Revised Common Lectionary (Semicontinuous)
ಹನ್ನಳ ಸ್ತೋತ್ರ
2 ಹನ್ನಳು ಇಂತೆಂದಳು:
“ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ.
ನಾನು ನನ್ನ ದೇವರಾದ ಯೆಹೋವನಲ್ಲಿ ಬಲಶಾಲಿಯಾಗಿದ್ದೇನೆ.
ನಾನು ನನ್ನ ಶತ್ರುಗಳ ಬಗ್ಗೆ ನಗುವೆನು.[a]
ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.
2 ಯೆಹೋವನಂತಹ ಪವಿತ್ರ ದೇವರು ಬೇರೆ ಯಾರೂ ಇಲ್ಲ.
ನಿನ್ನ ಹೊರತು ಅನ್ಯದೇವರಿಲ್ಲ!
ನಮ್ಮ ದೇವರಿಗಿಂತ ಬೇರೊಂದು ಬಂಡೆಯಿಲ್ಲ.
3 ಇನ್ನು ಮುಂದೆ ಬಡಾಯಿಕೊಚ್ಚಬೇಡಿ!
ಸೊಕ್ಕಿನ ಮಾತುಗಳನ್ನು ಆಡಬೇಡಿ!
ಏಕೆಂದರೆ ಯೆಹೋವನು ಪ್ರತಿಯೊಂದನ್ನು ಬಲ್ಲನು.
ಆತನು ಮನುಷ್ಯರನ್ನು ಮುನ್ನಡೆಸುತ್ತಾನೆ ಮತ್ತು ತೂಗಿ ನೋಡುತ್ತಾನೆ.
4 ಶಕ್ತಿಶಾಲಿ ಯೋಧರ ಬಿಲ್ಲುಗಳು ಮುರಿದುಹೋಗುತ್ತವೆ.
ಬಲಹೀನರು ಶಕ್ತಿವಂತರಾಗುವರು.
5 ಹಿಂದೆ ಆಹಾರವನ್ನು ಸಮೃದ್ಧಿಕರವಾಗಿ ಹೊಂದಿದ್ದವರು
ಆಹಾರಕ್ಕಾಗಿ ದುಡಿಯಬೇಕಾಗುವುದು.
ಹಿಂದೆ ಆಹಾರವಿಲ್ಲದೆ ಹಸಿದಿದ್ದವರಿಗೆ
ಇಂದು ಆಹಾರ ಸಮೃದ್ಧಿಕರವಾಗಿರುವುದು!
ಬಂಜೆಗೆ ಈಗ ಏಳು ಜನ ಮಕ್ಕಳಿರುವರು.
ಆದರೆ ಹೆಚ್ಚು ಮಕ್ಕಳಿದ್ದ ತಾಯಿ ಇಂದು ವೇದನೆಗೊಂಡಿರುವಳು
ಏಕೆಂದರೆ ಅವಳ ಮಕ್ಕಳೆಲ್ಲ ಸತ್ತುಹೋಗಿದ್ದಾರೆ.
6 ಯೆಹೋವನು ಜನರಿಗೆ ಸಾವನ್ನೂ ತರುವನು.
ಅಂತೆಯೇ ಅವರಿಗೆ ಜೀವವನ್ನೂ ದಯಪಾಲಿಸುವನು.
ಆತನು ಅವರಿಗೆ ಮರುಜೀವವನ್ನು ದಯಪಾಲಿಸಬಲ್ಲನು.
ಯೆಹೋವನು ಜನರನ್ನು ಮರಣ ಸ್ಥಳವಾದ ಪಾತಾಳಕ್ಕೆ ತಳ್ಳುವನು.
7 ಯೆಹೋವನು ಜನರನ್ನು ಬಡವರನ್ನಾಗಿಸುತ್ತಾನೆ.
ಆತನು ಜನರನ್ನು ಹಣವಂತರನ್ನಾಗಿಸುತ್ತಾನೆ.
ಯೆಹೋವನು ಜನರನ್ನು ದೀನರನ್ನಾಗಿಸುತ್ತಾನೆ.
ಆತನು ಜನರನ್ನು ದೊಡ್ಡವರನ್ನಾಗಿಸುತ್ತಾನೆ.
8 ಯೆಹೋವನು ಬಡವರನ್ನು ಧೂಳಿನಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ದೀನರನ್ನು ತಿಪ್ಪೆಯಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ಬಡವರನ್ನು ರಾಜಕುಮಾರರೊಂದಿಗೆ ಕುಳ್ಳಿರಿಸುತ್ತಾನೆ.
ಆತನು ಬಡವರನ್ನು ಗೌರವಪೀಠದಲ್ಲಿ ಕುಳ್ಳಿರಿಸುತ್ತಾನೆ.
