Revised Common Lectionary (Semicontinuous)
9 ಯೌವನಸ್ಥನು ಪವಿತ್ರನಾಗಿ ಜೀವಿಸುವುದು ಯಾವುದರಿಂದ?
ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದರಿಂದಲೇ.
10 ನಾನು ಪೂರ್ಣಹೃದಯದಿಂದ ದೇವರ ಸೇವೆಮಾಡುವೆ;
ದೇವರೇ, ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನನಗೆ ಸಹಾಯಮಾಡು.
11 ನಾನು ನಿನಗೆ ವಿರೋಧವಾಗಿ ಪಾಪಮಾಡದಂತೆ
ನಿನ್ನ ಉಪದೇಶಗಳನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.
12 ಯೆಹೋವನೇ, ನಿನಗೆ ಸ್ತೋತ್ರವಾಗಲಿ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
13 ನನ್ನ ತುಟಿಗಳು
ನಿನ್ನ ಜ್ಞಾನದ ನಿರ್ಧಾರಗಳ ಕುರಿತು ವರ್ಣಿಸುತ್ತವೆ.
14 ಸಕಲ ಸಂಪತ್ತಿನಲ್ಲಿ ಹೇಗೋ
ಹಾಗೆಯೇ ನಿನ್ನ ಒಡಂಬಡಿಕೆಯನ್ನು ಅಭ್ಯಾಸ ಮಾಡುವುದರಲ್ಲಿ ಆನಂದಿಸುವೆನು.
15 ನಾನು ನಿನ್ನ ನಿಯಮಗಳನ್ನು ಚರ್ಚಿಸುವೆನು
ನಿನ್ನ ಜೀವಮಾರ್ಗವನ್ನು ಅನುಸರಿಸುವೆನು.
16 ನಾನು ನಿನ್ನ ಕಟ್ಟಳೆಗಳಲ್ಲಿ ಆನಂದಿಸುವೆನು,
ನಿನ್ನ ಮಾತುಗಳನ್ನು ಮರೆಯುವುದಿಲ್ಲ.
21 “ನೀವು ನಿಮ್ಮ ದೇವರಾದ ಯೆಹೋವನಿಗೆ ಹರಕೆ ಹೊತ್ತರೆ ಅದನ್ನು ಸಲ್ಲಿಸಲು ನಿಧಾನ ಮಾಡಬೇಡಿ. ನಿಮ್ಮ ದೇವರಾದ ಯೆಹೋವನು ಅದನ್ನು ನಿಮ್ಮಿಂದ ಕೇಳುವವನಾಗಿದ್ದಾನೆ. ಹರಕೆಹೊತ್ತು ಸಲ್ಲಿಸದಿದ್ದರೆ ನೀವು ಪಾಪಮಾಡುವವರಾಗಿದ್ದೀರಿ. 22 ನೀವು ಹರಕೆ ಮಾಡಿಕೊಳ್ಳದಿದ್ದರೆ ಪಾಪಮಾಡುವುದಿಲ್ಲ. 23 ಆದರೆ ನೀವು ಮಾಡಿದ ಹರಕೆಯನ್ನು ಪೂರೈಸಬೇಕು. ನೀವು ಹರಕೆ ಮಾಡುವಂತೆ ದೇವರು ನಿಮ್ಮನ್ನು ಬಲವಂತ ಮಾಡಲಿಲ್ಲವಲ್ಲಾ. ಆದ್ದರಿಂದ ನೀವು ವಾಗ್ದಾನ ಮಾಡಿದ್ದನ್ನು ಪೂರೈಸಬೇಕು.
24 “ಒಬ್ಬನ ತೋಟದೊಳಗಿಂದ ನೀವು ಹಾದುಹೋಗುತ್ತಿರುವಾಗ ನಿಮಗೆ ಬೇಕಾಗುವಷ್ಟು ಹಣ್ಣನ್ನು ಕಿತ್ತು ತಿನ್ನಿ. ಆದರೆ ನೀವು ಮಕ್ಕರಿಯಲ್ಲಿ ತುಂಬಿಸಿಕೊಂಡು ಹೋಗಬಾರದು. 25 ಒಬ್ಬನ ಧಾನ್ಯದ ಹೊಲದಲ್ಲಿ ನೀವು ಹಾದುಹೋಗುತ್ತಿರುವಾಗ ನಿಮ್ಮ ಕೈಯಿಂದ ಹೊಸೆದು ತಿನ್ನುವಷ್ಟು ಧಾನ್ಯವನ್ನು ನೀವು ತಿನ್ನಬಹುದು; ಆದರೆ ನೀವು ಕತ್ತಿಯಿಂದ ಧಾನ್ಯವನ್ನು ಕೊಯಿದು ನಿಮ್ಮೊಂದಿಗೆ ಒಯ್ಯಬೇಡಿ.
