Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ದಾವೀದ.
139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
ಸಂಪೂರ್ಣವಾಗಿ ತಿಳಿದುಕೊಂಡಿರುವೆ.
2 ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
3 ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
4 ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
5 ನೀನು ನನ್ನ ಸುತ್ತಲೂ ಆವರಿಸಿರುವೆ;
ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
6 ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.
15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.
ಅವಿಧೇಯತೆ ಮತ್ತು ಸೋಲು
6 ಯೆಹೋಶುವನು ಜನರನ್ನು ತಮ್ಮ ಮನೆಗಳಿಗೆ ಹೋಗಲು ಹೇಳಿದನು. ಪ್ರತಿಯೊಂದು ಕುಲದವರು ವಾಸಮಾಡಲು ತಮ್ಮತಮ್ಮ ಪ್ರದೇಶಕ್ಕೆ ಹೋದರು. 7 ಯೆಹೋಶುವನು ಜೀವಂತವಿರುವವರೆಗೆ ಇಸ್ರೇಲರು ಯೆಹೋವನನ್ನು ಸೇವಿಸಿದರು. ಯೆಹೋಶುವನ ಮರಣಾನಂತರ ಬದುಕಿದ್ದ ಹಿರಿಯರ ಜೀವಮಾನದಲ್ಲಿಯೂ ಇಸ್ರೇಲರು ಯೆಹೋವನ ಸೇವೆಯನ್ನು ಮುಂದುವರಿಸಿಕೊಂಡು ಬಂದರು. ಈ ಹಿರಿಯರು ಇಸ್ರೇಲರಿಗಾಗಿ ಯೆಹೋವನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ನೋಡಿದ್ದರು. 8 ನೂನನ ಮಗನಾದ ಮತ್ತು ಯೆಹೋವನ ಸೇವಕನಾದ ಯೆಹೋಶುವನು ನೂರಹತ್ತು ವರ್ಷ ಬದುಕಿ ಮರಣ ಹೊಂದಿದನು. 9 ಇಸ್ರೇಲರು ಯೆಹೋಶುವನನ್ನು ಅವನ ಸ್ವಾಸ್ತ್ಯ ಭೂಮಿಯಲ್ಲಿ ಸಮಾಧಿ ಮಾಡಿದರು. ಅದು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿ ತಿಮ್ನತ್ ಹೆರೆಸಿನಲ್ಲಿತ್ತು.
10 ಈ ಪೀಳಿಗೆಯವರೆಲ್ಲರು ಸತ್ತುಹೋದ ಮೇಲೆ ಮುಂದಿನ ಪೀಳಿಗೆಯು ಬೆಳೆಯಿತು. ಈ ಹೊಸ ಪೀಳಿಗೆಗೆ ಯೆಹೋವನ ಬಗ್ಗೆ ಮತ್ತು ಯೆಹೋವನು ಇಸ್ರೇಲಿನ ಜನರಿಗಾಗಿ ಮಾಡಿದ ಮಹತ್ಕಾರ್ಯಗಳ ಬಗ್ಗೆ ಏನೂ ಗೊತ್ತಿರಲಿಲ್ಲ. 11 ಇಸ್ರೇಲಿನ ಜನರು ದುಷ್ಕೃತ್ಯಗಳನ್ನು ಮಾಡಿದರು ಮತ್ತು ಸುಳ್ಳುದೇವರಾದ ಬಾಳನ ಸೇವೆ ಮಾಡಿದರು. ಯೆಹೋವನು ಇಸ್ರೇಲರ ಈ ದುಷ್ಕೃತ್ಯಗಳನ್ನು ನೋಡಿದನು. 12 ಯೆಹೋವನು ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಿದ್ದನು. ಅವರ ಪೂರ್ವಿಕರು ಯೆಹೋವನನ್ನು ಆರಾಧಿಸುತ್ತಿದ್ದರು. ಆದರೆ ಇಸ್ರೇಲರು ಯೆಹೋವನನ್ನು ಅನುಸರಿಸದೆ ತಮ್ಮ ಸುತ್ತಮುತ್ತಲಿನ ಜನರ ಸುಳ್ಳುದೇವರುಗಳನ್ನು ಪೂಜಿಸಲು ಆರಂಭಿಸಿದರು. ಆದ್ದರಿಂದ ಯೆಹೋವನಿಗೆ ಕೋಪ ಬಂತು. 13 ಇಸ್ರೇಲರು ಯೆಹೋವನನ್ನು ಅನುಸರಿಸದೆ ಬಾಳ್ ದೇವರನ್ನೂ ಅಷ್ಟೋರೆತ್ ದೇವತೆಯನ್ನೂ ಪೂಜಿಸತೊಡಗಿದರು.