ಲೋಕವೂ ಅದರ ಅಡಿಪಾಯಗಳೂ ಯೆಹೋವನವೇ.
ಆತನು ಆ ಕಂಬಗಳ ಮೇಲೆ ಲೋಕವನ್ನು ನಿಲ್ಲಿಸಿರುವನು.
9 ಯೆಹೋವನು ತನ್ನ ಪವಿತ್ರ ಜನರನ್ನು ರಕ್ಷಿಸುವನು.
ಆತನು ಅವರನ್ನು ಎಡವದಂತೆ ಕಾಪಾಡುವನು.
ಆದರೆ ಕೆಟ್ಟವರು ನಾಶವಾಗಿ ಕತ್ತಲೆಯಲ್ಲಿ ಬೀಳುವರು.
ಅವರ ಶಕ್ತಿ ಅವರಿಗೆ ಜಯನೀಡಲಾರದು.
10 ಯೆಹೋವನು ತನ್ನ ಶತ್ರುಗಳನ್ನು ನಾಶಗೊಳಿಸುವನು.
ಮಹೋನ್ನತನಾದ ದೇವರು ಪರಲೋಕದಲ್ಲಿ ಜನರಿಗೆ ವಿರುದ್ಧವಾಗಿ ಗುಡುಗುವನು.
ಯೆಹೋವನು ಬಹುದೂರದ ದೇಶಗಳಿಗೂ ತೀರ್ಪನ್ನು ಕೊಡುವನು.
ಆತನು ತನ್ನ ರಾಜನಿಗೆ ಶಕ್ತಿಯನ್ನು ಕೊಡುವನು.
ತಾನು ಅಭಿಷೇಕಿಸಿದ ರಾಜನನ್ನು ಬಲಗೊಳಿಸುವನು.”
ಇಸಾಕನು ವಾಗ್ದಾನದ ಮಗನು
15 ದೇವರು ಅಬ್ರಹಾಮನಿಗೆ, “ನಿನ್ನ ಹೆಂಡತಿಯಾದ, ಸಾರಯಳಿಗೆ ನಾನು ಒಂದು ಹೆಸರನ್ನು ಕೊಡುತ್ತೇನೆ. ಆಕೆಯ ಹೊಸ ಹೆಸರು ಸಾರ. 16 ನಾನು ಆಕೆಯನ್ನು ಆಶೀರ್ವದಿಸಿ ಆಕೆಗೆ ಒಬ್ಬ ಮಗನನ್ನು ದಯಪಾಲಿಸುವೆನು; ನೀನೇ ಅವನ ತಂದೆ. ಅನೇಕ ಜನಾಂಗಗಳಿಗೂ ರಾಜರುಗಳಿಗೂ ಆಕೆಯು ಮೂಲಮಾತೆಯಾಗಿರುವಳು” ಎಂದು ಹೇಳಿದನು.
17 ಅಬ್ರಹಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆದರೆ ಅವನು ಮನಸ್ಸಿನಲ್ಲಿ ನಗುತ್ತಾ, “ನನಗೆ ನೂರು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ನನಗೂ ಸಾಧ್ಯವಿಲ್ಲ. ಸಾರಳಿಗೆ ತೊಂಭತ್ತು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ಆಕೆಗೂ ಸಾಧ್ಯವಿಲ್ಲ” ಅಂದುಕೊಂಡನು.
18 ಆಮೇಲೆ ಅಬ್ರಹಾಮನು ದೇವರಿಗೆ, “ಇಷ್ಮಾಯೇಲನೇ ನಿನ್ನ ಆಶೀರ್ವಾದವನ್ನು ಹೊಂದಿಕೊಂಡು ಜೀವಿಸಬಾರದೇಕೆ?” ಎಂದು ಕೇಳಿದನು.
19 ಅದಕ್ಕೆ ದೇವರು ಅವನಿಗೆ, “ಇಲ್ಲ! ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನು ಹುಟ್ಟುವನು. ನೀನು ಅವನಿಗೆ, ‘ಇಸಾಕ’ ಎಂದು ಹೆಸರಿಡಬೇಕು. ನಾನು ಒಂದು ಒಡಂಬಡಿಕೆಯನ್ನು ಅವನೊಡನೆ ಮಾಡಿಕೊಳ್ಳುವೆನು. ಆ ಒಡಂಬಡಿಕೆಯು ಅವನ ಎಲ್ಲಾ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು.
