಿ.
11 “ಶಕ್ತಿಯೂ ದೇವರಿಂದಲೇ”
ಎಂದು ದೇವರು ನುಡಿದಿದ್ದಾನೆ.
12 ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ.
ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.
ಯೆರೆಮೀಯನ ಐದನೆ ದೂರು
7 ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದೆ, ನಿಜವಾಗಿಯೂ ನಾನು ಮರುಳಾದೆನು,
ನೀನು ನನಗಿಂತ ಬಲಿಷ್ಠನಾದುದರಿಂದ ಗೆದ್ದೆ.
ನಾನೊಂದು ತಮಾಷೆಯಾಗಿದ್ದೇನೆ.
ಹಗಲೆಲ್ಲ ಜನರು ನನ್ನನ್ನು ಕಂಡು ನಗುತ್ತಾರೆ.
ನನ್ನನ್ನು ಗೇಲಿ ಮಾಡುತ್ತಾರೆ.
8 ನಾನು ಮಾತನಾಡಿದಾಗಲೆಲ್ಲ ಕೂಗಿಕೂಗಿ ಹೇಳುತ್ತೇನೆ.
ನಾನು ಯಾವಾಗಲೂ ಹಿಂಸೆ ಮತ್ತು ವಿನಾಶದ ಬಗ್ಗೆ ಕೂಗಿಕೊಳ್ಳುತ್ತೇನೆ.
ಯೆಹೋವನಿಂದ ಬಂದ ಸಂದೇಶದ ಬಗ್ಗೆ ಜನರಿಗೆ ಹೇಳುತ್ತೇನೆ.
ಆದರೆ ಜನರು ಯಾವಾಗಲೂ ನನಗೆ ಅವಮಾನ ಮಾಡುತ್ತಾರೆ.
ನನ್ನನ್ನು ಗೇಲಿ ಮಾಡುತ್ತಾರೆ.
9 ಒಮ್ಮೊಮ್ಮೆ ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತೇನೆ,
“ನಾನು ಯೆಹೋವನನ್ನೇ ಮರೆತುಬಿಡುತ್ತೇನೆ.
ಆತನ ಹೆಸರಿನಲ್ಲಿ ಇನ್ನೇನೂ ಮಾತನಾಡುವುದಿಲ್ಲ”
ಎಂದುಕೊಂಡರೆ ಆತನ ಸಂದೇಶವು ನನ್ನ ಅಂತರಾಳದಲ್ಲಿ ಉರಿಯುವ ಜ್ವಾಲೆಯಂತಾಗುತ್ತದೆ.
ಅದು ಆಳಕ್ಕೆ ಇಳಿದು ನನ್ನ ಎಲುಬುಗಳನ್ನು ಸುಡುವಂತಾಗುತ್ತದೆ.
ಯೆಹೋವನ ಸಂದೇಶವನ್ನು ನನ್ನ ಅಂತರಾಳದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನ ಮಾಡಿ ನಾನು ದಣಿಯುತ್ತೇನೆ.
ಕೊನೆಗೆ ಅದನ್ನು ನನ್ನೊಳಗೆ ಇಟ್ಟುಕೊಳ್ಳಲು ಅಸಾಧ್ಯವಾಗುತ್ತದೆ.
10 ಅನೇಕ ಜನರು ನನ್ನ ವಿರುದ್ಧವಾಗಿ ಮೆಲುಧ್ವನಿಯಲ್ಲಿ ಮಾತನಾಡುವದು ನನ್ನ ಕಿವಿಗೆ ಬೀಳುತ್ತಿದೆ,
ಅದು ನನ್ನನ್ನು ಭಯಗೊಳಿಸುತ್ತಿದೆ.
ನನ್ನ ಸ್ನೇಹಿತರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.
ನಾನು ಯಾವುದಾದರೂ ತಪ್ಪನ್ನು ಮಾಡಲಿ ಎಂದು ಜನರು ಹೊಂಚುಹಾಕಿ ಕಾದಿದ್ದಾರೆ.