14 ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡನು. ಶತ್ರುಗಳು ಇಸ್ರೇಲರ ಮೇಲೆ ಧಾಳಿಮಾಡಿ ಅವರ ಸ್ವತ್ತನ್ನು ತೆಗೆದುಕೊಳ್ಳುವಂತೆ ಯೆಹೋವನು ಮಾಡಿದನು. ಸುತ್ತಮುತ್ತಲಿದ್ದ ಅವರ ಶತ್ರುಗಳು ಅವರನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಇಸ್ರೇಲರು ಶತ್ರುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಗಲಿಲ್ಲ. 15 ಇಸ್ರೇಲರು ಯುದ್ಧಕ್ಕೆ ಹೋದಾಗಲೆಲ್ಲಾ ಸೋಲನ್ನನುಭವಿಸಿದರು; ಏಕೆಂದರೆ ಯೆಹೋವನು ಅವರ ಸಂಗಡವಿರಲಿಲ್ಲ. ಸುತ್ತಮುತ್ತಲಿನ ಜನರ ದೇವತೆಗಳನ್ನು ಪೂಜಿಸಿದರೆ ಸೋಲಾಗುವುದೆಂದು ಈಗಾಗಲೇ ಯೆಹೋವನು ಇಸ್ರೇಲರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟಿದ್ದನು. ಇಸ್ರೇಲರು ಹೆಚ್ಚಿನ ಕಷ್ಟನಷ್ಟಗಳನ್ನು ಅನುಭವಿಸಿದರು.
ತನ್ನ ಸೇವೆಯ ಕುರಿತು ಪೌಲನ ಪ್ರತಿವಾದ
10 ಪೌಲನಾದ ನಾನು ಕ್ರಿಸ್ತನ ಮೃದುಸ್ವಭಾವದಿಂದಲೂ ಕನಿಕರದಿಂದಲೂ ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ನಾನು ನಿಮ್ಮೊಂದಿಗಿರುವಾಗ ದೀನನಾಗಿರುತ್ತೇನೆಂದೂ, ನಿಮ್ಮಿಂದ ದೂರದಲ್ಲಿರುವಾಗ ಧೀರನಾಗಿರುತ್ತೇನೆಂದೂ ಕೆಲವರು ಹೇಳುತ್ತಾರೆ. 2 ನಾವು ಲೌಕಿಕರಂತೆ ಜೀವಿಸುತ್ತೇವೆಂದು ಕೆಲವರು ಯೋಚಿಸುತ್ತಾರೆ. ನಾನು ಬಂದಾಗ ಅವರ ವಿರೋಧವಾಗಿ ಬಹು ದಿಟ್ಟತನದಿಂದಿರಬೇಕೆಂದು ಯೋಚಿಸಿಕೊಂಡಿದ್ದೇನೆ. ಆದರೆ ನಿಮಗೂ ಅದೇ ದಿಟ್ಟತನವನ್ನು ಉಪಯೋಗಿಸುವ ಅಗತ್ಯತೆ ಇಲ್ಲದಿರಲಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. 3 ನಾವು ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ಆದರೆ ಪ್ರಪಂಚದವರು ಹೊಡೆದಾಡುವ ರೀತಿಯಲ್ಲಿ ನಾವು ಹೊಡೆದಾಡುವುದಿಲ್ಲ. 4 ಪ್ರಪಂಚದವರು ಉಪಯೋಗಿಸುವ ಆಯುಧಗಳಿಗೆ ತದ್ವಿರುದ್ಧವಾದ ಆಯುಧಗಳೊಂದಿಗೆ ನಾವು ಹೋರಾಡುತ್ತೇವೆ. ನಮ್ಮ ಆಯುಧಗಳು ದೇವರ ಶಕ್ತಿಯನ್ನು ಹೊಂದಿವೆ. ಅವು ಶತ್ರುವಿನ ಬಲವಾದ ಕೋಟೆಗಳನ್ನು ನಾಶ ಮಾಡಬಲ್ಲವು. ನಾವು ಜನರ ವಾದಗಳನ್ನು ನಾಶಮಾಡುತ್ತೇವೆ. 5 ದೇವರ ಜ್ಞಾನಕ್ಕೆ ವಿರೋಧವಾಗಿ ಎದ್ದೇಳುವ ಪ್ರತಿಯೊಂದು ಗರ್ವದ ಸಂಗತಿಯನ್ನು ನಾಶಮಾಡುತ್ತೇವೆ; ಪ್ರತಿಯೊಂದು ಯೋಚನೆಯನ್ನು ಸ್ವಾಧೀನಪಡಿಸಿಕೊಂಡು ಅವುಗಳನ್ನು ಪರಿವರ್ತಿಸಿ ಕ್ರಿಸ್ತನಿಗೆ ವಿಧೇಯರಾಗುವಂತೆ ಮಾಡುತ್ತೇವೆ. 6 ನಿಮ್ಮಲ್ಲಿ ಕ್ರಿಸ್ತನಿಗೆ ವಿಧೇಯರಾಗದಿರುವ ಯಾರನ್ನೇ ಆಗಲಿ ಶಿಕ್ಷಿಸಲು ಸಿದ್ಧರಾಗಿದ್ದೇವೆ. ಆದರೆ ಮೊಟ್ಟಮೊದಲನೆಯದಾಗಿ, ನೀವು ಪೂರ್ಣ ವಿಧೇಯರಾಗಬೇಕೆಂದು ಅಪೇಕ್ಷಿಸುತ್ತೇವೆ.
