Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
129 ನನ್ನ ಜೀವಮಾನವೆಲ್ಲಾ ನನಗೆ ಅನೇಕ ಶತ್ರುಗಳಿದ್ದರು.
ಇಸ್ರೇಲೇ, ಆ ಶತ್ರುಗಳ ಬಗ್ಗೆ ನಮಗೆ ಹೇಳು.
2 ನನ್ನ ಜೀವಮಾನವೆಲ್ಲಾ ನನಗೆ ಅನೇಕ ಶತ್ರುಗಳಿದ್ದರು.
ಆದರೆ ಅವರೆಂದೂ ಗೆಲ್ಲಲಿಲ್ಲ.
3 ನನ್ನ ಬೆನ್ನಿನ ಮೇಲೆ ಹೊಡೆದು
ಹೊಲವನ್ನು ಉಳುವಂತೆ ಗಾಯ ಮಾಡಿದರು.
4 ಆದರೆ ನೀತಿಸ್ವರೂಪನಾದ ಯೆಹೋವನು ಹಗ್ಗಗಳನ್ನು ಕತ್ತರಿಸಿ
ಆ ದುಷ್ಟರಿಂದ ನನ್ನನ್ನು ಬಿಡುಗಡೆ ಮಾಡಿದನು.
5 ಚೀಯೋನನ್ನು ದ್ವೇಷಿಸಿದ ಜನರು ಸೋತುಹೋದರು.
ಅವರು ಹೋರಾಟವನ್ನು ನಿಲ್ಲಿಸಿ ಓಡಿಹೋದರು.
6 ಅವರು ಮನೆಯ ಮೇಲೆ ಬೆಳೆಯುವ ಹುಲ್ಲಿನಂತಿದ್ದರು.
ಅದು ಬೆಳೆಯುವುದಕ್ಕಿಂತ ಮೊದಲೇ ಒಣಗಿಹೋಗುವುದು.
7 ಅದನ್ನು ಕೊಯ್ಯುವವನ ಹಿಡಿಯೂ ತುಂಬುವುದಿಲ್ಲ
ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ.
8 ಅವರ ಸಮೀಪದಲ್ಲಿ ನಡೆದುಹೋಗುವವರು,
“ಯೆಹೋವನು ನಿಮ್ಮನ್ನು ಆಶೀರ್ವದಿಸಲಿ” ಎಂದು ಹೇಳುವುದಿಲ್ಲ.
“ಯೆಹೋವನ ಹೆಸರಿನಲ್ಲಿ ನಿಮಗೆ ಆಶೀರ್ವಾದವಾಗಲಿ”
ಎಂದು ಜನರು ಅವರನ್ನು ಆಶೀರ್ವದಿಸುವುದಿಲ್ಲ.
ಬಾಬಿಲೋನಿನ ಬಗ್ಗೆ ದೈವೋಕ್ತಿ
50 ಬಾಬಿಲೋನ್ ಮತ್ತು ಬಾಬಿಲೋನಿನ ಜನರ ಬಗ್ಗೆ ಯೆಹೋವನ ಸಂದೇಶವಿದು. ಈ ಸಂದೇಶವನ್ನು ಯೆಹೋವನು ಯೆರೆಮೀಯನ ಮುಖಾಂತರ ಕೊಟ್ಟನು.
2 “ಎಲ್ಲಾ ಜನಾಂಗಗಳಲ್ಲಿ ಪ್ರಚಾರಪಡಿಸಿರಿ,
ಒಂದು ಧ್ವಜವನ್ನು ಹಾರಿಸಿ ಈ ಸಂದೇಶವನ್ನೆಲ್ಲಾ ಸಾರಿರಿ.
‘ಬಾಬಿಲೋನ್ ಜನಾಂಗವನ್ನು ವಶಪಡಿಸಿಕೊಳ್ಳಲಾಗುವುದು.
ಬೇಲ್ ದೇವತೆ ನಾಚಿಕೆಪಡುವುದು.
ಮೆರೋದಾಕ್ ದೇವತೆಯು ಭಯಪಡುವುದು.
ಬಾಬಿಲೋನಿನ ವಿಗ್ರಹಗಳು ನಾಚಿಕೆಪಡುವವು.
ಅಲ್ಲಿಯ ದೇವತೆಗಳು ಹೆದರಿಕೊಳ್ಳುವವು.’
3 ಉತ್ತರದ ಒಂದು ಜನಾಂಗವು ಬಾಬಿಲೋನಿನ ಮೇಲೆ ಧಾಳಿ ಮಾಡುವುದು.
ಆ ಜನಾಂಗವು ಬಾಬಿಲೋನನ್ನು ಒಂದು ಬರಿದಾದ ಮರುಭೂಮಿಯನ್ನಾಗಿ ಮಾಡುವದು.
ಅಲ್ಲಿ ಯಾರೂ ವಾಸಮಾಡಲಾರರು.