“ಅವನು ದುಷ್ಕೃತ್ಯವನ್ನು ಮಾಡಿದ್ದಾನೆಂದು ನಾವು ಸುಳ್ಳು ಹೇಳೋಣ.
ಯೆರೆಮೀಯನನ್ನು ನಾವು ವಂಚಿಸಲು ಸಾಧ್ಯವಾಗಬಹುದು.
ನಾವು ಅವನನ್ನು ಹಿಡಿದುಕೊಳ್ಳಬಹುದು.
ಕೊನೆಗೆ ಅವನನ್ನು ತೊಲಗಿಸಬಹುದು.
ನಾವು ಅವನನ್ನು ಹಿಡಿದು ಅವನ ಮೇಲೆ ನಮ್ಮ ಸೇಡನ್ನು ತೀರಿಸಿಕೊಳ್ಳೋಣ” ಎಂದು ಮಾತನಾಡುತ್ತಿದ್ದಾರೆ.
11 ಆದರೆ ಯೆಹೋವನು ನನ್ನೊಡನಿದ್ದಾನೆ.
ಯೆಹೋವನು ಒಬ್ಬ ಶೂರ ಯೋಧನಂತಿದ್ದಾನೆ.
ಆದ್ದರಿಂದ ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿದ್ದ ಜನರು ಬೀಳುತ್ತಾರೆ.
ಅವರು ನನ್ನನ್ನು ಸೋಲಿಸಲಾರರು.
ಆ ಜನರು ಸೋತುಹೋಗುತ್ತಾರೆ.
ಅವರಿಗೆ ಆಶಾಭಂಗವಾಗುತ್ತದೆ.
ಅವರಿಗೆ ನಾಚಿಕೆಯಾಗುತ್ತದೆ.
ಅವರು ಆ ನಾಚಿಕೆಯನ್ನು ಎಂದೂ ಮರೆಯಲಾರರು.
12 ಸರ್ವಶಕ್ತನಾದ ಯೆಹೋವನೇ, ನೀನು ಒಳ್ಳೆಯವರನ್ನು ಪರೀಕ್ಷಿಸುವೆ.
ನೀನು ಒಬ್ಬ ವ್ಯಕ್ತಿಯ ಹೃದಯವನ್ನು ಮತ್ತು ಬುದ್ಧಿಯನ್ನು ಆಳವಾಗಿ ಪರೀಕ್ಷಿಸಿನೋಡುವೆ.
ನಾನು ಅವರ ವಿರುದ್ಧ ನನ್ನ ಅಭಿಪ್ರಾಯಗಳನ್ನು ನಿನಗೆ ತಿಳಿಸಿದ್ದೇನೆ.
ನೀನು ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿರುವದನ್ನು ನನ್ನ ಕಣ್ಣುಗಳು ನೋಡಲಿ.
13 ಯೆಹೋವನನ್ನು ಕೀರ್ತಿಸಿರಿ, ಯೆಹೋವನನ್ನು ಸ್ತುತಿಸಿರಿ.
ಆತನು ಬಡಜನರ ಪ್ರಾಣಗಳನ್ನು ಉಳಿಸುತ್ತಾನೆ.
ಆತನು ಅವರನ್ನು ದುಷ್ಟರ ದೌರ್ಜನ್ಯದಿಂದ ರಕ್ಷಿಸುತ್ತಾನೆ.
