Revised Common Lectionary (Semicontinuous)
ರಚನೆಗಾರ: ಆಸಾಫ.
50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
2 ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
3 ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
ಆತನ ಸುತ್ತಲೂ ಬಿರುಗಾಳಿ ಬೀಸುವುದು.
4 ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
5 ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.
6 ದೇವರೊಬ್ಬನೇ ನ್ಯಾಯಾಧಿಪತಿ;
ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.
7 ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
ದೇವರಾದ ನಾನೇ ನಿಮ್ಮ ದೇವರು!
8 ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.
22 ದೇವರನ್ನು ಮರೆತುಬಿಟ್ಟವರೇ,
ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”
18 ದುಷ್ಟತನವು ಒಂದು ಚಿಕ್ಕ ಬೆಂಕಿಯಂತಿದೆ. ಮೊಟ್ಟ ಮೊದಲು ಬೆಂಕಿಯು ಹಣಜಿಗಳನ್ನು ಮತ್ತು ಮುಳ್ಳುಗಿಡಗಳನ್ನು ಸುಡುವುದು. ಅನಂತರ ಬೆಂಕಿಯು ಕಾಡಿನ ದೊಡ್ಡ ಪೊದೆಗಳನ್ನು ಸುಡುವುದು. ಕೊನೆಗದು ದೊಡ್ಡ ಗಾತ್ರದ ಬೆಂಕಿಯಾಗಿ ಎಲ್ಲವನ್ನೂ ಸುಟ್ಟುಬಿಟ್ಟು ಎಲ್ಲವೂ ಹೊಗೆಯಾಗಿ ಪರಿಣಮಿಸುವದು.
19 ಸರ್ವಶಕ್ತನಾದ ಯೆಹೋವನು ಕೋಪಗೊಂಡಿರುವುದರಿಂದ ದೇಶವೆಲ್ಲಾ ಸುಟ್ಟುಹೋಗುವದು. ಆ ಬೆಂಕಿಯಲ್ಲಿ ಜನರೆಲ್ಲಾ ಸುಟ್ಟುಹೋಗುವರು. ಯಾರೂ ತನ್ನ ಸಹೋದರರನ್ನು ರಕ್ಷಿಸಲು ಪ್ರಯತ್ನಿಸುವದಿಲ್ಲ. 20 ಜನರು ತಮ್ಮ ಬಲಗಡೆಯಲ್ಲಿರುವದನ್ನು ಕಿತ್ತುಕೊಳ್ಳುವರು. ಆದರೆ ಅದು ಅವರ ಹಸಿವೆಯನ್ನು ನೀಗುವುದಿಲ್ಲ. ಜನರು ಎಡಬದಿಯಲ್ಲಿರುವದನ್ನು ತಿನ್ನುವರು; ಆದರೆ ಅವರ ಹೊಟ್ಟೆತುಂಬುವದಿಲ್ಲ. ಆ ಬಳಿಕ ಪ್ರತಿಯೊಬ್ಬನು ತನ್ನ ಶರೀರವನ್ನೇ ತಿನ್ನಲು ಪ್ರಾರಂಭಿಸುವನು. 21 ಇದರರ್ಥವೇನೆಂದರೆ ಮನಸ್ಸೆಯು ಎಫ್ರಾಯೀಮನೊಡನೆ ಯುದ್ಧ ಮಾಡುವನು ಮತ್ತು ಎಫ್ರಾಯೀಮನು ಮನಸ್ಸೆಯೊಂದಿಗೆ ಯುದ್ಧಮಾಡುವನು. ಆಮೇಲೆ ಅವರಿಬ್ಬರೂ ಸೇರಿ ಯೆಹೂದದೊಂದಿಗೆ ಯುದ್ಧ ಮಾಡುವರು.