24 “ಒಬ್ಬಾಕೆಯನ್ನು ಒಬ್ಬನು ಮದುವೆಯಾದ ಬಳಿಕ, ಅವಳಲ್ಲಿ ನಾಚಿಕೆಕರವಾದದ್ದೇನಾದರೂ ಇದ್ದರೆ ಅವನು ವಿವಾಹವಿಚ್ಛೇದನಾ ಪತ್ರಗಳಿಗೆ ಸಹಿಹಾಕಿ ಅವಳ ಕೈಯಲ್ಲಿ ಕೊಡಬೇಕು. ಆಮೇಲೆ ಆಕೆಯನ್ನು ತನ್ನ ಮನೆಯಿಂದ ಹೊರಗೆ ಕಳುಹಿಸಬೇಕು. 2 ಅವನ ಮನೆಯಿಂದ ಅವಳು ಹೊರಗೆ ಕಳುಹಿಸಲ್ಪಟ್ಟ ಮೇಲೆ ಆಕೆ ಬೇರೊಬ್ಬನನ್ನು ಮದುವೆಯಾಗಬಹುದು. 3-4 ಆಕೆಯ ಹೊಸ ಗಂಡನೂ ಆಕೆಯನ್ನು ಇಷ್ಟಪಡದೆ ಮನೆಯಿಂದ ಹೊರಗೆ ಕಳುಹಿಸಿದರೆ ಅಥವಾ ಎರಡನೆ ಗಂಡನು ಸತ್ತುಹೋದರೆ ಆಕೆಯ ಮೊದಲನೆಯ ಗಂಡನು ಆಕೆಯನ್ನು ಮತ್ತೆ ಮದುವೆಯಾಗಬಾರದು. ಅವನಿಗೆ ಆಕೆಯು ಅಶುದ್ಧಳಾದಳು. ಅವನು ಆಕೆಯನ್ನು ಮತ್ತೆ ಮದುವೆಯಾದಲ್ಲಿ ಅವನು ಯೆಹೋವನಿಗೆ ಅಸಹ್ಯವಾದದ್ದನ್ನು ಮಾಡುವವನಾಗಿದ್ದಾನೆ. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಇಂಥ ಪಾಪಗಳನ್ನು ಮಾಡಬಾರದು.
10 “ನೀವು ಯಾರಿಗಾದರೂ ಸಾಲಕೊಟ್ಟರೆ ಅದಕ್ಕೆ ಒತ್ತೆಯಾಗಿ ವಸ್ತುವನ್ನು ತೆಗೆದುಕೊಳ್ಳಲು ಅವನ ಮನೆಯೊಳಗೆ ಹೋಗಬೇಡಿ. 11 ನೀವು ಹೊರಗೆ ನಿಂತುಕೊಳ್ಳಬೇಕು. ಸಾಲ ತೆಗೆದುಕೊಂಡ ವ್ಯಕ್ತಿಯು ತನ್ನ ಮನೆಯೊಳಗಿಂದ ಏನಾದರೂ ವಸ್ತುವನ್ನು ಒತ್ತೆಯಾಗಿ ನಿಮಗೆ ತಂದುಕೊಡುವನು. 12 ಅವನು ಬಡವನಾದರೆ ಅವನು ತನ್ನ ಕಂಬಳಿಯನ್ನೇ ತಂದುಕೊಡಬಹುದು. ಅದನ್ನು ರಾತ್ರಿ ಇಟ್ಟುಕೊಳ್ಳಬಾರದು. 13 ಪ್ರತೀ ಸಾಯಂಕಾಲ ಆ ಕಂಬಳಿಯನ್ನು ಹಿಂದಕ್ಕೆ ಕೊಡಬೇಕು. ಆಗ ಅವನಿಗೆ ರಾತ್ರಿ ಹೊದ್ದುಕೊಳ್ಳಲು ಇರುವುದು. ಅವನು ನಿನ್ನನ್ನು ಆಶೀರ್ವದಿಸುವನು. ಅಲ್ಲದೆ ದೇವರಾದ ಯೆಹೋವನು ನಿಮ್ಮ ಆ ಒಳ್ಳೆಯ ಕಾರ್ಯವನ್ನು ಗಣನೆಗೆ ತರುವನು.
