Revised Common Lectionary (Semicontinuous)
ಹನ್ನಳ ಸ್ತೋತ್ರ
2 ಹನ್ನಳು ಇಂತೆಂದಳು:
“ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ.
ನಾನು ನನ್ನ ದೇವರಾದ ಯೆಹೋವನಲ್ಲಿ ಬಲಶಾಲಿಯಾಗಿದ್ದೇನೆ.
ನಾನು ನನ್ನ ಶತ್ರುಗಳ ಬಗ್ಗೆ ನಗುವೆನು.[a]
ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.
2 ಯೆಹೋವನಂತಹ ಪವಿತ್ರ ದೇವರು ಬೇರೆ ಯಾರೂ ಇಲ್ಲ.
ನಿನ್ನ ಹೊರತು ಅನ್ಯದೇವರಿಲ್ಲ!
ನಮ್ಮ ದೇವರಿಗಿಂತ ಬೇರೊಂದು ಬಂಡೆಯಿಲ್ಲ.
3 ಇನ್ನು ಮುಂದೆ ಬಡಾಯಿಕೊಚ್ಚಬೇಡಿ!
ಸೊಕ್ಕಿನ ಮಾತುಗಳನ್ನು ಆಡಬೇಡಿ!
ಏಕೆಂದರೆ ಯೆಹೋವನು ಪ್ರತಿಯೊಂದನ್ನು ಬಲ್ಲನು.
ಆತನು ಮನುಷ್ಯರನ್ನು ಮುನ್ನಡೆಸುತ್ತಾನೆ ಮತ್ತು ತೂಗಿ ನೋಡುತ್ತಾನೆ.
4 ಶಕ್ತಿಶಾಲಿ ಯೋಧರ ಬಿಲ್ಲುಗಳು ಮುರಿದುಹೋಗುತ್ತವೆ.
ಬಲಹೀನರು ಶಕ್ತಿವಂತರಾಗುವರು.
5 ಹಿಂದೆ ಆಹಾರವನ್ನು ಸಮೃದ್ಧಿಕರವಾಗಿ ಹೊಂದಿದ್ದವರು
ಆಹಾರಕ್ಕಾಗಿ ದುಡಿಯಬೇಕಾಗುವುದು.
ಹಿಂದೆ ಆಹಾರವಿಲ್ಲದೆ ಹಸಿದಿದ್ದವರಿಗೆ
ಇಂದು ಆಹಾರ ಸಮೃದ್ಧಿಕರವಾಗಿರುವುದು!
ಬಂಜೆಗೆ ಈಗ ಏಳು ಜನ ಮಕ್ಕಳಿರುವರು.
ಆದರೆ ಹೆಚ್ಚು ಮಕ್ಕಳಿದ್ದ ತಾಯಿ ಇಂದು ವೇದನೆಗೊಂಡಿರುವಳು
ಏಕೆಂದರೆ ಅವಳ ಮಕ್ಕಳೆಲ್ಲ ಸತ್ತುಹೋಗಿದ್ದಾರೆ.
6 ಯೆಹೋವನು ಜನರಿಗೆ ಸಾವನ್ನೂ ತರುವನು.
ಅಂತೆಯೇ ಅವರಿಗೆ ಜೀವವನ್ನೂ ದಯಪಾಲಿಸುವನು.
ಆತನು ಅವರಿಗೆ ಮರುಜೀವವನ್ನು ದಯಪಾಲಿಸಬಲ್ಲನು.
ಯೆಹೋವನು ಜನರನ್ನು ಮರಣ ಸ್ಥಳವಾದ ಪಾತಾಳಕ್ಕೆ ತಳ್ಳುವನು.
7 ಯೆಹೋವನು ಜನರನ್ನು ಬಡವರನ್ನಾಗಿಸುತ್ತಾನೆ.
ಆತನು ಜನರನ್ನು ಹಣವಂತರನ್ನಾಗಿಸುತ್ತಾನೆ.
