Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 124

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
    ಇಸ್ರೇಲರೇ, ನನಗೆ ಉತ್ತರಹೇಳಿ.
ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
    ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
    ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
    ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
    ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.

ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.

ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
    ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
    ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.

ಆದಿಕಾಂಡ 50:15-26

ಸಹೋದರರು ಯೋಸೇಫನಿಗೆ ಭಯಪಟ್ಟರು

15 ಯಾಕೋಬನು ಸತ್ತಮೇಲೆ, ಯೋಸೇಫನ ಸಹೋದರರು ಕಳವಳಗೊಂಡರು. ಅವರು “ನಾವು ಮಾಡಿದ ಕಾರ್ಯಕ್ಕೆ ಯೋಸೇಫನು ಇನ್ನು ಮೇಲೆ ನಮ್ಮನ್ನು ದ್ವೇಷಿಸುವನೇ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. 16 ಆದ್ದರಿಂದ ಸಹೋದರರು ಯೋಸೇಫನಿಗೆ ಈ ಸಂದೇಶವನ್ನು ಕಳುಹಿಸಿದರು: “ನಿನ್ನ ತಂದೆ ಸಾಯುವ ಮೊದಲು ನಮಗೆ ಆಜ್ಞಾಪಿಸಿದ್ದೇನೆಂದರೆ, 17 ನೀವು ಯೋಸೇಫನಿಗೆ, ಈ ಸಂದೇಶವನ್ನು ಕೊಡಬೇಕು, ‘ನಾವು ಮಾಡಿದ್ದು ಕೆಟ್ಟಕಾರ್ಯವೇ ನಿಜ. ಅದಕ್ಕಾಗಿ ನೀನು ಅವರನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ.’ ಆದ್ದರಿಂದ ನಾವು ಮಾಡಿದ ಕೆಟ್ಟಕಾರ್ಯಕ್ಕಾಗಿ ನೀನು ನಮ್ಮನ್ನು ಕ್ಷಮಿಸಬೇಕು. ನಾವು ನಿನ್ನ ತಂದೆಯ ದೇವರಿಗೆ ಸೇವಕರಾಗಿದ್ದೇವೆ” ಎಂದು ಹೇಳಿದರು.

ಈ ವಿಷಯಗಳನ್ನು ಕೇಳಿ ಅವನು ದುಃಖದಿಂದ ಅತ್ತನು. 18 ಸಹೋದರರು ಯೋಸೇಫನ ಬಳಿಗೆ ಹೋಗಿ ಅವನ ಮುಂದೆ ಅಡ್ಡಬಿದ್ದು, “ನಾವು ನಿನ್ನ ಸೇವಕರಾಗಿದ್ದೇವೆ” ಎಂದು ಹೇಳಿದರು.

19 ಆಗ ಯೋಸೇಫನು ಅವರಿಗೆ, “ಭಯಪಡಬೇಡಿ. ನಾನು ದೇವರಲ್ಲ; ನಿಮ್ಮನ್ನು ಶಿಕ್ಷಿಸಲು ನನಗೆ ಅಧಿಕಾರವಿಲ್ಲ. 20 ನೀವು ನನಗೆ ಕೇಡುಮಾಡಲು ಯೋಚಿಸಿದಿರಿ. ಆದರೆ ದೇವರು ಒಳ್ಳೆಯದನ್ನೇ ಮಾಡಿದನು. ಬಹಳ ಜನರ ಪ್ರಾಣವನ್ನು ಉಳಿಸುವುದಕ್ಕಾಗಿ ನನ್ನನ್ನು ಬಳಸಿಕೊಳ್ಳುವುದು ದೇವರ ಯೋಜನೆಯಾಗಿತ್ತು. ಈಗಲೂ ಆತನದು ಅದೇ ಯೋಜನೆ. 21 ಆದ್ದರಿಂದ ಭಯಪಡದಿರಿ. ನಾನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಪೋಷಿಸುತ್ತೇನೆ” ಎಂದು ಹೇಳಿದನು. ಯೋಸೇಫನು ತನ್ನ ಸಹೋದರರೊಂದಿಗೆ ಸೌಮ್ಯವಾಗಿ ಮಾತನಾಡಿದ್ದರಿಂದ ಅವರಿಗೆ ತುಂಬ ಸಂತೋಷವಾಯಿತು.

22 ಯೋಸೇಫನು ತನ್ನ ತಂದೆಯ ಕುಟುಂಬದವರೊಂದಿಗೆ ಈಜಿಪ್ಟಿನಲ್ಲೇ ವಾಸವಾಗಿದ್ದನು. ಯೋಸೇಫನು ತನ್ನ ನೂರಹತ್ತನೆಯ ವರ್ಷದಲ್ಲಿ ತೀರಿಕೊಂಡನು. 23 ಯೋಸೇಫನು ಜೀವದಿಂದಿದ್ದ ಕಾಲದಲ್ಲಿ, ಎಫ್ರಾಯೀಮನು ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದನು. ಅವನ ಮಗನಾದ ಮನಸ್ಸೆಗೆ ಮಾಕೀರನೆಂಬ ಗಂಡುಮಗನು ಹುಟ್ಟಿದನು. ಯೋಸೇಫನು ಮಾಕೀರನ ಮಕ್ಕಳನ್ನೂ ನೋಡಿದನು.

