Revised Common Lectionary (Semicontinuous)
119 ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುತ್ತಾ
ಪವಿತ್ರರಾಗಿ ಜೀವಿಸುವವರು ಧನ್ಯರಾಗಿದ್ದಾರೆ.
2 ಆತನ ಒಡಂಬಡಿಕೆಗೆ ಸಂಪೂರ್ಣಹೃದಯದಿಂದ
ವಿಧೇಯರಾಗುವವರು ಧನ್ಯರು.
3 ಅವರು ಕೆಟ್ಟದ್ದನ್ನು ಮಾಡದೆ
ಆತನಿಗೆ ವಿಧೇಯರಾಗಿರುವರು.
4 ಯೆಹೋವನೇ, ನಮಗೆ ಆಜ್ಞೆಗಳನ್ನು ಕೊಟ್ಟವನೂ ನೀನೇ.
ಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಬೇಕೆಂದು ನಮಗೆ ಹೇಳಿದವನೂ ನೀನೇ.
5 ನಿನ್ನ ಕಟ್ಟಳೆಗಳಿಗೆ
ನಾನು ಯಾವಾಗಲೂ ವಿಧೇಯನಾಗಿದ್ದರೆ,
6 ನಿನ್ನ ಆಜ್ಞೆಗಳನ್ನು ಕಲಿಯುವಾಗ
ನನಗೆ ನಾಚಿಕೆಯಾಗದು.
7 ನಾನು ನಿನ್ನ ನ್ಯಾಯವನ್ನೂ
ನೀತಿಯನ್ನೂ ಕಲಿತಂತೆಲ್ಲಾ ನಿನ್ನನ್ನು ಕೊಂಡಾಡುವೆನು.
8 ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿದ್ದೇನೆ.
ದಯವಿಟ್ಟು ನನ್ನನ್ನು ಕೈಬಿಡಬೇಡ!
ಇಸ್ರೇಲರು ತಮ್ಮ ಸ್ವದೇಶಕ್ಕೆ ಹಿಂದಿರುಗುವರು
30 “ನಾನು ಈಗ ಹೇಳಿದ್ದೆಲ್ಲವೂ ನಿಮಗೆ ಸಂಭವಿಸುವುದು. ಆಶೀರ್ವಾದದ ಮೂಲಕ ನಿಮಗೆ ಶುಭವಾಗುವದು; ಶಾಪದಿಂದ ನಿಮಗೆ ಅಶುಭವಾಗುವುದು. ನಮ್ಮ ದೇವರಾದ ಯೆಹೋವನು ಇತರ ದೇಶಗಳಿಗೆ ನಿಮ್ಮನ್ನು ಕಳುಹಿಸಿ ಬಿಡುವನು. ಆಗ ನೀವು ಇವುಗಳನ್ನೆಲ್ಲಾ ನೆನಸುವಿರಿ. 2 ನೀವೂ ನಿಮ್ಮ ಸಂತತಿಯವರೂ ಯೆಹೋವನ ಬಳಿಗೆ ಬರುವಿರಿ. ನಿಮ್ಮ ಹೃದಯಪೂರ್ವಕವಾಗಿ ಆತನನ್ನು ಹಿಂಬಾಲಿಸುವಿರಿ ಮತ್ತು ಆಜ್ಞೆಗಳಿಗೆ ಸಂಪೂರ್ಣವಾಗಿ ವಿಧೇಯರಾಗುವಿರಿ. 3 ಆಗ ದೇವರಾದ ಯೆಹೋವನು ನಿಮ್ಮ ಮೇಲೆ ದಯೆ ತೋರಿಸುವನು. ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿ ಎಲ್ಲಿ ಚದರಿಸಲ್ಪಟ್ಟಿದ್ದೀರೋ ಅಲ್ಲಿಂದ ತಿರುಗಿ ಹಿಂದಕ್ಕೆ ತರುವನು. 4 ಲೋಕದ ಕಟ್ಟಕಡೆಯ ಸ್ಥಳಕ್ಕೆ ನೀವು ಚದರಿಹೋದರೂ ಅಲ್ಲಿಂದ ನಿಮ್ಮನ್ನು ಹಿಂದಕ್ಕೆ ತರುವನು. 5 ನಿಮ್ಮ ಪೂರ್ವಿಕರು ವಾಸಿಸಿದ ಸ್ಥಳಕ್ಕೆ ನಿಮ್ಮನ್ನು ಮತ್ತೆ ಬರಮಾಡುವನು. ಆ ದೇಶವು ನಿಮ್ಮದಾಗುವುದು. ಯೆಹೋವನು ನಿಮಗೆ ಒಳ್ಳೆಯದನ್ನು ಮಾಡುವನು. ನಿಮ್ಮ ಪೂರ್ವಿಕರಿಗಿಂತಲೂ ಅಧಿಕವಾಗಿ ನಿಮ್ಮನ್ನು ಅಭಿವೃದ್ಧಿಪಡಿಸುವನು. 6 ನೀವು ಮತ್ತು ನಿಮ್ಮ ಸಂತತಿಯವರು ತನಗೆ ವಿಧೇಯರಾಗುವಂತೆ ನಮ್ಮ ದೇವರಾದ ಯೆಹೋವನು ಮಾಡುತ್ತಾನೆ. ಆಗ ನೀವು ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದ ಪ್ರೀತಿಸುವಿರಿ ಮತ್ತು ಜೀವಿಸುವಿರಿ.