14 “ಬಡವನಾಗಿರುವ ದಿನಕೂಲಿಯವನಿಗೆ ಮೋಸ ಮಾಡಬಾರದು. ಅವನು ಇಸ್ರೇಲನಾಗಿರಬಹುದು ಅಥವಾ ಪರದೇಶಸ್ಥನಾಗಿರಬಹುದು. 15 ಸೂರ್ಯ ಮುಳುಗುವುದರೊಳಗೆ ಅವನಿಗೆ ಸಲ್ಲಬೇಕಾದ ಕೂಲಿಯನ್ನು ಕೊಟ್ಟುಬಿಡು, ಅವನು ಬಡವನಾಗಿದ್ದಾನೆ. ನೀನು ಕೊಡುವ ಕೂಲಿಯಿಂದಲೇ ಅವನು ತನ್ನ ಹಸಿವನ್ನು ನೀಗಿಸಿಕೊಳ್ಳಬೇಕು. ನೀನು ಅವನ ಕೂಲಿ ಕೊಡದಿದ್ದಲ್ಲಿ ಅವನು ದೇವರಾದ ಯೆಹೋವನಿಗೆ ದೂರು ಹೇಳುವನು. ಆಗ ನೀನು ಪಾಪಮಾಡುವವನಾಗಿರುವೆ.
ಜನರೆಲ್ಲರನ್ನೂ ಪ್ರೀತಿಸಿ
2 ನನ್ನ ಪ್ರಿಯ ಸಹೋದರ ಸಹೋದರಿಯರೇ, ಮಹಿಮಾಪೂರ್ಣನಾದ ಪ್ರಭು ಯೇಸು ಕ್ರಿಸ್ತನಲ್ಲಿ ನೀವು ನಂಬಿಕೆಯಿಟ್ಟಿದ್ದೀರಿ. ಆದ್ದರಿಂದ ಕೆಲವರು ಇತರ ಜನರಿಗಿಂತ ಬಹಳ ಮುಖ್ಯರೆಂದು ಯೋಚಿಸಬೇಡಿ. 2 ನಿಮ್ಮ ಸಭೆಗೆ ಒಬ್ಬನು ಬರುತ್ತಾನೆಂದು ನೆನೆಸಿರಿ. ಅವನು ಒಳ್ಳೆಯ ವಸ್ತ್ರಗಳನ್ನೂ ಬಂಗಾರದ ಉಂಗುರವನ್ನೂ ಧರಿಸಿರುತ್ತಾನೆ. ಅದೇ ಸಮಯಕ್ಕೆ ಕೊಳೆಯಾದ ಮತ್ತು ಹಳೆಯದಾದ ವಸ್ತ್ರಗಳನ್ನು ಧರಿಸಿರುವ ಒಬ್ಬ ಬಡವನೂ ಬರುತ್ತಾನೆ. 3 ಒಳ್ಳೆಯ ವಸ್ತ್ರಗಳನ್ನು ಧರಿಸಿರುವವನಿಗೆ ವಿಶೇಷ ಗಮನವನ್ನು ನೀಡುವಿರಿ. “ಉತ್ತಮವಾದ ಈ ಸ್ಥಳದಲ್ಲಿ ನೀವು ಕುಳಿತುಕೊಳ್ಳಿ” ಎಂದು ಅವನಿಗೆ ಹೇಳುವಿರಿ. ಆದರೆ ಆ ಬಡ ಮನುಷ್ಯನಿಗೆ “ಅಲ್ಲೇ ನಿಂತುಕೊ!” ಎಂದಾಗಲಿ, “ನಮ್ಮ ಪಾದಗಳ ಬಳಿ ನೆಲದ ಮೇಲೆ ಕುಳಿತುಕೊ!” ಎಂದಾಗಲಿ ಹೇಳುವಿರಿ. 4 ನೀವು ಮಾಡುತ್ತಿರುವುದೇನು? ಕೆಲವರನ್ನು ಇತರ ಜನರಿಗಿಂತ ಬಹಳ ಮುಖ್ಯರೆಂದು ಪರಿಗಣಿಸುತ್ತಿರುವಿರಿ. ನಿಮ್ಮ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ.
