Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:9-16

ಯೌವನಸ್ಥನು ಪವಿತ್ರನಾಗಿ ಜೀವಿಸುವುದು ಯಾವುದರಿಂದ?
    ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದರಿಂದಲೇ.
10 ನಾನು ಪೂರ್ಣಹೃದಯದಿಂದ ದೇವರ ಸೇವೆಮಾಡುವೆ;
    ದೇವರೇ, ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನನಗೆ ಸಹಾಯಮಾಡು.
11 ನಾನು ನಿನಗೆ ವಿರೋಧವಾಗಿ ಪಾಪಮಾಡದಂತೆ
    ನಿನ್ನ ಉಪದೇಶಗಳನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.
12 ಯೆಹೋವನೇ, ನಿನಗೆ ಸ್ತೋತ್ರವಾಗಲಿ.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
13 ನನ್ನ ತುಟಿಗಳು
    ನಿನ್ನ ಜ್ಞಾನದ ನಿರ್ಧಾರಗಳ ಕುರಿತು ವರ್ಣಿಸುತ್ತವೆ.
14 ಸಕಲ ಸಂಪತ್ತಿನಲ್ಲಿ ಹೇಗೋ
    ಹಾಗೆಯೇ ನಿನ್ನ ಒಡಂಬಡಿಕೆಯನ್ನು ಅಭ್ಯಾಸ ಮಾಡುವುದರಲ್ಲಿ ಆನಂದಿಸುವೆನು.
15 ನಾನು ನಿನ್ನ ನಿಯಮಗಳನ್ನು ಚರ್ಚಿಸುವೆನು
    ನಿನ್ನ ಜೀವಮಾರ್ಗವನ್ನು ಅನುಸರಿಸುವೆನು.
16 ನಾನು ನಿನ್ನ ಕಟ್ಟಳೆಗಳಲ್ಲಿ ಆನಂದಿಸುವೆನು,
    ನಿನ್ನ ಮಾತುಗಳನ್ನು ಮರೆಯುವುದಿಲ್ಲ.

ವಿಮೋಚನಕಾಂಡ 20:1-21

ದಶಾಜ್ಞೆಗಳು

20 ಬಳಿಕ ಯೆಹೋವನು ಈ ದಶಾಜ್ಞೆಗಳನ್ನು ಅವರಿಗೆ ಕೊಟ್ಟನು:

“ಯೆಹೋವನೆಂಬ ನಾನೇ ನಿಮ್ಮ ದೇವರು. ಈಜಿಪ್ಟಿನಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಆ ದೇಶದಿಂದ ಹೊರಗೆ ನಡಿಸಿದವನು ನಾನೇ.

“ನನ್ನನ್ನಲ್ಲದೆ ಬೇರೆ ಯಾವ ದೇವರುಗಳನ್ನೂ ನೀವು ಆರಾಧಿಸಬಾರದು.

“ನೀವು ಯಾವ ವಿಗ್ರಹಗಳನ್ನೂ ಮಾಡಬಾರದು. ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ನೀರಿನಲ್ಲಾಗಲಿ ಇರುವ ಯಾವುದೇ ವಸ್ತುವಿನ ರೂಪವನ್ನು ನೀವು ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜಿಸಲೂ ಬಾರದು. ನಿಮ್ಮ ದೇವರಾದ ಯೆಹೋವನೆಂಬ ನನಗೆ ಸಲ್ಲತಕ್ಕ ಗೌರವವನ್ನು ನೀವು ಬೇರೆಯವರಿಗೆ ಸಲ್ಲಿಸಿದರೆ ನಾನು ನಿಮ್ಮನ್ನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪಮಾಡುವವರ ದೋಷಫಲವನ್ನು ಅವರ ಮೂರು ನಾಲ್ಕು ತಲೆಮಾರುಗಳವರೆಗೂ ಬರಮಾಡುವೆನು. ಆದರೆ ನನ್ನ ಆಜ್ಞೆಗಳಿಗೆ ವಿಧೇಯರಾಗಿರುವವರಿಗೆ ಅವರ ಸಾವಿರ ತಲೆಮಾರುಗಳವರೆಗೂ ದಯೆತೋರಿಸುವೆನು.