ಯೆಹೋವನು ಜನರನ್ನು ದೀನರನ್ನಾಗಿಸುತ್ತಾನೆ.
ಆತನು ಜನರನ್ನು ದೊಡ್ಡವರನ್ನಾಗಿಸುತ್ತಾನೆ.
8 ಯೆಹೋವನು ಬಡವರನ್ನು ಧೂಳಿನಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ದೀನರನ್ನು ತಿಪ್ಪೆಯಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ಬಡವರನ್ನು ರಾಜಕುಮಾರರೊಂದಿಗೆ ಕುಳ್ಳಿರಿಸುತ್ತಾನೆ.
ಆತನು ಬಡವರನ್ನು ಗೌರವಪೀಠದಲ್ಲಿ ಕುಳ್ಳಿರಿಸುತ್ತಾನೆ.
ಲೋಕವೂ ಅದರ ಅಡಿಪಾಯಗಳೂ ಯೆಹೋವನವೇ.
ಆತನು ಆ ಕಂಬಗಳ ಮೇಲೆ ಲೋಕವನ್ನು ನಿಲ್ಲಿಸಿರುವನು.
9 ಯೆಹೋವನು ತನ್ನ ಪವಿತ್ರ ಜನರನ್ನು ರಕ್ಷಿಸುವನು.
ಆತನು ಅವರನ್ನು ಎಡವದಂತೆ ಕಾಪಾಡುವನು.
ಆದರೆ ಕೆಟ್ಟವರು ನಾಶವಾಗಿ ಕತ್ತಲೆಯಲ್ಲಿ ಬೀಳುವರು.
ಅವರ ಶಕ್ತಿ ಅವರಿಗೆ ಜಯನೀಡಲಾರದು.
10 ಯೆಹೋವನು ತನ್ನ ಶತ್ರುಗಳನ್ನು ನಾಶಗೊಳಿಸುವನು.
ಮಹೋನ್ನತನಾದ ದೇವರು ಪರಲೋಕದಲ್ಲಿ ಜನರಿಗೆ ವಿರುದ್ಧವಾಗಿ ಗುಡುಗುವನು.
ಯೆಹೋವನು ಬಹುದೂರದ ದೇಶಗಳಿಗೂ ತೀರ್ಪನ್ನು ಕೊಡುವನು.
ಆತನು ತನ್ನ ರಾಜನಿಗೆ ಶಕ್ತಿಯನ್ನು ಕೊಡುವನು.
ತಾನು ಅಭಿಷೇಕಿಸಿದ ರಾಜನನ್ನು ಬಲಗೊಳಿಸುವನು.”
ಸಾರಳಿಗೆ ಮಗುವಾಯಿತು
21 ಯೆಹೋವನು ಸಾರಳಿಗೆ ಮಾಡಿದ ವಾಗ್ದಾನವನ್ನು ಮರೆಯದೆ ಈಡೇರಿಸಿದನು. 2 ಸಾರಳು ವೃದ್ಧನಾಗಿದ್ದ ಅಬ್ರಹಾಮನಿಂದ ಗರ್ಭಿಣಿಯಾಗಿ, ಒಂದು ಗಂಡುಮಗುವನ್ನು ಹೆತ್ತಳು. ದೇವರು ವಾಗ್ದಾನ ಮಾಡಿದಂತೆಯೇ ಈ ಸಂಗತಿಗಳೆಲ್ಲ ತಕ್ಕಕಾಲದಲ್ಲಿ ನಡೆದವು. 3 ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ ಇಸಾಕ ಎಂದು ಹೆಸರಿಟ್ಟನು. 4 ಇಸಾಕನಿಗೆ ಎಂಟು ದಿನಗಳಾಗಿದ್ದಾಗ, ದೇವರ ಆಜ್ಞೆಗನುಸಾರವಾಗಿ ಅಬ್ರಹಾಮನು ಅವನಿಗೆ ಸುನ್ನತಿ ಮಾಡಿದನು.
