Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 83

ಸ್ತುತಿಗೀತೆ. ರಚನೆಗಾರ: ಆಸಾಫ.

83 ದೇವರೇ, ಸುಮ್ಮನಿರಬೇಡ!
    ನಿನ್ನ ಕಣ್ಣುಗಳನ್ನು ಮುಚ್ಚಿಕೊಳ್ಳಬೇಡ.
    ದೇವರೇ, ದಯವಿಟ್ಟು ಮಾತನಾಡು.
ದೇವರೇ, ನಿನ್ನ ಶತ್ರುಗಳು ನಿನಗೆ ವಿರೋಧವಾಗಿ ಸಂಚು ಮಾಡುತ್ತಿದ್ದಾರೆ.
    ಬಹುಬೇಗನೆ ಅವರು ಆಕ್ರಮಣ ಮಾಡಲಿದ್ದಾರೆ.
ನಿನ್ನ ಜನರಿಗೆ ವಿರೋಧವಾಗಿ ರಹಸ್ಯ ಯೋಜನೆಗಳನ್ನು ಮಾಡುತ್ತಿದ್ದಾರೆ.
    ನಿನ್ನ ಪ್ರಿಯರ ವಿರೋಧವಾಗಿ ಅವರು ಸಂಚು ಮಾಡುತ್ತಿದ್ದಾರೆ.
ಅವರು ಹೀಗೆಂದುಕೊಳ್ಳುತ್ತಿದ್ದಾರೆ: “ಬನ್ನಿರಿ, ಅವರನ್ನು ಸಂಪೂರ್ಣವಾಗಿ ನಾಶಮಾಡೋಣ.
    ಆಗ ‘ಇಸ್ರೇಲ್’ ಎಂಬ ಹೆಸರೇ ಅಳಿದುಹೋಗುವುದು.”
ನಿನಗೂ ನೀನು ನಮ್ಮೊಂದಿಗೆ ಮಾಡಿಕೊಂಡ ಒಪ್ಪಂದಕ್ಕೂ
    ವಿರೋಧವಾಗಿ ಅವರೆಲ್ಲರೂ ಒಂದು ಗೂಡಿದ್ದಾರೆ.
6-7 ಅವರು ಯಾರೆಂದರೆ: ಎದೋಮ್ಯರು, ಇಷ್ಮಾಯೇಲ್ಯರು, ಮೋವಾಬ್ಯರು ಮತ್ತು ಹಗ್ರೀಯ ಸಂತತಿಯವರು,
    ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು,
    ಫಿಲಿಷ್ಟಿಯರು ಮತ್ತು ತೂರ್ ಸಂಸ್ಥಾನದವರು.
    ಇವರೆಲ್ಲರೂ ನಮಗೆ ವಿರೋಧವಾಗಿ ಸೇರಿಬಂದಿದ್ದಾರೆ.
ಅಶ್ಶೂರ್ಯದವರು ಸಹ ಅವರೊಡನೆ ಸೇರಿಕೊಂಡು
    ಲೋಟನ ಸಂತತಿಯವರನ್ನು ಪ್ರಬಲರನ್ನಾಗಿ ಮಾಡಿದ್ದಾರೆ.

