Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 17:1-7

ಪ್ರಾರ್ಥನೆ. ರಚನೆಗಾರ: ದಾವೀದ.

17 ಯೆಹೋವನೇ, ನ್ಯಾಯವಾದ ನನ್ನ ಪ್ರಾರ್ಥನೆಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲೈಸು, ನನ್ನ ಯಥಾರ್ಥವಾದ ಪ್ರಾರ್ಥನೆಗೆ ಕಿವಿಗೊಡು.
ನನ್ನ ಕುರಿತಾಗಿ ನ್ಯಾಯವಾದ ತೀರ್ಪು ನಿನ್ನಿಂದಲೇ ಬರಲಿ.
    ನೀನು ಸತ್ಯವನ್ನು ನೋಡಬಲ್ಲಾತನಾಗಿರುವೆ.
ನೀನು ನನ್ನ ಅಂತರಾಳವನ್ನು ರಾತ್ರಿಯೆಲ್ಲಾ ಪರೀಕ್ಷಿಸಿರುವೆ.
    ನೀನು ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದಾಗ
ನನ್ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ.
    ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ.
ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
    ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ.
ನಿನ್ನ ಜೀವಮಾರ್ಗದಲ್ಲೇ ಹೆಜ್ಜೆಯಿಡುತ್ತಾ ನಡೆಯುತ್ತಿದ್ದೇನೆ.
    ನನ್ನ ಪಾದವು ತಪ್ಪು ದಾರಿಗೆ ಹೋಗಲಿಲ್ಲ.
ದೇವರೇ, ನಾನು ನಿನ್ನನ್ನು ಕರೆದಾಗಲ್ಲೆಲ್ಲಾ, ನೀನು ನನಗೆ ಉತ್ತರಿಸಿದೆ.
    ಆದ್ದರಿಂದ ಈಗಲೂ ನನಗೆ ಕಿವಿಗೊಡು.
ದೇವರೇ, ನಿನ್ನಲ್ಲಿ ಭರವಸೆಯಿಟ್ಟಿರುವ ಭಕ್ತರಿಗೆ
    ನೀನು ಸಹಾಯಮಾಡುವೆ;
ಅವರು ನಿನ್ನ ಬಲಗಡೆಯಲ್ಲಿ ಸುರಕ್ಷಿತವಾಗಿರುವರು.
    ಆದ್ದರಿಂದ ನಿನ್ನ ಭಕ್ತನಾದ ನನ್ನ ಪ್ರಾರ್ಥನೆಗೂ ಕಿವಿಗೊಡು.

ಕೀರ್ತನೆಗಳು 17:15

15 ನಾನು ನ್ಯಾಯಕ್ಕಾಗಿ ಪ್ರಾರ್ಥಿಸಿದ್ದರಿಂದ ನನಗೆ ನಿನ್ನ ಮುಖದ ದರ್ಶನವಾಗುವುದು.
    ಎಚ್ಚೆತ್ತಾಗ ನಿನ್ನ ಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

ಆದಿಕಾಂಡ 31:22-42

22 ಯಾಕೋಬನು ಓಡಿಹೋದದ್ದು ಮೂರು ದಿನಗಳಾದ ಮೇಲೆ ಲಾಬಾನನಿಗೆ ತಿಳಿಯಿತು. 23 ಆದ್ದರಿಂದ ಲಾಬಾನನು ತನ್ನ ಜನರನ್ನು ಕರೆದುಕೊಂಡು ಯಾಕೋಬನನ್ನು ಬೆನ್ನಟ್ಟಿದನು. ಏಳು ದಿನಗಳಾದ ಮೇಲೆ ಲಾಬಾನನು ಯಾಕೋಬನನ್ನು ಬೆಟ್ಟದ ಸೀಮೆಯಾದ ಗಿಲ್ಯಾದಿನಲ್ಲಿ ಕಂಡನು. 24 ಆ ರಾತ್ರಿ ದೇವರು ಲಾಬಾನನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎಚ್ಚರಿಕೆಯಾಗಿರು; ನೀನು ಯಾಕೋಬನಿಗೆ ಹೇಳುವ ಪ್ರತಿಯೊಂದು ಮಾತಿನ ಬಗ್ಗೆ ಎಚ್ಚರಿಕೆಯಾಗಿರು” ಎಂದು ಹೇಳಿದನು.

