Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 28

ರಚನೆಗಾರ: ದಾವೀದ.

28 ಯೆಹೋವನೇ, ನೀನೇ ನನ್ನ ಬಂಡೆ.
    ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ.
    ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ
    ಜನರು ನನ್ನನ್ನು ಪರಿಗಣಿಸುವರು.
ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು.
    ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ.
    ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತಾರೆ.[a]
ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು.
    ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು.
    ಅವರಿಗೆ ತಕ್ಕ ದಂಡನೆಯನ್ನು ಕೊಡು.
ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ
    ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ
    ನಿತ್ಯನಾಶಮಾಡುವನು.

ಯೆಹೋವನಿಗೆ ಸ್ತೋತ್ರವಾಗಲಿ!
    ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ.
    ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ ಆತನು ನನಗೆ ಸಹಾಯಮಾಡಿದನು.
ಆದಕಾರಣ ನನ್ನ ಹೃದಯವು ಹರ್ಷಿಸುವುದು;
    ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
ಯೆಹೋವನು ತನ್ನ ಜನರಿಗೆ ಬಲವೂ
    ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.

ಯೆಹೋವನೇ, ನಿನ್ನ ಜನರನ್ನು ರಕ್ಷಿಸು,
    ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು!
    ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.

ಆದಿಕಾಂಡ 39

ಈಜಿಪ್ಟಿನಲ್ಲಿ ಯೋಸೇಫನನ್ನು ಪೋಟೀಫರನಿಗೆ ಮಾರಿದ್ದು

39 ಯೋಸೇಫನನ್ನು ಖರೀದಿಮಾಡಿದ ವ್ಯಾಪಾರಿಗಳು ಅವನನ್ನು ಈಜಿಪ್ಟಿಗೆ ತೆಗೆದುಕೊಂಡು ಬಂದು ಫರೋಹನ ಕಾವಲುಗಾರರ ನಾಯಕನಾದ ಪೋಟೀಫರನಿಗೆ ಮಾರಿದರು. ಆದರೆ ಯೆಹೋವನ ಸಹಾಯದಿಂದ ಯೋಸೇಫನು ಏಳಿಗೆಯಾಗಿ ತನ್ನ ಯಜಮಾನನಾದ ಈಜಿಪ್ಟಿನ ಪೋಟೀಫರನ ಮನೆಯಲ್ಲಿ ಸೇವಕನಾದನು.

ಯೆಹೋವನು ಯೋಸೇಫನ ಸಂಗಡವಿದ್ದು ಅವನನ್ನು ಎಲ್ಲಾ ಕೆಲಸಕಾರ್ಯಗಳಲ್ಲಿ ಯಶಸ್ವಿಯಾಗುವಂತೆ ಮಾಡುತ್ತಿರುವುದನ್ನು ಪೋಟೀಫರನು ಗಮನಿಸಿದನು. ಪೋಟೀಫರನು ಯೋಸೇಫನ ವಿಷಯದಲ್ಲಿ ತುಂಬ ಸಂತೋಷಪಟ್ಟು ಸ್ವಂತ ಸೇವಕನನ್ನಾಗಿ ಮಾಡಿಕೊಂಡನು; ಅಲ್ಲದೆ ಮನೆಯ ಮೇಲ್ವಿಚಾರಣೆಯನ್ನು ಒಪ್ಪಿಸಿಕೊಟ್ಟನು; ತನ್ನ ಆಸ್ತಿಗೆಲ್ಲಾ ಮೇಲಾಧಿಕಾರಿಯನ್ನಾಗಿ ನೇಮಿಸಿದನು. ಪೋಟೀಫರನು ಯೋಸೇಫನಿಗೆ ಮನೆಯ ಮೇಲ್ವಿಚಾರಣೆಯನ್ನು ಕೊಟ್ಟು ಆಸ್ತಿಗೆ ಅವನನ್ನು ಜವಾಬ್ದಾರನನ್ನಾಗಿ ಮಾಡಿದ ಮೇಲೆ ಯೆಹೋವನು ಪೋಟೀಫರನ ಮನೆಯನ್ನೂ ಬೆಳೆಗಳನ್ನೂ ಆಸ್ತಿಯನ್ನೂ ಆಶೀರ್ವದಿಸಿದನು. ಆದ್ದರಿಂದ ಪೋಟೀಫರನು ತಾನು ಊಟಮಾಡುವ ಆಹಾರವೊಂದನ್ನು ಬಿಟ್ಟು ಉಳಿದೆಲ್ಲದರ ಜವಾಬ್ದಾರಿಯನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಿಂದ ಇದ್ದನು.

