Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 66:1-12

ಸ್ತುತಿಗೀತೆ.

66 ಸರ್ವಭೂನಿವಾಸಿಗಳೇ, ದೇವರಿಗೆ ಜಯಘೋಷ ಮಾಡಿರಿ!
ಆತನ ಹೆಸರಿನ ಮಹಿಮೆಯನ್ನು ಕೀರ್ತಿಸಿರಿ.
    ಸ್ತುತಿಗೀತೆಗಳಿಂದ ಆತನನ್ನು ಸನ್ಮಾನಿಸಿರಿ.
ದೇವರೇ, ನಿನ್ನ ಕಾರ್ಯಗಳು ಎಷ್ಟು ಅದ್ಭುತವಾಗಿವೆ!
    ನಿನ್ನ ಮಹಾಶಕ್ತಿಯಿಂದಾಗಿ ಶತ್ರುಗಳು ನಿನಗೆ ಭಯಪಟ್ಟು ಅಡ್ಡಬೀಳುವರು.
ಸರ್ವಭೂನಿವಾಸಿಗಳು ನಿನ್ನನ್ನು ಆರಾಧಿಸಲಿ.
    ಪ್ರತಿಯೊಬ್ಬರೂ ನಿನ್ನ ಹೆಸರನ್ನು ಕೀರ್ತಿಸಲಿ.

ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ;
    ಆತನ ಕಾರ್ಯಗಳು ಅತ್ಯದ್ಭುತವಾಗಿವೆ!
ಆತನು ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು.
    ಆತನ ಜನರು ಕಾಲುನಡಿಗೆಯಿಂದ ನದಿಯನ್ನು ದಾಟಿದರು.
    ಅದಕ್ಕಾಗಿ ನಾವು ಆತನಲ್ಲಿ ಉಲ್ಲಾಸಪಡೋಣ.
ಆತನು ಪ್ರಪಂಚವನ್ನು ತನ್ನ ಮಹಾಶಕ್ತಿಯಿಂದ ಆಳುತ್ತಾನೆ.
    ಆತನು ಎಲ್ಲರನ್ನೂ ಗಮನಿಸುತ್ತಾನೆ.
    ಆತನ ವಿರುದ್ಧ ದಂಗೆಯೇಳಲು ಯಾರಿಗೂ ಆಗದು.

ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
ನಮಗೆ ಜೀವಕೊಟ್ಟವನು ಆತನೇ.
    ನಮ್ಮನ್ನು ಕಾಪಾಡುವವನೂ ಆತನೇ.
10 ಜನರು ಬೆಳ್ಳಿಯನ್ನು ಬೆಂಕಿಯಿಂದ ಶೋಧಿಸುವಂತೆ ದೇವರು ನಮ್ಮನ್ನು ಪರೀಕ್ಷಿಸಿದನು.
11 ದೇವರೇ, ನೀನು ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದೆ.
    ನೀನು ನಮಗೆ ಭಾರವಾದ ಹೊರೆಗಳನ್ನು ಹೊರಿಸಿದೆ;
12 ಶತ್ರುಗಳು ನಮ್ಮ ಮೇಲೆ ನಡೆಯಮಾಡಿದೆ.
    ನೀನು ನಮ್ಮನ್ನು ಬೆಂಕಿಯಲ್ಲಿಯೂ ನೀರಿನಲ್ಲಿಯೂ ಹಾಯಿಸಿದೆ.
    ಆದರೂ ಸುರಕ್ಷಿತ ಸ್ಥಳಕ್ಕೆ ನಮ್ಮನ್ನು ತಂದು ಸೇರಿಸಿದೆ.