7 ನಿಮ್ಮ ಮುಂದಿರುವ ನಿಜಾಂಶಗಳನ್ನು ನೀವು ಗಮನಿಸಬೇಕು. ಒಬ್ಬ ವ್ಯಕ್ತಿಯು ತಾನು ನಿಜವಾಗಿಯೂ ಕ್ರಿಸ್ತನವನೆಂದು ತಿಳಿದುಕೊಂಡಿದ್ದರೆ ಅವನಂತೆಯೇ ನಾವೂ ಕ್ರಿಸ್ತನವರೆಂಬುದನ್ನು ಅವನು ತಿಳಿದುಕೊಳ್ಳಬೇಕು. 8 ಪ್ರಭುವು ನಮಗೆ ಕೊಟ್ಟಿರುವ ಅಧಿಕಾರದ ಬಗ್ಗೆ ನಾವು ಹೆಚ್ಚು ಹೆಮ್ಮೆಪಡುತ್ತೇವೆ ಎಂಬುದೇನೋ ಸತ್ಯ. ಆದರೆ ಆತನು ನಮಗೆ ಈ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಪಡಿಸುವುದಕ್ಕಾಗಿಯೇ ಹೊರತು ನಿಮಗೆ ನೋವನ್ನು ಉಂಟುಮಾಡುವುದಕ್ಕಾಗಿಯಲ್ಲ. ಆದ್ದರಿಂದ ಅದರ ಬಗ್ಗೆ ಹೆಮ್ಮೆಪಡುವುದರಲ್ಲಿ ನಾನು ನಾಚಿಕೊಳ್ಳುವುದಿಲ್ಲ. 9 ನನ್ನ ಪತ್ರಗಳ ಮೂಲಕ ನಿಮ್ಮನ್ನು ಭಯಪಡಿಸಲು ಪ್ರಯತ್ನಿಸುತ್ತಿದ್ದೇನೆಂದು ನೀವು ಯೋಚಿಸಬೇಕೆಂಬುದು ನನ್ನ ಅಪೇಕ್ಷೆಯಲ್ಲ. 10 “ಪೌಲನ ಪತ್ರಗಳು ಬಲಯುತವಾಗಿವೆ ಮತ್ತು ಪ್ರಾಮುಖ್ಯವಾಗಿವೆ, ಆದರೆ ಅವನು ನಮ್ಮೊಂದಿಗಿರುವಾಗ ಬಲಹೀನನಾಗಿರುತ್ತಾನೆ, ಅವನ ಮಾತುಗಳು ನಿಸ್ಸಾರವಾಗಿರುತ್ತವೆ” ಎಂದು ಕೆಲವರು ಹೇಳುತ್ತಾರೆ. 11 ಆ ಜನರಿಗೆ ಈ ವಿಷಯ ತಿಳಿದಿರಬೇಕು. ಅದೇನೆಂದರೆ, ಈಗ ನಾವು ನಿಮ್ಮೊಂದಿಗಿಲ್ಲ. ಆದ್ದರಿಂದ ಈ ಸಂಗತಿಗಳನ್ನು ಪತ್ರಗಳ ಮೂಲಕ ಹೇಳುತ್ತಿದ್ದೇವೆ. ಆದರೆ ನಾವು ನಿಮ್ಮೊಂದಿಗಿರುವಾಗ ನಮ್ಮ ಪತ್ರಗಳಲ್ಲಿ ತೋರಿದ ಅಧಿಕಾರವನ್ನೇ ತೋರಿಸುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International