ಕದ್ದುಕೊಂಡು ಬಂದಿದ್ದ ವಿಗ್ರಹಗಳಿಗಾಗಿ ಹುಡುಕಾಟ

25 ಮರುದಿನ ಮುಂಜಾನೆ ಲಾಬಾನನು ಯಾಕೋಬನನ್ನು ಸಂಧಿಸಿದನು. ಯಾಕೋಬನು ಬೆಟ್ಟದ ಮೇಲೆ ಪಾಳೆಯ ಮಾಡಿಕೊಂಡಿದ್ದನು. ಆದ್ದರಿಂದ ಲಾಬಾನನು ಮತ್ತು ಅವನ ಜನರೆಲ್ಲರು ಬೆಟ್ಟದ ಸೀಮೆಯಾದ ಗಿಲ್ಯಾದಿನಲ್ಲಿ ಪಾಳೆಯ ಮಾಡಿಕೊಂಡರು.

26 ಲಾಬಾನನು ಯಾಕೋಬನಿಗೆ, “ನೀನು ನನಗೇಕೆ ಮೋಸ ಮಾಡಿದೆ? ಯುದ್ಧದಲ್ಲಿ ಸೆರೆ ಒಯ್ಯುವ ಸ್ತ್ರೀಯರಂತೆ, ನೀನು ನನ್ನ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದದ್ದೇಕೆ? 27 ನೀನು ನನಗೆ ಹೇಳದೆ ಓಡಿಬಂದದ್ದೇಕೆ? ನೀನು ನನ್ನನ್ನು ಕೇಳಿದ್ದರೆ ನಾನು ನಿನಗಾಗಿ ಒಂದು ಔತಣಕೂಟವನ್ನೇರ್ಪಡಿಸುತ್ತಿದ್ದೆ. ಅಲ್ಲಿ ಗಾಯನ, ನೃತ್ಯ ಮತ್ತು ವಾದ್ಯಗೋಷ್ಠಿಗಳಿರುತ್ತಿದ್ದವು. 28 ನಾನು ನನ್ನ ಮೊಮ್ಮಕ್ಕಳಿಗೆ ಮುದ್ದಿಡುವುದಕ್ಕೂ ನನ್ನ ಹೆಣ್ಣುಮಕ್ಕಳನ್ನು ಬೀಳ್ಕೊಡುವುದಕ್ಕೂ ನೀನು ನನಗೆ ಅವಕಾಶ ಕೊಡಲಿಲ್ಲ. ನಿನ್ನ ಮೂಢತನದಿಂದ ಹೀಗೆ ಮಾಡಿರುವೆ. 29 ನಿನಗೆ ಕೇಡುಮಾಡಲು ನನಗೆ ಶಕ್ತಿಯಿದೆ. ಆದರೆ ಕಳೆದ ರಾತ್ರಿ ನಿನ್ನ ತಂದೆಯ ದೇವರು ಕನಸಿನಲ್ಲಿ ನನಗೆ ಕಾಣಿಸಿಕೊಂಡು, ನಿನಗೆ ಕೇಡುಮಾಡಕೂಡದೆಂದು ನನಗೆ ಎಚ್ಚರಿಕೆ ಕೊಟ್ಟನು. 30 ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಬೇಕೆಂಬುದು ನಿನ್ನ ಅಪೇಕ್ಷೆ ಎಂದು ನನಗೆ ತಿಳಿದಿದೆ. ಆದ್ದರಿಂದಲೇ ನೀನು ಹೊರಟು ಬಂದೆ. ಆದರೆ ನೀನು ನನ್ನ ಮನೆಯಿಂದ ವಿಗ್ರಹಗಳನ್ನು ಕದ್ದುಕೊಂಡು ಬಂದದ್ದೇಕೆ?” ಎಂದು ಹೇಳಿದನು.

