Revised Common Lectionary (Semicontinuous)
ಸಮುವೇಲನಿಗೆ ದೇವರ ಕರೆ
3 ಬಾಲಕನಾದ ಸಮುವೇಲನು ಏಲಿಯ ಕೈಕೆಳಗಿದ್ದು ಯೆಹೋವನ ಸೇವೆಮಾಡುತ್ತಿದ್ದನು. ಆ ಕಾಲದಲ್ಲಿ ಯೆಹೋವನು ಜನರೊಂದಿಗೆ ಪದೇಪದೇ ಮಾತಾಡುತ್ತಿರಲಿಲ್ಲ; ದರ್ಶನಗಳ ಸಂಖ್ಯೆಯೂ ಕಡಿಮೆಯಾಗಿತ್ತು.
2 ಏಲಿಯ ಕಣ್ಣುಗಳು ಮಂಜಾಗಿ ಕುರುಡನೆನ್ನುವಷ್ಟು ಕಾಣುತ್ತಿರಲಿಲ್ಲ. ಒಂದು ರಾತ್ರಿ ಏಲಿಯು ತನ್ನ ಸ್ಥಳದಲ್ಲಿ ಮಲಗಿದ್ದನು. 3 ಸಮುವೇಲನು ಯೆಹೋವನ ಪವಿತ್ರ ಆಲಯದಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು. ಯೆಹೋವನ ಪವಿತ್ರ ಪೆಟ್ಟಿಗೆಯು ಅಲ್ಲಿಯೇ ಇತ್ತು. ಯೆಹೋವನ ದೀಪವು ಇನ್ನೂ ಬೆಳಗುತ್ತಿತ್ತು. 4 ಯೆಹೋವನು ಸಮುವೇಲನನ್ನು ಕರೆದನು. ಸಮುವೇಲನು, “ಇಗೋ, ಇಲ್ಲಿದ್ದೇನೆ” ಎಂದನು. 5 ಏಲಿಯು ಕರೆದಿರಬಹುದೆಂದು ಸಮುವೇಲನು ನೆನೆಸಿದನು. ಆದ್ದರಿಂದ ಸಮುವೇಲನು ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು.
ಆದರೆ ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ. ಹೋಗಿ ಮಲಗಿಕೋ” ಅಂದನು.
ಸಮುವೇಲನು ಹೋಗಿ ಮಲಗಿಕೊಂಡನು. 6 ನಂತರ ಯೆಹೋವನು, “ಸಮುವೇಲನೇ” ಎಂದು ಮತ್ತೆ ಕರೆದನು. ಸಮುವೇಲನು ಮತ್ತೆ ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಎಂದು ಹೇಳಿದನು.
ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ, ಹೋಗಿ ಮಲಗಿಕೋ” ಅಂದನು.
7 ಆ ವರೆಗೂ ಸಮುವೇಲನಿಗೆ ಯೆಹೋವನ ಅನುಭವವಿರಲಿಲ್ಲ; ಯೆಹೋವನು ಅವನೊಂದಿಗೆ ನೇರವಾಗಿ ಮಾತಾಡಿರಲಿಲ್ಲ.[a]
8 ಯೆಹೋವನು ಸಮುವೇಲನನ್ನು ಮೂರನೆಯ ಸಲ ಕರೆದನು. ಸಮುವೇಲನು ಮತ್ತೆ ಮೇಲೆದ್ದು ಏಲಿಯನ ಬಳಿಗೆ ಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು.
ಬಾಲಕನನ್ನು ಕರೆಯುತ್ತಿರುವವನು ಯೆಹೋವನೆಂಬುದು ಏಲಿಗೆ ಆಗ ಅರ್ಥವಾಯಿತು. 9 ಏಲಿಯು ಸಮುವೇಲನಿಗೆ, “ಹೋಗಿ ಮಲಗಿಕೋ. ನಿನ್ನನ್ನು ಮತ್ತೆ ಕರೆದರೆ, ‘ಅಪ್ಪಣೆಯಾಗಲಿ, ಯೆಹೋವನೇ ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ’ ಎಂದು ಉತ್ತರಿಸು” ಎಂಬುದಾಗಿ ಹೇಳಿದನು.
ಸಮುವೇಲನು ತನ್ನ ಸ್ಥಳದಲ್ಲಿ ಮಲಗಲು ಹೋದನು. 10 ಯೆಹೋವನು ಅಲ್ಲಿ ಪ್ರತ್ಯಕ್ಷನಾಗಿ ನಿಂತು ಮೊದಲು ಕರೆದಂತೆಯೇ “ಸಮುವೇಲನೇ, ಸಮುವೇಲನೇ” ಎಂದು ಕರೆದನು.