ನೀನು ಮಿದ್ಯಾನ್ಯರನ್ನೂ ಕೀಷೋನ್ ನದಿಯ ಸಮೀಪದಲ್ಲಿ
    ಸೀಸೆರನನ್ನೂ ಯಾಬೀನನನ್ನೂ ಸೋಲಿಸಿದಂತೆ ಅವರನ್ನು ಸೋಲಿಸು.
10 ನೀನು ಅವರನ್ನು ಎಂದೋರಿನಲ್ಲಿ ಸೋಲಿಸಿದೆ.
    ಅವರ ದೇಹಗಳು ನೆಲದ ಮೇಲೆ ಕೊಳೆತುಹೋದವು.
11 ದೇವರೇ, ಶತ್ರುಗಳ ನಾಯಕರುಗಳನ್ನು ಸೋಲಿಸು.
ನೀನು ಓರೇಬ್ ಮತ್ತು ಜೇಬ್ ಪ್ರಾಂತ್ಯಗಳಿಗೆ ಮಾಡಿದಂತೆಯೇ ಅವರಿಗೆ ಮಾಡು.
    ನೀನು ಜೇಬಹ ಮತ್ತು ಚಲ್ಮುನ್ನ ಪ್ರಾಂತ್ಯಗಳಿಗೆ ಮಾಡಿದಂತೆಯೇ ಅವರಿಗೆ ಮಾಡು.
12 ನನ್ನ ದೇವರೇ, ಅವರು ನಿನ್ನ ನಾಡಿನಿಂದ ನಮ್ಮನ್ನು ಹೊರಗಟ್ಟಬೇಕೆಂದಿದ್ದರು.
13 ಗಾಳಿಗೆ ತೂರಿಹೋಗುವ ಮೊಟಕುಬೇರಿನ ಕಳೆಯಂತೆ ಅವರನ್ನು ಮಾಡು.
    ಗಾಳಿಯು ಹೊಟ್ಟನ್ನು ಚದರಿಸುವಂತೆ ಅವರನ್ನು ಚದರಿಸು.
14 ಕಾಡನ್ನು ನಾಶಮಾಡುವ ಬೆಂಕಿಯಂತೆಯೂ
    ಬೆಟ್ಟಗಳನ್ನು ಸುಟ್ಟುಹಾಕುವ ಅಗ್ನಿಜ್ವಾಲೆಯಂತೆಯೂ ಅವರನ್ನು ನಾಶಮಾಡು.
15 ಬಿರುಗಾಳಿಯಿಂದ ಕೊಚ್ಚಿಕೊಂಡು ಹೋಗುವ ಧೂಳಿನಂತೆ ಅವರನ್ನು ಬೆನ್ನಟ್ಟಿಹೋಗು.
    ಸುಂಟರ ಗಾಳಿಯಂತೆ ಅವರನ್ನು ನಡುಗಿಸು.
16 ಯೆಹೋವನೇ, ತಾವು ನಿಜವಾಗಿಯೂ ಬಲಹೀನರೆಂಬುದನ್ನು ಅವರು ಕಲಿತುಕೊಳ್ಳುವಂತೆ ಮಾಡು;
    ಆಗ ಅವರು ನಿನ್ನ ಹೆಸರನ್ನು ಆರಾಧಿಸಬೇಕೆನ್ನುವರು.
17 ಅವರನ್ನು ಭಯವೂ ನಾಚಿಕೆಯೂ ಕವಿದುಕೊಂಡೇ ಇರಲಿ.
    ಅವರು ಅವಮಾನಗೊಂಡು ನಾಶವಾಗಲಿ.
18 ಆಗ ಅವರು ನೀನೊಬ್ಬನೇ ದೇವರೆಂದೂ
    ನಿನ್ನ ಹೆಸರು ಯೆಹೋವನೆಂದೂ ತಿಳಿದುಕೊಳ್ಳುವರು.
ಭೂಲೋಕಕ್ಕೆಲ್ಲಾ ಮಹೋನ್ನತನಾದ ದೇವರೊಬ್ಬನೇ
    ದೇವರೆಂದು ಅವರು ಅರಿತುಕೊಳ್ಳುವರು.

2 ಸಮುವೇಲನು 19:31-43

ದಾವೀದನು ಬರ್ಜಿಲ್ಲೈಗೆ, ಜೆರುಸಲೇಮಿಗೆ ಬರುವಂತೆ ಹೇಳಿದ್ದು

31 ಗಿಲ್ಯಾದಿನ ಬರ್ಜಿಲ್ಲೈಯನು ರೋಗೆಲೀಮಿನಿಂದ ರಾಜನಾದ ದಾವೀದನೊಂದಿಗೆ ಜೋರ್ಡನ್ ನದಿಯ ಬಳಿಗೆ ಬಂದನು. ರಾಜನು ನದಿಯನ್ನು ದಾಟುವಾಗ ರಾಜನೊಂದಿಗಿರಲು ಅವನು ಬಂದನು. 32 ಬರ್ಜಿಲ್ಲೈಯನು ಮುದುಕನಾಗಿದ್ದನು. ಅವನಿಗೆ ಎಂಭತ್ತು ವರ್ಷ ವಯಸ್ಸಾಗಿತ್ತು. ದಾವೀದನು ಮಹನಯಿಮಿನಲ್ಲಿ ವಾಸಿಸುತ್ತಿದ್ದಾಗ ಅವನು ದಾವೀದನಿಗೆ ಆಹಾರವನ್ನೂ ಮತ್ತಿತರ ವಸ್ತುಗಳನ್ನೂ ಕೊಟ್ಟಿದ್ದನು; ಯಾಕೆಂದರೆ ಅವನು ಶ್ರೀಮಂತನಾಗಿದ್ದನು. 33 ದಾವೀದನು ಬರ್ಜಿಲ್ಲೈಯನಿಗೆ, “ನದಿಯನ್ನು ದಾಟಿ ನನ್ನೊಂದಿಗೆ ಆಚೇದಡಕ್ಕೆ ಬಾ. ನೀನು ಜೆರುಸಲೇಮಿನಲ್ಲಿ ನನ್ನೊಂದಿಗೆ ವಾಸಿಸುವುದಾದರೆ, ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂದು ಹೇಳಿದನು.

