Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 30:15-20

15 “ಈ ದಿನ ನೀವು ಜೀವ ಮತ್ತು ಮರಣ; ಶುಭ ಮತ್ತು ಅಶುಭ ಇವುಗಳನ್ನು ಆಯ್ಕೆಮಾಡಿಕೊಳ್ಳಲು ನಿಮಗೆ ಅವಕಾಶ ಮಾಡಿಕೊಟ್ಟಿದ್ದೇನೆ. 16 ನಿಮ್ಮ ದೇವರಾದ ಯೆಹೋವನನ್ನು ನೀವು ಸಂಪೂರ್ಣವಾಗಿ ಪ್ರೀತಿಸಬೇಕೆಂದು ಆಜ್ಞಾಪಿಸುತ್ತೇನೆ. ಆತನ ಆಜ್ಞೆಗಳಿಗೆ, ನಿಯಮಗಳಿಗೆ ಮತ್ತು ವಿಧಿಗಳಿಗೆ ವಿಧೇಯರಾಗಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ. ಆಗ ನೀವು ಬದುಕುವಿರಿ ಮತ್ತು ನಿಮ್ಮ ಜನಾಂಗ ದೊಡ್ಡದಾಗಿ ಬೆಳೆಯುವುದು. ನಿಮಗಾಗಿ ತೆಗೆದುಕೊಳ್ಳಲು ಪ್ರವೇಶಿಸಲಿರುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸುವನು. 17 ಆದರೆ ನೀವು ಯೆಹೋವನಿಗೆ ವಿಮುಖರಾಗಿ ಆತನಿಗೆ ಕಿವಿಗೊಡದೆ ಹೋದರೆ, ಬೇರೆ ದೇವರುಗಳನ್ನು ಆರಾಧಿಸಲು ಮತ್ತು ಸೇವೆಮಾಡಲು ಹೋದರೆ, 18 ನೀವು ನಾಶವಾಗುವಿರಿ. ನಿಮ್ಮನ್ನು ನಾನು ಎಚ್ಚರಿಸುತ್ತಿದ್ದೇನೆ. ನೀವು ಯೆಹೋವನಿಗೆ ವಿಮುಖರಾದರೆ, ನಿಮಗಾಗಿ ತೆಗೆದುಕೊಳ್ಳಲು ನೀವು ಪ್ರವೇಶಿಸುತ್ತಿರುವ ಜೋರ್ಡನ್ ನದಿಯ ಆಚೆ ದಡದಲ್ಲಿರುವ ದೇಶದಲ್ಲಿ ನೀವು ಬಹುಕಾಲದವರೆಗೆ ಜೀವಿಸುವುದಿಲ್ಲ.

19 “ಈ ದಿನ ಎರಡು ಮಾರ್ಗಗಳಲ್ಲಿ ಯಾವುದನ್ನು ಬೇಕಾದರೂ ಆರಿಸಿಕೊಳ್ಳಲು ನಾನು ನಿಮಗೆ ಅವಕಾಶ ಕೊಟ್ಟಿದ್ದೇನೆ. ಪರಲೋಕವೂ ಭೂಮಿಯೂ ಅದಕ್ಕೆ ಸಾಕ್ಷಿ. ನೀವು ಜೀವವನ್ನಾಗಲಿ ಮರಣವನ್ನಾಗಲಿ ಆರಿಸಿಕೊಳ್ಳಬಹುದು. ಜೀವವನ್ನಾರಿಸಿಕೊಂಡರೆ, ಆಶೀರ್ವಾದವು ಸಿಗುವುದು. ಮರಣವು ನಿಮಗೆ ಶಾಪವನ್ನು ತರುವುದು. ಆದ್ದರಿಂದ ಜೀವವನ್ನು ಆರಿಸಿಕೊಳ್ಳಿರಿ, ನೀವೂ ನಿಮ್ಮ ಮಕ್ಕಳೂ ಬಾಳುವಿರಿ. 20 ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನಿಗೆ ವಿಧೇಯರಾಗಬೇಕು. ಯೆಹೋವನು ನಿಮ್ಮ ಜೀವವಾಗಿದ್ದಾನೆ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕೊಡುವುದಾಗಿ ವಾಗ್ದಾನ ಮಾಡಿದ್ದ ದೇಶದಲ್ಲಿ ನಿಮಗೆ ದೀರ್ಘವಾದ ಆಯುಷ್ಯನ್ನು ಅನುಗ್ರಹಿಸುತ್ತಾನೆ.”