ಯೆರೆಮೀಯ 27

ಯೆಹೋವನು ನೆಬೂಕದ್ನೆಚ್ಚರನನ್ನು ರಾಜನನ್ನಾಗಿ ಮಾಡಿದ್ದು

27 ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೂದದ ರಾಜನಾದ ಚಿದ್ಕೀಯನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಈ ಸಂದೇಶ ಬಂದಿತು. ಚಿದ್ಕೀಯನು ರಾಜನಾಗಿದ್ದ ಯೋಷೀಯನ ಮಗ.[a] ಯೆಹೋವನು ನನಗೆ ಹೀಗೆ ಹೇಳಿದನು: “ನೀನು ಮರದ ಕಂಬದಿಂದ ಕೆಲವು ನೊಗಗಳನ್ನು ಮಾಡಿ ನಿನ್ನ ಕತ್ತಿನ ಹಿಂಬದಿಯ ಮೇಲೆ ಇಟ್ಟುಕೋ. ತರುವಾಯ ಎದೋಮಿನ ರಾಜ, ಮೋವಾಬಿನ ರಾಜ, ಅಮ್ಮೋನಿನ ರಾಜ, ತೂರಿನ ರಾಜ, ಚೀದೋನಿನ ರಾಜ ಇವರುಗಳಿಗೆ ಅವುಗಳನ್ನು ಕಳಿಸು. ಯೆಹೂದದ ರಾಜನಾದ ಚಿದ್ಕೀಯನನ್ನು ನೋಡಲು ಬಂದ ಈ ರಾಜರ ರಾಯಭಾರಿಗಳ ಮೂಲಕ ಸಂದೇಶವನ್ನು ಕಳಿಸು. ಈ ಸಂದೇಶವನ್ನು ತಮ್ಮ ಒಡೆಯರಿಗೆ ತಿಳಿಸಬೇಕೆಂದು ಆ ರಾಯಭಾರಿಗಳಿಗೆ ಹೇಳು. ಅವರಿಗೆ ಹೀಗೆ ಹೇಳು: ‘ಇಸ್ರೇಲಿನ ದೇವರು ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ ಎಂದು ನಿಮ್ಮ ಒಡೆಯರಿಗೆ ತಿಳಿಸಿ. ನಾನು ಭೂಮಿಯನ್ನೂ ಮತ್ತು ಅದರ ಮೇಲಿರುವ ಎಲ್ಲಾ ಜನರನ್ನೂ ಸೃಷ್ಟಿಸಿದೆ. ನಾನು ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳನ್ನು ಸೃಷ್ಟಿಸಿದೆ. ನಾನು ಇದನ್ನು ನನ್ನ ಮಹಾಶಕ್ತಿಯಿಂದಲೂ ಬಲವಾದ ತೋಳುಗಳಿಂದಲೂ ಸೃಷ್ಟಿಸಿದೆ. ನಾನು ಆ ಭೂಮಿಯನ್ನು ನನ್ನ ಮನಸ್ಸಿಗೆ ಬಂದವರಿಗೆ ಕೊಡಬಹುದು. ಈಗ ನಾನು ನಿಮ್ಮೆಲ್ಲ ದೇಶಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸಿದ್ದೇನೆ. ಅವನು ನನ್ನ ಸೇವಕನಾಗಿದ್ದಾನೆ. ಕಾಡುಪ್ರಾಣಿಗಳು ಸಹ ಅವನ ಆಜ್ಞೆಯನ್ನು ಪಾಲಿಸುವಂತೆ ಮಾಡುವೆನು. ಎಲ್ಲಾ ಜನಾಂಗಗಳು ನೆಬೂಕದ್ನೆಚ್ಚರನ, ಅವನ ಮಗನ ಮತ್ತು ಅವನ ಮೊಮ್ಮಗನ ಸೇವೆಮಾಡುವವು. ಆಮೇಲೆ ಬಾಬಿಲೋನನ್ನು ಸೋಲಿಸುವ ಸಮಯ ಬರುತ್ತದೆ. ಅನೇಕ ಜನಾಂಗಗಳು ಮತ್ತು ದೊಡ್ಡ ರಾಜರು ಬಾಬಿಲೋನನ್ನು ತಮ್ಮ ಸೇವಕನನ್ನಾಗಿ ಮಾಡಿಕೊಳ್ಳುವರು.