“ನಿಮ್ಮ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಉಪಯೋಗಿಸಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಉಪಯೋಗಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.

“ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಜ್ಞಾಪಕದಲ್ಲಿಟ್ಟುಕೊಂಡು ಅದನ್ನು ಆಚರಿಸಿರಿ. ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ. 10 ಆದರೆ ಏಳನೆ ದಿನವು ನಿಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಲು ಮೀಸಲಾಗಿರುವ ವಿಶ್ರಾಂತಿ ದಿನವಾಗಿದೆ. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು. ನೀವಾಗಲಿ ನಿಮ್ಮ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಸೇವಕರಾಗಲಿ ಸೇವಕಿಯರಾಗಲಿ ನಿಮ್ಮ ಪಶುಗಳಾಗಲಿ ನಿಮ್ಮಲ್ಲಿರುವ ವಿದೇಶಿಯರಾಗಲಿ ಕೆಲಸ ಮಾಡಬಾರದು. 11 ಯಾಕೆಂದರೆ ಯೆಹೋವನು ಆರು ದಿನಗಳಲ್ಲಿ ಕೆಲಸ ಮಾಡಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿದನು. ಆದ್ದರಿಂದ ಯೆಹೋವನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ತನ್ನ ದಿನವನ್ನಾಗಿ ಮಾಡಿದನು.

12 “ನೀವು ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು; ನೀವು ಸನ್ಮಾನಿಸಿದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಬಹುಕಾಲ ಬಾಳುವಿರಿ.

13 “ನೀವು ಯಾರನ್ನೂ ಕೊಲೆ ಮಾಡಬಾರದು.

14 “ನೀವು ವ್ಯಭಿಚಾರ ಮಾಡಬಾರದು.

15 “ನೀವು ಕದಿಯಬಾರದು.

16 “ನೀವು ಬೇರೆಯವರ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.[a]

17 “ನೀವು ನೆರೆಯವನ ಮನೆಯನ್ನು ಆಶಿಸಬಾರದು. ನೀವು ಮತ್ತೊಬ್ಬನ ಹೆಂಡತಿಯನ್ನಾಗಲಿ ಸೇವಕರನ್ನಾಗಲಿ ದಾಸಿಯರನ್ನಾಗಲಿ ಪಶುಗಳನ್ನಾಗಲಿ ಆಶಿಸಬಾರದು.”

ಜನರು ದೇವರಿಗೆ ಭಯಪಟ್ಟಿದು

18 ಆಗ ಅಲ್ಲಿದ್ದ ಜನರು ಗುಡುಗಿನ ಧ್ವನಿಯನ್ನು ಕೇಳಿದರು; ಬೆಟ್ಟದ ಮೇಲೆ ಮಿಂಚುಗಳನ್ನು ನೋಡಿದರು; ಹೊಗೆಯು ಬೆಟ್ಟದಿಂದ ಏರುವುದನ್ನು ಕಂಡರು. ಅವರೆಲ್ಲರೂ ಭಯದಿಂದ ನಡುಗಿದರು; ಬೆಟ್ಟದಿಂದ ದೂರದಲ್ಲಿದ್ದುಕೊಂಡು ಅವುಗಳನ್ನೆಲ್ಲಾ ಗಮನಿಸಿದರು. 19 ಆಗ ಜನರು ಮೋಶೆಗೆ, “ನೀನು ನಮ್ಮೊಡನೆ ಮಾತಾಡು; ನಾವು ನಿನಗೆ ಕಿವಿಗೊಡುವೆವು. ಆದರೆ ಯೆಹೋವನು ನಮ್ಮೊಡನೆ ಮಾತಾಡದಿರಲಿ. ಇಲ್ಲವಾದರೆ ನಾವು ಸಾಯುವೆವು” ಅಂದರು.

20 ಆಗ ಮೋಶೆಯು ಜನರಿಗೆ, “ಭಯಪಡಬೇಡಿರಿ, ಯೆಹೋವನು ನಿಮ್ಮನ್ನು ಪರೀಕ್ಷಿಸಲು ಬಂದಿದ್ದಾನೆ. ನೀವು ಆತನಲ್ಲಿ ಭಕ್ತಿಯುಳ್ಳವರಾಗಿರಬೇಕೆಂದು ಆತನು ಬಯಸುತ್ತಾನೆ. ಆಗ ನೀವು ಪಾಪ ಮಾಡುವುದಿಲ್ಲ” ಎಂದು ಹೇಳಿದನು.