Error: 'ಸಿರಾಖನು 15:15-20' not found for the version: Kannada Holy Bible: Easy-to-Read Version
ಕೀರ್ತನೆಗಳು 119:1-8

119 ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುತ್ತಾ
    ಪವಿತ್ರರಾಗಿ ಜೀವಿಸುವವರು ಧನ್ಯರಾಗಿದ್ದಾರೆ.
ಆತನ ಒಡಂಬಡಿಕೆಗೆ ಸಂಪೂರ್ಣಹೃದಯದಿಂದ
    ವಿಧೇಯರಾಗುವವರು ಧನ್ಯರು.
ಅವರು ಕೆಟ್ಟದ್ದನ್ನು ಮಾಡದೆ
    ಆತನಿಗೆ ವಿಧೇಯರಾಗಿರುವರು.
ಯೆಹೋವನೇ, ನಮಗೆ ಆಜ್ಞೆಗಳನ್ನು ಕೊಟ್ಟವನೂ ನೀನೇ.
    ಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಬೇಕೆಂದು ನಮಗೆ ಹೇಳಿದವನೂ ನೀನೇ.
ನಿನ್ನ ಕಟ್ಟಳೆಗಳಿಗೆ
    ನಾನು ಯಾವಾಗಲೂ ವಿಧೇಯನಾಗಿದ್ದರೆ,
ನಿನ್ನ ಆಜ್ಞೆಗಳನ್ನು ಕಲಿಯುವಾಗ
    ನನಗೆ ನಾಚಿಕೆಯಾಗದು.
ನಾನು ನಿನ್ನ ನ್ಯಾಯವನ್ನೂ
    ನೀತಿಯನ್ನೂ ಕಲಿತಂತೆಲ್ಲಾ ನಿನ್ನನ್ನು ಕೊಂಡಾಡುವೆನು.
ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿದ್ದೇನೆ.
    ದಯವಿಟ್ಟು ನನ್ನನ್ನು ಕೈಬಿಡಬೇಡ!

1 ಕೊರಿಂಥದವರಿಗೆ 3:1-9

ಮನುಷ್ಯರನ್ನು ಅನುಸರಿಸುವುದು ತಪ್ಪು

ಸಹೋದರ ಸಹೋದರಿಯರೇ, ನಾನು ಆತ್ಮಿಕ ಜನರೊಂದಿಗೆ ಮಾತಾಡುವಂತೆ ಮೊದಲು ನಿಮ್ಮೊಂದಿಗೆ ಮಾತಾಡಲಾಗಲಿಲ್ಲ. ಪ್ರಾಪಂಚಿಕರೂ ಕ್ರಿಸ್ತನಲ್ಲಿ ಎಳೆಕೂಸುಗಳೂ ಆಗಿರುವಂಥವರೊಂದಿಗೆ ಮಾತಾಡುವಂತೆ ನಾನು ನಿಮ್ಮೊಂದಿಗೆ ಮಾತಾಡಬೇಕಾಯಿತು. ನಾನು ನಿಮಗೆ ಮಾಡಿದ ಉಪದೇಶವು ಗಟ್ಟಿಯಾದ ಆಹಾರದಂತಿರದೆ ಹಾಲಿನಂತಿತ್ತು; ಏಕೆಂದರೆ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವಿನ್ನೂ ಸಿದ್ಧರಾಗಿರಲಿಲ್ಲ. ಈಗಲೂ ಸಹ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವು ಸಿದ್ಧರಾಗಿಲ್ಲ. ನೀವಿನ್ನೂ ಆತ್ಮಿಕರಾಗಿಲ್ಲ. ನಿಮ್ಮ ನಡುವೆ ಹೊಟ್ಟೆಕಿಚ್ಚಿದೆ; ವಾಗ್ವಾದಗಳಿವೆ; ಜಗಳಗಳಿವೆ. ನೀವು ಆತ್ಮಿಕರಲ್ಲವೆಂಬುದನ್ನು ಇವು ಸೂಚಿಸುತ್ತವೆ. ನೀವು ಲೋಕದ ಜನರಂತೆಯೇ ವರ್ತಿಸುತ್ತಿದ್ದೀರಿ. ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ಮತ್ತೊಬ್ಬನು “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ನೀವು ಹೀಗೆ ವಾಗ್ವಾದ ಮಾಡುವಾಗ ಲೋಕದ ಜನರಂತೆಯೇ ವರ್ತಿಸುವವರಾಗಿದ್ದೀರಿ.