ಯೇಸು ಮತ್ತೆ ಪ್ರತ್ಯಕ್ಷನಾಗುತ್ತಾನೆ
3 ನನ್ನ ಸ್ನೇಹಿತರೇ, ನಾನು ನಿಮಗೆ ಬರೆಯುತ್ತಿರುವ ಎರಡನೆ ಪತ್ರವಿದು. ನಿಮ್ಮ ಯಥಾರ್ಥವಾದ ಮನಸ್ಸು ಮತ್ತೆ ನೆನಪು ಮಾಡಿಕೊಳ್ಳಲಿ ಎಂದು ನಾನು ಈ ಎರಡು ಪತ್ರಗಳನ್ನು ಬರೆದಿದ್ದೇನೆ. 2 ಪರಿಶುದ್ಧರಾದ ಪ್ರವಾದಿಗಳು ಹಿಂದಿನಕಾಲದಲ್ಲಿ ಹೇಳಿದ್ದನ್ನು ನೀವು ಜ್ಞಾಪಿಸಿಕೊಳ್ಳಬೇಕೆಂಬುದೇ ನನ್ನ ಅಪೇಕ್ಷೆ. ನಮ್ಮ ರಕ್ಷಕನಾದ ಪ್ರಭುವು ನಿಮ್ಮ ಅಪೊಸ್ತಲರ ಮೂಲಕ ನೀಡಿದ ಆಜ್ಞೆಯನ್ನು ನೆನಪು ಮಾಡಿಕೊಳ್ಳಿರಿ.
3 ಅಂತಿಮ ದಿನಗಳಲ್ಲಿ ಏನು ಸಂಭವಿಸುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಜನರು ನಿಮ್ಮನ್ನು ನೋಡಿ ಕುಚೋದ್ಯ ಮಾಡುವರು. ಅವರು ತಮ್ಮ ಇಚ್ಛೆಗನುಸಾರವಾದ ಕೆಟ್ಟಕಾರ್ಯಗಳನ್ನೇ ಮಾಡುತ್ತಾ ಜೀವಿಸುತ್ತಾರೆ. 4 ಆ ಜನರು, “ಆತನು ಮತ್ತೆ ಬರುವುದಾಗಿ ವಾಗ್ದಾನ ಮಾಡಿದ್ದನು. ಆತನು ಎಲ್ಲಿದ್ದಾನೆ? ನಮ್ಮ ಪಿತೃಗಳು ಸತ್ತುಹೋದರು. ಆದರೆ ಈ ಲೋಕವು ಆದಿಯಿಂದಲೂ ಇದ್ದ ರೀತಿಯಲ್ಲಿಯೇ ಇದೆ” ಎಂದು ಹೇಳುವರು.
5 ಆದರೆ ಬಹಕಾಲದ ಹಿಂದೆ ಏನು ನಡೆಯಿತೆಂಬುದನ್ನು ನೆನಪು ಮಾಡಿಕೊಳ್ಳಲು ಅವರಿಗೆ ಇಷ್ಟವಿಲ್ಲ. ಆದಿಯಲ್ಲಿ ದೇವರು ಆಕಾಶವನ್ನು ಸೃಷ್ಟಿಸಿದನು. ದೇವರು ಲೋಕವನ್ನು ನೀರೊಳಗಿಂದ ಮತ್ತು ನೀರಿನಿಂದ ಸೃಷ್ಟಿಸಿದನು. ದೇವರ ವಾಕ್ಯದಿಂದ ಇವೆಲ್ಲಾ ಸಂಭವಿಸಿದವು. 6 ಬಳಿಕ ಆ ಲೋಕವು ಜಲಪ್ರಳಯದಿಂದ ನಾಶವಾಯಿತು. 7 ಈಗಿರುವ ಆಕಾಶಕ್ಕೂ ಭೂಮಿಗೂ ಅದೇ ದೇವರ ವಾಕ್ಯವು ಆಧಾರವಾಗಿದೆ. ಆಕಾಶ ಮತ್ತು ಭೂಮಿಗಳು ಬೆಂಕಿಯಿಂದ ನಾಶಗೊಳ್ಳಲು ಇಡಲ್ಪಟ್ಟಿವೆ. ದೇವರಿಗೆ ವಿರುದ್ಧವಾಗಿರುವ ಜನರೆಲ್ಲರಿಗೆ ಆಗುವ ನ್ಯಾಯತೀರ್ಪಿನ ದಿನಕ್ಕಾಗಿಯೂ ನಾಶನಕ್ಕಾಗಿಯೂ ಭೂಮ್ಯಾಕಾಶಗಳು ಇಡಲ್ಪಟ್ಟಿವೆ.
Kannada Holy Bible: Easy-to-Read Version. All rights reserved. © 1997 Bible League International