Revised Common Lectionary (Semicontinuous)
ರಚನೆಗಾರ: ದಾವೀದ.
5 ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
ನನ್ನ ಆಲೋಚನೆಗಳಿಗೆ ಗಮನಕೊಡು.
2 ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
ನನ್ನ ಪ್ರಾರ್ಥನೆಯನ್ನು ಆಲೈಸು.
3 ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.
4 ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
5 ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
ದುಷ್ಟರನ್ನು ನೀನು ದ್ವೇಷಿಸುವೆ.
6 ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.
7 ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
8 ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
ಬೆನ್ಹದದ ಮತ್ತು ಅಹಾಬ ಇವರ ಯುದ್ಧ
20 ಬೆನ್ಹದದನು ಅರಾಮಿನ ರಾಜ. ಅವನು ತನ್ನ ಸೇನೆಯನ್ನೆಲ್ಲ ಒಟ್ಟಾಗಿ ಸೇರಿಸಿದನು. ಅವನ ಹತ್ತಿರ ಮೂವತ್ತೆರಡು ಮಂದಿ ರಾಜರಿದ್ದರು. ಅವರ ಬಳಿ ಕುದುರೆಗಳೂ ರಥಗಳೂ ಇದ್ದವು. ಅವರು ಸಮಾರ್ಯಕ್ಕೆ ವಿರುದ್ಧವಾಗಿ ಹೋಗಿ ಅದಕ್ಕೆ ಮುತ್ತಿಗೆ ಹಾಕಿದರು. 2 ರಾಜನು ಆ ನಗರದಲ್ಲಿದ್ದ ಇಸ್ರೇಲಿನ ರಾಜನಾದ ಅಹಾಬನ ಬಳಿಗೆ ತನ್ನ ಸಂದೇಶಕರನ್ನು ಕಳುಹಿಸಿದನು. 3 ಅವನ ಸಂದೇಶವು ಹೀಗಿತ್ತು: “ಬೆನ್ಹದದನು ಹೀಗೆನ್ನುವನು, ‘ನೀವು ನನಗೆ ನಿಮ್ಮಲ್ಲಿರುವ ಬೆಳ್ಳಿಬಂಗಾರಗಳನ್ನು ಒಪ್ಪಿಸಬೇಕು. ನಿಮ್ಮ ಪತ್ನಿಯರನ್ನು ಮತ್ತು ಮಕ್ಕಳನ್ನು ನನಗೆ ಒಪ್ಪಿಸಲೇಬೇಕು.’”
4 ಇಸ್ರೇಲಿನ ರಾಜನು, “ನನ್ನ ಒಡೆಯನಾದ ರಾಜನೇ, ಈಗ ನಾನು ನಿನ್ನವನೇ. ನನ್ನ ಬಳಿ ಇರುವುದೆಲ್ಲವೂ ನಿನ್ನದೇ” ಎಂದು ಉತ್ತರಿಸಿದನು.
5 ನಂತರ ಆ ಸಂದೇಶಕರು ಅಹಾಬನ ಹತ್ತಿರಕ್ಕೆ ಹಿಂದಿರುಗಿ ಬಂದು, “ಬೆನ್ಹದದನು ಹೀಗೆನ್ನುತ್ತಾನೆ, ‘ನೀನು ನಿನ್ನಲ್ಲಿರುವ ಎಲ್ಲಾ ಬೆಳ್ಳಿಬಂಗಾರವನ್ನು ಮತ್ತು ನಿನ್ನ ಪತ್ನಿಯರನ್ನು ಮತ್ತು ಮಕ್ಕಳನ್ನು ನನಗೆ ಒಪ್ಪಿಸಲೇಬೇಕೆಂದು ನಾನು ಮುಂಚೆಯೇ ನಿನಗೆ ತಿಳಿಸಿದ್ದೇನೆ. 6 ನಾಳೆ ಇದೇ ಸಮಯದಲ್ಲಿ, ನಿನ್ನ ಅರಮನೆ ಮತ್ತು ನಿನ್ನ ಅಧೀನದಲ್ಲಿರುವ ಅಧಿಕಾರಿಗಳ ಮನೆಗಳನ್ನು ಶೋಧಿಸಲು ನಾನು ನನ್ನ ಜನರನ್ನು ಕಳುಹಿಸುತ್ತೇನೆ. ನನ್ನ ಜನರು ತಮಗೆ ಇಷ್ಟವಾದುದನ್ನು ತೆಗೆದುಕೊಳ್ಳುತ್ತಾರೆ’” ಎಂದು ಹೇಳಿದರು.
