Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 126

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
    ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
    “ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
    ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.

ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
    ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
ಅಳುತ್ತಾ ಬೀಜವನ್ನು ಬಿತ್ತುವವನು
    ಹರ್ಷದಿಂದ ಕೊಯ್ಯುವನು.
ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
    ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!

ಹಬಕ್ಕೂಕ 3:13-19

13 ನಿನ್ನ ಜನರನ್ನು ರಕ್ಷಿಸಲು ನೀನು ಬಂದೆ.
    ನೀನು ಆರಿಸಿದ್ದ ರಾಜನನ್ನು ಜಯದ ಕಡೆಗೆ ನಡಿಸುವುದಕ್ಕಾಗಿ ಬಂದೆ.
ಪ್ರತೀ ದುಷ್ಟ ಕುಟುಂಬದ ನಾಯಕನನ್ನು ನೀನು ಸಂಹರಿಸಿದೆ.
    ಭೂಲೋಕದಲ್ಲಿದ್ದ ಪ್ರಮುಖನಿಂದಿಡಿದು
    ಪ್ರಮುಖನಲ್ಲದವನವರೆಗೂ ನೀನು ಹತಿಸಿದೆ.

14 ವೈರಿಗಳ ಸೈನ್ಯವನ್ನು ಮೋಶೆಯ
    ಕೋಲಿನಿಂದ ನಿಲ್ಲಿಸಿದೆ.
ಆ ಸೈನಿಕರು ಬಿರುಗಾಳಿಯಂತೆ ನಮ್ಮೊಂದಿಗೆ
    ಯುದ್ಧ ಮಾಡಲು ಬಂದರು.
ರಸ್ತೆಯ ಮೇಲೆ ಇದ್ದ ಒಬ್ಬ ಬಡ ಮನುಷ್ಯನನ್ನು ದೋಚಿದ ಪ್ರಕಾರ
    ನಮ್ಮನ್ನೂ ಸುಲಭವಾಗಿ ಗೆಲ್ಲುವೆವೆಂದು ಅವರು ನೆನೆಸಿದ್ದರು.
15 ಆದರೆ ನೀನು ನಿನ್ನ ಕುದುರೆಗಳನ್ನು ಸಮುದ್ರದೊಳಗಿಂದ ನಡೆಸಿದೆ.
    ಅವುಗಳು ಆ ಮಹಾ ಸಮುದ್ರವನ್ನು ಕದಡಿಬಿಟ್ಟವು.
16 ಆ ವಿಷಯವನ್ನು ಕೇಳಿದಾಗ ನನ್ನ ಶರೀರವೆಲ್ಲಾ ನಡುಗಿತು.
    ಆಶ್ಟರ್ಯದಿಂದ ನಾನು ಸಿಳ್ಳುಹಾಕಿದೆ.
ನನ್ನ ಎಲುಬುಗಳ ಬಲಹೀನತೆಯಿಂದ
    ನಾನು ನಡುಗುವವನಾಗಿ ನಿಂತೆನು.
ಅವರು ಜನರ ಮೇಲೆ ಬೀಳಲು ಬರುವಾಗ
    ನಾನು ಅವರ ನಾಶನದ ದಿವಸವನ್ನು ಎದುರುನೋಡುತ್ತಿದ್ದೇನೆ.

ಯಾವಾಗಲೂ ಯೆಹೋವನಲ್ಲಿ ಸಂತೋಷಿಸು

17 ಅಂಜೂರದ ಮರಗಳಲ್ಲಿ ಅಂಜೂರದ ಹಣ್ಣು ಬೆಳೆಯದಿದ್ದರೂ
    ದ್ರಾಕ್ಷಿಬಳ್ಳಿಗಳಲ್ಲಿ ದ್ರಾಕ್ಷಿಹಣ್ಣುಗಳು ಬೆಳೆಯದಿದ್ದರೂ
ಎಣ್ಣೆಮರಗಳಲ್ಲಿ ಆಲೀವ್ ಕಾಯಿಗಳು ಬೆಳೆಯದಿದ್ದರೂ
    ಹೊಲದಲ್ಲಿ ಪೈರು ಬೆಳೆಯದಿದ್ದರೂ
ಹಟ್ಟಿಯಲ್ಲಿ ಯಾವ ಕುರಿಗಳು ಇಲ್ಲದಿದ್ದರೂ
    ಕೊಟ್ಟಿಗೆಯೊಳಗೆ ಯಾವ ಪಶುಗಳು ಇಲ್ಲದಿದ್ದರೂ
18 ನಾನು ಯೆಹೋವನಲ್ಲಿ ಸಂತೋಷಿಸುವೆನು.
    ನನ್ನ ರಕ್ಷಕನಾದ ದೇವರಲ್ಲಿ ಸಂತೋಷಪಡುವೆನು.

19 ನನ್ನ ಒಡೆಯನಾದ ಯೆಹೋವನು ನನಗೆ ಬಲವನ್ನು ಕೊಡುವನು.
    ಜಿಂಕೆಯಂತೆ ವೇಗವಾಗಿ ಓಡಲು ನನಗೆ ಸಹಾಯ ಮಾಡುವನು.
    ಪರ್ವತಗಳಲ್ಲಿ ನನ್ನನ್ನು ಸುರಕ್ಷಿತವಾಗಿ ನಡೆಸುವನು.

ಸಂಗೀತ ನಿರ್ದೇಶಕನಿಗೆ. ತಂತಿವಾದ್ಯಗಳಿಂದ ಹಾಡತಕ್ಕದ್ದು.

ಮತ್ತಾಯ 21:28-32

ಇಬ್ಬರು ಗಂಡುಮಕ್ಕಳನ್ನು ಕುರಿತು ಯೇಸು ಹೇಳಿದ ಸಾಮ್ಯ

28 “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆ ಮನುಷ್ಯನು ಮೊದಲನೆಯ ಮಗನ ಬಳಿಗೆ ಹೋಗಿ, ‘ಮಗನೇ ಈ ದಿನ ನೀನು ಹೋಗಿ, ನನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು.

29 “ಅದಕ್ಕೆ ಮಗನು, ‘ನಾನು ಹೋಗುವುದಿಲ್ಲ’ ಎಂದನು. ಆದರೆ ಆ ಬಳಿಕ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು.

30 “ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ.

31 “ಈ ಇಬ್ಬರು ಗಂಡುಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?”

ಆಗ ಯೆಹೂದ್ಯ ನಾಯಕರು, “ಮೊದಲನೆಯ ಮಗ” ಎಂದು ಉತ್ತರಕೊಟ್ಟರು.

ಯೇಸು ಅವರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸುಂಕವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟಜನರೆಂದು ನೀವು ಅಂದುಕೊಂಡಿದ್ದೀರಿ. ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯಕ್ಕೆ ಪ್ರವೇಶಿಸುತ್ತಾರೆ. 32 ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನು ಬಂದನು. ನೀವು ಯೋಹಾನನನ್ನು ನಂಬಲಿಲ್ಲ, ಆದರೆ ಸುಂಕವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ. ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International