ಯೆಹೋವನು ಇಸ್ರೇಲರ ಮೇಲೆ ಇನ್ನೂ ಕೋಪದಿಂದಿದ್ದಾನೆ; ತನ್ನ ಜನರನ್ನು ಇನ್ನೂ ಶಿಕ್ಷಿಸಲು ಸಿದ್ಧನಾಗಿದ್ದಾನೆ.
10 ಕೆಟ್ಟ ನಿಯಮವನ್ನು ಬರೆಯುವ ನ್ಯಾಯಶಾಸ್ತ್ರಿಗಳನ್ನು ನೋಡಿರಿ. ಆ ನ್ಯಾಯಶಾಸ್ತ್ರಿಗಳು ಜನರಿಗೆ ಕಷ್ಟವಾಗಿರುವ ನಿಯಮಗಳನ್ನೇ ಮಾಡುತ್ತಾರೆ. 2 ಅವರು ಬಡವರಿಗೆ ನ್ಯಾಯವಂತರಾಗಿರುವುದಿಲ್ಲ. ಅವರು ಬಡಜನರ ಹಕ್ಕನ್ನು ತೆಗೆದುಬಿಡುವರು. ಜನರು ವಿಧವೆಯರಿಂದಲೂ ಅನಾಥರಿಂದಲೂ ಹಣ ಕಿತ್ತುಕೊಳ್ಳುವಂತೆ ಮಾಡುವರು.
3 ನ್ಯಾಯಶಾಸ್ತ್ರಿಗಳೇ, ನಿಮ್ಮ ಕಾರ್ಯಗಳಿಗೆ ನೀವೇ ಉತ್ತರ ಕೊಡಬೇಕು. ಆಗ ನೀವು ಏನು ಮಾಡುವಿರಿ? ದೂರದೇಶದಿಂದ ನಿಮ್ಮ ನಾಶನವು ಬರುತ್ತಲಿದೆ. ಸಹಾಯಕ್ಕಾಗಿ ಎಲ್ಲಿಗೆ ಓಡುವಿರಿ? ನಿಮ್ಮ ಐಶ್ವರ್ಯವೂ ನಿಮ್ಮ ಧನರಾಶಿಯೂ ನಿಮ್ಮನ್ನು ರಕ್ಷಿಸಲಾರವು. 4 ನೀವು ಕೈದಿಗಳಂತೆ ತಲೆತಗ್ಗಿಸುವಿರಿ, ಸತ್ತಹೆಣಗಳಂತೆ ನೆಲದ ಮೇಲೆ ಬೀಳುವಿರಿ. ಆದರೆ ಅದರಿಂದ ನಿಮಗೆ ಪ್ರಯೋಜನವಾಗದು. ದೇವರು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ. ನಿಮ್ಮನ್ನು ಇನ್ನೂ ಶಿಕ್ಷಿಸಲು ಸಿದ್ಧನಾಗಿದ್ದಾನೆ.
ಸ್ತೆಫನನ ಪ್ರಸಂಗ
7 ಪ್ರಧಾನಯಾಜಕನು ಸ್ತೆಫನನಿಗೆ, “ಈ ಸಂಗತಿಗಳು ನಿಜವೋ?” ಎಂದು ಕೇಳಿದನು. 2 ಪ್ರತ್ಯುತ್ತರವಾಗಿ ಅವನು ಹೀಗೆಂದನು: “ನನ್ನ ಯೆಹೂದ್ಯತಂದೆಗಳೇ, ಸಹೋದರರೇ, ನನಗೆ ಕಿವಿಗೊಡಿರಿ. ನಮ್ಮ ಪಿತೃವಾದ ಅಬ್ರಹಾಮನಿಗೆ ನಮ್ಮ ಪ್ರಭಾವಸ್ವರೂಪನಾದ ದೇವರು ಕಾಣಸಿಕೊಂಡನು. ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪೊಟೇಮಿಯದಲ್ಲಿದ್ದನು. 3 ದೇವರು ಅಬ್ರಹಾಮನಿಗೆ, ‘ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು’(A) ಎಂದು ಹೇಳಿದನು.