7 ಆದ್ದರಿಂದ ಅಹಾಬನು ತನ್ನ ರಾಜ್ಯದ ಹಿರಿಯರೆಲ್ಲರ ಒಂದು ಸಭೆಯನ್ನು ಕರೆದು, “ನೋಡಿ, ಬೆನ್ಹದದನು ಕೇಡುಮಾಡಬೇಕೆಂದಿದ್ದಾನೆ. ನನ್ನ ಪತ್ನಿಯರನ್ನು, ಮಕ್ಕಳನ್ನು ಮತ್ತು ಬೆಳ್ಳಿಬಂಗಾರಗಳನ್ನು ತನಗೆ ಒಪ್ಪಿಸಬೇಕೆಂದು ಅವನು ನನ್ನನ್ನು ಮೊದಲು ಕೇಳಿದ್ದನು. ನಾನು ಅದಕ್ಕೆ ಒಪ್ಪಿಕೊಂಡಿದ್ದೆನು. ಈಗ ಅವನು ಎಲ್ಲವನ್ನೂ ತೆಗೆದುಕೊಳ್ಳಲು ಅಪೇಕ್ಷೆಪಟ್ಟಿದ್ದಾನೆ” ಎಂದು ಹೇಳಿದನು.
8 ಆದರೆ ಹಿರಿಯರೆಲ್ಲರು ಮತ್ತು ಜನರೆಲ್ಲರು, “ಅವನ ಮಾತಿಗೆ ಒಪ್ಪಬೇಡ. ಅವನು ಹೇಳಿದ್ದನ್ನು ನೀನು ಮಾಡಬೇಡ” ಎಂದು ಹೇಳಿದರು.
9 ಅಹಾಬನು ಬೆನ್ಹದದನ ಸಂದೇಶಕರಿಗೆ, “ನನ್ನ ಒಡೆಯನಾದ ರಾಜನಿಗೆ ಇದನ್ನು ತಿಳಿಸಿರಿ: ನೀನು ಮೊದಲು ಹೇಳಿದ್ದನ್ನು ನಾನು ಮಾಡುತ್ತೇನೆ. ಆದರೆ ನಿನ್ನ ಎರಡನೆಯ ಆಜ್ಞೆಯನ್ನು ನೆರವೇರಿಸಲು ನನ್ನಿಂದ ಸಾಧ್ಯವಿಲ್ಲ” ಎಂದು ಹೇಳಿದನು.
ರಾಜನಾದ ಬೆನ್ಹದದನ ಜನರು ಈ ಸಂದೇಶವನ್ನು ರಾಜನಿಗೆ ತಿಳಿಸಿದರು. 10 ನಂತರ ಅವರು ಬೆನ್ಹದದನ ಮತ್ತೊಂದು ಸಂದೇಶದೊಂದಿಗೆ ಹಿಂದಿರುಗಿ ಬಂದರು. ಆ ಸಂದೇಶವು ಹೀಗಿತ್ತು: “ನಾನು ಸಮಾರ್ಯವನ್ನು ಸಂಪೂರ್ಣವಾಗಿ ನಾಶಗೊಳಿಸುತ್ತೇನೆ. ಆ ನಗರದಲ್ಲಿ ಏನನ್ನೂ ಉಳಿಸುವುದಿಲ್ಲವೆಂದು ನಾನು ಪ್ರಮಾಣ ಮಾಡುತ್ತೇನೆ. ನನ್ನ ಜನರು, ಆ ನಗರವನ್ನು ಕಂಡುಹಿಡಿಯಲಾಗದಂತೆ ಮತ್ತು ಮನೆಗೆ ತೆಗೆದುಕೊಂಡು ಹೋಗಲು ಒಂದು ಹಿಡಿ ಧೂಳೂ ಉಳಿಯದಂತೆ ಮಾಡಿಬಿಡುತ್ತಾರೆ. ನಾನು ಇದನ್ನು ಮಾಡದೆ ಹೋದರೆ ದೇವರು ನನ್ನನ್ನು ನಾಶಪಡಿಸಲಿ!”