31 ಯಾಕೋಬನು, “ನಾನು ನಿನಗೆ ಹೇಳದೆ ಹೊರಟು ಬಂದೆ. ಯಾಕೆಂದರೆ ನನಗೆ ಭಯವಾಗಿತ್ತು; ನೀನು ನಿನ್ನ ಹೆಣ್ಣುಮಕ್ಕಳನ್ನು ನನ್ನಿಂದ ತೆಗೆದುಕೊಳ್ಳಬಹುದೆಂದು ನಾನು ಭಾವಿಸಿದೆ. 32 ಆದರೆ ನಾನು ನಿನ್ನ ವಿಗ್ರಹಗಳನ್ನು ಕದ್ದುಕೊಳ್ಳಲಿಲ್ಲ. ನಿನ್ನ ವಿಗ್ರಹಗಳನ್ನು ತೆಗೆದುಕೊಂಡಿರುವ ಯಾವ ವ್ಯಕ್ತಿಯನ್ನಾದರೂ ಇಲ್ಲಿ ಕಂಡರೆ ಆ ವ್ಯಕ್ತಿಯನ್ನು ಕೊಲ್ಲಲಾಗುವುದು. ನಿನ್ನ ಜನರೇ ನನಗೆ ಸಾಕ್ಷಿಗಳು. ನಿನಗೆ ಸೇರಿದ ಏನಾದರೂ ಇದೆಯೋ ಎಂದು ನೀನೇ ನೋಡಬಹುದು. ನಿನಗೆ ಸೇರಿದ ಯಾವುದಾದರೂ ಇದ್ದರೆ ತೆಗೆದುಕೊ” ಎಂದು ಹೇಳಿದನು. (ಲಾಬಾನನ ವಿಗ್ರಹಗಳನ್ನು ರಾಹೇಲಳು ಕದ್ದುಕೊಂಡಿರುವುದು ಯಾಕೋಬನಿಗೆ ತಿಳಿದಿರಲಿಲ್ಲ.)

33 ಆದ್ದರಿಂದ ಲಾಬಾನನು ಹೋಗಿ ಯಾಕೋಬನ ಪಾಳೆಯದಲ್ಲಿಯೂ ಗುಡಾರದಲ್ಲಿಯೂ ಲೇಯಳ ಗುಡಾರದಲ್ಲಿಯೂ ಹುಡುಕಿದನು. ಬಳಿಕ ಇಬ್ಬರು ಸೇವಕಿಯರಿದ್ದ ಗುಡಾರಕ್ಕೂ ಹೋಗಿ ಹುಡುಕಿದನು; ಅಲ್ಲಿಯೂ ಅವನಿಗೆ ಅವನ ವಿಗ್ರಹಗಳು ಸಿಕ್ಕಲಿಲ್ಲ. ಅಲ್ಲಿಂದ ರಾಹೇಲಳ ಗುಡಾರಕ್ಕೆ ಹೋದನು. 34 ರಾಹೇಲಳು ಆ ವಿಗ್ರಹಗಳನ್ನು ತನ್ನ ಒಂಟೆಯ ಸಬರದೊಳಗಿಟ್ಟು ಅದರ ಮೇಲೆ ಕುಳಿತುಕೊಂಡಿದ್ದಳು. ಲಾಬಾನನು ಇಡೀ ಗುಡಾರವನ್ನು ಹುಡುಕಿದರೂ ತನ್ನ ವಿಗ್ರಹಗಳನ್ನು ಕಂಡುಕೊಳ್ಳಲಿಲ್ಲ.

35 ಆಗ ರಾಹೇಲಳು ತನ್ನ ತಂದೆಗೆ, “ಅಪ್ಪಾ, ನನ್ನ ಮೇಲೆ ಕೋಪಗೊಳ್ಳಬೇಡ. ನಿನ್ನ ಮುಂದೆ ನಿಂತುಕೊಳ್ಳಲು ನನಗೆ ಸಾಧ್ಯವಿಲ್ಲ. ಯಾಕೆಂದರೆ ನಾನು ಮುಟ್ಟಾಗಿದ್ದೇನೆ” ಎಂದು ಹೇಳಿದಳು. ಲಾಬಾನನು ಪಾಳೆಯದಲ್ಲೆಲ್ಲಾ ಹುಡುಕಿದರೂ ತನ್ನ ವಿಗ್ರಹಗಳನ್ನು ಕಂಡುಕೊಳ್ಳಲಾಗಲಿಲ್ಲ.