ಯೋಸೇಫನು ಪೋಟೀಫರನ ಹೆಂಡತಿಯನ್ನು ತಿರಸ್ಕರಿಸಿದ್ದು

ಯೋಸೇಫನು ನೋಡಲು ಸುಂದರನಾಗಿಯೂ ರೂಪವಂತನಾಗಿಯೂ ಇದ್ದನು. ಸ್ವಲ್ಪ ಕಾಲದನಂತರ, ಯೋಸೇಫನ ಒಡೆಯನ ಹೆಂಡತಿಯು ಯೋಸೇಫನ ಮೇಲೆ ಆಸೆಪಟ್ಟಳು. ಒಂದು ದಿನ ಆಕೆ ಅವನಿಗೆ, “ನನ್ನೊಂದಿಗೆ ಮಲಗಿಕೊ” ಎಂದು ಹೇಳಿದಳು.

ಆದರೆ ಯೋಸೇಫನು ತಿರಸ್ಕರಿಸಿದನು. ಅವನು, “ನನ್ನ ಧಣಿಯು ಈ ಮನೆಯ ಜವಾಬ್ದಾರಿಕೆಗಳನ್ನೆಲ್ಲಾ ನನಗೆ ವಹಿಸಿ ನಿಶ್ಚಿಂತೆಯಿಂದಿದ್ದಾನೆ. ನನ್ನ ಧಣಿಯು ಈ ಮನೆಯ ಸರ್ವಾಧಿಕಾರವನ್ನು ನನಗೆ ಕೊಟ್ಟಿದ್ದರೂ ತನ್ನ ಧರ್ಮಪತ್ನಿಯಾದ ನಿನ್ನನ್ನು ನನಗೆ ಅಧೀನಪಡಿಸಿಲ್ಲ. ಹೀಗಿರಲು ಇಂಥಾ ಮಹಾ ದುಷ್ಕೃತ್ಯವನ್ನು ನಡೆಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಉತ್ತರಕೊಟ್ಟನು.

10 ಆ ಸ್ತ್ರೀಯು ಪ್ರತಿದಿನವೂ ಯೋಸೇಫನನ್ನು ಒತ್ತಾಯಿಸಿದಳು. ಆದರೆ ಯೋಸೇಫನು ಆಕೆಯೊಂದಿಗೆ ಮಲಗಿಕೊಳ್ಳಲು ಒಪ್ಪಲಿಲ್ಲ. 11 ಒಂದು ದಿನ ಯೋಸೇಫನು ತನ್ನ ಕೆಲಸದ ನಿಮಿತ್ತ ಮನೆಯೊಳಗೆ ಹೋದನು. ಆಗ ಮನೆಯಲ್ಲಿ ಇದ್ದವನು ಅವನೊಬ್ಬನೇ. 12 ಅವನ ಧಣಿಯ ಹೆಂಡತಿಯು ಅವನ ಮೇಲಂಗಿಯನ್ನು ಹಿಡಿದುಕೊಂಡು, “ಬಾ ನನ್ನೊಂದಿಗೆ ಮಲಗಿಕೊ” ಎಂದು ಕರೆದಳು. ಕೂಡಲೇ ಯೋಸೇಫನು ತನ್ನ ಮೇಲಂಗಿಯನ್ನೇ ಬಿಟ್ಟು ಅಲ್ಲಿಂದ ಓಡಿಹೋದನು.