20 “ನೀನು ಇಷ್ಮಾಯೇಲನ ಬಗ್ಗೆ ಮಾಡಿದ ಬಿನ್ನಹವನ್ನು ಕೇಳಿದ್ದೇನೆ. ನಾನು ಅವನನ್ನು ಆಶೀರ್ವದಿಸುವೆನು. ಅವನು ಅನೇಕ ಮಕ್ಕಳನ್ನು ಪಡೆದುಕೊಳ್ಳುವನು. ಹನ್ನೆರಡು ಮಹಾನಾಯಕರುಗಳಿಗೆ ಅವನು ತಂದೆಯಾಗುವನು. ಅವನ ಸಂತತಿಯು ಮಹಾಜನಾಂಗವಾಗುವುದು. 21 ಆದರೆ ನಾನು ನನ್ನ ಒಡಂಬಡಿಕೆಯನ್ನು ಇಸಾಕನೊಡನೆ ಮಾಡಿಕೊಳ್ಳುವೆನು. ಸಾರಳಲ್ಲಿ ಹುಟ್ಟುವ ಮಗನೇ ಇಸಾಕನು. ಮುಂದಿನ ವರ್ಷ ಇದೇ ಸಮಯದಲ್ಲಿ ಇಸಾಕನು ಹುಟ್ಟುವನು” ಎಂದು ಹೇಳಿದನು.
22 ದೇವರು ಅಬ್ರಹಾಮನೊಡನೆ ಮಾತಾಡುವುದನ್ನು ಮುಗಿಸಿದ ಮೇಲೆ ಮೇಲೋಕಕ್ಕೆ ಹೊರಟುಹೋದನು.
ಗಲಾತ್ಯ ಕ್ರೈಸ್ತರ ಮೇಲೆ ಪೌಲನ ಪ್ರೀತಿ
8 ಪೂರ್ವಕಾಲದಲ್ಲಿ ನೀವು ದೇವರನ್ನು ತಿಳಿಯದೆ ಸುಳ್ಳು ದೇವರುಗಳಿಗೆ ಗುಲಾಮರಾಗಿದ್ದಿರಿ. 9 ಈಗಲಾದರೋ ಸತ್ಯದೇವರನ್ನು ತಿಳಿದಿದ್ದೀರಿ. ನಿಜವಾಗಿ ಹೇಳಬೇಕಾದರೆ, ನಿಮ್ಮನ್ನು ತಿಳಿದಿರುವಾತನು ದೇವರೇ. ಹೀಗಿರಲಾಗಿ ಮೊದಲು ನೀವು ಅನುಸರಿಸುತ್ತಿದ್ದ ಬಲಹೀನವೂ ನಿರುಪಯುಕ್ತವೂ ಆದ ನಿಯಮಗಳಿಗೆ ನೀವು ಯಾಕೆ ಹಿಂತಿರುಗಬೇಕು? ಅವುಗಳಿಗೆ ಮತ್ತೆ ಗುಲಾಮರಾಗಬೇಕೆಂದಿದ್ದೀರೋ? 10 ವಿಶೇಷವಾದ ದಿನಗಳ, ಮಾಸಗಳ, ಕಾಲಮಾನಗಳ ಮತ್ತು ವರ್ಷಗಳ ಕುರಿತು ಧರ್ಮಶಾಸ್ತ್ರವು ಹೇಳುವ ಉಪದೇಶವನ್ನು ಇನ್ನೂ ಅನುಸರಿಸುತ್ತಿದ್ದೀರಿ. 11 ನಿಮ್ಮ ವಿಷಯದಲ್ಲಿ ನನಗೆ ಭಯವಾಗಿದೆ. ನಿಮಗೋಸ್ಕರ ನಾನು ಪಟ್ಟ ಪ್ರಯಾಸವು ವ್ಯರ್ಥವಾಗುವುದೆಂಬ ಭಯ ನನಗಿದೆ.