11 ರಾಜನಾದ ಅಹಾಬನು, “ಯುದ್ಧಕ್ಕೆ ಹೋಗುವ ಸೈನಿಕನು ತನ್ನ ಆಯುಧಗಳನ್ನು ಧರಿಸಿಕೊಳ್ಳುವಾಗ ಹೆಚ್ಚಳಪಡದೆ, ಯುದ್ಧವಾದ ಮೇಲೆ ತನ್ನ ಆಯುಧಗಳನ್ನು ಬಿಚ್ಚಿಡುವಾಗ ಹೆಚ್ಚಳಪಡುತ್ತಾನೆಂಬುದನ್ನು ಬೆನ್ಹದದನಿಗೆ ಹೇಳಿ” ಎಂದು ಉತ್ತರಿಸಿದನು.
12 ರಾಜನಾದ ಬೆನ್ಹದದನು ಇತರ ಅರಸರೊಡನೆ ಅವನ ಗುಡಾರದಲ್ಲಿ ಕುಡಿಯುತ್ತಾ ಮತ್ತೇರಿಸಿಕೊಳ್ಳುತ್ತಿದ್ದನು. ಆ ಸಮಯದಲ್ಲಿ ರಾಜನಾದ ಅಹಾಬನಿಂದ ಬಂದ ಸಂದೇಶವನ್ನು ಸಂದೇಶಕರು ಅವನಿಗೆ ಹೇಳಿದರು. ರಾಜನಾದ ಬೆನ್ಹದದನು ಆ ನಗರಕ್ಕೆ ಮುತ್ತಿಗೆ ಹಾಕಲು ಸಿದ್ಧರಾಗುವಂತೆ ತನ್ನ ಜನರಿಗೆ ಆಜ್ಞಾಪಿಸಿದನು. ಆದ್ದರಿಂದ ಜನರು ಯುದ್ಧಮಾಡಲು ತಮ್ಮತಮ್ಮ ಸ್ಥಳಗಳಿಗೆ ಹೋದರು.
13 ಅದೇ ಸಮಯಕ್ಕೆ ಒಬ್ಬ ಪ್ರವಾದಿಯು ರಾಜನಾದ ಅಹಾಬನ ಬಳಿಗೆ ಹೋಗಿ, “ರಾಜನಾದ ಅಹಾಬನೇ, ಯೆಹೋವನು ನಿನಗೆ ಹೀಗೆನ್ನುತ್ತಾನೆ. ‘ಆ ಮಹಾಸೇನೆಯನ್ನು ನೀನು ನೋಡಿದೆಯಾ! ಯೆಹೋವನಾದ ನಾನು, ಈ ದಿನ ಆ ಸೇನೆಯನ್ನು ಸೋಲಿಸುವಂತೆ ನಿನಗೆ ಅವಕಾಶ ಮಾಡುತ್ತೇನೆ. ಅನಂತರ ನಾನೇ ಯೆಹೋವನೆಂಬುದು ನಿನಗೆ ತಿಳಿಯುತ್ತದೆ’” ಎಂದು ಹೇಳಿದನು.
14 ಅಹಾಬನು, “ಅವರನ್ನು ಸೋಲಿಸಲು ನೀನು ಯಾರನ್ನು ಬಳಸಿಕೊಳ್ಳುವೆ?” ಎಂದನು.
