Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 6

ರಚನೆಗಾರ: ದಾವೀದ.

ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
    ರೋಷದಿಂದ ನನ್ನನ್ನು ದಂಡಿಸಬೇಡ.
ಯೆಹೋವನೇ, ನನ್ನನ್ನು ಕನಿಕರಿಸು!
    ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
ನನ್ನ ಇಡೀ ದೇಹ ನಡುಗುತ್ತಿದೆ.
    ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
    ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
    ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
    ಆದ್ದರಿಂದ ನನ್ನನ್ನು ಗುಣಪಡಿಸು.

ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
    ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
    ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
    ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.

ದುಷ್ಟರೇ, ತೊಲಗಿಹೋಗಿರಿ.
    ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
    ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.

10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
    ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.

2 ರಾಜರುಗಳು 5:15-19

15 ನಾಮಾನನು ತನ್ನ ಗುಂಪಿನೊಂದಿಗೆ ದೇವಮನುಷ್ಯನ ಹತ್ತಿರಕ್ಕೆ ಹಿಂದಿರುಗಿ ಬಂದನು. ಅವನು ಎಲೀಷನ ಮುಂದೆ ನಿಂತು, “ನೋಡಿ, ಇಸ್ರೇಲಿನಲ್ಲಿಯೇ ಹೊರತು ಭೂಮಂಡಲದ ಬೇರೆಲ್ಲಿಯೂ ದೇವರು ಇಲ್ಲವೇ ಇಲ್ಲ ಎಂಬುದು ಈಗ ತಾನೇ ನನಗೆ ತಿಳಿಯಿತು! ಈಗ ದಯಮಾಡಿ ನನ್ನ ಕಾಣಿಕೆಯನ್ನು ಸ್ವೀಕರಿಸಿ!” ಎಂದು ಹೇಳಿದನು.

16 ಆದರೆ ಎಲೀಷನು, “ನಾನು ಯೆಹೋವನ ಸೇವೆ ಮಾಡುತ್ತೇನೆ. ಯೆಹೋವನಾಣೆಯಾಗಿ ಪ್ರಮಾಣ ಮಾಡುತ್ತೇನೆ, ನಾನು ಯಾವ ಕಾಣಿಕೆಯನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದನು.

ಎಲೀಷನು ಕಾಣಿಕೆಯನ್ನು ಸ್ವೀಕರಿಸುವಂತೆ ನಾಮಾನನು ಬಹಳ ಪ್ರಯತ್ನಿಸಿದನು. ಆದರೆ ಎಲೀಷನು ನಿರಾಕರಿಸಿದನು. 17 ಆಗ ನಾಮಾನನು, “ನೀನು ಈ ಕಾಣಿಕೆಯನ್ನು ಸ್ವೀಕರಿಸದಿದ್ದರೆ, ಕೊನೆಯಪಕ್ಷ ನನಗಾಗಿ ಈ ಕಾರ್ಯವನ್ನು ಮಾಡು. ನನ್ನ ಎರಡು ಹೇಸರಕತ್ತೆಗಳ ಮೇಲಿನ ಬುಟ್ಟಿಗಳು ತುಂಬುವಷ್ಟು ಇಸ್ರೇಲಿನ ಮಣ್ಣನ್ನು ನನಗೆ ಕೊಡಿಸಬೇಕೆಂದು ಬೇಡುತ್ತೇನೆ. ಏಕೆಂದರೆ ಇತರ ದೇವರುಗಳಿಗೆ ನಾನು ಮತ್ತೆ ಎಂದೆಂದಿಗೂ ಸರ್ವಾಂಗಹೋಮವನ್ನಾಗಲಿ ಯಜ್ಞಗಳನ್ನಾಗಲಿ ಅರ್ಪಿಸುವುದಿಲ್ಲ. ನಾನು ಯೆಹೋವನಿಗೆ ಮಾತ್ರ ಯಜ್ಞಗಳನ್ನು ಅರ್ಪಿಸುತ್ತೇನೆ! 18 ಆದರೆ ಈ ವಿಷಯದಲ್ಲಿ ಯೆಹೋವನು ನನ್ನನ್ನು ಕ್ಷಮಿಸಲಿ. ನನ್ನ ಒಡೆಯನಾದ ಅರಾಮ್ಯರ ರಾಜನು ಸುಳ್ಳುದೇವರಾದ ರಿಮ್ಮೋನನನ್ನು ಪೂಜಿಸಲು ಅವನ ಆಲಯಕ್ಕೆ ಹೋಗಿ ನನ್ನ ಕೈಹಿಡಿದು ಆ ದೇವರಿಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಬೇಕಾಗುವುದು. ಈ ಒಂದು ವಿಷಯದಲ್ಲಿ ಯೆಹೋವನು ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು” ಎಂದು ಹೇಳಿದನು.

19 ಆಗ ಎಲೀಷನು, “ಸಮಾಧಾನದಿಂದ ಹೋಗು” ಎಂದನು.

ನಾಮಾನನು ಎಲೀಷನ ಬಳಿಯಿಂದ ಸ್ವಲ್ಪದೂರ ಹೋದನು.