12 ಸಹೋದರ ಸಹೋದರಿಯರೇ, ನಾನೂ ನಿಮ್ಮಂತಿದ್ದೆನು. ಆದ್ದರಿಂದ ದಯವಿಟ್ಟು ನನ್ನಂತೆ ಆಗಿರಿ. 13 ಮೊದಲು ನೀವು ನನಗೆ ಬಹು ಒಳ್ಳೆಯವರಾಗಿದ್ದಿರಿ. ನಾನು ನಿಮ್ಮ ಬಳಿಗೆ ಮೊದಲನೆ ಸಲ ಬಂದದ್ದು ನನ್ನ ಅನಾರೋಗ್ಯದ ನಿಮಿತ್ತವೆಂದು ನಿಮಗೆ ಗೊತ್ತಿದೆ. ನಾನು ನಿಮಗೆ ಸುವಾರ್ತೆಯನ್ನು ತಿಳಿಸಿದ್ದು ಆವಾಗಲೇ. 14 ನನ್ನ ಅನಾರೋಗ್ಯವು ನಿಮಗೆ ಹೊರೆಯಾಗಿತ್ತು. ಆದರೆ ನೀವು ನನ್ನ ವಿಷಯದಲ್ಲಿ ಬೇಸರಮಾಡಿಕೊಳ್ಳಲಿಲ್ಲ. ನೀವು ನನ್ನನ್ನು ಕಳುಹಿಸಿಬಿಡಲಿಲ್ಲ. ದೇವದೂತನೋ ಎಂಬಂತೆ ನೀವು ನನ್ನನ್ನು ಸ್ವಾಗತಿಸಿದಿರಿ; ಸ್ವತಃ ಯೇಸು ಕ್ರಿಸ್ತನೋ ಎಂಬಂತೆ ನನ್ನನ್ನು ಸ್ವೀಕರಿಸಿಕೊಂಡಿರಿ. 15 ಆಗ ನೀವು ಬಹು ಸಂತೋಷವುಳ್ಳವರಾಗಿದ್ದಿರಿ. ಆ ಆನಂದವು ಈಗ ಎಲ್ಲಿದೆ? ನನಗೆ ಸಹಾಯ ಮಾಡಲು ನೀವು ಏನು ಬೇಕಾದರೂ ಮಾಡುವುದಕ್ಕೆ ಸಿದ್ಧರಾಗಿದ್ದಿರೆಂಬುದು ನನ್ನ ನೆನಪಿನಲ್ಲಿದೆ. ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಟ್ಟುಬಿಡುತ್ತಿದ್ದಿರಿ. 16 ನಾನು ನಿಮಗೆ ಸತ್ಯವನ್ನು ಹೇಳುವುದರಿಂದ ಈಗ ನಿಮ್ಮ ಶತ್ರುವಾಗಿದ್ದೇನೋ?
17 ನಿಮ್ಮನ್ನು ಒತ್ತಾಯಪಡಿಸುವುದಕ್ಕಾಗಿ ಆ ಜನರು ಪ್ರಯಾಸ ಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಒಳ್ಳೆಯ ಉದ್ದೇಶದಿಂದಲ್ಲ. ನೀವು ನಮಗೆ ವಿರುದ್ಧವಾಗಿ ತಿರುಗಿಬೀಳಬೇಕೆಂದು ಅವರು ನಿಮ್ಮನ್ನು ಒತ್ತಾಯಪಡಿಸುತ್ತಿದ್ದಾರೆ. ನೀವು ಅವರನ್ನೇ ಹೊರತು ಬೇರೆ ಯಾರನ್ನೂ ಅನುಸರಿಸಬಾರದೆಂಬುದು ಅವರ ಅಪೇಕ್ಷೆ. ನಿಮ್ಮ ವಿಷಯದಲ್ಲಿ ಜನರು ಆಸಕ್ತಿ ತೋರಿಸುವುದೇನೋ ಒಳ್ಳೆಯದು. 18 ಆದರೆ ಅವರ ಉದ್ದೇಶವು ಒಳ್ಳೆಯದಾಗಿದ್ದಾಗ ಮಾತ್ರ ನಿಮಗೆ ಒಳ್ಳೆಯದಾಗುತ್ತದೆ. ಇದು ಸತ್ಯ. ನಾನು ನಿಮ್ಮೊಂದಿಗಿರುವಾಗಲೂ ನಿಮ್ಮಿಂದ ದೂರವಿರುವಾಗಲೂ ಇದು ಸತ್ಯ. 19 ನನ್ನ ಪ್ರಿಯ ಮಕ್ಕಳೇ, ಪ್ರಸವವೇದನೆಪಡುವ ತಾಯಿಯಂತೆ ನಾನು ನಿಮ್ಮ ವಿಷಯದಲ್ಲಿ ನೋವುಳ್ಳವನಾಗಿದ್ದೇನೆ. ನೀವು ನಿಜವಾಗಿಯೂ ಕ್ರಿಸ್ತನಂತಾಗುವ ತನಕ ನನಗೆ ಈ ನೋವಿರುತ್ತದೆ. 20 ಈಗ ನಾನು ನಿಮ್ಮೊಂದಿಗಿದ್ದಿದ್ದರೆ ಬೇರೊಂದು ರೀತಿಯಲ್ಲಿ ತಿಳಿಸಬಹುದಾಗಿತ್ತು. ನಿಮ್ಮ ವಿಷಯದಲ್ಲಿ ಈಗ ಏನು ಮಾಡಬೇಕೊ ನನಗೆ ತಿಳಿಯದು.
Kannada Holy Bible: Easy-to-Read Version. All rights reserved. © 1997 Bible League International