Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:1-8

119 ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುತ್ತಾ
    ಪವಿತ್ರರಾಗಿ ಜೀವಿಸುವವರು ಧನ್ಯರಾಗಿದ್ದಾರೆ.
ಆತನ ಒಡಂಬಡಿಕೆಗೆ ಸಂಪೂರ್ಣಹೃದಯದಿಂದ
    ವಿಧೇಯರಾಗುವವರು ಧನ್ಯರು.
ಅವರು ಕೆಟ್ಟದ್ದನ್ನು ಮಾಡದೆ
    ಆತನಿಗೆ ವಿಧೇಯರಾಗಿರುವರು.
ಯೆಹೋವನೇ, ನಮಗೆ ಆಜ್ಞೆಗಳನ್ನು ಕೊಟ್ಟವನೂ ನೀನೇ.
    ಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಬೇಕೆಂದು ನಮಗೆ ಹೇಳಿದವನೂ ನೀನೇ.
ನಿನ್ನ ಕಟ್ಟಳೆಗಳಿಗೆ
    ನಾನು ಯಾವಾಗಲೂ ವಿಧೇಯನಾಗಿದ್ದರೆ,
ನಿನ್ನ ಆಜ್ಞೆಗಳನ್ನು ಕಲಿಯುವಾಗ
    ನನಗೆ ನಾಚಿಕೆಯಾಗದು.
ನಾನು ನಿನ್ನ ನ್ಯಾಯವನ್ನೂ
    ನೀತಿಯನ್ನೂ ಕಲಿತಂತೆಲ್ಲಾ ನಿನ್ನನ್ನು ಕೊಂಡಾಡುವೆನು.
ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿದ್ದೇನೆ.
    ದಯವಿಟ್ಟು ನನ್ನನ್ನು ಕೈಬಿಡಬೇಡ!

ಆದಿಕಾಂಡ 26:1-5

ಇಸಾಕನು ಅಬೀಮೆಲೆಕನಿಗೆ ಸುಳ್ಳು ಹೇಳಿದ್ದು

26 ಅಬ್ರಹಾಮನ ಕಾಲದಲ್ಲಿ ಬಂದಿದ್ದ ಕ್ಷಾಮದಂತೆ ಮತ್ತೊಂದು ಕ್ಷಾಮವು ಕಾನಾನ್ ದೇಶಕ್ಕೆ ಬಂದಿತು. ಆದ್ದರಿಂದ ಇಸಾಕನು ಫಿಲಿಷ್ಟಿಯರ ರಾಜನಾದ ಅಬೀಮೆಲೆಕನ ಬಳಿಗೆ ಹೋದನು. ಅಬೀಮೆಲೆಕನು ಗೆರಾರ್ ನಗರದಲ್ಲಿದ್ದನು. ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನೀನು ಈಜಿಪ್ಟಿಗೆ ಹೋಗಬೇಡ. ನೀನು ಯಾವ ಪ್ರದೇಶದಲ್ಲಿರಬೇಕೆಂದು ನಾನು ಆಜ್ಞಾಪಿಸಿದೆನೋ ಆ ಪ್ರದೇಶದಲ್ಲಿ ವಾಸಿಸು. ನಾನು ನಿನ್ನ ಸಂಗಡವಿದ್ದು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಕುಟುಂಬಕ್ಕೂ ಈ ಪ್ರದೇಶಗಳನ್ನೆಲ್ಲ ಕೊಡುವೆನು. ನಾನು ನಿನ್ನ ತಂದೆಯಾದ ಅಬ್ರಹಾಮನಿಗೆ ಪ್ರಮಾಣ ಮಾಡಿದ್ದನ್ನು ನೆರವೇರಿಸುವೆನು. ನಾನು ನಿನ್ನ ಸಂತಾನವನ್ನು ಆಕಾಶದಲ್ಲಿನ ನಕ್ಷತ್ರಗಳಷ್ಟು ಹೆಚ್ಚಿಸಿ ಅವರಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳವರು ನಿನ್ನ ಸಂತತಿಯಿಂದ ಆಶೀರ್ವಾದ ಹೊಂದುವರು. ನಾನೇ ಇದನ್ನು ನೆರವೇರಿಸುವೆನು; ಯಾಕೆಂದರೆ ನಿನ್ನ ತಂದೆಯಾದ ಅಬ್ರಹಾಮನು ನನ್ನ ಮಾತುಗಳಿಗೆ ವಿಧೇಯನಾಗಿ ನಾನು ಹೇಳಿದಂತೆ ಮಾಡಿ ನನ್ನ ಆಜ್ಞೆಗಳನ್ನು, ಕಟ್ಟಳೆಗಳನ್ನು, ನಿಯಮಗಳನ್ನು ಕೈಕೊಂಡು ನಡೆದನು” ಎಂದು ಹೇಳಿದನು.

ಯಾಕೋಬನು 1:12-16

ಶೋಧನೆಯು ದೇವರಿಂದ ಬರುವುದಿಲ್ಲ

12 ಶೋಧನೆಯನ್ನು ಎದುರಿಸುತ್ತಿದ್ದರೂ ದೃಢವಾಗಿರುವವನೇ ಧನ್ಯನು. ಏಕೆಂದರೆ ಅವನು ತನ್ನ ನಂಬಿಕೆಯನ್ನು ನಿರೂಪಿಸಿದಾಗ, ಜೀವವೆಂಬ ಜಯಮಾಲೆಯನ್ನು ಹೊಂದುವನು. ದೇವರು ತನ್ನನ್ನು ಪ್ರೀತಿಸುವ ಜನರಿಗೆಲ್ಲರಿಗೂ ಇದನ್ನು ವಾಗ್ದಾನ ಮಾಡಿದ್ದಾನೆ. 13 ಶೋಧನೆಗೆ ಗುರಿಯಾಗಿರುವ ವ್ಯಕ್ತಿಯು, “ದೇವರು ನನ್ನನ್ನು ಶೋಧಿಸುತ್ತಿದ್ದಾನೆ” ಎಂದು ಹೇಳಬಾರದು. ಕೆಟ್ಟದ್ದು ದೇವರನ್ನು ಶೋಧಿಸಲಾರದು. ದೇವರು ತಾನಾಗಿಯೇ ಯಾರನ್ನೂ ಶೋಧಿಸುವುದಿಲ್ಲ. 14 ಶೋಧನೆಗೆ ಗುರಿಯಾಗಿರುವವನು ತಾನು ಇಷ್ಟಪಡುವ ಕೆಟ್ಟಕಾರ್ಯಗಳಿಂದಲೇ ಶೋಧನೆಗೆ ಒಳಗಾಗಿದ್ದಾನೆ. ಅವನ ಕೆಟ್ಟ ಆಸೆಗಳೇ ಅವನನ್ನು ದೂರ ಸೆಳೆದು, ಬಿಡದೆ ಹಿಡಿದುಕೊಳ್ಳುತ್ತವೆ. 15 ಈ ಆಸೆಗಳು ಅವನಿಂದ ಪಾಪವನ್ನು ಮಾಡಿಸುತ್ತದೆ. ನಂತರ ಪಾಪವು ಬೆಳೆದು ಸಾವನ್ನು ತರುತ್ತದೆ.

16 ನನ್ನ ಪ್ರಿಯ ಸಹೋದರ ಸಹೋದರಿಯರೇ, ಈ ವಿಷಯದಲ್ಲಿ ನೀವು ಮೋಸಹೋಗಬೇಡಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International