ಅಪೊಲ್ಲೋಸನು ಮುಖ್ಯವಾದವನೇ? ಇಲ್ಲ! ಪೌಲನು ಮುಖ್ಯವಾದವನೇ? ಇಲ್ಲ! ನೀವು ನಂಬಿಕೊಳ್ಳಲು ಸಹಾಯ ಮಾಡುವ ನಾವು ಕೇವಲ ದೇವರ ಸೇವಕರಾಗಿದ್ದೇವೆ. ದೇವರು ನಮಗೆ ಕೊಟ್ಟ ಕೆಲಸವನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಮಾಡಿದೆವು. ನಾನು ಬೀಜವನ್ನು ಬಿತ್ತಿದೆನು; ಅಪೊಲ್ಲೋಸನು ನೀರನ್ನು ಹಾಕಿದನು. ಆದರೆ ಬೀಜವನ್ನು ಬೆಳೆಯಿಸಿದವನು ದೇವರೇ. ಆದ್ದರಿಂದ ಬೀಜ ಬಿತ್ತುವವನಾಗಲಿ ನೀರು ಹಾಕುವವನಾಗಲಿ ಮುಖ್ಯನಲ್ಲ. ದೇವರೊಬ್ಬನು ಮಾತ್ರ ಮುಖ್ಯವಾದವನು, ಏಕೆಂದರೆ ಬೀಜಗಳನ್ನು ಬೆಳೆಯಿಸುವವನು ಆತನೊಬ್ಬನೇ. ಬೀಜ ಬಿತ್ತುವವನ ಮತ್ತು ನೀರನ್ನು ಹಾಕುವವನ ಉದ್ದೇಶವು ಒಂದೇ ಆಗಿದೆ. ಮತ್ತು ಪ್ರತಿಯೊಬ್ಬನಿಗೂ ಅವನವನ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವುದು. ನಾವು ದೇವರ ಜೊತೆಕೆಲಸದವರಾಗಿದ್ದೇವೆ. ನೀವು ದೇವರ ಹೊಲವಾಗಿದ್ದೀರಿ.

ಇದಲ್ಲದೆ ನೀವು ದೇವರ ಕಟ್ಟಡವಾಗಿದ್ದೀರಿ.