36 ಆಗ ಯಾಕೋಬನು ತುಂಬಾ ಕೋಪಗೊಂಡು, “ನಾನು ಯಾವ ತಪ್ಪು ಮಾಡಿದೆ? ಯಾವ ನಿಯಮವನ್ನು ನಾನು ಉಲ್ಲಂಘಿಸಿರುವೆ? ನನ್ನನ್ನು ಬೆನ್ನಟ್ಟಿಕೊಂಡು ಬಂದು ತಡೆಯಲು ನಿನಗೆ ಯಾವ ಹಕ್ಕಿದೆ? 37 ನಾನು ಹೊಂದಿರುವ ಪ್ರತಿಯೊಂದನ್ನು ನೀನು ಪರೀಕ್ಷಿಸಿ ನೋಡಿದರೂ ನಿನಗೆ ಸೇರಿರುವ ಯಾವುದೂ ನಿನಗೆ ಸಿಕ್ಕಲಿಲ್ಲ. ನಿನಗೆ ಅಂಥದ್ದೇನಾದರೂ ಸಿಕ್ಕಿದರೆ ತೋರಿಸು. ನನ್ನ ಜನರಿಗೆಲ್ಲ ಕಾಣಿಸುವಂತೆ ಅದನ್ನು ಇಲ್ಲಿಡು. ನಮ್ಮಲ್ಲಿ ಯಾರು ಸರಿಯಾದವರೆಂದು ನಮ್ಮ ಜನರೇ ನಿರ್ಣಯಿಸಲಿ. 38 ನಾನು ನಿನಗೋಸ್ಕರ ಇಪ್ಪತ್ತು ವರ್ಷ ದುಡಿದೆ. ಆ ಸಮಯದಲ್ಲೆಲ್ಲ ಯಾವ ಕುರಿಮರಿಯಾಗಲಿ ಆಡಾಗಲಿ ಹುಟ್ಟುವಾಗ ಸಾಯಲಿಲ್ಲ; ನಿನ್ನ ಮಂದೆಗಳಲ್ಲಿನ ಯಾವ ಟಗರನ್ನಾಗಲಿ ನಾನು ತಿಂದುಬಿಡಲಿಲ್ಲ. 39 ಕ್ರೂರ ಮೃಗಗಳು ಕುರಿಯನ್ನು ಕೊಂದಾಗಲೆಲ್ಲಾ ಅದಕ್ಕೆ ಬದಲಾಗಿ ನನ್ನ ಕುರಿಯನ್ನು ನಿನಗೆ ಕೊಟ್ಟೆನು. ಸತ್ತುಹೋದ ಪಶುವನ್ನು ನಿನ್ನ ಮುಂದೆ ತಂದು, ‘ಇದು ನನ್ನ ತಪ್ಪಲ್ಲ’ ಎಂದು ನಿನಗೆ ಹೇಳಲಿಲ್ಲ. ಕಳುವು ಹಗಲಲ್ಲಾಗಿದ್ದರೂ ರಾತ್ರಿಯಲ್ಲಾಗಿದ್ದರೂ ಕಳುವಾದ ಪಶುಗಳಿಗೆ ಪ್ರತಿಯಾಗಿ ಪಶುಗಳನ್ನು ನೀನು ನನ್ನಿಂದ ವಸೂಲಿ ಮಾಡಿದೆ. 40 ಹಗಲಿನಲ್ಲಿ ಸೂರ್ಯನಿಂದ ನನ್ನ ಶಕ್ತಿಯನ್ನು ಕುಂದಿಸಿದೆ; ರಾತ್ರಿಯಲ್ಲಿ ಚಳಿಯಿಂದ ನನಗೆ ನಿದ್ರೆಯು ಬರಲಿಲ್ಲ. 41 ನಾನು ಇಪ್ಪತ್ತು ವರ್ಷ ನಿನಗೆ ಗುಲಾಮನಂತೆ ಸೇವೆ ಮಾಡಿದೆನು. ಮೊದಲ ಹದಿನಾಲ್ಕು ವರ್ಷಗಳಲ್ಲಿ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನು ಪಡೆದುಕೊಳ್ಳುವುದಕ್ಕಾಗಿ ದುಡಿದೆನು. ಕಡೆಯ ಆರು ವರ್ಷಗಳಲ್ಲಿ ನಿನ್ನ ಪಶುಗಳನ್ನು ಪಡೆದುಕೊಳ್ಳುವುದಕ್ಕಾಗಿ ದುಡಿದೆನು. ಆ ಅವಧಿಯಲ್ಲಿ ನೀನು ನನ್ನ ಸಂಬಳವನ್ನು ಹತ್ತು ಸಲ ಬದಲಾಯಿಸಿದೆ. 42 ಆದರೆ ನನ್ನ ಪೂರ್ವಿಕರ ದೇವರೂ ಅಬ್ರಹಾಮನ ದೇವರೂ ಇಸಾಕನು ಭಯಪಡುವ ದೇವರೂ[a] ನನ್ನ ಸಂಗಡವಿದ್ದನು. ದೇವರು ನನ್ನ ಜೊತೆಯಲ್ಲಿ ಇಲ್ಲದಿದ್ದರೆ ನೀನು ನನ್ನನ್ನು ಬರಿಗೈಲಿ ಕಳುಹಿಸಿಬಿಡುತ್ತಿದ್ದೆ. ಆದರೆ ನನ್ನ ಕಷ್ಟವನ್ನೂ ನಾನು ಮಾಡಿದ ಕೆಲಸವನ್ನೂ ದೇವರು ನೋಡಿದನು. ನಿನ್ನೆಯ ರಾತ್ರಿ ನಾನು ತಪ್ಪಿತಸ್ಥನಲ್ಲವೆಂದು ದೇವರು ನಿನಗೆ ತೋರಿಸಿಕೊಟ್ಟಿದ್ದಾನೆ” ಎಂದು ಹೇಳಿದನು.

