Revised Common Lectionary (Semicontinuous)
117 ಸರ್ವಜನಾಂಗಗಳೇ, ಯೆಹೋವನನ್ನು ಕೊಂಡಾಡಿರಿ.
ಸರ್ವಜನರೇ, ಆತನನ್ನು ಸ್ತುತಿಸಿರಿ.
2 ಆತನ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ.
ಆತನ ನಂಬಿಗಸ್ತಿಕೆಯು ಶಾಶ್ವತವಾದದ್ದು.
ಯೆಹೋವನಿಗೆ ಸ್ತೋತ್ರವಾಗಲಿ.
18 ಯೆಹೋವನು ಹೀಗೆನ್ನುತ್ತಾನೆ,
“ಯಾಕೋಬಿನ ಜನರು ಈಗ ಬಂಧಿಗಳಾಗಿದ್ದಾರೆ.
ಆದರೆ ಅವರು ಹಿಂತಿರುಗಿ ಬರುವರು.
ಯಾಕೋಬಿನ ಮನೆಗಳ ಮೇಲೆ ನಾನು ಕನಿಕರ ತೋರುವೆನು.
ನಗರವು ಈಗ ಕೇವಲ ಹಾಳುಬಿದ್ದ
ಮನೆಗಳಿಂದ ಕೂಡಿದ ಒಂದು ದಿಬ್ಬವಾಗಿದೆ.
ಆದರೆ ಆ ನಗರವು ಮತ್ತೆ ನಿರ್ಮಿಸಲ್ಪಡುವುದು.
ಮುಂಚೆ ಇದ್ದ ಸ್ಥಳದಲ್ಲಿ ಅರಮನೆಯನ್ನು ಕಟ್ಟಲಾಗುವುದು.
19 ಆ ಸ್ಥಳಗಳಲ್ಲಿ ಜನರು ಸ್ತೋತ್ರಗೀತೆಗಳನ್ನು ಹಾಡುವರು.
ಅಲ್ಲಿ ನಗುವಿನ ಧ್ವನಿಯು ಕೇಳಿಬರುವುದು.
ನಾನು ಅವರಿಗೆ ಹಲವಾರು ಮಕ್ಕಳನ್ನು ಕೊಡುವೆನು.
ಇಸ್ರೇಲ್ ಮತ್ತು ಯೆಹೂದ ಚಿಕ್ಕವುಗಳಾಗಿರುವದಿಲ್ಲ.
ನಾನು ಅವುಗಳಿಗೆ ಗೌರವವನ್ನು ತರುತ್ತೇನೆ.
ಯಾರೂ ಅವುಗಳನ್ನು ಕೀಳಾಗಿ ಕಾಣುವದಿಲ್ಲ.
20 ಯಾಕೋಬಿನ ಸಂತಾನದವರು ಮೊದಲಿನ ಸ್ಥಿತಿಯನ್ನು ಹೊಂದುವರು.
ನಾನು ಇಸ್ರೇಲರನ್ನೂ ಯೆಹೂದ್ಯರನ್ನೂ ಬಲಶಾಲಿಗಳನ್ನಾಗಿ ಮಾಡುವೆನು.
ಅವರನ್ನು ಪೀಡಿಸುವ ಜನರನ್ನು ಶಿಕ್ಷಿಸುವೆನು.
21 ಅವರಲ್ಲೇ ಒಬ್ಬನು ಅವರಿಗೆ ನಾಯಕನಾಗಿರುವನು.
ಆ ನಾಯಕನು ನನ್ನ ಜನರಿಂದಲೇ ಬರುವನು.
ನಾನು ಹೇಳಿದರೆ ಮಾತ್ರ ಜನರು ನನ್ನ ಹತ್ತಿರಕ್ಕೆ ಬರಲು ಸಾಧ್ಯ.
ಆದ್ದರಿಂದ ನಾನು ಆ ನಾಯಕನನ್ನು ನನ್ನ ಹತ್ತಿರ ಬರಲು ಹೇಳುವೆನು.
ಅವನು ನನಗೆ ತುಂಬಾ ಹತ್ತಿರದವನಾಗುವನು.