34 ಆದರೆ ಬರ್ಜಿಲ್ಲೈಯನು ದಾವೀದನಿಗೆ, “ನನಗೆ ಎಷ್ಟು ವಯಸ್ಸಾಗಿದೆಯೆಂಬುದು ನಿನಗೆ ತಿಳಿದಿಲ್ಲವೇ? ನಾನು ನಿನ್ನೊಂದಿಗೆ ಜೆರುಸಲೇಮಿಗೆ ಬರಬಹುದೇ? 35 ನನಗೀಗ ಎಂಭತ್ತು ವರ್ಷ. ಒಳಿತು ಕೆಡುಕುಗಳಿಗಿರುವ ವ್ಯತ್ಯಾಸ ಈಗ ನನಗೆ ತಿಳಿಯುವುದಿಲ್ಲ. ನಾನು ತಿನ್ನುವ ಇಲ್ಲವೆ ಕುಡಿಯುವ ವಸ್ತುಗಳ ರುಚಿಯೂ ನನಗೆ ಗೊತ್ತಾಗುವುದಿಲ್ಲ. ಹಾಡುತ್ತಿರುವ ಗಂಡಸರ ಮತ್ತು ಹೆಂಗಸರ ಯಾವುದೇ ಧ್ವನಿಯೂ ನನಗೆ ಕೇಳಿಸುವುದಿಲ್ಲ. ನನ್ನ ಒಡೆಯನಾದ ರಾಜನಿಗೆ ನಾನೇಕೆ ಭಾರವಾಗಬೇಕು? 36 ನೀನು ನನಗೆ ಕೊಡಬೇಕೆಂದಿರುವ ಯಾವ ವಸ್ತುಗಳೂ ನನಗೆ ಬೇಕಿಲ್ಲ. ನಾನು ನಿನ್ನೊಂದಿಗೆ ಜೋರ್ಡನ್ ನದಿಯನ್ನು ದಾಟುತ್ತೇನೆ. 37 ಆದರೆ ದಯವಿಟ್ಟು ನನ್ನನ್ನು ಹಿಂದಿರುಗಲು ಬಿಡು. ನಂತರ ನಾನು ನನ್ನ ಸ್ವಂತ ಸ್ಥಳದಲ್ಲಿ ಸಾಯುತ್ತೇನೆ. ನನ್ನ ತಂದೆತಾಯಿಗಳನ್ನು ಸಮಾಧಿ ಮಾಡಿದ ಸ್ಮಶಾನದಲ್ಲಿಯೇ ನನ್ನನ್ನು ಸಮಾಧಿ ಮಾಡಲಿ. ಆದರೆ ನನ್ನ ಒಡೆಯನಾದ ರಾಜನೇ, ಇಲ್ಲಿರುವ ಕಿಮ್ಹಾಮನು ನಿನ್ನ ಸೇವಕನಾಗಿರುತ್ತಾನೆ; ಅವನು ನಿನ್ನೊಂದಿಗೆ ಬರುತ್ತಾನೆ. ನಿನಗೆ ಇಷ್ಟಬಂದಂತೆ ಅವನಿಗೆ ಮಾಡು” ಎಂದು ಹೇಳಿದನು.