“‘ಆದರೆ ಈಗ ಕೆಲವು ಜನಾಂಗಗಳು ಅಥವಾ ರಾಜ್ಯಗಳು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಸೇವಿಸಲು ಒಪ್ಪಲಿಲ್ಲ. ಅವುಗಳು ಅವನ ನೊಗವನ್ನು ತಮ್ಮ ಕತ್ತಿನ ಮೇಲೆ ಇಟ್ಟುಕೊಳ್ಳಲು ಒಪ್ಪಲಿಲ್ಲ. ಆದ್ದರಿಂದ ನಾನು ಆ ಜನಾಂಗವನ್ನು ಖಡ್ಗ, ಹಸಿವು ಮತ್ತು ಭಯಂಕರ ವ್ಯಾಧಿಗಳಿಂದ ಶಿಕ್ಷಿಸುತ್ತೇನೆ, ಇದು ಯೆಹೋವನಿಂದ ಬಂದ ಸಂದೇಶ. ನಾನು ಆ ಜನಾಂಗವನ್ನು ನಾಶಗೊಳಿಸುವವರೆಗೂ ಹಾಗೆ ಮಾಡುವೆನು. ಅವನ ವಿರುದ್ಧ ಹೋರಾಡುವ ಜನಾಂಗವನ್ನು ನಾಶಮಾಡುವದಕ್ಕಾಗಿ ನಾನು ನೆಬೂಕದ್ನೆಚ್ಚರನನ್ನು ಉಪಯೋಗಿಸುತ್ತೇನೆ. ಆದ್ದರಿಂದ ನಿಮ್ಮ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ. ಮಾಟಮಾಂತ್ರಗಳನ್ನು ಬಳಸಿ ಭವಿಷ್ಯವನ್ನು ಹೇಳುವವರ ಮಾತುಗಳನ್ನು ಕೇಳಬೇಡಿರಿ. ಕನಸುಗಳ ಗೂಢಾರ್ಥವನ್ನು ಹೇಳುವೆವೆಂಬ ಜನರ ಮಾತುಗಳನ್ನು ಕೇಳಬೇಡಿರಿ. ಸತ್ತವರೊಡನೆ ಮಾತನಾಡುವ ಅಥವಾ ಮಾಟಮಂತ್ರ ಮಾಡುವ ಜನರ ಮಾತುಗಳನ್ನು ಕೇಳಬೇಡಿರಿ. ಅವರೆಲ್ಲರೂ, “ನೀವು ಬಾಬಿಲೋನಿನ ರಾಜನಿಗೆ ಗುಲಾಮರಾಗುವದಿಲ್ಲ” ಎಂದು ಹೇಳುವರು. 10 ಆದರೆ ಅವರು ನಿಮಗೆ ಹೇಳುವುದು ಸುಳ್ಳುಗಳೇ. ಅವರು ನಿಮ್ಮನ್ನು ನಿಮ್ಮ ದೇಶದಿಂದ ಬಹುದೂರ ತೆಗೆದುಕೊಂಡು ಹೋಗುವರು. ನಾನು ನಿಮ್ಮನ್ನು ನಿಮ್ಮ ದೇಶದಿಂದ ಬಲವಂತವಾಗಿ ಹೊರಗಟ್ಟುವೆನು. ನೀವು ಅನ್ಯ ದೇಶದಲ್ಲಿ ಸಾಯುವಿರಿ.

11 “‘ಆದರೆ ಬಾಬಿಲೋನ್ ರಾಜನ ನೊಗಕ್ಕೆ ತಮ್ಮ ಹೆಗಲನ್ನು ಕೊಡುವ ಮತ್ತು ಅವನ ಆಜ್ಞೆಯನ್ನು ಪಾಲಿಸುವ ಜನಾಂಗಗಳು ಬದುಕುವವು. ಆ ಜನಾಂಗಗಳವರು ತಮ್ಮ ದೇಶದಲ್ಲಿಯೇ ಇದ್ದುಕೊಂಡು ಬಾಬಿಲೋನಿನ ರಾಜನ ಸೇವೆ ಮಾಡುವ ಅವಕಾಶವನ್ನು ಮಾಡಿಕೊಡುತ್ತೇನೆ. ಆ ಜನಾಂಗಗಳ ಜನರು ತಮ್ಮ ದೇಶದಲ್ಲಿಯೇ ವ್ಯವಸಾಯ ಮಾಡಿಕೊಂಡಿರುವರು.’” ಇದು ಯೆಹೋವನ ನುಡಿ.