5 ಅಬ್ರಹಾಮನಿಗೆ ನೂರು ವರ್ಷಗಳಾಗಿದ್ದಾಗ, ಅವನ ಮಗನಾದ ಇಸಾಕನು ಹುಟ್ಟಿದನು. 6 ಸಾರಳು, “ದೇವರು, ನನ್ನನ್ನು ನಗುವಂತೆ ಮಾಡಿದ್ದಾನೆ, ಇದನ್ನು ಕೇಳಿದ ಪ್ರತಿಯೊಬ್ಬರು ನನ್ನೊಡನೆ ನಗುವರು. 7 ಅಬ್ರಹಾಮನಿಗೆ ಸಾರಳಲ್ಲಿ ಮಗನು ಹುಟ್ಟುತ್ತಾನೆಂದು ಯಾರೂ ಯೋಚಿಸಿರಲಿಲ್ಲ. ಅಬ್ರಹಾಮನು ವೃದ್ಧನಾಗಿದ್ದರೂ ಈಗ ನಾನು ಅವನಿಗೆ ಒಬ್ಬ ಮಗನನ್ನು ಕೊಟ್ಟಿದ್ದೇನೆ” ಅಂದಳು.
ಕುಟುಂಬದಲ್ಲಾದ ಒಡಕು
8 ಇಸಾಕನು ಬೆಳೆದು ಊಟಮಾಡುವಷ್ಟು ದೊಡ್ಡವನಾದನು. ಆಗ ಅಬ್ರಹಾಮನು ಒಂದು ದೊಡ್ಡ ಔತಣವನ್ನು ಮಾಡಿಸಿದನು. 9 ಮೊದಲು, ಈಜಿಪ್ಟಿನ ಸೇವಕಿಯಾದ ಹಾಗರಳಲ್ಲಿ ಒಬ್ಬ ಮಗನು ಹುಟ್ಟಿದ್ದನು. ಅವನಿಗೂ ಅಬ್ರಹಾಮನು ತಂದೆಯಾಗಿದ್ದನು. ಆದರೆ ಆ ಮೊದಲನೆ ಮಗನು ಇಸಾಕನಿಗೆ ತೊಂದರೆ ಕೊಡುವುದನ್ನು ಸಾರಳು ಗಮನಿಸಿದಳು. 10 ಸಾರಳು ಅಬ್ರಹಾಮನಿಗೆ, “ಆ ಸೇವಕಿಯನ್ನೂ ಅವಳ ಮಗನನ್ನೂ ಕಳುಹಿಸಿಬಿಡು. ನಾವು ಸತ್ತಾಗ ನಮ್ಮ ಆಸ್ತಿಯನ್ನೆಲ್ಲ ನಮ್ಮ ಮಗನಾದ ಇಸಾಕನೇ ಪಡೆದುಕೊಳ್ಳಲಿ; ನಮ್ಮ ಆಸ್ತಿಯಲ್ಲಿ ಇಸಾಕನೊಡನೆ ಅವನು ಪಾಲುಹೊಂದುವುದು ನನಗೆ ಇಷ್ಟವಿಲ್ಲ” ಎಂದು ಹೇಳಿದಳು.
11 ಅಬ್ರಹಾಮನಿಗೆ ತುಂಬ ದುಃಖವಾಯಿತು. ಅವನು ತನ್ನ ಮಗನಾದ ಇಷ್ಮಾಯೇಲನ ಬಗ್ಗೆ ಚಿಂತಿಸತೊಡಗಿದನು. 12 ಆದರೆ ದೇವರು ಅಬ್ರಹಾಮನಿಗೆ, “ಆ ಹುಡುಗನ ಕುರಿತಾಗಲಿ ಸೇವಕಿಯ ಕುರಿತಾಗಲಿ ಚಿಂತೆಮಾಡಬೇಡ. ಸಾರಳ ಇಷ್ಟದಂತೆ ಮಾಡು. ಇಸಾಕನೊಬ್ಬನೇ ಬಾಧ್ಯಸ್ತನಾಗಬೇಕು. 13 ಆದರೆ ನಿನ್ನ ಸೇವಕಿಯ ಮಗನನ್ನು ಸಹ ನಾನು ಆಶೀರ್ವದಿಸುವೆನು. ಅವನು ನಿನ್ನ ಮಗನು. ಆದ್ದರಿಂದ ಅವನಿಂದಲೂ ನಾನು ದೊಡ್ಡ ಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು.