ಮತ್ತಾಯ 5:21-37

ಕೋಪವನ್ನು ಕುರಿತು ಯೇಸುವಿನ ಉಪದೇಶ

21 “‘ಯಾರನ್ನೂ ಕೊಲೆಮಾಡಬಾರದು.(A) ಕೊಲೆ ಮಾಡುವವನು ನ್ಯಾಯತೀರ್ಪಿಗೆ ಒಳಗಾಗುವನು’ ಎಂದು ಬಹುಕಾಲದ ಹಿಂದೆ ನಮ್ಮ ಜನರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 22 ಆದರೆ ನಾನು ನಿಮಗೆ ಹೇಳುವುದೇನೆಂದರೆ ಯಾರ ಮೇಲೂ ಕೋಪಗೊಳ್ಳಬೇಡಿ. ಪ್ರತಿಯೊಬ್ಬನೂ ನಿಮ್ಮ ಸಹೋದರ. ನೀವು ಬೇರೆಯವರ ಮೇಲೆ ಕೋಪಗೊಂಡರೆ ನ್ಯಾಯತೀರ್ಪಿಗೆ ಗುರಿಯಾಗುವಿರಿ. ನೀವು ಯಾರಿಗಾದರೂ ಕೆಟ್ಟ ಮಾತುಗಳನ್ನಾಡಿದರೆ, ಯೆಹೂದ್ಯರ ನ್ಯಾಯಸಭೆಯ ವಿಚಾರಣೆಗೆ ಗುರಿಯಾಗುವಿರಿ. ನೀವು ಯಾರನ್ನಾದರೂ ‘ಮೂರ್ಖ’ ಎಂದು ಕರೆದರೆ, ಅಗ್ನಿನರಕಕ್ಕೆ ಸೇರುವ ಅಪಾಯದಲ್ಲಿದ್ದೀರಿ.

23 “ಆದ್ದರಿಂದ ನೀವು ನಿಮ್ಮ ಕಾಣಿಕೆಯನ್ನು ಯಜ್ಞವೇದಿಕೆಯ ಮುಂದೆ ದೇವರಿಗೆ ಅರ್ಪಿಸುವಾಗ, ನಿಮ್ಮ ಸಹೋದರನಿಗೆ ನಿಮ್ಮ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿಮ್ಮ ನೆನಪಿಗೆ ಬಂದರೆ, 24 ಆಗ ನಿಮ್ಮ ಕಾಣಿಕೆಯನ್ನು ಯಜ್ಞವೇದಿಕೆಯ ಬಳಿಯಲ್ಲೇ ಬಿಟ್ಟುಹೋಗಿ, ಮೊದಲು ಅವನೊಂದಿಗೆ ಸಮಾಧಾನ ಮಾಡಿಕೊಳ್ಳಿರಿ. ಆಮೇಲೆ ಬಂದು ನಿಮ್ಮ ಕಾಣಿಕೆಯನ್ನು ಸಲ್ಲಿಸಿ.

25 “ನಿಮ್ಮ ವಿರೋಧಿಯು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದೊಯ್ಯುವಾಗ ಬೇಗನೆ ಅವನೊಂದಿಗೆ ಸ್ನೇಹಿತರಾಗಿ. ನೀವು ನ್ಯಾಯಾಲಯಕ್ಕೆ ಹೋಗುವ ಮೊದಲೇ ಇದನ್ನು ಮಾಡಬೇಕು. ನೀವು ಅವನ ಸ್ನೇಹಿತರಾಗದಿದ್ದರೆ, ಅವನು ನಿಮ್ಮನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿಯು ನಿಮ್ಮನ್ನು ಸೆರೆಮನೆಗೆ ಹಾಕಲು ಕಾವಲುಗಾರನಿಗೆ ಒಪ್ಪಿಸಬಹುದು. 26 ಆಗ ನೀವು ನಿಮ್ಮ ಸಾಲವನ್ನೆಲ್ಲ ತೀರಿಸುವ ತನಕ ಸೆರೆಯಿಂದ ಬಿಡುಗಡೆ ಆಗುವುದಿಲ್ಲವೆಂದು ನಾನು ನಿಮಗೆ ಹೇಳುತ್ತೇನೆ.