24 ಯೋಸೇಫನಿಗೆ ಸಾವು ಸಮೀಪಿಸಿದಾಗ ಅವನು ತನ್ನ ಸಹೋದರರಿಗೆ, “ನಾನು ಸಾಯುವ ಕಾಲ ಸಮೀಪಿಸಿದೆ. ಆದರೆ ನಿಮ್ಮನ್ನು ಪೋಷಿಸುವವನು ದೇವರೆಂಬುದು ನಿಮಗೆ ತಿಳಿದಿರಲಿ. ಆತನು ಈ ದೇಶದಿಂದ ನಿಮ್ಮನ್ನು ಕರೆದುಕೊಂಡು ಹೋಗಿ ಅಬ್ರಹಾಮನಿಗೂ ಇಸಾಕನಿಗೂ ಮತ್ತು ಯಾಕೋಬನಿಗೂ ವಾಗ್ದಾನ ಮಾಡಿದ್ದ ದೇಶವನ್ನು ಕೊಡುವನು” ಎಂದು ಹೇಳಿದನು.

25 ಅಲ್ಲದೆ ಯೋಸೇಫನು ತನ್ನ ಸಹೋದರರಿಗೆ, “ದೇವರು ನಿಮ್ಮನ್ನು ಈ ದೇಶದಿಂದ ಹೊರಗೆ ನಡೆಸಿದಾಗ ನನ್ನ ಮೂಳೆಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುವಿರೆಂದು ಪ್ರಮಾಣ ಮಾಡಿ” ಎಂದು ಹೇಳಿ ಅವರಿಂದ ಪ್ರಮಾಣ ಮಾಡಿಸಿಕೊಂಡನು.

26 ಯೋಸೇಫನು ತನ್ನ ನೂರಹತ್ತನೆ ವರ್ಷದಲ್ಲಿ ತೀರಿಕೊಂಡನು. ಈಜಿಪ್ಟಿನಲ್ಲಿ ವೈದ್ಯರು ಅವನ ಶರೀರವನ್ನು ಸಮಾಧಿಗೆ ಸಿದ್ಧಪಡಿಸಿ ಶವಪೆಟ್ಟಿಗೆಯಲ್ಲಿಟ್ಟರು.

ಮತ್ತಾಯ 16:5-12

ಯೆಹೂದ್ಯನಾಯಕರ ಬಗ್ಗೆ ಯೇಸು ನೀಡಿದ ಎಚ್ಚರಿಕೆ

(ಮಾರ್ಕ 8:14-21)

ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು[a] ದಾಟಿ ಹೋದರು. ಆದರೆ ಶಿಷ್ಯರು ರೊಟ್ಟಿಯನ್ನು ತರಲು ಮರೆತುಬಿಟ್ಟರು. ಯೇಸು ಶಿಷ್ಯರಿಗೆ, “ಎಚ್ಚರಿಕೆಯಿಂದಿರಿ! ಫರಿಸಾಯರ ಮತ್ತು ಸದ್ದುಕಾಯರ ಹುಳಿಗೆ ಒಳಗಾಗಬೇಡಿ” ಎಂದು ಹೇಳಿದನು.

ಶಿಷ್ಯರು ಇದರ ಅರ್ಥವನ್ನು ಚರ್ಚಿಸಿದರು. ಅವರು, “ನಾವು ರೊಟ್ಟಿ ತರಲು ಮರೆತುಬಿಟ್ಟದ್ದಕ್ಕಾಗಿ ಯೇಸು ಹೀಗೆ ಹೇಳಿರಬಹುದೆ?” ಎಂದು ಮಾತಾಡಿಕೊಂಡರು.

ಶಿಷ್ಯರು ಈ ವಿಷಯವನ್ನು ಚರ್ಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಅವರಿಗೆ, “ರೊಟ್ಟಿ ಇಲ್ಲವಲ್ಲಾ ಎಂಬ ವಿಷಯದಲ್ಲಿ ನೀವು ಮಾತಾಡಿಕೊಳ್ಳುತ್ತಿರುವುದೇಕೆ? ಅಲ್ಪ ವಿಶ್ವಾಸಿಗಳೇ, ನೀವಿನ್ನೂ ಅರ್ಥಮಾಡಿಕೊಳ್ಳಲಿಲ್ಲವೇ? ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ಊಟ ಮಾಡಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ? 10 ಏಳು ರೊಟ್ಟಿಗಳ ತುಂಡುಗಳನ್ನು ನಾಲ್ಕು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ತಿಂದು ಮುಗಿಸಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ? 11 ಆದ್ದರಿಂದ ನಾನು ನಿಮಗೆ ಹೇಳಿದ್ದು ರೊಟ್ಟಿಯ ಕುರಿತಲ್ಲ. ನೀವು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇಕೆ? ಫರಿಸಾಯರು ಮತ್ತು ಸದ್ದುಕಾಯರ ಹುಳಿಗೆ (ಕೆಟ್ಟ ಪ್ರಭಾವಕ್ಕೆ) ಒಳಗಾಗದಂತೆ ನೀವು ಎಚ್ಚರಿಕೆಯಿಂದಿರಬೇಕೆಂದು ನಾನು ನಿಮ್ಮನ್ನು ಎಚ್ಚರಿಸಿದೆನು” ಅಂದನು.

12 ಆಗ ಶಿಷ್ಯರು ಯೇಸು ಹೇಳಿದ್ದನ್ನು ಅರ್ಥಮಾಡಿಕೊಂಡರು. ಆತನು ಅವರಿಗೆ ರೊಟ್ಟಿಯಲ್ಲಿ ಬೆರೆಸಿದ್ದ ಹುಳಿಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಲಿಲ್ಲ. ಫರಿಸಾಯರು ಮತ್ತು ಸದ್ದುಕಾಯರ ಬೋಧನೆಯ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರಿಕೆಯಾಗಿರಬೇಕೆಂದು ಹೇಳಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International