12 ನಾನು ಯೆಹೂದದ ರಾಜನಾದ ಚಿದ್ಕೀಯನಿಗೂ ಇದೇ ಸಂದೇಶವನ್ನು ಕೊಟ್ಟಿದ್ದೇನೆ. “ಚಿದ್ಕೀಯನೇ, ನೀನು ನಿನ್ನ ಹೆಗಲನ್ನು ಬಾಬಿಲೋನಿನ ರಾಜನ ನೊಗಕ್ಕೆ ಕೊಡಬೇಕು; ಅವನ ಆಜ್ಞಾಪಾಲನೆ ಮಾಡಬೇಕು. ಬಾಬಿಲೋನಿನ ರಾಜನ ಮತ್ತು ಅಲ್ಲಿಯ ಜನರ ಸೇವೆಮಾಡಿಕೊಂಡಿದ್ದರೆ ನೀನು ಬದುಕುವೆ. 13 ಬಾಬಿಲೋನಿನ ರಾಜನ ಸೇವೆಮಾಡಲು ಒಪ್ಪದಿದ್ದರೆ ನೀನು ಮತ್ತು ನಿನ್ನ ಜನರು ವೈರಿಗಳ ಖಡ್ಗದಿಂದಲೂ ಹಸಿವೆಯಿಂದಲೂ ಭಯಂಕರವಾದ ವ್ಯಾಧಿಗಳಿಂದಲೂ ಸಾಯುವಿರಿ. ಇದು ನೆರವೇರುತ್ತದೆಯೆಂದು ಯೆಹೋವನು ಹೇಳಿದ್ದಾನೆ. 14 ಆದರೆ ನೀವೆಂದಿಗೂ ಬಾಬಿಲೋನ್ ರಾಜನಿಗೆ ಗುಲಾಮರಾಗುವದಿಲ್ಲ ಎಂದು ಈ ಸುಳ್ಳುಪ್ರವಾದಿಗಳು ಹೇಳುತ್ತಿದ್ದಾರೆ.

“‘ಆ ಪ್ರವಾದಿಗಳ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಬೇಡಿ. ಅವರು ನಿಮಗೆ ಸುಳ್ಳುಪ್ರವಾದನೆ ಮಾಡುತ್ತಿದ್ದಾರೆ. 15 ನಾನು ಆ ಪ್ರವಾದಿಗಳನ್ನು ಕಳುಹಿಸಿಲ್ಲ. ಅವರು ಸುಳ್ಳು ಪ್ರವಾದನೆಗಳನ್ನು ಮಾಡುತ್ತಿದ್ದಾರೆ ಮತ್ತು ಅದು ನನ್ನ ಸಂದೇಶವೆಂದು ಹೇಳುತ್ತಲಿದ್ದಾರೆ. ನಾನು ಯೆಹೂದದ ಜನರಾದ ನಿಮ್ಮನ್ನು ದೂರ ಕಳುಹಿಸುತ್ತೇನೆ. ನೀವು ಸಾಯುವಿರಿ. ನಿಮಗೆ ಪ್ರವಾದನೆಯನ್ನು ಮಾಡುತ್ತಿರುವ ಆ ಪ್ರವಾದಿಗಳು ಸಹ ಸಾಯುತ್ತಾರೆ’” ಇದು ಯೆಹೋವನ ನುಡಿ.