22 ನೀವು ನನ್ನ ಜನರಾಗುವಿರಿ
ಮತ್ತು ನಾನು ನಿಮ್ಮ ದೇವರಾಗುವೆನು.”
23 ಯೆಹೋವನು ಬಹಳ ಕೋಪ ತಾಳಿದ್ದನು.
ಅವನು ಜನರನ್ನು ಶಿಕ್ಷಿಸಿದನು.
ಆ ಶಿಕ್ಷೆಯು ಒಂದು ಬಿರುಗಾಳಿಯಂತೆ ಬಂದಿತು.
ಆ ಶಿಕ್ಷೆಯು ದುಷ್ಟಜನರ ಮೇಲೆ ತೂಫಾನಿನಂತೆ ಬಂದಿತು.
24 ಜನರನ್ನು ಸಂಪೂರ್ಣವಾಗಿ ಶಿಕ್ಷಿಸುವವರೆಗೆ
ಯೆಹೋವನು ಕೋಪಿಷ್ಟನಾಗಿಯೇ ಇರುವನು.
ಯೆಹೂದದ ಜನರಾದ ನೀವು ಅದನ್ನು
ಕೊನೆಯ ದಿನಗಳಲ್ಲಿ ತಿಳಿದುಕೊಳ್ಳುವಿರಿ.
8 ನಾನೇ ಯೋಹಾನನು. ನಾನು ಇವುಗಳನ್ನೆಲ್ಲ ಕೇಳಿದೆನು ಮತ್ತು ನೋಡಿದೆನು. ನಾನು ಇವುಗಳನ್ನು ಕೇಳಿ, ಕಂಡಾಗ, ನನಗೆ ಇವುಗಳನ್ನೆಲ್ಲ ತೋರಿಸಿದ ದೇವದೂತನನ್ನು ಆರಾಧಿಸುವುದಕ್ಕಾಗಿ ಅವನ ಪಾದಗಳಿಗೆ ಅಡ್ಡಬಿದ್ದೆನು. 9 ಆದರೆ ಆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ನಾನು ನಿನ್ನಂತೆ, ಈ ಪುಸ್ತಕದಲ್ಲಿರುವ ವಾಕ್ಯಗಳಿಗೆ ವಿಧೇಯರಾಗಿರುವ ಎಲ್ಲ ಜನರಂತೆ ಮತ್ತು ನಿನ್ನ ಸಹೋದರರಾದ ಪ್ರವಾದಿಗಳಂತೆ ಒಬ್ಬ ಸೇವಕನು. ನೀನು ದೇವರನ್ನು ಆರಾಧಿಸಬೇಕು!” ಎಂದು ಹೇಳಿದನು.
10 ಬಳಿಕ ದೇವದೂತನು ನನಗೆ, “ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ರಹಸ್ಯವಾಗಿಡಬೇಡ. ಇವುಗಳೆಲ್ಲವೂ ಸಂಭವಿಸುವ ಕಾಲ ಸಮೀಪಿಸಿದೆ. 11 ತಪ್ಪು ಮಾಡುತ್ತಿರುವವನು ತಪ್ಪುಮಾಡುತ್ತಲೇ ಮುಂದುವರಿಯಲು ಬಿಡು. ಅಶುದ್ಧನಾದವನು ಅಶುದ್ಧತೆಯಲ್ಲೇ ಮುಂದುವರಿಯಲು ಬಿಡು. ಯೋಗ್ಯವಾದುದನ್ನು ಮಾಡುವವನು ಯೋಗ್ಯವಾದುದನ್ನೇ ಮಾಡಲಿ. ಪರಿಶುದ್ಧನಾಗಿರುವವನು ಪರಿಶುದ್ಧನಾಗಿಯೇ ಇರಲಿ” ಎಂದು ಹೇಳಿದನು.
12 “ಕೇಳು! ನಾನು ಬೇಗನೆ ಬರುತ್ತೇನೆ! ನನ್ನೊಂದಿಗೆ ಪ್ರತಿಫಲವನ್ನು ತರುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದುದಕ್ಕೆ ತಕ್ಕ ಪ್ರತಿಫಲವನ್ನು ಕೊಡುತ್ತೇನೆ. 13 ನಾನೇ ಆದಿಯೂ ಅಂತ್ಯವೂ ಮೊದಲನೆಯವನೂ ಕಡೆಯವನೂ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ.