ಪ್ರಾಣಿಗಳು ಮತ್ತು ಮನುಷ್ಯರು ಅಲ್ಲಿಂದ ಪಲಾಯನ ಮಾಡುವರು.”
4 ಯೆಹೋವನು ಹೀಗೆನ್ನುತ್ತಾನೆ: “ಆ ಸಮಯದಲ್ಲಿ
ಇಸ್ರೇಲಿನ ಮತ್ತು ಯೆಹೂದದ ಜನರು ಒಟ್ಟಿಗೆ ಸೇರುವರು.
ಅವರು ಒಟ್ಟುಗೂಡಿ ಬಹಳವಾಗಿ ಗೋಳಾಡುವರು;
ತಮ್ಮ ದೇವರಾದ ಯೆಹೋವನನ್ನು ಹುಡುಕಲು ಹೋಗುವರು.
5 ಅವರು ಚೀಯೋನಿಗೆ ಹೋಗುವ ಮಾರ್ಗವನ್ನು ವಿಚಾರಿಸುವರು.
ಆ ದಿಕ್ಕಿನಲ್ಲಿ ಹೋಗಲು ಪ್ರಾರಂಭಿಸುವರು.
‘ಬನ್ನಿ, ನಾವೆಲ್ಲರೂ ಯೆಹೋವನ ಆಶ್ರಯಪಡೆಯೋಣ.
ಆತನೊಂದಿಗೆ ಶಾಶ್ವತವಾದ ಮತ್ತು ನಾವೆಂದೂ ಮರೆಯಲಾಗದ
ಒಡಂಬಡಿಕೆಯನ್ನು ಮಾಡಿಕೊಳ್ಳೋಣ’ ಎಂದು ಅವರು ಹೇಳುವರು.
6 “ನನ್ನ ಜನರು ತಪ್ಪಿಸಿಕೊಂಡ ಕುರಿಗಳಂತಿದ್ದಾರೆ.
ಅವರ ಕುರುಬರು ಅವರನ್ನು ತಪ್ಪು ದಾರಿಗೆ ಎಳೆದಿದ್ದಾರೆ.
ಅವರ ನಾಯಕರುಗಳು ಅವರನ್ನು ಬೆಟ್ಟಗಳಲ್ಲಿ ಅಲೆಯುವಂತೆ ಮಾಡಿದ್ದಾರೆ.
ಅವರ ವಿಶ್ರಾಂತಿಸ್ಥಾನವನ್ನು ಅವರು ಮರೆತುಬಿಟ್ಟಿದ್ದಾರೆ.
7 ನನ್ನ ಜನರನ್ನು ಕಂಡವರೆಲ್ಲ ಅವರನ್ನು ನೋಯಿಸಿದ್ದಾರೆ.
ಆ ಶತ್ರುಗಳು,
‘ನಾವು ಮಾಡಿದ್ದು ತಪ್ಪಲ್ಲ.
ಅವರು ಯೆಹೋವನ ವಿರುದ್ಧ ಪಾಪ ಮಾಡಿದ್ದಾರೆ.
ಯೆಹೋವನು ಅವರ ನಿಜವಾದ ನಿವಾಸವಾಗಿದ್ದನು.
ಯೆಹೋವನು ಅವರ ಪೂರ್ವಿಕರು ನಂಬಿದ್ದ ದೇವರಾಗಿದ್ದನು’ ಎಂದರು.
17 “ಇಸ್ರೇಲು ದೇಶಗಳಲ್ಲೆಲ್ಲಾ
ಚದರಿಹೋದ ಕುರಿಹಿಂಡಿನಂತಾಗಿದೆ.
ಸಿಂಹಗಳಿಗೆ ಹೆದರಿ ಓಡಿಹೋದ
ಕುರಿಗಳಂತಾಗಿದೆ ಇಸ್ರೇಲು.
ಅದನ್ನು ತಿಂದು ಮುಗಿಸಿದ ಮೊದಲನೆ ಸಿಂಹವೆಂದರೆ
ಅಶ್ಶೂರದ ರಾಜನು.
ಅದರ ಎಲುಬುಗಳನ್ನು ಜಗಿದ ಕೊನೆಯ ಸಿಂಹವೆಂದರೆ
ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು.
18 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆಂದನು:
‘ನಾನು ಬಾಬಿಲೋನಿನ ರಾಜನನ್ನು ಮತ್ತು ಅವನ ದೇಶವನ್ನು ಬಹುಬೇಗ ದಂಡಿಸುವೆನು.
ಅಶ್ಶೂರದ ರಾಜನನ್ನು ದಂಡಿಸಿದಂತೆ ನಾನು ಅವನನ್ನು ದಂಡಿಸುವೆನು.