16 ಆಗ ನಾನು (ಯೆರೆಮೀಯನು) ಯಾಜಕರಿಗೂ ಆ ಸಮಸ್ತ ಜನರಿಗೂ ಹೀಗೆ ಹೇಳಿದೆ: “ಯೆಹೋವನು ಹೇಳುತ್ತಾನೆ. ಆ ಸುಳ್ಳುಪ್ರವಾದಿಗಳು, ‘ಬಾಬಿಲೋನಿನವರು ಯೆಹೋವನ ಆಲಯದಿಂದ ಅನೇಕ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆ ವಸ್ತುಗಳನ್ನು ಬೇಗನೆ ಹಿಂದಕ್ಕೆ ತರಲಾಗುವುದು’ ಎಂದು ಹೇಳುತ್ತಿದ್ದಾರೆ. ಆ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿ. ಏಕೆಂದರೆ ಅವರು ನಿಮಗೆ ಸುಳ್ಳುಪ್ರವಾದನೆ ಮಾಡುತ್ತಿದ್ದಾರೆ. 17 ಆ ಪ್ರವಾದಿಗಳ ಮಾತನ್ನು ಕೇಳಬೇಡಿ. ಬಾಬಿಲೋನಿನ ರಾಜನ ಸೇವೆಮಾಡಿರಿ. ದಂಡನೆಗಳನ್ನು ಸ್ವಿಕರಿಸಿರಿ, ಆಗ ನೀವು ಬದುಕುವಿರಿ. ನಿಷ್ಕಾರಣವಾಗಿ ಈ ಜೆರುಸಲೇಮ್ ನಗರವು ಹಾಳಾಗಬಾರದು. 18 ಆ ಜನರು ಯೆಹೋವನ ಸಂದೇಶವನ್ನು ತಂದ ಪ್ರವಾದಿಗಳಾಗಿದ್ದರೆ, ಅವರು ಪ್ರಾರ್ಥನೆ ಸಲ್ಲಿಸಲಿ. ಇನ್ನೂ ಯೆಹೋವನ ಆಲಯದಲ್ಲಿರುವ ವಸ್ತುಗಳ ಬಗ್ಗೆ ಅವರು ಪ್ರಾರ್ಥನೆ ಸಲ್ಲಿಸಲಿ. ಇನ್ನೂ ರಾಜನ ಅರಮನೆಯಲ್ಲಿರುವ ವಸ್ತುಗಳ ಬಗ್ಗೆ ಅವರು ಪ್ರಾರ್ಥನೆ ಸಲ್ಲಿಸಲಿ. ಇನ್ನೂ ಜೆರುಸಲೇಮಿನಲ್ಲಿರುವ ಪದಾರ್ಥಗಳ ಬಗ್ಗೆ ಅವರು ಪ್ರಾರ್ಥನೆ ಸಲ್ಲಿಸಲಿ. ಆ ವಸ್ತುಗಳನ್ನೆಲ್ಲ ಬಾಬಿಲೋನಿಗೆ ತೆಗೆದುಕೊಂಡು ಹೋಗಬಾರದೆಂದು ಅವರು ಪ್ರಾರ್ಥನೆ ಸಲ್ಲಿಸಲಿ.

19 “ಸರ್ವಶಕ್ತನಾದ ಯೆಹೋವನು ಜೆರುಸಲೇಮಿನಲ್ಲಿ ಇನ್ನೂ ಉಳಿದ ವಸ್ತುಗಳ ಬಗ್ಗೆ ಹೀಗೆ ಹೇಳುತ್ತಾನೆ. ಯೆಹೋವನ ಆಲಯದಲ್ಲಿ ಕಂಬಗಳಿವೆ, ಕಂಚಿನ ಸಾಗರವಿದೆ, ಪೀಠಗಳಿವೆ ಮತ್ತು ಇತರ ವಸ್ತುಗಳಿವೆ. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಆ ವಸ್ತುಗಳನ್ನು ಜೆರುಸಲೇಮಿನಲ್ಲಿಯೇ ಬಿಟ್ಟುಹೋದನು. 20 ನೆಬೂಕದ್ನೆಚ್ಚರನು ಯೆಹೂದದ ರಾಜನಾದ ಯೆಹೋಯಾಕೀನನನ್ನು ಸೆರೆಯಾಳಾಗಿ ತೆಗೆದುಕೊಂಡು ಹೋಗುವಾಗ ಆ ವಸ್ತುಗಳನ್ನು ತೆಗೆದುಕೊಂಡು ಹೋಗಲಿಲ್ಲ. ಯೆಹೋಯಾಕೀನನು ಯೆಹೋಯಾಕೀಮನ ಮಗನಾಗಿದ್ದನು. ನೆಬೂಕದ್ನೆಚ್ಚರನು ಯೆಹೂದ ಮತ್ತು ಜೆರುಸಲೇಮಿನಿಂದ ಬೇರೆ ಪ್ರಮುಖ ಜನರನ್ನು ಸಹ ತೆಗೆದುಕೊಂಡು ಹೋದನು. 21 ಸರ್ವಶಕ್ತನೂ ಇಸ್ರೇಲರ ದೇವರೂ ಆಗಿರುವ ಯೆಹೋವನ ಆಲಯದಲ್ಲಿ ಇನ್ನೂ ಉಳಿದ ವಸ್ತುಗಳ ಬಗ್ಗೆಯೂ ರಾಜನ ಅರಮನೆಯಲ್ಲಿ ಮತ್ತು ಜೆರುಸಲೇಮಿನಲ್ಲಿ ಇನ್ನೂ ಉಳಿದಿರುವ ವಸ್ತುಗಳ ಬಗ್ಗೆಯೂ ಹೀಗೆನ್ನುತ್ತಾನೆ: ‘ಆ ವಸ್ತುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಗುವುದು. 22 ಆ ವಸ್ತುಗಳು ಬಾಬಿಲೋನಿಗೆ ಒಯ್ಯಲ್ಪಟ್ಟು ನಾನು ಅವುಗಳನ್ನು ಅಲ್ಲಿಂದ ತರುವ ದಿವಸಗಳವರೆಗೆ ಅಲ್ಲಿಯೇ ಇರುವವು, ಆಮೇಲೆ ನಾನು ಆ ವಸ್ತುಗಳನ್ನು ತರುವೆನು. ನಾನು ಆ ವಸ್ತುಗಳನ್ನು ಮತ್ತೆ ಈ ಸ್ಥಳದಲ್ಲಿ ಇಡುವೆನು.’” ಇದು ಯೆಹೋವನ ನುಡಿ.