7 “ನಿಮ್ಮ ದೇವರಾದ ಯೆಹೋವನು ಕೆಟ್ಟಸಂಗತಿಗಳೆಲ್ಲಾ ನಿಮ್ಮ ವೈರಿಗಳಿಗೆ ಆಗುವಂತೆ ಮಾಡುವನು. ಯಾಕೆಂದರೆ ಅವರು ನಿಮ್ಮನ್ನು ದ್ವೇಷಿಸಿ ತೊಂದರೆ ಕೊಡುತ್ತಿರುವರು. 8 ನೀವು ಮತ್ತೆ ಯೆಹೋವನಿಗೆ ವಿಧೇಯರಾಗುವಿರಿ. ಇಂದು ನಾನು ನಿಮಗೆ ಕೊಡುವ ಎಲ್ಲಾ ಆಜ್ಞೆಗಳಿಗೆ ನೀವು ವಿಧೇಯರಾಗುವಿರಿ. 9 ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗುವಂತೆ ದೇವರು ಮಾಡುವನು. ನಿಮಗೆ ಅನೇಕ ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ದನಗಳನ್ನು ಆಶೀರ್ವದಿಸುವನು. ಅವುಗಳಿಗೆ ಅನೇಕ ಕರುಗಳಿರುವವು. ನಿಮ್ಮ ಹೊಲಗಳು ಅಧಿಕವಾದ ಬೆಳೆಯನ್ನು ಕೊಡುವಂತೆ ಆಶೀರ್ವದಿಸುವನು. ಯೆಹೋವನು ನಿಮಗೆ ಶುಭವನ್ನು ಉಂಟುಮಾಡುವುದರಲ್ಲಿ ಸಂತೋಷಿಸುವನು. ನಿಮ್ಮ ಪೂರ್ವಿಕರಿಗೆ ಮೇಲನ್ನು ಉಂಟುಮಾಡಲು ಆತನು ಬಯಸಿದ್ದನು.
ದೇವರ ಆಜ್ಞೆ ಮತ್ತು ಮನುಷ್ಯರ ನಿಯಮ
(ಮಾರ್ಕ 7:1-23)
15 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಯೇಸುವಿನ ಬಳಿಗೆ ಬಂದು, 2 “ನಮ್ಮ ಪೂರ್ವಿಕರಿಂದ ಬಂದ ಸಂಪ್ರದಾಯಗಳಿಗೆ ನಿನ್ನ ಶಿಷ್ಯರು ಏಕೆ ವಿಧೇಯರಾಗಿರುವುದಿಲ್ಲ? ನಿನ್ನ ಶಿಷ್ಯರು ಊಟ ಮಾಡುವುದಕ್ಕೆ ಮುಂಚೆ ಕೈ ತೊಳೆಯುವುದಿಲ್ಲವೇಕೆ?” ಎಂದು ಕೇಳಿದರು.
3 ಯೇಸು, “ನಿಮ್ಮ ಸಂಪ್ರದಾಯಗಳನ್ನು ಅನುಸರಿಸಲು ದೇವರ ಆಜ್ಞೆಗೆ ಅವಿಧೇಯರಾಗುವುದೇಕೆ? 4 ‘ನಿಮ್ಮ ತಂದೆತಾಯಿಗಳಿಗೆ ಗೌರವ ನೀಡಿ’(A) ಎಂಬುದು ದೇವರ ಆಜ್ಞೆ. ‘ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೀನೈಸಿದರೆ ಅವನನ್ನು ಕೊಲ್ಲಬೇಕು’(B) ಎಂಬುದೂ ದೇವರ ಆಜ್ಞೆ. 5 ಆದರೆ ಒಬ್ಬ ವ್ಯಕ್ತಿಯು ತನ್ನ ತಂದೆಗಾಗಲಿ ತಾಯಿಗಾಗಲಿ ‘ನಿಮಗೆ ಸಹಾಯ ಮಾಡಲು ನನಗೆ ಸಾಧ್ಯವಿಲ್ಲ, ಏಕೆಂದರೆ ನನ್ನಲ್ಲಿರುವ ಪ್ರತಿಯೊಂದು ದೇವರಿಗೆ ಪ್ರತಿಷ್ಠಿತವಾಗಿದೆ’ ಎಂದು ಹೇಳಿದರೆ, 6 ಅವನು ತನ್ನ ತಂದೆಯನ್ನು ಗೌರವಿಸಬೇಕಿಲ್ಲ ಎಂದು ನೀವು ಬೋಧಿಸುತ್ತೀರಿ. ಹೀಗಿರಲು ನಿಮ್ಮ ಸಂಪ್ರದಾಯವೇ ದೇವರ ಆಜ್ಞೆಯನ್ನು ತಳ್ಳಿಹಾಕಿದೆ. 7 ನೀವು ಕಪಟಿಗಳು. ಯೆಶಾಯನು ನಿಮ್ಮನ್ನು ಕುರಿತು ಸರಿಯಾಗಿ ಹೇಳಿದ್ದಾನೆ. ಅದೇನೆಂದರೆ:
8 ‘ಇವರು ನನ್ನನ್ನು ಮಾತಿನಿಂದ ಗೌರವಿಸುತ್ತಾರೆ.
ಇವರ ಮನಸ್ಸಾದರೋ ನನಗೆ ದೂರವಾಗಿದೆ.
9 ಇವರು ನನ್ನನ್ನು ಆರಾಧಿಸುವುದೂ ನಿರರ್ಥಕ.
ಇವರು ಮನುಷ್ಯರ ಕಟ್ಟಳೆಗಳನ್ನೇ ಉಪದೇಶಿಸುತ್ತಾರೆ.’(C)”
Kannada Holy Bible: Easy-to-Read Version. All rights reserved. © 1997 Bible League International