21 ದೇವರ ಸನ್ನಿಧಾನಕ್ಕೆ ಹೋಗಲು ಮೋಶೆಯು ಕಾರ್ಮುಗಿಲಿನೊಳಗೆ ಹೋದಾಗ, ಜನರು ಬೆಟ್ಟದಿಂದ ದೂರ ನಿಂತುಕೊಂಡರು.

ಯಾಕೋಬನು 1:2-8

ನಂಬಿಕೆ ಮತ್ತು ಜ್ಞಾನ

ನನ್ನ ಸಹೋದರ ಸಹೋದರಿಯರೇ, ನಿಮಗೆ ಅನೇಕ ತೊಂದರೆಗಳು ಬರುತ್ತವೆ. ಆದರೆ ಅವುಗಳು ಬಂದಾಗ ನೀವು ಬಹಳ ಸಂತೋಷಪಡಬೇಕು. ಏಕೆಂದರೆ ಅವುಗಳು ನಿಮ್ಮ ನಂಬಿಕೆಯನ್ನು ಪರಿಶೋಧಿಸಲು ಬಂದಿವೆ ಎಂಬುದು ನಿಮಗೆ ತಿಳಿದದೆ. ಅವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡುತ್ತವೆ. ತಾಳ್ಮೆಯು ತನ್ನ ಕಾರ್ಯವನ್ನು ಪೂರೈಸಲಿ. ಆಗ ನೀವು ನಿಷ್ಕಳಂಕರೂ ಮತ್ತು ಪರಿಪೂರ್ಣರೂ ಆಗುವಿರಿ ಮತ್ತು ನಿಮಗೆ ಬೇಕಾದುದೆಲ್ಲವೂ ದೊರೆಯುವುದು.

ಆದರೆ ನಿಮ್ಮಲ್ಲಿ ಯಾರಿಗಾದರೂ ಜ್ಞಾನವು ಬೇಕಾಗಿದ್ದರೆ ಅಂಥವರು ದೇವರಲ್ಲಿ ಕೇಳಿಕೊಳ್ಳಲಿ. ದೇವರು ಉದಾರಿಯಾಗಿರುವುದರಿಂದ ಮತ್ತು ಎಲ್ಲಾ ಜನರಿಗೆ ಸಂತೋಷದಿಂದ ಕೊಡುವುದರಿಂದ ನಿಮಗೆ ಜ್ಞಾನವನ್ನು ದಯಪಾಲಿಸುತ್ತಾನೆ. ಆದರೆ ನೀವು ದೇವರನ್ನು ಕೇಳಿಕೊಳ್ಳುವಾಗ ಆತನಲ್ಲಿ ನಿಮಗೆ ನಂಬಿಕೆಯಿರಬೇಕು. ದೇವರ ಬಗ್ಗೆ ಸಂದೇಹಪಡದಿರಿ. ಸಂದೇಹಪಡುವವನು ಸಾಗರದಲ್ಲಿನ ಅಲೆಯಂತಿದ್ದಾನೆ. ಗಾಳಿಯು ಬೀಸಿದಾಗ ಅಲೆಯು ಮೇಲೆದ್ದು ಬೀಳುತ್ತದೆ. ಸಂದೇಹಪಡುವವನು ಆ ಅಲೆಯಂತಿರುವನು. 7-8 ಅವನು ಒಂದೇ ಕಾಲದಲ್ಲಿ ಎರಡು ರೀತಿಯ ಸಂಗತಿಗಳನ್ನು ಯೋಚಿಸುತ್ತಾನೆ. ಅವನು ತಾನು ಮಾಡುವ ಯಾವುದೇ ಕಾರ್ಯದಲ್ಲಾಗಲಿ ಒಂದು ತೀರ್ಮಾನಕ್ಕೆ ಬರಲಾರನು. ಅಂಥವನು ತನಗೆ ಪ್ರಭುವಿನಿಂದ ಏನಾದರೂ ದೊರೆಯುತ್ತದೆ ಎಂದು ಯೋಚಿಸದಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International