13 ಯೋಸೇಫನು ತನ್ನ ಮೇಲಂಗಿಯನ್ನು ಬಿಟ್ಟು ಓಡಿಹೋದದ್ದರಿಂದ ಸಿಟ್ಟುಗೊಂಡ ಅವಳು 14 ಮನೆಯ ಹೊರಗಿದ್ದ ಸೇವಕರನ್ನು ಕರೆದು, “ನೋಡಿ, ನಮಗೆ ಅವಮಾನ ಮಾಡುವುದಕ್ಕಾಗಿ ಈ ಇಬ್ರಿಯ ಗುಲಾಮನನ್ನು ಇಲ್ಲಿಗೆ ತರಲಾಗಿದೆ. ಅವನು ಮನೆಯೊಳಗೆ ಬಂದು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ. ಆಗ ನಾನು ಗಟ್ಟಿಯಾಗಿ ಕೂಗಿಕೊಂಡೆ. 15 ನನ್ನ ಕೂಗಿನಿಂದ ಭಯಗೊಂಡು ತನ್ನ ಮೇಲಂಗಿಯನ್ನೇ ಬಿಟ್ಟು ಓಡಿಹೋದ” ಎಂದು ಹೇಳಿದಳು. 16 ಆಕೆ ಆ ಮೇಲಂಗಿಯನ್ನು ತನ್ನ ಗಂಡನೂ ಯೋಸೇಫನಿಗೆ ಧಣಿಯೂ ಆಗಿದ್ದ ಪೋಟೀಫರನು ಬರುವ ತನಕ ಇಟ್ಟುಕೊಂಡಿದ್ದಳು. 17 ಪತಿಯು ಬಂದಾಗ ಆಕೆ ಅದೇ ರೀತಿ ಹೇಳಿ, “ನೀನು ಸೇರಿಸಿಕೊಂಡ ಈ ಇಬ್ರಿಯ ಗುಲಾಮನು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ. 18 ಆದರೆ ನಾನು ಕೂಗಿಕೊಂಡದ್ದರಿಂದ ಅವನು ಮೇಲಂಗಿಯನ್ನೇ ಬಿಟ್ಟು ಓಡಿಹೋದ” ಎಂದು ಹೇಳಿದಳು.

19 ಯೋಸೇಫನ ಧಣಿಯು ತನ್ನ ಹೆಂಡತಿಯ ಮಾತು ಕೇಳಿ ತುಂಬ ಕೋಪಗೊಂಡನು. 20 ರಾಜನ ವೈರಿಗಳನ್ನು ಹಾಕುವ ಒಂದು ಸೆರೆಮನೆಯಿತ್ತು. ಆದ್ದರಿಂದ ಪೋಟೀಫರನು ಯೋಸೇಫನನ್ನು ಆ ಸೆರೆಮನೆಗೆ ಹಾಕಿಸಿದನು. ಅಂದಿನಿಂದ ಯೋಸೇಫನು ಅಲ್ಲಿದ್ದನು.

ಯೋಸೇಫನಿಗೆ ಸೆರೆವಾಸ

21 ಆದರೆ ಯೆಹೋವನು ಯೋಸೇಫನ ಸಂಗಡವಿದ್ದು ಕರುಣೆತೋರಿದನು. ಸ್ವಲ್ಪಕಾಲವಾದ ಮೇಲೆ ಸೆರೆಮನೆಯ ಮುಖ್ಯಾಧಿಕಾರಿಯು ಯೋಸೇಫನನ್ನು ಪ್ರೀತಿಸತೊಡಗಿದನು. 22 ಅವನು ಎಲ್ಲಾ ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸುತ್ತಿದ್ದನು. 23 ಯೆಹೋವನು ಯೋಸೇಫನ ಸಂಗಡವಿದ್ದು ಅವನ ಎಲ್ಲಾ ಕೆಲಸಕಾರ್ಯಗಳನ್ನು ಯಶಸ್ವಿಗೊಳಿಸುತ್ತಿದ್ದದ್ದರಿಂದ ಮುಖ್ಯಾಧಿಕಾರಿಯು ಎಲ್ಲಾ ವಿಷಯಗಳನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಾಗಿದ್ದನು.