38 ರಾಜನು, “ಕಿಮ್ಹಾಮನು ನನ್ನೊಂದಿಗೆ ಬರಲಿ. ನಾನು ನಿನಗೋಸ್ಕರ ಅವನಿಗೆ ದಯೆತೋರಿಸುವೆನು. ಅವನಿಗಾಗಿ ನೀನು ಏನು ಮಾಡಬೇಕೆಂದು ಬಯಸುತ್ತೀಯೋ ಅದನ್ನೆಲ್ಲಾ ಮಾಡುತ್ತೇನೆ” ಎಂದು ಉತ್ತರಿಸಿದನು.

ದಾವೀದನು ಮನೆಗೆ ಹಿಂದಿರುಗಿದ್ದು

39 ರಾಜನು ಬರ್ಜಿಲ್ಲೈಯನಿಗೆ ಮುದ್ದಿಟ್ಟು ಆಶೀರ್ವದಿಸಿದನು. ಬರ್ಜಿಲ್ಲೈಯನು ಮನೆಗೆ ಹಿಂದಿರುಗಿದನು. ರಾಜನು ತನ್ನ ಜನರೆಲ್ಲರೊಂದಿಗೆ ನದಿಯನ್ನು ದಾಟಿದನು.

40 ರಾಜನು ಜೋರ್ಡನ್ ನದಿಯನ್ನು ದಾಟಿ ಗಿಲ್ಗಾಲಿಗೆ ಹೋದನು. ಕಿಮ್ಹಾಮನು ಅವನೊಂದಿಗೆ ಹೋದನು. ಯೆಹೂದ ದೇಶದ ಜನರೆಲ್ಲರು ಮತ್ತು ಇಸ್ರೇಲಿನ ಅರ್ಧದಷ್ಟು ಜನರು ದಾವೀದನನ್ನು ನದಿ ದಾಟಿಸಿ ಕರೆದುಕೊಂಡು ಹೋದರು.

ಇಸ್ರೇಲರು ಯೆಹೂದದ ಜನರೊಂದಿಗೆ ವಾದ ಮಾಡಿದ್ದು

41 ಇಸ್ರೇಲರೆಲ್ಲರೂ ರಾಜನ ಬಳಿಗೆ ಬಂದರು. ಅವರು ರಾಜನಿಗೆ, “ನಮ್ಮ ಸೋದರರಾದ ಯೆಹೂದದ ಜನರು ತಾವೇ ಬಂದು ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ನಿನ್ನ ಜನರೊಂದಿಗೆ ಜೋರ್ಡನ್ ನದಿಯನ್ನು ದಾಟಿಸಿ ಕರೆತಂದದ್ದೇಕೆ?” ಎಂದು ಕೇಳಿದರು.

42 ಯೆಹೂದದ ಜನರೆಲ್ಲರು ಇಸ್ರೇಲರಿಗೆ, “ಏಕೆಂದರೆ ರಾಜನು ನಮ್ಮ ಸಮೀಪದ ಬಂಧು. ಇದರ ಕುರಿತು ನೀವೇಕೆ ನಮ್ಮ ಮೇಲೆ ಕೋಪಗೊಳ್ಳುತ್ತೀರಿ? ರಾಜನ ಖರ್ಚಿನಲ್ಲೇನೂ ನಾವು ಊಟಮಾಡಲಿಲ್ಲ. ರಾಜನು ನಮಗೆ ಯಾವ ಬಹುಮಾನವನ್ನೂ ನೀಡಲಿಲ್ಲ” ಎಂದು ಉತ್ತರಿಸಿದರು.

43 ಇಸ್ರೇಲರು, “ದಾವೀದನಲ್ಲಿ ನಾವು ಹತ್ತುಪಾಲನ್ನು ಹೊಂದಿದ್ದೇವೆ. ಆದ್ದರಿಂದ ದಾವೀದನ ಮೇಲೆ ನಿಮಗಿಂತಲೂ ನಮಗೆ ಹೆಚ್ಚಿನ ಹಕ್ಕಿದೆ. ಆದರೆ ನೀವು ನಮ್ಮನ್ನು ಕಡೆಗಣಿಸಿದ್ದೇಕೆ? ರಾಜನನ್ನು ಹಿಂದಕ್ಕೆ ಕರೆತರಲು ಮಾತಾನಾಡಿದವರಲ್ಲಿ ನಾವೇ ಮೊದಲಿಗರು” ಎಂದು ಉತ್ತರಿಸಿದರು.