14 “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡ ಜನರೇ ಧನ್ಯರು. ಅವರು ಜೀವವೃಕ್ಷದ ಹಣ್ಣನ್ನು ತಿನ್ನಲು ಹಕ್ಕುಳ್ಳವರಾಗಿದ್ದಾರೆ. ಅವರು ಬಾಗಿಲುಗಳ ಮೂಲಕ ನಗರದೊಳಕ್ಕೆ ಹೋಗಬಲ್ಲರು. 15 ನಗರದ ಹೊರಭಾಗದಲ್ಲಿ ನಾಯಿಗಳಿವೆ (ಕೆಟ್ಟಜನರು), ಕೆಟ್ಟ ಮಾಟವನ್ನು ಮಾಡುವ ಜನರಿದ್ದಾರೆ, ಲೈಂಗಿಕ ಪಾಪಗಳನ್ನು ಮಾಡುವ ಜನರಿದ್ದಾರೆ, ಕೊಲೆಗಾರರಿದ್ದಾರೆ, ವಿಗ್ರಹಗಳನ್ನು ಆರಾಧಿಸುವ ಜನರಿದ್ದಾರೆ ಮತ್ತು ಸುಳ್ಳನ್ನು ಪ್ರೀತಿಸುವ ಮತ್ತು ಹೇಳುವ ಜನರಿದ್ದಾರೆ.
16 “ಯೇಸುವೆಂಬ ನಾನೇ, ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ಸಾಕ್ಷಿ ನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ದಾವೀದನ ವಂಶದಲ್ಲಿ ಹುಟ್ಟಿದವನೂ ಪ್ರಕಾಶಮಾನವಾದ ಉದಯನಕ್ಷತ್ರವೂ ಆಗಿದ್ದಾನೆ.”
17 ಆತ್ಮನೂ ಮದುಮಗಳೂ, “ಬಾ!” ಎನ್ನುತ್ತಾರೆ. ಇದನ್ನು ಕೇಳುವ ಪ್ರತಿಯೊಬ್ಬ ವ್ಯಕ್ತಿಯೂ, “ಬಾ!” ಎಂದು ಹೇಳಬೇಕು. ಬಾಯಾರಿದವನು ನನ್ನ ಬಳಿಗೆ ಬರಲಿ; ಅವನಿಗೆ ಇಷ್ಟವಿದ್ದರೆ ಜೀವಜಲವನ್ನು ಉಚಿತವಾಗಿ ಪಡೆದುಕೊಳ್ಳಲಿ.
18 ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ಕೇಳಿದ ಪ್ರತಿಯೊಬ್ಬರಿಗೂ ನಾನು ಎಚ್ಚರಿಕೆ ನೀಡುತ್ತೇನೆ: ಈ ವಾಕ್ಯಗಳಿಗೆ ಯಾರಾದರೂ ಏನನ್ನಾದರೂ ಸೇರಿಸಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಅವನಿಗೆ ಕೊಡುತ್ತಾನೆ. 19 ಈ ಪ್ರವಾದನೆಯ ಪುಸ್ತಕದಿಂದ ಯಾರಾದರೂ ಏನನ್ನಾದರೂ ತೆಗೆದುಹಾಕಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಪವಿತ್ರಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ತೆಗೆದುಹಾಕುತ್ತಾನೆ.
20 ಇವುಗಳೆಲ್ಲಾ ನಿಜವೆಂದು ಹೇಳುವಾತನು ಯೇಸುವೇ. ಈಗ ಆತನು, “ಹೌದು, ನಾನು ಬೇಗನೆ ಬರುತ್ತೇನೆ” ಎಂದು ಹೇಳುತ್ತಾನೆ.
ಆಮೆನ್! ಪ್ರಭು ಯೇಸುವೇ, ಬಾ!
21 ಪ್ರಭು ಯೇಸುವಿನ ಕೃಪೆಯು ಎಲ್ಲಾ ಜನರೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International