ಪ್ರವಾದಿಯು, “ಜಿಲ್ಲೆಗಳ ರಾಜ್ಯಪಾಲರುಗಳ ಸೇವೆಮಾಡುತ್ತಿರುವ ಯೌವನಸ್ಥರನ್ನು ಬಳಸಿಕೊಳ್ಳುತ್ತೇನೆ ಎಂದು ಯೆಹೋವನು ಹೇಳುತ್ತಾನೆ” ಎಂದು ಉತ್ತರಿಸಿದನು.
ನಂತರ ರಾಜನು, “ಯುದ್ಧವನ್ನು ಆರಂಭಿಸುವವರು ಯಾರು?” ಎಂದು ಕೇಳಿದನು.
“ನೀನೇ” ಎಂದು ಪ್ರವಾದಿಯು ಉತ್ತರಿಸಿದನು.
15 ಅಹಾಬನು ಜಿಲ್ಲೆಗಳ ರಾಜ್ಯಪಾಲರುಗಳ ಸೇವೆ ಮಾಡುತ್ತಿರುವ ಯೌವನಸ್ಥರನ್ನು ಒಟ್ಟಾಗಿ ಸೇರಿಸಿದನು. ಅಲ್ಲಿ ಇನ್ನೂರ ಮೂವತ್ತೆರಡು ಮಂದಿ ಯುವಜನರಿದ್ದರು. ನಂತರ ರಾಜನು ಇಸ್ರೇಲಿನ ಸೈನ್ಯವನ್ನು ಒಟ್ಟಾಗಿ ಕರೆದನು. ಅವರಲ್ಲಿ ಒಟ್ಟು ಏಳುಸಾವಿರ ಸೈನಿಕರಿದ್ದರು.
16 ಮಧ್ಯಾಹ್ನದ ವೇಳೆಗೆ, ರಾಜನಾದ ಬೆನ್ಹದದನು ಮತ್ತು ಅವನ ಸಹಾಯಕ್ಕಾಗಿ ಬಂದಿದ್ದ ಮೂವತ್ತೆರಡು ಮಂದಿ ರಾಜರು, ಅವರ ಗುಡಾರಗಳಲ್ಲಿ ಕುಡಿಯುತ್ತಾ ಮತ್ತೇರಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ರಾಜನಾದ ಅಹಾಬನ ಆಕ್ರಮಣವು ಆರಂಭವಾಯಿತು. 17 ಮೊದಲು ಯುವಸಹಾಯಕರು ಆಕ್ರಮಣ ಮಾಡಿದರು. ರಾಜನಾದ ಬೆನ್ಹದದನ ಜನರು, ಸಮಾರ್ಯದಿಂದ ಸೈನಿಕರು ಹೊರಗೆ ಬಂದಿದ್ದಾರೆಂಬುದನ್ನು ಅವನಿಗೆ ತಿಳಿಸಿದರು. 18 ಬೆನ್ಹದದನು, “ಅವರು ಪ್ರಾಯಶಃ ಹೋರಾಡಲು ಬಂದಿರಬಹುದು ಅಥವಾ ಅವರು ಶಾಂತಿ ಸಂಧಾನಕ್ಕಾಗಿ ಬಂದಿರಬಹುದು. ಅವರು ಯಾವುದಕ್ಕಾಗಿ ಬಂದಿದ್ದರೂ ಅವರನ್ನು ಜೀವಸಹಿತ ಬಂಧಿಸಿರಿ” ಎಂದು ಹೇಳಿದನು.