ಲೈಂಗಿಕ ಪಾಪದ ಕುರಿತು ಯೇಸುವಿನ ಉಪದೇಶ

27 “‘ವ್ಯಭಿಚಾರ ಮಾಡಬೇಡಿರಿ’(B) ಎಂದು ಹೇಳಿದ್ದನ್ನು ನೀವು ಕೇಳಿದ್ದೀರಿ. 28 ಆದರೆ ಒಬ್ಬನು ಪರಸ್ತ್ರೀಯನ್ನು ನೋಡಿ ಅವಳೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಯಸಿದರೆ, ಅವನು ಆಗಲೇ ತನ್ನ ಮನಸ್ಸಿನಲ್ಲಿ ಅವಳೊಂದಿಗೆ ವ್ಯಭಿಚಾರವನ್ನು ಮಾಡಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. 29 ನಿನ್ನ ಬಲಗಣ್ಣು ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕಿತ್ತು ಬಿಸಾಡು. ನಿನ್ನ ಪೂರ್ಣಶರೀರವು ನರಕಕ್ಕೆ ಬೀಳುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು. 30 ನಿನ್ನ ಬಲಗೈ ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕತ್ತರಿಸಿ ಬಿಸಾಡು. ನಿನ್ನ ಪೂರ್ಣ ಶರೀರವು ನರಕಕ್ಕೆ ಹೋಗುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು.

ವಿವಾಹ ವಿಚ್ಛೇದನ ಕುರಿತು ಯೇಸುವಿನ ಉಪದೇಶ

(ಮತ್ತಾಯ 19:9; ಮಾರ್ಕ 10:11-12; ಲೂಕ 16:18)

31 “‘ತನ್ನ ಹೆಂಡತಿಯನ್ನು ಬಿಟ್ಟುಬಿಡಬೇಕೆಂದಿರುವವನು, ಅವಳಿಗೆ ವಿವಾಹ ವಿಚ್ಛೇದನ ಪತ್ರವನ್ನು ಕೊಡಲಿ’(C) ಎಂದು ಹೇಳಲ್ಪಟ್ಟಿದೆ. 32 ಆದರೆ ನಾನು ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟುಬಿಡುವವನೇ ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ. ಹೆಂಡತಿಯು ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವಳನ್ನು ಗಂಡನು ಬಿಟ್ಟುಬಿಡಬಹುದು. ವಿವಾಹ ವಿಚ್ಛೇದನ ಹೊಂದಿದವಳನ್ನು ಮದುವೆಯಾಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.

ಆಣೆ ಇಡುವುದರ ಕುರಿತು ಯೇಸುವಿನ ಉಪದೇಶ

33 “‘ನೀವಿಟ್ಟ ಆಣೆಯನ್ನು ಮೀರಬೇಡಿರಿ. ಪ್ರಭುವಿಗೆ ನೀವಿಟ್ಟ ಆಣೆಗಳನ್ನು ಕೈಗೊಳ್ಳಲೇಬೇಕು’[a] ಎಂದು ನಮ್ಮ ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 34 ಆದರೆ ನಾನು ಹೇಳುವುದೇನೆಂದರೆ, ಆಣೆ ಇಡಲೇಬೇಡಿ. ಪರಲೋಕದ ಮೇಲೂ ಆಣೆ ಇಡಬೇಡಿ, ಏಕೆಂದರೆ ಪರಲೋಕವು ದೇವರ ಸಿಂಹಾಸನ. 35 ಭೂಮಿಯ ಮೇಲೂ ಆಣೆ ಇಡಬೇಡಿ. ಏಕೆಂದರೆ ಭೂಮಿಯು ದೇವರ ಪಾದಪೀಠ. ಜೆರುಸಲೇಮಿನ ಮೇಲೂ ಆಣೆ ಇಡಬೇಡಿ, ಏಕೆಂದರೆ ಅದು ಆ ಮಹಾರಾಜನ ಪಟ್ಟಣ. 36 ನಿಮ್ಮ ತಲೆಯ ಮೇಲೂ ಆಣೆ ಇಡಬೇಡಿ. ನಿಮ್ಮ ತಲೆಯ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು. 37 ಹೌದಾದರೆ ‘ಹೌದು’ ಎನ್ನಿರಿ. ಇಲ್ಲವಾದರೆ ‘ಇಲ್ಲ’ ಎನ್ನಿರಿ. ನೀವು ಇದಕ್ಕಿಂತ ಹೆಚ್ಚಾಗಿ ಹೇಳುವಂಥದ್ದು ಸೈತಾನನಿಂದ ಪ್ರೇರಿತವಾದದ್ದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International