14 ಮರುದಿನ ಮುಂಜಾನೆ, ಅಬ್ರಹಾಮನು ಸ್ವಲ್ಪ ಆಹಾರವನ್ನು ಮತ್ತು ಸ್ವಲ್ಪ ನೀರನ್ನು ತೆಗೆದು ಹಾಗರಳಿಗೆ ಕೊಟ್ಟನು. ಹಾಗರಳು ಅವುಗಳನ್ನು ತೆಗೆದುಕೊಂಡು ತನ್ನ ಮಗನೊಡನೆ ಅಲ್ಲಿಂದ ಹೊರಟುಹೋದಳು. ಹಾಗರಳು ಆ ಸ್ಥಳವನ್ನು ಬಿಟ್ಟು ಬೇರ್ಷೆಬದ ಮರಳುಗಾಡಿನಲ್ಲಿ ಅಲೆಯತೊಡಗಿದಳು.
15 ಸ್ವಲ್ಪ ಸಮಯದ ನಂತರ, ಇದ್ದ ನೀರೆಲ್ಲಾ ಮುಗಿದುಹೋಯಿತು. ಕುಡಿಯುವುದಕ್ಕೆ ಏನೂ ಇರಲಿಲ್ಲ. ಆದ್ದರಿಂದ ಹಾಗರಳು ತನ್ನ ಮಗನನ್ನು ಪೊದೆಯ ಕೆಳಗೆ ಮಲಗಿಸಿದಳು. 16 ಹಾಗರಳು ಸ್ವಲ್ಪ ದೂರ ನಡೆದುಹೋಗಿ ಕುಳಿತುಕೊಂಡು ತನ್ನ ಮಗನು ಸಾಯುವುದನ್ನು ನೋಡಲಾರದೆ ಅಳತೊಡಗಿದಳು.
17 ಮಗುವಿನ ಕೂಗು ದೇವರಿಗೆ ಕೇಳಿಸಿತು. ಆಗ ದೇವದೂತನು ಆಕಾಶದಿಂದ ಆಕೆಯನ್ನು ಕರೆದು, “ಹಾಗರಳೇ, ನಿನಗೇನಾಯಿತು? ಭಯಪಡಬೇಡ; ಮಗುವಿನ ಕೂಗನ್ನು ಯೆಹೋವನು ಕೇಳಿದ್ದಾನೆ. 18 ಹೋಗಿ ಮಗುವನ್ನು ಎತ್ತಿಕೊ. ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.
19 ಆಮೇಲೆ ದೇವರು ಹಾಗರಳಿಗೆ ಒಂದು ಬಾವಿ ಕಾಣಿಸುವಂತೆ ಮಾಡಿದನು. ಹಾಗರಳು ಬಾವಿಗೆ ಹೋಗಿ ತನ್ನ ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಬಂದು ಮಗುವಿಗೆ ಕುಡಿಸಿದಳು.
20 ದೇವರು ಆ ಮಗುವಿನ ಸಂಗಡವಿದ್ದ ಕಾರಣ ಆ ಮಗುವು ಬೆಳೆದು ದೊಡ್ಡವನಾದನು; ಕಾಡಿನಲ್ಲಿ ವಾಸವಾಗಿದ್ದು ಚತುರ ಬಿಲ್ಲುಗಾರನಾದನು. 21 ಅವನ ತಾಯಿಯು ಅವನಿಗೆ ಈಜಿಪ್ಟಿನ ಹುಡುಗಿಯನ್ನು ತಂದು ಮದುವೆ ಮಾಡಿಸಿದಳು. ಅವರು ಪಾರಾನ್ ಕಾಡಿನಲ್ಲಿ ತಮ್ಮ ವಾಸವನ್ನು ಮುಂದುವರಿಸಿದರು.