ಸಮುವೇಲನು, “ಅಪ್ಪಣೆಯಾಗಲಿ, ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ” ಎಂದನು.
11 ಯೆಹೋವನು ಸಮುವೇಲನಿಗೆ, “ನಾನು ಇಸ್ರೇಲಿನಲ್ಲಿ ಒಂದು ಕಾರ್ಯವನ್ನು ಶೀಘ್ರದಲ್ಲೇ ಮಾಡುವೆನು. ಈ ಕಾರ್ಯದ ಬಗ್ಗೆ ಕೇಳಿದ ಜನರು ಗಾಬರಿಗೊಳ್ಳುವರು. 12 ನಾನು ಇದನ್ನು ಏಲಿ ಮತ್ತು ಅವನ ಕುಟುಂಬದ ವಿರುದ್ಧ ಸಂಪೂರ್ಣವಾಗಿ ಮಾಡುತ್ತೇನೆ. 13 ಏಲಿಯ ಕುಟುಂಬವನ್ನು ನಿತ್ಯದಂಡನೆಗೆ ಗುರಿಪಡಿಸುತ್ತೇನೆಂದು ನಾನು ಏಲಿಗೆ ಹೇಳಿರುವೆನು. ಏಲಿಯ ಮಕ್ಕಳು ನನಗೆ ವಿರೋಧವಾಗಿ ಮಾತಾಡಿದ್ದರಿಂದ ಮತ್ತು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನಾನು ಇದನ್ನು ಮಾಡುತ್ತೇನೆ. ಅಲ್ಲದೆ ಅವರನ್ನು ಹತೋಟಿಯಲ್ಲಿಡಲು ಏಲಿಗೆ ಸಾಧ್ಯವಾಗಲಿಲ್ಲ. 14 ಆದಕಾರಣವೇ, ಏಲಿಯ ಕುಟುಂಬವು ಅರ್ಪಿಸುವ ಯಜ್ಞವಾಗಲಿ ಧಾನ್ಯನೈವೇದ್ಯವಾಗಲಿ ಅವರ ಪಾಪಗಳಿಗೆ ಪ್ರಾಯಶ್ಚಿತ್ತವಾಗುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.
15 ಸಮುವೇಲನು ನಿದ್ರಿಸಿದನು. ಅವನು ಮುಂಜಾನೆ ಮೇಲೆದ್ದು ಯೆಹೋವನ ಆಲಯದ ಬಾಗಿಲುಗಳನ್ನು ತೆರೆದನು. ಸಮುವೇಲನು ತಾನು ಕಂಡ ದರ್ಶನದ ಬಗ್ಗೆ ಏಲಿಗೆ ತಿಳಿಸಲು ಭಯಪಟ್ಟನು.
16 ಆದರೆ ಏಲಿಯು, “ಸಮುವೇಲನೇ, ನನ್ನ ಮಗನೇ” ಎಂದು ಕರೆದನು.
ಸಮುವೇಲನು, “ಇಗೋ, ಇದ್ದೇನೆ” ಅಂದನು.
17 ಏಲಿಯು, “ಯೆಹೋವನು ನಿನಗೆ ಹೇಳಿದ್ದೇನು? ನನ್ನೊಂದಿಗೆ ಅದನ್ನು ಮುಚ್ಚಿಡಬೇಡ. ಆತನು ನಿನ್ನೊಂದಿಗೆ ಆಡಿದ ಮಾತುಗಳಲ್ಲಿ ಏನನ್ನಾದರೂ ಮುಚ್ಚಿಟ್ಟರೆ ಆತನು ನಿನ್ನನ್ನು ಶಿಕ್ಷಿಸುತ್ತಾನೆ” ಎಂದು ತಿಳಿಸಿದನು.
18 ಸಮುವೇಲನು ಏನನ್ನೂ ಮುಚ್ಚಿಡದೆ, ಎಲ್ಲವನ್ನೂ ಏಲಿಗೆ ತಿಳಿಸಿದನು.
ಏಲಿಯು, “ಆತನು ಯೆಹೋವ. ಆತನು ತನಗೆ ಸರಿಕಾಣುವದನ್ನೇ ಮಾಡಲಿ” ಎಂದು ಹೇಳಿದನು.
