Revised Common Lectionary (Semicontinuous)
ರಚನೆಗಾರ: ದಾವೀದ.
8 ನಮ್ಮ ಒಡೆಯನಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಅತಿಶಯವಾದದ್ದು.
ನಿನ್ನ ಹೆಸರು ಪರಲೋಕದಲ್ಲೆಲ್ಲಾ ನಿನ್ನನ್ನು ಮಹಿಮೆಪಡಿಸುವುದು.
2 ಚಿಕ್ಕಮಕ್ಕಳ ಬಾಯಿಗಳೂ ಕೂಸುಗಳ ಬಾಯಿಗಳೂ ನಿನ್ನನ್ನು ಸ್ತುತಿಸಿ ಕೊಂಡಾಡುತ್ತವೆ;
ನಿನ್ನ ವೈರಿಗಳ ಬಾಯಿ ಮುಚ್ಚಿಸುವುದಕ್ಕಾಗಿಯೇ ನೀನು ಹೀಗೆ ಮಾಡಿರುವೆ.
3 ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ
ನೀನು ಸೃಷ್ಟಿಸಿದ ಚಂದ್ರನಕ್ಷತ್ರಗಳನ್ನೂ ನೋಡಿ ಆಶ್ಚರ್ಯಗೊಳ್ಳುವೆನು.
4 ಮನುಷ್ಯರಿಗೆ ನೀನೇಕೆ ಪ್ರಾಮುಖ್ಯತೆ ಕೊಡಬೇಕು?
ನೀನೇಕೆ ಅವರನ್ನು ಜ್ಞಾಪಿಸಿಕೊಳ್ಳಬೇಕು?
ಮನುಷ್ಯರು ಎಷ್ಟರವರು?
ನೀನೇಕೆ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕು?
5 ಆದರೆ ನೀನು ಮನುಷ್ಯರಿಗೆ ಪ್ರಾಮುಖ್ಯತೆ ಕೊಟ್ಟಿರುವೆ.
ನೀನು ಅವರನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿಸಿದೆ.
ನೀನು ಅವರಿಗೆ ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿಟ್ಟಿರುವೆ.
6 ನೀನು ಸೃಷ್ಟಿಸಿದ ಪ್ರತಿಯೊಂದರ ಮೇಲೂ ಅವರನ್ನು ಅಧಿಪತಿಯನ್ನಾಗಿ ಮಾಡಿರುವೆ.
ನೀನು ಪ್ರತಿಯೊಂದನ್ನೂ ಅವರಿಗೆ ಅಧೀನಗೊಳಿಸಿರುವೆ.
7 ಅವರು ಎಲ್ಲಾ ಪಶುಗಳ ಮೇಲೆಯೂ ಕಾಡುಪ್ರಾಣಿಗಳ ಮೇಲೆಯೂ ದೊರೆತನ ಮಾಡುವರು.
8 ಆಕಾಶದ ಪಕ್ಷಿಗಳ ಮೇಲೆಯೂ ಸಾಗರದ ಮೀನುಗಳ ಮೇಲೆಯೂ
ದೊರೆತನ ಮಾಡುವರು.
9 ನಮ್ಮ ದೇವರಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಎಷ್ಟೋ ಅತಿಶಯವಾಗಿದೆ.
15 ಮೋಶೆಯು ಮಾಡಿದ್ದು ಫರೋಹನಿಗೂ ತಿಳಿಯಿತು. ಆದ್ದರಿಂದ ಮೋಶೆಯನ್ನು ಕೊಲ್ಲಿಸಲು ಅವನು ತೀರ್ಮಾನಿಸಿದನು. ಆದರೆ ಮೋಶೆ ಫರೋಹನ ಬಳಿಯಿಂದ ಮಿದ್ಯಾನ್ ದೇಶಕ್ಕೆ ಓಡಿಹೋದನು.
ಮಿದ್ಯಾನಿನಲ್ಲಿ ಮೋಶೆ
16 ಮೋಶೆಯು ಮಿದ್ಯಾನ್ಯರ ಒಂದು ಬಾವಿಯ ಬಳಿ ಕುಳಿತುಕೊಂಡಿದ್ದನು. ಮಿದ್ಯಾನ್ಯರ ಒಬ್ಬ ಪುರೋಹಿತನಿಗೆ ಏಳು ಮಂದಿ ಹೆಣ್ಣುಮಕ್ಕಳಿದ್ದರು. ಆ ಹುಡುಗಿಯರು ಬಂದು ತಮ್ಮ ತಂದೆಯ ಕುರಿಗಳಿಗೆ ನೀರನ್ನು ಕುಡಿಸಲು ಬಾವಿಯಿಂದ ನೀರು ಸೇದಿ ತೊಟ್ಟಿಗಳಲ್ಲಿ ಹಾಕುತ್ತಿದ್ದರು. 17 ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವು ಕುರುಬರು ನೀರು ಸೇದಲು ಅವರಿಗೆ ಅಡ್ಡಿಮಾಡಿದ್ದರಿಂದ ಮೋಶೆಯು ಅವರಿಗೆ ಸಹಾಯಕನಾಗಿ ಬಂದು ಅವರ ಕುರಿಗಳಿಗೆ ನೀರು ಕುಡಿಸಿದನು.