ಹಾಗರಳ ಮತ್ತು ಸಾರಳ ಉದಾಹರಣೆ
21 ನಿಮ್ಮಲ್ಲಿ ಕೆಲವರು ಮೋಶೆಯ ಧರ್ಮಶಾಸ್ತ್ರಕ್ಕೆ ಇನ್ನೂ ಅಧೀನರಾಗಿರಲು ಇಷ್ಟಪಡುತ್ತೀರಿ. ಧರ್ಮಶಾಸ್ತ್ರವು ಏನು ಹೇಳುತ್ತದೆಂಬುದು ನಿಮಗೆ ಗೊತ್ತಿದೆಯೋ? ನನಗೆ ತಿಳಿಸಿ. 22 ಪವಿತ್ರ ಗ್ರಂಥವು ಹೇಳುವುದೇನೆಂದರೆ, ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು. ಒಬ್ಬ ಮಗನ ತಾಯಿಯು ದಾಸತ್ವದಲ್ಲಿದ್ದಳು, ಮತ್ತೊಬ್ಬ ಮಗನ ತಾಯಿಯು ಸ್ವತಂತ್ರಳಾಗಿದ್ದಳು. 23 ಮಾನವ ಸಹಜವಾದ ರೀತಿಯಲ್ಲಿ ಅಬ್ರಹಾಮನ ಮಗನು ಆ ದಾಸಿಯಲ್ಲಿ ಹುಟ್ಟಿದನು. ಸ್ವತಂತ್ರಳಾಗಿದ್ದ ಸ್ತ್ರೀಯಲ್ಲಿ ಹುಟ್ಟಿದ ಮಗನಾದರೋ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಫಲವಾಗಿದ್ದನು.
24 ಈ ಸಂಗತಿಗಳು ನಮಗೆ ಉಪಮಾನವಾಗಿವೆ. ದೇವರ ಮತ್ತು ಮನುಷ್ಯರ ನಡುವೆ ಆದ ಎರಡು ಒಡಂಬಡಿಕೆಗಳಿಗೆ ಈ ಇಬ್ಬರು ಸ್ತ್ರೀಯರು ಸಂಕೇತವಾಗಿದ್ದಾರೆ. ಸೀನಾಯಿ ಪರ್ವತದ ಮೇಲೆ ದೇವರು ಕೊಟ್ಟ ಧರ್ಮಶಾಸ್ತ್ರವೇ ಮೊದಲನೆ ಒಡಂಬಡಿಕೆ. ಈ ಒಡಂಬಡಿಕೆಯ ಅಧೀನದಲ್ಲಿದ್ದ ಜನರು ಗುಲಾಮರಂತಿದ್ದರು. ತಾಯಿಯಾದ ಹಾಗರಳು ಆ ಒಡಂಬಡಿಕೆಯಂತಿದ್ದಳು. 25 ಆದ್ದರಿಂದ ಹಾಗರಳು ಅರೇಬಿಯಾದಲ್ಲಿರುವ ಸೀನಾಯಿ ಪರ್ವತದಂತಿದ್ದಾಳೆ. ಯೆಹೂದ್ಯರ ನಗರವಾದ ಜೆರುಸಲೇಮಿಗೆ ಆಕೆಯು ಅನುರೂಪವಾಗಿದ್ದಾಳೆ. ಈ ನಗರವು ಗುಲಾಮಗಿರಿಯಲ್ಲಿದೆ ಮತ್ತು ಅದರ ಜನರೆಲ್ಲರೂ ಧರ್ಮಶಾಸ್ತ್ರಕ್ಕೆ ಗುಲಾಮರಾಗಿದ್ದಾರೆ. 26 ಆದರೆ ಪರಲೋಕದಲ್ಲಿರುವ ಜೆರುಸಲೇಮ್ ಸ್ವತಂತ್ರಳಾದ ಸ್ತ್ರೀಯಂತಿದೆ. ಇದೇ ನಮ್ಮ ತಾಯಿ. 27 ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:
“ಮಕ್ಕಳನ್ನು ಹೆತ್ತಿಲ್ಲದ ಬಂಜೆಯೇ,
ಸಂತೋಷಪಡು.