19 ಜಿಲ್ಲೆಗಳ ರಾಜ್ಯಪಾಲರುಗಳ ಸೇವೆಮಾಡುತ್ತಿದ್ದ ಯುವಕರು ಆಕ್ರಮಣದ ಮಂಚೂಣಿಯಲ್ಲಿದ್ದು, ಇಸ್ರೇಲಿನ ಸೇನೆಯು ಅವರನ್ನು ಹಿಂಬಾಲಿಸುತ್ತಿತ್ತು. 20 ಆದರೆ ಇಸ್ರೇಲಿನ ಪ್ರತಿಯೊಬ್ಬನೂ ತನ್ನ ಮೇಲೆ ಬಿದ್ದವನನ್ನು ಕೊಂದುಹಾಕುತ್ತಿದ್ದನು. ಅರಾಮ್ಯದ ಜನರು ಓಡಿಹೋಗಲು ಆರಂಭಿಸಿದರು. ಇಸ್ರೇಲಿನ ಸೈನ್ಯವು ಅವರನ್ನು ಅಟ್ಟಿಸಿಕೊಂಡು ಹೋಯಿತು. ರಾಜನಾದ ಬೆನ್ಹದದನು ಅಶ್ವಸೇನೆಯ ಕುದುರೆಯೊಂದರ ಮೇಲೆ ಕುಳಿತು ತಪ್ಪಿಸಿಕೊಂಡನು. 21 ರಾಜನಾದ ಅಹಾಬನು ತನ್ನ ಸೈನ್ಯವನ್ನು ಮುನ್ನಡೆಸಿ, ಅರಾಮ್ಯರ ಸೇನೆಯಿಂದ ರಥಗಳನ್ನೂ ಅಶ್ವಸೇನೆಯನ್ನೂ ಸೋಲಿಸಿದನು. ಅರಾಮ್ಯರ ಸೇನೆಯ ಮಹಾ ಅಪಜಯಕ್ಕೆ ರಾಜನಾದ ಅಹಾಬನು ಕಾರಣನಾದನು.
22 ಆಗ ಆ ಪ್ರವಾದಿಯು ರಾಜನಾದ ಅಹಾಬನಲ್ಲಿಗೆ ಹೋಗಿ, “ಅರಾಮಿನ ರಾಜನಾದ ಬೆನ್ಹದದನು ಮುಂದಿನ ವಸಂತಮಾಸದಲ್ಲಿ ನಿನ್ನ ವಿರುದ್ಧ ಯುದ್ಧಮಾಡಲು ಮತ್ತೆ ಬರುತ್ತಾನೆ. ಈಗ ನೀನು ಮನೆಗೆ ಹೋಗಿ ನಿನ್ನ ಸೈನ್ಯವನ್ನು ಬಲಪಡಿಸು. ಅವನ ವಿರುದ್ಧ ನೀನು ಸಮರ್ಥನಾಗಲು ಎಚ್ಚರಿಕೆಯಿಂದ ಉಪಾಯಗಳನ್ನು ಮಾಡು” ಎಂದು ಹೇಳಿದನು.
ದೇವರಿಗೆ ನಿಮ್ಮನ್ನು ಒಪ್ಪಿಸಿಕೊಳ್ಳಿ
4 ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಎಲ್ಲಿಂದ ಬರುತ್ತವೆಯೆಂಬುದು ನಿಮಗೆ ತಿಳಿದಿದೆಯೋ? ನಿಮ್ಮ ಸ್ವಾರ್ಥಪರ ಆಸೆಗಳಿಂದ ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಬರುತ್ತವೆ. ಅವು ನಿಮ್ಮ ಅಂತರಂಗದಲ್ಲಿ ಯುದ್ಧ ಮಾಡುತ್ತಿವೆ. 