18 ಬಳಿಕ ಅವರು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಮರಳಿಹೋದರು. ಅವರ ತಂದೆ, “ಈ ದಿನ ನೀವು ಬಹುಬೇಗನೆ ಮನೆಗೆ ಬಂದಿದ್ದೀರಲ್ಲಾ!” ಎಂದು ಕೇಳಿದನು.
19 ಆ ಹುಡುಗಿಯರು, “ಕುರುಬರು ನಮಗೆ ಅಡ್ಡಿ ಮಾಡಿದಾಗ ಈಜಿಪ್ಟಿನವನೊಬ್ಬನು ನಮ್ಮ ನೆರವಿಗೆ ಬಂದು ನಮಗೂ ನಮ್ಮ ಕುರಿಗಳಿಗೂ ನೀರು ಸೇದಿ ಕೊಟ್ಟನು” ಎಂದು ಉತ್ತರಿಸಿದರು.
20 ಅದಕ್ಕೆ ರೆಗೂವೇಲನು ತನ್ನ ಹೆಣ್ಣುಮಕ್ಕಳಿಗೆ, “ಆ ಮನುಷ್ಯನು ಎಲ್ಲಿದ್ದಾನೆ? ಅವನನ್ನು ನೀವು ಯಾಕೆ ಬಿಟ್ಟುಬಂದಿರಿ? ಅವನನ್ನು ಕರೆಯಿರಿ; ಅವನು ನಮ್ಮೊಂದಿಗೆ ಊಟಮಾಡಲಿ” ಎಂದು ಹೇಳಿದನು.
21 ಮೋಶೆಯು ರೆಗೂವೇಲನೊಂದಿಗೆ ವಾಸಮಾಡಲು ಇಷ್ಟಪಟ್ಟನು; ರೆಗೂವೇಲನು ತನ್ನ ಮಗಳಾದ ಚಿಪ್ಪೋರಳನ್ನು ಮೋಶೆಗೆ ಮದುವೆ ಮಾಡಿಸಿದನು. 22 ಚಿಪ್ಪೋರಳು ಗಂಡುಮಗುವಿಗೆ ಜನ್ಮವಿತ್ತಳು. ಮೋಶೆಯು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದ ಕಾರಣ ಆ ಮಗುವಿಗೆ “ಗೇರ್ಷೋಮ್” ಎಂದು ಹೆಸರಿಟ್ಟನು.
ಸ್ತ್ರೀಯೊಬ್ಬಳು ಮಾಡಿದ ವಿಶೇಷ ಕಾರ್ಯ
(ಮಾರ್ಕ 14:9; ಯೋಹಾನ 12:1-8)
6 ಯೇಸು ಬೆಥಾನಿಯಲ್ಲಿದ್ದಾಗ ಸಿಮೋನ ಎಂಬ ಕುಷ್ಠರೋಗಿಯ ಮನೆಯಲ್ಲಿದ್ದನು. 7 ಆಗ ಸ್ತ್ರೀಯೊಬ್ಬಳು ಬಹು ಬೆಲೆಬಾಳುವ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಊಟಕ್ಕೆ ಕುಳಿತ್ತಿದ್ದ ಯೇಸುವಿನ ತಲೆಯ ಮೇಲೆ ಆ ಸುಗಂಧ ತೈಲವನ್ನು ಸುರಿದಳು.
8 ಇದನ್ನು ನೋಡಿದ ಶಿಷ್ಯರು ಆ ಸ್ತ್ರೀಯ ಮೇಲೆ ಕೋಪಗೊಂಡು, “ಆ ಸುಗಂಧತೈಲವನ್ನು ಏಕೆ ಹಾಳು ಮಾಡಿದೆ? 9 ಅದನ್ನು ಬಹಳ ಹಣಕ್ಕೆ ಮಾರಿ ಬಡ ಜನರಿಗೆ ಕೊಡಬಹುದಾಗಿತ್ತಲ್ಲಾ” ಎಂದರು.
10 ಆದರೆ ಈ ಘಟನೆಗೆ ಕಾರಣವನ್ನು ತಿಳಿದಿದ್ದ ಯೇಸು ತನ್ನ ಶಿಷ್ಯರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತೀರಿ? ಆಕೆಯು ನನಗೆ ಬಹಳ ಒಳ್ಳೆಯ ಕಾರ್ಯವನ್ನು ಮಾಡಿದಳು. 11 ಬಡಜನರು ನಿಮ್ಮೊಂದಿಗೆ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. 12 ನಾನು ಸತ್ತನಂತರ ನನ್ನನ್ನು ಸಮಾಧಿಗೆ ಸಿದ್ಧಪಡಿಸುವುದಕ್ಕಾಗಿ ಈ ಸ್ತ್ರೀಯು ನನ್ನ ದೇಹದ ಮೇಲೆ ಸುಗಂಧತೈಲವನ್ನು ಸುರಿದಳು. 13 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರಪಂಚದಾದ್ಯಂತ ಎಲ್ಲೆಲ್ಲಿ ಸುವಾರ್ತೆಯನ್ನು ತಿಳಿಸಲಾಗುವುದೋ ಅಲ್ಲೆಲ್ಲಾ ಈ ಕಾರ್ಯವನ್ನು ಈಕೆಯ ನೆನಪಿಗಾಗಿ ತಿಳಿಸಲಾಗುವುದು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International