ರೋಮ್ನಗರದವರಿಗೆ 9:14-29

14 ಹಾಗಾದರೆ, ಇದರ ಬಗ್ಗೆ ಏನು ಹೇಳೋಣ? ದೇವರು ಅನ್ಯಾಯಗಾರನೇ? ಎಂದಿಗೂ, ಇಲ್ಲ. 15 ದೇವರು ಮೋಶೆಗೆ, “ನಾನು ಯಾರಿಗೆ ಕರುಣೆ ತೋರಬಯಸುತ್ತೇನೋ ಅವನಿಗೆ ಕರುಣೆ ತೋರುವೆನು. ನಾನು ಯಾರಿಗೆ ಕನಿಕರ ತೋರಬಯಸುತ್ತೇನೋ ಅವರಿಗೆ ಕನಿಕರ ತೋರುವೆನು”(A) ಎಂದು ಹೇಳಿದ್ದಾನೆ. 16 ಆದ್ದರಿಂದ ದೇವರು ತಾನು ಯಾರಿಗೆ ಕರುಣೆ ತೋರಬಯಸುತ್ತಾನೊ ಅವನನ್ನೇ ಆರಿಸಿಕೊಳ್ಳುತ್ತಾನೆ. ಆತನ ಆಯ್ಕೆಯು ಜನರು ಏನು ಮಾಡಬಯಸುತ್ತಾರೆ ಅಥವಾ ಏನು ಮಾಡಲು ಪ್ರಯತ್ನಿಸುತ್ತಾರೆಂಬುದರ ಮೇಲೆ ಆಧಾರಗೊಂಡಿಲ್ಲ. 17 ಪವಿತ್ರ ಗ್ರಂಥದಲ್ಲಿ ದೇವರು ಫರೋಹನಿಗೆ, “ನಾನು ನಿನಗೆ ನನ್ನ ಶಕ್ತಿಯನ್ನು ತೋರಿಸಬೇಕೆಂತಲೂ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಖ್ಯಾತಿಪಡಿಸಬೇಕೆಂತಲೂ ನಿನ್ನನ್ನು ರಾಜನನ್ನಾಗಿ ಮಾಡಿದೆನು”(B) ಎಂದು ಹೇಳಿದ್ದಾನೆ. 18 ಆದ್ದರಿಂದ ದೇವರು ತಾನು ಯಾರಿಗೆ ಕರುಣೆಯನ್ನು ತೋರಬಯಸುತ್ತಾನೋ ಅವರಿಗೆ ಕರುಣೆಯನ್ನು ತೋರಿಸುತ್ತಾನೆ. ದೇವರು ಯಾರನ್ನು ಮೊಂಡರನ್ನಾಗಿ ಮಾಡಬಯಸುತ್ತಾನೋ ಅವರನ್ನು ಮೊಂಡರನ್ನಾಗಿ ಮಾಡುತ್ತಾನೆ.

19 “ನಾವು ಮಾಡುವ ಕಾರ್ಯಗಳು ದೇವರ ಹಿಡಿತಕ್ಕೆ ಒಳಗಾಗಿರುವುದಾದರೆ, ನಮ್ಮ ಪಾಪಗಳ ನಿಮಿತ್ತ ದೇವರು ನಮ್ಮನ್ನು ದೂಷಿಸುವುದೇಕೆ?” ಎಂದು ನಿಮ್ಮಲ್ಲಿ ಒಬ್ಬನು ಕೇಳಬಹುದು. 20 ಹಾಗೆ ಕೇಳಬೇಡಿ. ನೀವು ಕೇವಲ ಮನುಷ್ಯರು. ದೇವರನ್ನು ಪ್ರಶ್ನಿಸಲು ಮನುಷ್ಯರಿಗೆ ಯಾವ ಹಕ್ಕೂ ಇಲ್ಲ. ಮಡಕೆಯು ತನ್ನನ್ನು ತಯಾರಿಸಿದವನಿಗೆ, “ನೀನು ನನ್ನನ್ನು ಈ ರೀತಿ ತಯಾರಿಸಿದ್ದೇಕೆ” ಎಂದು ಕೇಳುವುದುಂಟೇ? 21 ಕುಂಬಾರನು ತನಗೆ ಇಷ್ಟಬಂದಂತೆ ಒಂದೇ ಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸುವುದಿಲ್ಲವೇ? ಅವನು ಒಂದನ್ನು ವಿಶೇಷವಾದ ಬಳಕೆಗಾಗಿಯೂ ಮತ್ತೊಂದನ್ನು ದೈನಂದಿನ ಬಳಕೆಗಾಗಿಯೂ ತಯಾರಿಸುವನು.