ಅಪೊಸ್ತಲರ ಕಾರ್ಯಗಳು 19:21-27

ಪ್ರಯಾಣಕ್ಕೆ ಪೌಲನ ಯೋಜನೆ

21 ಈ ಘಟನೆಗಳ ನಂತರ ಪೌಲನು ಮಕೆದೋನಿಯ ಮತ್ತು ಅಖಾಯ ದೇಶಗಳ ಮೂಲಕ ಜೆರುಸಲೇಮಿಗೆ ಹೋಗಲು ಯೋಜನೆ ಮಾಡಿದನು. “ನಾನು ಜೆರುಸಲೇಮನ್ನು ಸಂದರ್ಶಿಸಿದ ಮೇಲೆ ರೋಮ್ ನಗರವನ್ನು ಸಹ ಸಂದರ್ಶಿಸಬೇಕು” ಎಂದು ಪೌಲನು ಯೋಚಿಸಿಕೊಂಡನು. 22 ತಿಮೊಥೆ ಮತ್ತು ಎರಸ್ತ ಎಂಬುವರು ಪೌಲನ ಸಹಾಯಕರಾಗಿದ್ದರು. ಪೌಲನು ಅವರನ್ನು ಮಕೆದೋನಿಯ ದೇಶಕ್ಕೆ ಮುಂಚಿತವಾಗಿಯೇ ಕಳುಹಿಸಿದನು. ಪೌಲನು ಇನ್ನೂ ಸ್ವಲ್ಪಕಾಲ ಏಷ್ಯಾದಲ್ಲಿ ತಂಗಿದನು.

ಎಫೆಸದಲ್ಲಿ ಗಲಭೆ

23 ಆದರೆ ಆ ಸಮಯದಲ್ಲಿ ದೇವರ ಮಾರ್ಗದ ಬಗ್ಗೆ ತೀವ್ರ ಗಲಭೆಯೊಂದು ಎಫೆಸದಲ್ಲಿ ಉಂಟಾಯಿತು. ಅದು ನಡೆದ ರೀತಿ ಇಂತಿದೆ: 24 ಅಲ್ಲಿ ದೇಮೇತ್ರಿಯನೆಂಬ ಒಬ್ಬ ವ್ಯಕ್ತಿಯಿದ್ದನು. ಅವನು ಅಕ್ಕಸಾಲಿಗನಾಗಿದ್ದನು. ಅರ್ತೆಮಿ[a] ದೇವತೆಯ ಗುಡಿಯಾಕಾರದಲ್ಲಿ ಬೆಳ್ಳಿಯಿಂದ ಚಿಕ್ಕಚಿಕ್ಕ ಗುಡಿಗಳನ್ನು ಅವನು ತಯಾರಿಸುತ್ತಿದ್ದನು. ಈ ಕಸುಬನ್ನು ಮಾಡುತ್ತಿದ್ದ ಜನರು ಬಹಳವಾಗಿ ಹಣ ಸಂಪಾದಿಸಿದರು.

25 ದೇಮೇತ್ರಿಯನು ಈ ಜನರನ್ನು ಮತ್ತು ಇದೇ ರೀತಿಯ ಕಸುಬನ್ನು ಮಾಡುತ್ತಿದ್ದ ಇತರ ಜನರನ್ನು ಸಭೆಸೇರಿಸಿ ಅವರಿಗೆ, “ಜನರೇ, ನಮ್ಮ ಈ ಕಸುಬಿನಿಂದ ನಾವು ಬಹಳ ಹಣವನ್ನು ಗಳಿಸುತ್ತಿದ್ದೇವೆ ಎಂಬುದು ನಿಮಗೆ ಗೊತ್ತೇ ಇದೆ. 26 ಆದರೆ ಪೌಲ ಎಂಬುವನು ಏನು ಮಾಡುತ್ತಿದ್ದಾನೆಂಬುದನ್ನು ನೋಡಿರಿ! ಅವನು ಏನು ಹೇಳುತ್ತಿದ್ದಾನೆಂಬುದನ್ನು ಕೇಳಿರಿ! ಪೌಲನು ಅನೇಕ ಜನರ ಮೇಲೆ ಪ್ರಭಾವಬೀರಿ ಅವರನ್ನು ಪರಿವರ್ತಿಸಿದ್ದಾನೆ. ಅವನು ಎಫೆಸದಲ್ಲಿಯೂ ಏಷ್ಯಾ ದೇಶದ ಎಲ್ಲಾ ಕಡೆಗಳಲ್ಲಿಯೂ ಹೀಗೆಯೇ ಮಾಡಿದ್ದಾನೆ. ಮನುಷ್ಯರು ತಯಾರಿಸುವ ದೇವರುಗಳು ನಿಜವಾದ ದೇವರುಗಳಲ್ಲ ಎಂದು ಹೇಳುತ್ತಿದ್ದಾನೆ. 27 ಇದರಿಂದಾಗಿ ಜನರು ನಮ್ಮ ಕೆಲಸದ ವಿರುದ್ಧ ರೊಚ್ಚಿಗೇಳಬಹುದು. ಅಷ್ಟೇ ಅಲ್ಲ, ಮಹಾದೇವತೆಯಾದ ಅರ್ತೆಮಿಯ ಗುಡಿಯನ್ನು ಜನರು ಕಡೆಗಣಿಸುವ ಸಾಧ್ಯತೆಯೂ ಇದೆ. ಆಗ, ಏಷ್ಯಾದಲ್ಲಿ ಮತ್ತು ಇಡೀ ಪ್ರಪಂಚದಲ್ಲಿ ಪೂಜಿಸಲ್ಪಡುತ್ತಿರುವ ಅರ್ತೆಮಿಯ ದೇವತೆಯ ವೈಭವ ಅಳಿದುಹೋಗುವುದು” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International