ರೋಮ್ನಗರದವರಿಗೆ 1:8-15

ಕೃತಜ್ಞತಾ ಪ್ರಾರ್ಥನೆ

ಮೊದಲನೆಯದಾಗಿ, ನಾನು ನಿಮ್ಮೆಲ್ಲರ ವಿಷಯದಲ್ಲಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ಏಕೆಂದರೆ ನಿಮ್ಮ ನಂಬಿಕೆಯು ಲೋಕದಲೆಲ್ಲಾ ಪ್ರಖ್ಯಾತವಾಗಿದೆ. 9-10 ನಾನು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಖಂಡಿತವಾಗಿ ಜ್ಞಾಪಿಸಿಕೊಳ್ಳುತ್ತೇನೆ. ಇದು ಸತ್ಯವೆಂದು ದೇವರಿಗೆ ಗೊತ್ತಿದೆ. ದೇವರ ಮಗನ ವಿಷಯವಾದ ಸುವಾರ್ತೆಯನ್ನು ಜನರಿಗೆ ಸಾರುವುದರ ಮೂಲಕ ನಾನು ದೇವರನ್ನು ನನ್ನ ಆತ್ಮದಲ್ಲಿ ಆರಾಧಿಸುವವನಾಗಿದ್ದೇನೆ. ದೇವರ ಚಿತ್ತದಿಂದ, ನಿಮ್ಮ ಬಳಿಗೆ ಬರಲು ಅವಕಾಶವಾಗಬೇಕೆಂದು ಪ್ರಾರ್ಥಿಸುತ್ತೇನೆ. 11 ನಾನು ನಿಮ್ಮನ್ನು ನೋಡಲು, ನಿಮ್ಮನ್ನು ಬಲಗೊಳಿಸಲು, ನಿಮಗೆ ಆತ್ಮಿಕ ಉಡುಗೊರೆಯನ್ನು ಕೊಡಲು ಅತ್ಯಾಸಕ್ತಿ ಉಳ್ಳವನಾಗಿದ್ದೇನೆ. 12 ಅಂದರೆ ನಾವು ಹೊಂದಿರುವ ನಂಬಿಕೆಯಿಂದ ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮ ನಂಬಿಕೆ ನನಗೆ ಸಹಾಯ ಮಾಡುತ್ತದೆ ಮತ್ತು ನನ್ನ ನಂಬಿಕೆ ನಿಮಗೆ ಸಹಾಯ ಮಾಡುತ್ತದೆ.

13 ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬರಲು ಅನೇಕ ಸಲ ಯೋಜನೆ ಮಾಡಿದೆನೆಂಬುದು ನಿಮಗೆ ತಿಳಿದಿರಲಿ. ಆದರೆ ನಿಮ್ಮ ಬಳಿಗೆ ಬರಲು ನನಗೆ ಸಾಧ್ಯವಾಗಲಿಲ್ಲ. ನಾನು ನಿಮ್ಮ ಬಳಿಗೆ ಬಂದು ನೀವು ಆತ್ಮಿಕವಾಗಿ ಬೆಳೆಯಲು ನಿಮಗೆ ಸಹಾಯ ಮಾಡಬೇಕೆಂದಿದ್ದೆನು. ನಾನು ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡಿದಂತೆಯೇ ನಿಮಗೂ ಸಹಾಯ ಮಾಡಬೇಕೆಂದಿರುವೆ.

14 ನಾನು ಎಲ್ಲಾ ಜನರ ಅಂದರೆ ಗ್ರೀಕರ ಮತ್ತು ಗ್ರೀಕರಲ್ಲದವರ, ಹಾಗೂ ಜ್ಞಾನಿಗಳ ಮತ್ತು ಮೂಢರ ಸೇವೆ ಮಾಡಲೇಬೇಕು. 15 ಆದಕಾರಣ ರೋಮಿನಲ್ಲಿರುವ ನಿಮಗೆ ಸುವಾರ್ತೆಯನ್ನು ತಿಳಿಸಲು ಬಹಳವಾಗಿ ಆಶಿಸುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International