19 ಯೆಹೋವನು ಸಮುವೇಲನ ಸಂಗಡವಿದ್ದನು; ಸಮುವೇಲನು ಬೆಳೆದು ದೊಡ್ಡವನಾದನು; ಸಮುವೇಲನ ಯಾವ ಸಂದೇಶವೂ ಸುಳ್ಳಾಗದಂತೆ ಯೆಹೋವನು ನೋಡಿಕೊಂಡನು. 20 ಸಮುವೇಲನು ಯೆಹೋವನ ನಿಜಪ್ರವಾದಿಯೆಂಬುದು ದಾನಿನಿಂದ ಬೇರ್ಷೆಬದವರೆಗಿದ್ದ ಎಲ್ಲಾ ಇಸ್ರೇಲರಿಗೂ ಆಗ ತಿಳಿದು ಬಂದಿತು.
ಸ್ತುತಿಗೀತೆ. ರಚನೆಗಾರ: ದಾವೀದ.
139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
ಸಂಪೂರ್ಣವಾಗಿ ತಿಳಿದುಕೊಂಡಿರುವೆ.
2 ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
3 ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
4 ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
5 ನೀನು ನನ್ನ ಸುತ್ತಲೂ ಆವರಿಸಿರುವೆ;
ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
6 ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.
15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.
ದೇವರ ಮಹಿಮೆಗಾಗಿ ನಿಮ್ಮ ದೇಹಗಳನ್ನು ಉಪಯೋಗಿಸಿರಿ
12 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಸ್ವತಂತ್ರವಿದೆ.” ಆದರೆ ಪ್ರತಿಯೊಂದೂ ಜನರಿಗೆ ಪ್ರಯೋಜಕವಲ್ಲ. “ಪ್ರತಿಯೊಂದನ್ನೂ ಮಾಡುವುದಕ್ಕೆ ನನಗೆ ಸ್ವತಂತ್ರವಿದೆ.” ಆದರೆ ನಾನು ಯಾವುದನ್ನೂ ನನ್ನ ಒಡೆಯನನ್ನಾಗಿ ಮಾಡಿಕೊಳ್ಳುವುದಿಲ್ಲ. 13 “ಆಹಾರವು ಹೊಟ್ಟೆಗೋಸ್ಕರವಿದೆ, ಹೊಟ್ಟೆಯು ಆಹಾರಕ್ಕೋಸ್ಕರವಿದೆ.” ಹೌದು, ದೇವರು ಅವೆರಡನ್ನು ನಾಶಮಾಡುವನು. ದೇಹವಿರುವುದು ಲೈಂಗಿಕ ಪಾಪಮಾಡುವುದಕ್ಕಾಗಿಯಲ್ಲ. ದೇಹವು ಪ್ರಭುವಿಗೋಸ್ಕರವಿದೆ, ಪ್ರಭುವು ದೇಹಕ್ಕೋಸ್ಕರವಿದ್ದಾನೆ. 14 ದೇವರು ತನ್ನ ಶಕ್ತಿಯಿಂದ ಪ್ರಭು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ದೇವರು ನಮ್ಮನ್ನು ಸಹ ಜೀವಂತವಾಗಿ ಎಬ್ಬಿಸುವನು. 15 ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿಲ್ಲವೇ? ಹೀಗಿರಲಾಗಿ, ನಾನು ಕ್ರಿಸ್ತನ ಅಂಗಗಳನ್ನು ತೆಗೆದುಕೊಂಡು ಅವುಗಳನ್ನು ಸೂಳೆಯ ಅಂಗಗಳನ್ನಾಗಿ ಮಾಡಕೂಡದು. 16 “ಇಬ್ಬರೂ ಒಂದೇ ದೇಹವಾಗುತ್ತಾರೆ”(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದ್ದರಿಂದ ಸೂಳೆಯೊಂದಿಗೆ ಲೈಂಗಿಕ ಸಂಬಂಧವಿರುವವನು ಆಕೆಯೊಂದಿಗೆ ಒಂದೇ ದೇಹವಾಗಿದ್ದಾನೆ ಎಂಬುದು ನಿಮಗೆ ತಿಳಿದಿರಬೇಕು. 17 ಆದರೆ ಪ್ರಭುವಿನೊಂದಿಗೆ ಸಂಬಂಧವನ್ನು ಹೊಂದಿರುವಂಥವನು ಆತ್ಮದಲ್ಲಿ ಪ್ರಭುವಿನೊಂದಿಗೆ ಒಂದಾಗಿರುತ್ತಾನೆ.