2 ನೀವು ಅನೇಕ ವಸ್ತುಗಳಿಗಾಗಿ ಆಶಿಸುತ್ತೀರಿ. ಆದರೆ ಅವುಗಳನ್ನು ಪಡೆಯುವುದರಲ್ಲಿ ವಿಫಲರಾಗುತ್ತೀರಿ. ಆದ್ದರಿಂದ ನೀವು ಕೊಲೆ ಮಾಡುತ್ತೀರಿ ಮತ್ತು ಇತರರ ಬಗ್ಗೆ ಅಸೂಯೆಪಡುತ್ತೀರಿ. ಆದರೆ ನೀವು ಆಸೆಪಟ್ಟದ್ದನ್ನು ಇನ್ನೂ ಪಡೆಯಲಾರದವರಾಗಿರುವಿರಿ. ಆದ್ದರಿಂದ ನೀವು ವಾದವಿವಾದ ಮಾಡುವಿರಿ ಮತ್ತು ಹೊಡೆದಾಡುವಿರಿ. ನೀವು ದೇವರನ್ನು ಕೇಳಿಕೊಳ್ಳಲಿಲ್ಲ. ಆದ್ದರಿಂದಲೇ, ನೀವು ಆಸೆ ಪಟ್ಟದ್ದು ನಿಮಗೆ ದೊರೆಯಲಿಲ್ಲ. 3 ಮತ್ತು ನೀವು ಕೇಳಿಕೊಂಡಾಗ ನಿಮಗೆ ಅವು ಸಿಗಲಿಲ್ಲ. ಏಕೆಂದರೆ ನಿಮ್ಮ ಉದ್ದೇಶವು ಸರಿಯಾಗಿರಲಿಲ್ಲ. ನೀವು ಅವುಗಳನ್ನು ಕೇವಲ ನಿಮ್ಮ ಸ್ವಂತ ಸುಖಕ್ಕಾಗಿ ಕೇಳಿಕೊಂಡಿರಿ.
4 ಆದ್ದರಿಂದ ನೀವು ದೇವರಿಗೆ ನಂಬಿಗಸ್ತರಾಗಿಲ್ಲ! ಇಹಲೋಕದ ಮೇಲಿರುವ ವ್ಯಾಮೋಹ ದೇವರ ಮೇಲಿರುವ ದ್ವೇಷಕ್ಕೆ ಸಮಾನವಾಗಿದೆ. ಆದ್ದರಿಂದ ಈ ಲೋಕವನ್ನು ಪ್ರೀತಿಸುವವನು ತನ್ನನ್ನು ದೇವರಿಗೆ ಶತ್ರುವನ್ನಾಗಿ ಮಾಡಿಕೊಳ್ಳುತ್ತಾನೆ. 5 ಪವಿತ್ರ ಗ್ರಂಥವು ಅರ್ಥವಿಲ್ಲದ್ದೆಂದು ಯೋಚಿಸುವಿರಾ? “ದೇವರು ನಮ್ಮಲ್ಲಿ ಇರಿಸಿರುವ ಆತ್ಮದ ಅಪೇಕ್ಷೆಯೇನೆಂದರೆ, ನಾವು ಆತನಿಗೋಸ್ಕರ ಮಾತ್ರ ಇರಬೇಕೆಂದಷ್ಟೆ”[a] ಎಂದು ಪವಿತ್ರ ಗ್ರಂಥವು ಹೇಳುತ್ತದೆ. 6 ಆದರೆ ದೇವರು ದಯಪಾಲಿಸಿದ ಕೃಪೆಯು ಅದಕ್ಕಿಂತಲೂ ಹೆಚ್ಚಿನದು. ಪವಿತ್ರ ಗ್ರಂಥವು ಹೇಳುವಂತೆ, “ದೇವರು ಅಹಂಕಾರಿಗಳಿಗೆ ವಿರುದ್ಧವಾಗಿರುತ್ತಾನೆ, ದೀನರಿಗಾದರೆ ಕೃಪೆಯನ್ನು ದಯಪಾಲಿಸುತ್ತಾನೆ.”(A)
7 ಆದ್ದರಿಂದ ದೇವರಿಗೆ ನಿಮ್ಮನ್ನು ಒಪ್ಪಿಸಿಕೊಂಡು ಸೈತಾನನನ್ನು ಎದುರಿಸಿರಿ. ಆಗ ಅವನು ನಿಮ್ಮಿಂದ ದೂರ ಓಡಿಹೋಗುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International