2 ತಿಮೊಥೆಯನಿಗೆ 2:1-7

ಕ್ರಿಸ್ತ ಯೇಸುವಿನ ನಿಷ್ಠಾವಂತ ಸೈನಿಕ

ಕ್ರಿಸ್ತ ಯೇಸುವಿನ ನಿಷ್ಠಾವಂತ ಸೈನಿಕನಾಗಿರುವ ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಬಲ ಹೊಂದಿದವನಾಗು. ನಾನು ಉಪದೇಶಿಸಿದ ಸಂಗತಿಗಳನ್ನು ನೀನು ಕೇಳಿರುವೆ. ಅವುಗಳನ್ನು ಇತರ ಅನೇಕ ಜನರೂ ಕೇಳಿದ್ದಾರೆ. ನೀನು ಆ ಸಂಗತಿಗಳನ್ನು ಉಪದೇಶಿಸಬೇಕು. ನಿನಗೆ ನಂಬಿಗಸ್ತರಾದ ಕೆಲವರ ವಶಕ್ಕೆ ಆ ಉಪದೇಶಗಳನ್ನು ಕೊಡು. ಆಗ ಅವರು ಆ ಸಂಗತಿಗಳನ್ನು ಇತರರಿಗೆ ಉಪದೇಶಿಸಲು ಸಾಧ್ಯವಾಗುತ್ತದೆ. ನಮಗಿರುವ ತೊಂದರೆಗಳಲ್ಲಿ ನೀನೂ ಪಾಲುಗಾರನಾಗು. ಕ್ರಿಸ್ತ ಯೇಸುವಿನ ನಿಜವಾದ ಸೈನಿಕನಂತೆ ಆ ತೊಂದರೆಗಳನ್ನು ಸ್ವೀಕರಿಸು. ಸೈನಿಕನು ತನ್ನ ಸೈನ್ಯಾಧಿಕಾರಿಯನ್ನು ಮೆಚ್ಚಿಸಲು ಇಷ್ಟಪಡುತ್ತಾನೆ. ಆದ್ದರಿಂದ ಆ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದಂತೆ ಎಚ್ಚರಿಕೆಯಿಂದಿರುವನು. ಓಟದ ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ, ಓಟಗಾರನು ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಕಷ್ಟಪಟ್ಟು ಕೆಲಸಮಾಡುವ ರೈತನಿಗೆ ಬೆಳೆಯ ಪ್ರಥಮ ಪಾಲು ದೊರೆಯಬೇಕು. ನಾನು ಹೇಳುತ್ತಿರುವ ಈ ಸಂಗತಿಗಳನ್ನು ಕುರಿತು ಆಲೋಚಿಸು. ಈ ಸಂಗತಿಗಳನ್ನೆಲ್ಲ ಅರ್ಥಮಾಡಿಕೊಳ್ಳುವ ವಿವೇಕವನ್ನು ಪ್ರಭುವು ನಿನಗೆ ದಯಪಾಲಿಸುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International