4 “ಆದ್ದರಿಂದ ಅಬ್ರಹಾಮನು ಖಾಲ್ದೆಯ[a] ದೇಶವನ್ನು ಬಿಟ್ಟು ಹಾರಾನಿನಲ್ಲಿ ವಾಸಿಸಲು ಹೋದನು. ಅಬ್ರಹಾಮನ ತಂದೆ ಸತ್ತಮೇಲೆ ದೇವರು ಅವನನ್ನು ಈಗ ನೀವು ವಾಸಿಸುತ್ತಿರುವ ಈ ಸ್ಥಳಕ್ಕೆ ಕಳುಹಿಸಿದನು. 5 ಆದರೆ ದೇವರು ಅಬ್ರಹಾಮನಿಗೆ ಇಲ್ಲಿ ಯಾವ ಭೂಮಿಯನ್ನೂ ಕೊಡಲಿಲ್ಲ. ದೇವರು ಅವನಿಗೆ ಒಂದು ಅಡಿ ಸ್ಥಳವನ್ನೂ ಕೊಡಲಿಲ್ಲ. ಆದರೆ ಮುಂದಿನ ಕಾಲದಲ್ಲಿ ಈ ದೇಶವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವುದಾಗಿ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದನು. (ಅಬ್ರಹಾಮನಿಗೆ ಮಕ್ಕಳೇ ಇಲ್ಲದಿದ್ದಾಗ ಇದಾಯಿತು.)
6 “ದೇವರು ಅವನಿಗೆ, ‘ನಿನ್ನ ಸಂತಾನದವರು ಬೇರೊಂದು ದೇಶದಲ್ಲಿ ವಾಸಿಸುವರು. ಅವರು ಪರದೇಶಿಗಳಾಗಿರುವರು. ಅಲ್ಲಿಯ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಂಡು ನಾನೂರು ವರ್ಷಗಳವರೆಗೆ ಅವರಿಗೆ ಕೇಡುಗಳನ್ನು ಮಾಡುವರು. 7 ಆದರೆ ಅವರನ್ನು ಗಲಾಮರನ್ನಾಗಿ ಮಾಡಿಕೊಂಡ ಜನಾಂಗವನ್ನು ನಾನು ದಂಡಿಸುವೆನು’(B) ಎಂದು ಹೇಳಿದನು. ಇದಲ್ಲದೆ ದೇವರು ಅವನಿಗೆ, ‘ಆ ಬಳಿಕ ನಿನ್ನ ಜನರು ಆ ದೇಶದಿಂದ ಹೊರಗೆ ಬಂದು ನನ್ನನ್ನು ಈ ಸ್ಥಳದಲ್ಲಿ ಆರಾಧಿಸುವರು’(C) ಎಂದು ಹೇಳಿದನು.
8 “ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಆ ಒಡಂಬಡಿಕೆಯ ಗುರುತೇ ಸುನ್ನತಿ. ಹೀಗಿರಲು ಅಬ್ರಹಾಮನು ಒಬ್ಬ ಮಗನನ್ನು ಪಡೆದಾಗ, ಆ ಮಗನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು. ಅವನ ಮಗನ ಹೆಸರು ಇಸಾಕ. ಇಸಾಕನು ಸಹ ತನ್ನ ಮಗನಾದ ಯಾಕೋಬನಿಗೆ ಸುನ್ನತಿ ಮಾಡಿದನು. ಮತ್ತು ಯಾಕೋಬನು ತನ್ನ ಗಂಡುಮಕ್ಕಳಿಗೆಲ್ಲಾ ಸುನ್ನತಿ ಮಾಡಿದನು. ಈ ಗಂಡುಮಕ್ಕಳೇ ಮುಂದೆ ಹನ್ನೆರಡು ಮಂದಿ ಪಿತೃಗಳಾದರು.
Kannada Holy Bible: Easy-to-Read Version. All rights reserved. © 1997 Bible League International