5 ನನ್ನ ಪ್ರಿಯ ಸಹೋದರ ಸಹೋದರಿಯರೇ, ಕೇಳಿರಿ! ಈ ಲೋಕದಲ್ಲಿ ಬಡವರು ನಂಬಿಕೆಯಲ್ಲಿ ಶ್ರೀಮಂತರಾಗಿರಲೆಂದು ದೇವರು ಅವರನ್ನು ಆರಿಸಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವ ಜನರಿಗೆ ದೇವರು ವಾಗ್ದಾನಮಾಡಿದ ರಾಜ್ಯವನ್ನು ಹೊಂದಿಕೊಳ್ಳಲು ಆತನು ಅವರನ್ನು ಆರಿಸಿಕೊಂಡಿದ್ದಾನೆ. 6 ಆದರೆ ಬಡವನಿಗೆ ನೀವು ಗೌರವವನ್ನೇ ತೋರುವುದಿಲ್ಲ. ಶ್ರೀಮಂತ ಜನರು ಯಾವಾಗಲೂ ನಿಮ್ಮ ಬದುಕನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆಂಬುದು ನಿಮಗೆ ತಿಳಿದಿದೆ. ನಿಮ್ಮನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವವರು ಅವರೇ. 7 ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿರುವ ಯೇಸುವಿನ ಶ್ರೇಷ್ಠವಾದ ಹೆಸರಿಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನು ಆಡುವವರು ಶ್ರೀಮಂತರೇ.
8 ಪವಿತ್ರ ಗ್ರಂಥದಲ್ಲಿ ಬರೆದಿರುವ, “ನಿನ್ನನ್ನು ಪ್ರೀತಿಸುವಂತೆ ಇತರರನ್ನೂ ಪ್ರೀತಿಸು”(A) ಎಂಬ ರಾಜಾಜ್ಞೆಗೆ ನೀವು ವಿಧೇಯರಾಗಿದ್ದರೆ ಸರಿಯಾದುದನ್ನೇ ಮಾಡುವವರಾಗಿದ್ದೀರಿ. 9 ಆದರೆ ನೀವು ಒಬ್ಬನನ್ನು ಇನ್ನೊಬ್ಬನಿಗಿಂತ ಮುಖ್ಯನೆಂದು ಪರಿಗಣಿಸಿ ಪಕ್ಷಪಾತ ಮಾಡಿದರೆ ಪಾಪವನ್ನು ಮಾಡುವವರಾಗಿದ್ದೀರಿ. ದೇವರ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೋಷಿಗಳಾಗಿದ್ದೀರೆಂದು ಆ ರಾಜಾಜ್ಞೆಯು ನಿರೂಪಿಸುತ್ತದೆ.
10 ಒಬ್ಬನು ದೇವರ ಎಲ್ಲಾ ಆಜ್ಞೆಗಳನ್ನು ಅನುಸರಿಸುತ್ತಿರಬಹುದು. ಆದರೆ ಅವನು ಒಂದು ಆಜ್ಞೆಗೆ ಅವಿಧೇಯನಾದರೆ ಅವನು ಧರ್ಮಶಾಸ್ತ್ರದ ಎಲ್ಲಾ ಆಜ್ಞೆಗಳನ್ನು ಮೀರಿದನೆಂಬ ಅಪರಾಧಕ್ಕೆ ಗುರಿಯಾಗುವನು. 11 “ವ್ಯಭಿಚಾರ ಮಾಡಬಾರದು”(B) ಎಂದು ದೇವರು ಹೇಳಿದನು. “ಕೊಲ್ಲಬಾರದು”(C) ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ.
12 ಜನರನ್ನು ಬಿಡುಗಡೆ ಮಾಡುವ ಧರ್ಮಶಾಸ್ತ್ರದಿಂದಲೇ ನಿಮಗೆ ತೀರ್ಪಾಗುವುದು. ನೀವು ಕೇಳುವ ಮತ್ತು ಮಾಡುವ ಪ್ರತಿಯೊಂದರಲ್ಲಿಯೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. 13 ಹೌದು, ಇತರರಿಗೆ ನೀವು ಕರುಣೆ ತೋರಬೇಕು. ಇಲ್ಲವಾದರೆ ದೇವರು ತೀರ್ಪು ನೀಡುವಾಗ ನಿಮಗೂ ಕರುಣೆ ತೋರನು. ಕರುಣೆ ತೋರುವವನು ದೇವರ ನ್ಯಾಯತೀರ್ಪಿನಲ್ಲಿ ಭಯವಿಲ್ಲದೆ ಇರುವನು.
Kannada Holy Bible: Easy-to-Read Version. All rights reserved. © 1997 Bible League International