ಆದರೆ ಯೆಹೂದದ ಜನರು ಇಸ್ರೇಲರಿಗೆ ಕಟುವಾಗಿ ಉತ್ತರಿಸಿದರು. ಯೆಹೂದ ಜನರ ಮಾತುಗಳು ಇಸ್ರೇಲರ ಮಾತುಗಳಿಗಿಂತ ಹೆಚ್ಚು ಕಟುವಾಗಿದ್ದವು.

ಗಲಾತ್ಯದವರಿಗೆ 3:10-14

10 ಆದರೆ ನೀತಿವಂತರಾಗಲು ಧರ್ಮಶಾಸ್ತ್ರವನ್ನು ಅವಲಂಬಿಸಿಕೊಂಡಿರುವವರು ಶಾಪಗ್ರಸ್ತರಾಗಿದ್ದಾರೆ. ಏಕೆಂದರೆ ಪವಿತ್ರ ಗ್ರಂಥವು ಹೇಳುವಂತೆ, “ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳನ್ನೆಲ್ಲಾ ಕೈಕೊಂಡು ನಡೆಯಬೇಕು. ಅವುಗಳಿಗೆ ಎಂದಾದರೂ ಅವಿಧೇಯನಾದವನು ಶಾಪಗ್ರಸ್ತನಾಗಿದ್ದಾನೆ.”(A) 11 ಆದ್ದರಿಂದ ಧರ್ಮಶಾಸ್ತ್ರದ ಮೂಲಕ ಯಾವನೂ ನೀತಿವಂತನಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಪವಿತ್ರ ಗ್ರಂಥವು ಹೇಳುವಂತೆ, “ನಂಬಿಕೆಯ ಮೂಲಕ ನೀತಿವಂತನಾದವನು ಸದಾಕಾಲ ಜೀವಿಸುವನು.”[a]

12 ಧರ್ಮಶಾಸ್ತ್ರವು ನಂಬಿಕೆಯ ಮಾರ್ಗವನ್ನು ಬಳಸದೆ, “ಈ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕ ಜೀವವನ್ನು ಪಡೆದುಕೊಳ್ಳುತ್ತಾನೆ” ಎಂದು ಹೇಳುತ್ತದೆ. 13 ಧರ್ಮಶಾಸ್ತ್ರವು ನಮ್ಮ ಮೇಲೆ ಶಾಪವನ್ನು ಬರಮಾಡುತ್ತದೆ. ಆದರೆ ಕ್ರಿಸ್ತನು ಆ ಶಾಪವನ್ನು ತನ್ನ ಮೇಲೆ ತೆಗೆದುಕೊಂಡನು. ಆತನು ನಮ್ಮ ಸ್ಥಾನವನ್ನು ತಾನೇ ತೆಗೆದುಕೊಂಡನು. ಕ್ರಿಸ್ತನು ತನ್ನನ್ನೇ ಶಾಪಕ್ಕೆ ಒಳಪಡಿಸಿಕೊಂಡನು. ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ, “ಮರಕ್ಕೆ ತೂಗುಹಾಕಲ್ಪಟ್ಟ ವ್ಯಕ್ತಿಯು ಶಾಪಗ್ರಸ್ತನಾಗಿದ್ದಾನೆ.”(B) 14 ಎಲ್ಲಾ ಜನರಿಗೆ ದೇವರ ಆಶೀರ್ವಾದವು ದೊರೆಯಲೆಂದು ಕ್ರಿಸ್ತನು ಹೀಗೆ ಮಾಡಿದನು. ಈ ಆಶೀರ್ವಾದವನ್ನು ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದನು. ಈ ಆಶೀರ್ವಾದವು ಯೇಸು ಕ್ರಿಸ್ತನ ಮೂಲಕ ಬರುತ್ತದೆ. ದೇವರು ವಾಗ್ದಾನ ಮಾಡಿದ ಪವಿತ್ರಾತ್ಮನನ್ನು ನಾವು ಹೊಂದಿಕೊಳ್ಳಲೆಂದು ಯೇಸು ಮರಣಹೊಂದಿದನು. ನಂಬಿಕೆಯಿಡುವುದರ ಮೂಲಕ ನಾವು ಈ ವಾಗ್ದಾನವನ್ನು ಪಡೆದುಕೊಳ್ಳುತ್ತೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International