18 ಆದ್ದರಿಂದ ಲೈಂಗಿಕ ಪಾಪದಿಂದ ಓಡಿಹೋಗಿರಿ. ಒಬ್ಬನು ಮಾಡುವ ಇತರ ಪಾಪಗಳೆಲ್ಲಾ ಅವನ ದೇಹದ ಹೊರಗಾಗಿವೆ. ಆದರೆ ಲೈಂಗಿಕ ಪಾಪ ಮಾಡುವ ವ್ಯಕ್ತಿ ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ. 19 ನಿಮ್ಮ ದೇಹವು ಪವಿತ್ರಾತ್ಮನಿಗೆ ಆಲಯವಾಗಿದೆ ಎಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮೊಳಗಿದ್ದಾನೆ. ನೀವು ದೇವರಿಂದ ಆತನನ್ನು ಹೊಂದಿಕೊಂಡಿರಿ. ನೀವು ನಿಮ್ಮ ಸ್ವಂತ ಸ್ವತ್ತುಗಳಲ್ಲ. 20 ನೀವು ದೇವರಿಂದ ಕ್ರಯಕ್ಕೆ ಕೊಳ್ಳಲ್ಪಟ್ಟವರು. ಆದ್ದರಿಂದ ನಿಮ್ಮ ದೇಹಗಳಿಂದ ದೇವರನ್ನು ಘನಪಡಿಸಿರಿ.
43 ಮರುದಿನ ಯೇಸು ಗಲಿಲಾಯಕ್ಕೆ ಹೋಗಲು ನಿರ್ಧರಿಸಿದನು. ಯೇಸು ಫಿಲಿಪ್ಪನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 44 ಅಂದ್ರೆಯ ಮತ್ತು ಪೇತ್ರರಂತೆ ಫಿಲಿಪ್ಪನು ಸಹ ಬೆತ್ಸಾಯಿದ ಎಂಬ ಊರಿನವನಾಗಿದ್ದನು. 45 ಫಿಲಿಪ್ಪನು ನತಾನಿಯೇಲನನ್ನು ಕಂಡು ಅವನಿಗೆ, “ಯಾವನ ವಿಷಯದಲ್ಲಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನನ್ನು ನಾವು ಕಂಡುಕೊಂಡೆವು. ಆತನ ಹೆಸರು ಯೇಸು. ಆತನು ಯೋಸೇಫನ ಮಗನು. ಆತನು ನಜರೇತಿನವನು” ಎಂದು ಹೇಳಿದನು.
46 ಆದರೆ ನತಾನಿಯೇಲನು ಫಿಲಿಪ್ಪನಿಗೆ, “ನಜರೇತಿನಿಂದ ಒಳ್ಳೆಯದೇನಾದರೂ ಬರುವುದೇ?” ಎಂದು ಕೇಳಿದನು.
ಫಿಲಿಪ್ಪನು, “ಬಂದು ನೋಡು” ಎಂದು ಉತ್ತರಕೊಟ್ಟನು.
47 ಯೇಸು ತನ್ನ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡು ಅವನ ಬಗ್ಗೆ, “ಇವನು ನಿಜವಾದ ಇಸ್ರೇಲ. ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು.
48 ನತಾನಿಯೇಲನು, “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಕೇಳಿದನು.
ಯೇಸು, “ಫಿಲಿಪ್ಪನು ನನ್ನ ಬಗ್ಗೆ ನಿನಗೆ ತಿಳಿಸುವುದಕ್ಕಿಂತ ಮೊದಲೇ ನೀನು ಅಂಜೂರದ ಮರದ ಕೆಳಗಿದ್ದಾಗ ನಾನು ನಿನ್ನನ್ನು ನೋಡಿದೆನು” ಎಂದು ಹೇಳಿದನು.
49 ಆಗ ನತಾನಿಯೇಲನು ಯೇಸುವಿಗೆ, “ಗುರುವೇ, ನೀನೇ ದೇವರ ಮಗನು. ನೀನೇ ಇಸ್ರೇಲರ ರಾಜ” ಎಂದು ಹೇಳಿದನು.
50 ಯೇಸು ನತಾನಿಯೇಲನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆನೆಂದು ನಾನು ನಿನಗೆ ಹೇಳಿದ್ದರಿಂದ ನೀನು ನನ್ನನ್ನು ನಂಬುವೆ. ಆದರೆ ಅದಕ್ಕಿಂತಲೂ ಹೆಚ್ಚು ದೊಡ್ಡ ಕಾರ್ಯಗಳನ್ನು ನೀನು ನೋಡುವೆ!” ಎಂದು ಹೇಳಿದನು. 51 ಅದಲ್ಲದೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರುಗಳು ಏರಿಹೋಗುವುದನ್ನೂ ಕೆಳಗೆ ಇಳಿದುಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International