22 ದೇವರು ಮಾಡಿರುವುದು ಸಹ ಹೀಗೆಯೇ. ಆತನು ತನ್ನ ಕೋಪವನ್ನು ತೋರಿಸಿ, ತನ್ನ ಶಕ್ತಿಯನ್ನು ಜನರಿಗೆ ಪ್ರಸಿದ್ಧಿಪಡಿಸಬೇಕೆಂದಿದ್ದನು. ಆದರೂ ಆತನು ತನ್ನ ಕೋಪಕ್ಕೆ ಗುರಿಯಾಗಿ ನಾಶವಾಗಲಿದ್ದ ಜನರನ್ನು ಬಹು ಸಹನೆಯಿಂದ ಸಹಿಸಿಕೊಂಡನು. 23 ದೇವರು ತನ್ನ ಅತಿಶಯವಾದ ಮಹಿಮೆಯನ್ನು ತೋರ್ಪಡಿಸಬೇಕೆಂದು ತಾಳ್ಮೆಯಿಂದ ಕಾದುಕೊಂಡಿದ್ದನು. ತನ್ನ ಕರುಣೆಯನ್ನು ಹೊಂದಿಕೊಳ್ಳುವ ಜನರಿಗೆ ದೇವರು ಆ ಮಹಿಮೆಯನ್ನು ಕೊಡಬೇಕೆಂದಿದ್ದನು. ತನ್ನ ಮಹಿಮೆಯನ್ನು ಹೊಂದಿಕೊಳ್ಳಲೆಂದು ದೇವರು ಆ ಜನರನ್ನು ಸಿದ್ಧಪಡಿಸಿದನು. 24 ನಾವೇ ಆ ಜನರು. ದೇವರಿಂದ ಕರೆಯಲ್ಪಟ್ಟ ಜನರು ನಾವೇ. ದೇವರು ನಮ್ಮನ್ನು ಯೆಹೂದ್ಯರೊಳಗಿಂದ ಮತ್ತು ಯೆಹೂದ್ಯರಲ್ಲದವರೊಳಗಿಂದ ಕರೆದನು. 25 ಪವಿತ್ರ ಗ್ರಂಥದ ಹೋಶೇಯನ ಪುಸ್ತಕದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:

“ನನ್ನವರಲ್ಲದ ಜನರನ್ನು
    ನನ್ನ ಜನರೆಂದು ಹೇಳುವೆನು.
ನನಗೆ ಪ್ರಿಯರಲ್ಲದವರನ್ನು
    ನನಗೆ ಪ್ರಿಯರೆಂದು ಹೇಳುವೆನು.”(C)

26 ಮತ್ತು

“ಯಾವ ಸ್ಥಳದಲ್ಲಿ ದೇವರು,
    ‘ನೀವು ನನ್ನ ಜನರಲ್ಲ’ ಎಂದು ಹೇಳಿದ್ದನೋ
    ಅದೇ ಸ್ಥಳದಲ್ಲಿ ಅವರನ್ನು ಜೀವವುಳ್ಳ ದೇವರ ಮಕ್ಕಳೆಂದು ಕರೆಯಲಾಗುವುದು.”(D)

27 ಇದಲ್ಲದೆ ಯೆಶಾಯನು ಇಸ್ರೇಲಿನ ಬಗ್ಗೆ ಕೂಗಿ ಹೇಳಿದ್ದಾನೆ:

“ಸಮುದ್ರ ತೀರದ ಮರಳಿನಂತೆ ಇಸ್ರೇಲರು ಅಸಂಖ್ಯಾತವಾಗಿರುವರು.
    ಆದರೆ ಆ ಜನರಲ್ಲಿ ಕೆಲವರು ಮಾತ್ರ ರಕ್ಷಣೆ ಹೊಂದುವರು.
28 ಹೌದು, ಪ್ರಭುವು ಭೂಮಿಯ ಮೇಲಿನ ಜನರಿಗೆ ಬಹುಬೇಗನೆ ತೀರ್ಪನ್ನು ಪೂರ್ಣವಾಗಿ ತೀರಿಸುವನು.”(E)

29 ಯೆಶಾಯನು ಹೇಳಿರುವುದೇನೆಂದರೆ:

“ಪ್ರಭುವು ಸರ್ವಶಕ್ತನಾಗಿದ್ದಾನೆ. ಪ್ರಭುವು ತನ್ನ ಜನರಲ್ಲಿ ಕೆಲವರನ್ನು ನಮಗೋಸ್ಕರವಾಗಿ ರಕ್ಷಿಸಿದ್ದಾನೆ.
ಆತನು ಹೀಗೆ ಮಾಡಿಲ್ಲದಿದ್ದರೆ,
    ಈಗ ನಾವು ಸೊದೋಮಿನಂತೆಯೂ
    ಗೊಮೋರದಂತೆಯೂ ಇರುತ್ತಿದ್ದೆವು.”(F)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International