ಪ್ರಸವವೇದನೆಯಿಲ್ಲದವಳೇ,
ಸ್ವರವೆತ್ತಿ ಕೂಗು.
ಗಂಡನುಳ್ಳವಳಿಗಿಂತ ಗಂಡ
ಬಿಟ್ಟವಳಿಗೆ ಮಕ್ಕಳು ಹೆಚ್ಚು.”(A)
28-29 ಅಬ್ರಹಾಮನ ಒಬ್ಬ ಮಗನು ಮಾನವ ಸಹಜವಾದ ರೀತಿಯಲ್ಲಿ ಜನಿಸಿದನು. ಅಬ್ರಹಾಮನ ಮತ್ತೊಬ್ಬ ಮಗನು ದೇವರ ವಾಗ್ದಾನದ ಫಲವಾಗಿ ದೇವರಾತ್ಮನ ಶಕ್ತಿಯಿಂದ ಜನಿಸಿದನು. ನನ್ನ ಸಹೋದರ ಸಹೋದರಿಯರೇ, ನೀವು ಸಹ ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೀರಿ. ಮಾನವ ಸಹಜವಾದ ರೀತಿಯಲ್ಲಿ ಜನಿಸಿದ್ದ ಮಗನು ಮತ್ತೊಬ್ಬ ಮಗನನ್ನು ಹಿಂಸೆಪಡಿಸಿದನು. ಇದೇ ಈಗಲೂ ನಡೆಯುತ್ತಿದೆ. 30 ಆದರೆ ಪವಿತ್ರ ಗ್ರಂಥವು ಏನು ಹೇಳುತ್ತದೆ? “ದಾಸಿಯನ್ನು ಮತ್ತು ಅವಳ ಮಗನನ್ನು ಹೊರಗೆ ಹಾಕು; ಸ್ವತಂತ್ರಳಾದ ಸ್ತ್ರೀಯ ಮಗನು ತನ್ನ ತಂದೆಯು ಹೊಂದಿರುವ ಪ್ರತಿಯೊಂದನ್ನು ಪಡೆದುಕೊಳ್ಳುವನು. ಆದರೆ ದಾಸಿಗೆ ಏನೂ ದೊರೆಯುವುದಿಲ್ಲ.”(B) 31 ಆದ್ದರಿಂದ, ನನ್ನ ಸಹೋದರ ಸಹೋದರಿಯರೇ, ನಾವು ದಾಸಿಯ ಮಕ್ಕಳಲ್ಲ. ನಾವು ಸ್ವತಂತ್ರಳಾದ ಸ್ತ್ರೀಯ ಮಕ್ಕಳಾಗಿದ್ದೇವೆ.
ಸ್ವತಂತ್ರರಾಗಿರಿ
5 ಈಗ ನಮಗೆ ಸ್ವತಂತ್ರವಿದೆ. ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ದೃಢವಾಗಿರಿ. ಮನಸ್ಸನ್ನು ಬದಲಾಯಿಸಿಕೊಂಡು ಮತ್ತೆ ಧರ್ಮಶಾಸ್ತ್ರದ ಗುಲಾಮಗಿರಿಗೆ ಹೋಗಬೇಡಿರಿ.
Kannada Holy Bible: Easy-to-Read Version. All rights reserved. © 1997 Bible League International