19 “‘ಆದರೆ ಇಸ್ರೇಲನ್ನು ಪುನಃ ಅದರ ಹುಲ್ಲುಗಾವಲಿಗೆ ತರುವೆನು.
ಅದು ಕರ್ಮೆಲ್ ಬೆಟ್ಟದ ಮೇಲೆ ಮತ್ತು ಬಾಷಾನಿನ ಪ್ರದೇಶದಲ್ಲಿ ಮೇಯುವದು.
ಅದು ತಿಂದು ತೇಗುವದು.
ಅದು ಎಫ್ರಾಯೀಮಿನ ಮತ್ತು ಗಿಲ್ಯಾದಿನ ಬೆಟ್ಟಗಳಲ್ಲಿ ತಿಂದು ತೃಪ್ತಿಪಡುವದು.’”
20 ಇದು ಯೆಹೋವನ ನುಡಿ. “ಆ ಸಮಯದಲ್ಲಿ ಜನರು ಇಸ್ರೇಲಿನ ದೋಷವನ್ನು ಕಂಡುಹಿಡಿಯಲು ಪ್ರಯತ್ನಿಸುವರು.
ಆದರೆ ಯಾವ ದೋಷಗಳೂ ಇರುವದಿಲ್ಲ.
ಜನರು ಯೆಹೂದದ ಪಾಪಗಳನ್ನು ಹುಡುಕುವ ಪ್ರಯತ್ನ ಮಾಡುವರು.
ಆದರೆ ಯಾವ ಪಾಪಗಳೂ ಸಿಕ್ಕುವದಿಲ್ಲ.
ಏಕೆಂದರೆ ಇಸ್ರೇಲಿನ ಮತ್ತು ಯೆಹೂದದ ಜನರಲ್ಲಿ ಅಳಿದುಳಿದ ಕೆಲವು ಜನರನ್ನು ನಾನು ರಕ್ಷಿಸುತ್ತೇನೆ.
ಅವರ ಪಾಪಗಳನ್ನೆಲ್ಲ ಕ್ಷಮಿಸಿದ್ದೇನೆ.”
ಅಪೊಸ್ತಲರ ಪ್ರಾರ್ಥನೆಯ ಅಗತ್ಯತೆ
(ಮತ್ತಾಯ 26:36-46; ಮಾರ್ಕ 14:32-42)
39 ಯೇಸು ಪಟ್ಟಣದಿಂದ (ಜೆರುಸಲೇಮ್) ಆಲಿವ್ ಮರಗಳ ಗುಡ್ಡಕ್ಕೆ ಹೋದನು. 40 ಆತನ ಶಿಷ್ಯರೂ ಆತನೊಡನೆ ಹೋದರು. (ಯೇಸು ಆಗಾಗ್ಗೆ ಅಲ್ಲಿಗೆ ಹೋಗುತ್ತಿದ್ದನು.) ಯೇಸು ತನ್ನ ಶಿಷ್ಯರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
41 ಬಳಿಕ ಯೇಸು ಅವರಿಂದ ಸುಮಾರು ನೂರೈವತ್ತು ಅಡಿ ದೂರ ಹೋದನು. ಆತನು ಮೊಣಕಾಲೂರಿ, 42 “ತಂದೆಯೇ, ನಿನಗೆ ಇಷ್ಟವಿದ್ದರೆ, ಈ ಶ್ರಮೆಯ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಇಷ್ಟದಂತಾಗದೆ ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು. 43 ಆಗ ಪರಲೋಕದಿಂದ ಒಬ್ಬ ದೇವದೂತನು ಕಾಣಿಸಿಕೊಂಡನು. ಯೇಸುವನ್ನು ಬಲಪಡಿಸುವುದಕ್ಕಾಗಿ ಈ ದೇವದೂತನನ್ನು ಕಳುಹಿಸಲಾಗಿತ್ತು. 44 ಯೇಸುವಿಗೆ ತುಂಬಾ ವೇದನೆಯಿತ್ತು. ಆತನು ಪ್ರಾರ್ಥನೆಯಲ್ಲಿ ಕಷ್ಟಪಟ್ಟು ಹೋರಾಡಿದನು. ಆತನ ಮುಖದಲ್ಲಿ ಬೆವರು ರಕ್ತದೋಪಾದಿಯಲ್ಲಿ ತೊಟ್ಟಿಕ್ಕತೊಡಗಿತು. 45 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರ ಬಳಿ ಹೋದನು. ಅವರು ನಿದ್ರೆ ಮಾಡುತ್ತಿದ್ದರು. (ಅವರು ದುಃಖದಿಂದ ಆಯಾಸಗೊಂಡಿದ್ದರು.) 46 ಯೇಸು ಅವರಿಗೆ, “ನೀವು ಏಕೆ ನಿದ್ರಿಸುತ್ತಿದ್ದೀರಿ? ಎದ್ದೇಳಿರಿ! ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International